ಚೆನ್ನೈ (www.vknews.in) : ಕೇರಳದ ವಯನಾಡ್ನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಧೈರ್ಯ ಮತ್ತು ಸಾಹಸದಿಂದ ಹಲವು ಜೀವಗಳನ್ನು ರಕ್ಷಿಸಿದ್ದ ತಮಿಳುನಾಡಿನ ನೀಲಗರಿ ಜಿಲ್ಲೆಯ ನರ್ಸ್ ಎ.ಸಬೀನಾ ಅವರನ್ನು ಪ್ರಸಕ್ತ ವರ್ಷದ ‘ಕಲ್ಪನಾ ಚಾವ್ಲ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಭೂಕುಸಿತದಿಂದಾಗಿ ಮುಂಡಕೈ-ಸುರಲ್ಮಲೈ ನಡುವಿನ ಸಂಪರ್ಕ ಸೇತುವೆ ಹಾನಿಗೀಡಾಗಿ ಕ್ರಮೇಣ ಕುಸಿದಿತ್ತು. ಇದರಿಂದಾಗಿ ಜನ ಅತಂತ್ರರಾಗಿ, ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸಾಧ್ಯವಾಗಿರಲಿಲ್ಲ ಹಾಗೂ ಪರಿಹಾರ ಕಾರ್ಯಾಚರಣೆ ಕೂಡಾ ದುಸ್ತರವಾಗಿತ್ತು.
ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ತಕ್ಷಣವೇ ಝಿಪ್ ಲೈನ್ ನಿರ್ಮಿಸಿ ಮತ್ತೊಂದು ಕಡೆಗೆ ಹೋಗಲು ನಿರ್ಧರಿಸಲಾಯಿತು. ಸಬೀನಾ ತಕ್ಷಣವೇ ಸ್ವಯಂಪ್ರೇರಿತರಾಗಿ ಮುಂದೆ ಬಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಳೆದ ಮೂರು ವರ್ಷಗಳಿಂದ ನೀಲಗಿರಿಯಲ್ಲಿ ಎನ್ ಜಿಓದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಭೂಕುಸಿತದ ಬಗ್ಗೆ ನನ್ನ ಮುಖ್ಯಸ್ಥರು ಮಾಹಿತಿ ನೀಡಿದರು. ನಮ್ಮ ಪಕ್ಕದಲ್ಲೇ ಸಂಭವಿಸಿರುವುದರಿಂದ ನಾವು ಕೂಡಾ ಹೋಗಬೇಕು ಎಂದು ಸೂಚಿಸಿದರು. ನಾನು ಸ್ಥಳಕ್ಕೆ ತಲುಪಿದಾಗ ಭೂಕುಸಿತದ ಭೀತಿಯಿಂದ ಜನ ದಿಕ್ಕಾಪಾಲಾಗಿದ್ದರು. ಆದರೆ ನಾವು ಅಲ್ಲೇ ಇದ್ದೆವು. ಸಾಧ್ಯವಾದಷ್ಟು ಮಟ್ಟಿಗೆ ಪ್ರಥಮ ಚಿಕಿತ್ಸೆ ನೀಡಿದೆವು.
ಇದೀಗ ಆ ದೃಶ್ಯಾವಳಿಯನ್ನು ನೋಡಿದರೆ ಭಯವಾಗುತ್ತದೆ. ಆದರೆ ಆ ಸಮಯದಲ್ಲಿ ಕೇವಲ ರೋಗಿಗಳ ಬಗ್ಗೆ ಮಾತ್ರ ಗಮನ ಇತ್ತು. ಪ್ರಥಮ ಚಿಕಿತ್ಸೆ ಸಲಕರಣೆಗಳನ್ನು ಒಳಗೊಂಡ ಚೀಲ ಎಲ್ಲಿ ಬೀಳುತ್ತದೆಯೋ ಎಂಬ ಹೆದರಿಕೆ ಆಗಿತ್ತು ಎಂದು ಅವರು ತಮ್ಮ ಅನುಭವವನ್ನು ವಿವರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.