(www.vknews.in) : ನಿಜವಾಗಿ ಮದುವೆಯಾಗುವ ಹುಡುಗನಿಗೆ ತಾನು ವರಿಸುವ ಹೆಣ್ಣನ್ನು ನೋಡುವ ಅನುಮತಿ ಇದೆ. ಆದರೆ ನೋಡಬೇಕಾದುದು ವರ ಮಾತ್ರ. ಆತನ ಮಿತ್ರರು, ಬಂಧು ಬಳಗವಲ್ಲ. ವಿಪರ್ಯಾಸವೆಂದರೆ ಇಂದು ಹೆಣ್ಣು ನೋಡಲು ಎರಡ್ಮೂರು ಬಾರಿ ಭೇಟಿ ನೀಡಲಾಗುತ್ತದೆ. ಕೊನೆಯ ಭೇಟಿಯಲ್ಲಿ ದೊಡ್ಡ ಬಸ್ಸು, ಕಾರುಗಳಲ್ಲಿ ಸ್ತ್ರೀ ಪುರುಷರನ್ನು ತುಂಬಿಸಿ ಕೊಂಡೊಯ್ಯಲಾಗುತ್ತದೆ. ಮದುವೆಗೆ ಮೊದಲೇ ಹೆಣ್ಣು ಹೆತ್ತವರಿಗೆ ನೀಡುವ ಆರಂಭದ ಕಿರುಕುಳವಿದು. ಹುಡುಗ ತಾನು ಬಾಳಸಂಗಾತಿಯಾಗಿಸುವ ಆ ಹುಡುಗಿಯನ್ನು ಸ್ತ್ರೀ-ಪುರುಷರೆನ್ನದೆ ಎಲ್ಲರಿಗೂ ತೋರಿಸಿ ಹೇಗಿದೆ, ಹೇಗಿದೆ ಎಂದು ವಿಚಾರಿಸುತ್ತಾನೆ. ನಾಚಿಕೆಯಿಲ್ಲದ ನಪುಂಸಕನಾತ. ಆಕೆಯನ್ನು ಸೂತ್ರದ ಬೊಂಬೆಯಂತೆ ಅತ್ತಿಂದಿತ್ತ ನಡೆಸಲಾಗುತ್ತದೆ.
ವೀಡಿಯೋಗ್ರಾಫರ್ನ ನಿರ್ದೇಶನದಂತೆ ವಿವಿಧ ಅಭಿನಯವನ್ನು ಆಕೆಯಿಂದ ಮಾಡಿಸಿ, ಆ ಬಳಿಕ ಅದನ್ನು ಸ್ಟೇಟಸ್, ಇನ್ಸ್ಟಾಗ್ರಾಮ್ನಲ್ಲಿ ಸುರಿಯಲಾಗುತ್ತದೆ. ಹುಡುಗನಿಗೆ ಹೆಣ್ಣನ್ನು ನೋಡುವ ಅನುಮತಿಯಿದೆಯೆಂದು ಹೇಳಿ ಹುಚ್ಚರ ಸಂತೆಯಂತಾಗಬಾರದು. ಅದಕ್ಕೆ ನಿಯಮ, ನಿಬಂಧನೆಗಳಿವೆ. ಲಗಾಮುಗಳಿವೆ. ಒಂದುವೇಳೆ ನಿಖಾಹ್ ನಡೆದಿದ್ದರೂ ಈ ರೀತಿ ದಂಪತಿಗಳ ಆಲಿಂಗನ, ಚುಂಬನದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದು ಸರಿಯಲ್ಲ. ಸಭ್ಯರು ಯಾರೂ ಹಾಗೆ ಮಾಡಲಾರರು. ಬೆಡ್ರೂಮ್ನ ತಮಾಷೆ, ಸರಸ ಸಲ್ಲಾಪಗಳು ಸಾರ್ವಜನಿಕರಿಗೇಕೆ?
ಹಾಗೆಯೇ ಹುಡುಗನನ್ನು ಒಪ್ಪುವ ಅಥವಾ ತಿರಸ್ಕರಿಸುವ ಅವಕಾಶ ಇಸ್ಲಾಮೀ ಶರೀಅತ್ನಲ್ಲಿ ಹೆಣ್ಣಿಗೂ ನೀಡಲಾಗಿದೆ. ಇಬ್ಬರೊಳಗೂ ಸಮ್ಮತಿಬೇಕು. ಯಾರದೇ ಒತ್ತಡ, ಅನಿವಾರ್ಯತೆಗಳಿಗೆ ಸಿಲುಕಿ ಮದುವೆಯ ಬಳಿಕ ಹಲುಬುವಂತಾಗಬಾರದು. ಏಕೆಂದರೆ ನಿಖಾಹ್ ಎಂಬುದು ಬಲಿಷ್ಠ ಕರಾರು. ಸುದೃಢ ಒಪ್ಪಂದ. ಅಲ್ಲಿ ಬಾಧ್ಯತೆಗಳಿವೆ, ಹೊಣೆಗಾರಿಕೆಗಳಿವೆ. ಜತೆಗೆ ಒಂದು ವಿಷಯವನ್ನೂ ನೆನಪಿಡಬೇಕು. ಹೆತ್ತವರು ನಿಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಎಷ್ಟೋ ಹರಸಾಹಸ ಪಡುತ್ತಾರೆ.
ಗುಣಮಟ್ಟದ ವಸ್ತುಗಳನ್ನೇ ಖರೀದಿಸುತ್ತಾರೆ. ಮಕ್ಕಳ ಮೇಲೆ ಅವರಿಗಿರುವಷ್ಟು ಪ್ರೀತಿ, ಕಾಳಜಿ ಬೇರೆ ಯಾರಿಗೂ ಇಲ್ಲ. ಅವರೇ ನೈಜ ಹಿತಾಕಾಂಕ್ಷಿಗಳು. ಅವರೇ ವಿಶ್ವಸ್ಥ ಮಿತ್ರರು. ಆದ್ದರಿಂದ ಯುವ ಜನಾಂಗದೊಂದಿಗೆ ನನ್ನ ಭಿನ್ನಹ ಇಷ್ಟೇ, ಅವರ ನಂಬಿಕೆಗೆ ದ್ರೋಹ ಬಗೆದು, ಹಾದಿ ಬೀದಿಯಲ್ಲಿ ಸಿಕ್ಕಿದ ಕಾಮುಕ ಅಥವಾ ಕಾಮುಕಿಯನ್ನು ಬಾಳ ಸಂಗಾತಿಯಾಗಿಸುವಾಗ ನೂರಾರು ಬಾರಿ ಯೋಚಿಸಿ. ಇಂದು ನಿನ್ನೊಂದಿಗೆ ಬಂದವಳು ನಾಳೆ ಬೇರೊಬ್ಬನೊಂದಿಗೆ ಸಂಬಂಧ ಬೆಳೆಸಲಾರಳೆಂದು ಯಾವ ಗ್ಯಾರಂಟಿ.
ಆದ್ದರಿಂದ ಹಾರುವ ಹಕ್ಕಿಯನ್ನು ಹಿಡಿಯುವ ಹರಸಾಹಸ ಬೇಡ. ಹೆತ್ತವರ ನಂಬಿಕೆಗೆ ದ್ರೋಹ ಬಗೆಯದಿರಿ. ನಿಮ್ಮ ಮದುವೆಯ ವಿಷಯದಲ್ಲೂ ಅವರಿಗೆ ಪ್ರಾಮಾಣಿಕ ಕಾಳಜಿ ಇದೆ. ಸೂಕ್ತ ಸಂದರ್ಭದಲ್ಲಿ ನಿಮ್ಮ ಆಯ್ಕೆಯ ಬಾಳಸಂಗಾತಿಯನ್ನು ಅವರೇ ಹುಡುಕಾಡುವರು. ಮಾತನಾಡು ವರು. ಅದರ ಯೋಚನೆ, ಟೆನ್ಶನ್ನಲ್ಲಿ ನೀವು ಕೊರಗಬೇಡಿ. ಬೀದಿ ಕಾಮುಕರ ಚೆಂದದ ಮಾತು, ನಕಲಿ ಭರವಸೆಗೆ ಕಾಲು ಜಾರಿ ಬೀಳ ದಿರಿ. ನಿಮ್ಮ ಹೆತ್ತವರಲ್ಲಿ ವಿದ್ಯಾಭ್ಯಾಸದ ಕೊರತೆಯಿದ್ದರೂ ಬದುಕಿನ ಬಹುದೊಡ್ಡ ಅನುಭವವಿದೆ. ಅವರೆಂದೂ ನಿಮಗೆ ಮೋಸ ಮಾಡಲಾರರು. ಆದ್ದರಿಂದ ಪ್ರೀತಿ, ಪ್ರೇಮವೆಂಬ ಭ್ರಮೆಯ ಬೆನ್ನೇರಿ, ಆ ಬಳಿಕ ಕಣ್ಣೀರು ಹರಿಸುವಂತಾಗಬಾರದು. ನಿಮ್ಮ ಭವಿಷ್ಯವನ್ನು ಹಾಳು ಮಾಡದಿರಿ. ಅದು ನಿಮಗೂ ಒಳ್ಳೆಯದಲ್ಲ.
ಅದೇ ರೀತಿ ಪದೇಪದೇ ಹೆಣ್ಣು ನೋಡುವುದು ಮತ್ತು ಹುಳುಕು ಹೇಳಿ ತಿರಸ್ಕರಿಸುವುದೇ ಅಭ್ಯಾಸವಾದರೆ, ಕನ್ನಡಿಯ ಮುಂದೆ ನಿಂತು ನಿನ್ನ ರೂಪ, ವ್ಯಕ್ತಿತ್ವವನ್ನೊಮ್ಮೆ ದರ್ಶಿಸಬಾರದೇ ಸಹೋದರಾ? ಏಕೆಂದರೆ, ನೀನು ನೋಡಿ ಬೇಡವೆಂದು ಬಿಟ್ಟವರಿಗೆಲ್ಲಾ ಸಂಬಂಧಗಳು ಕೂಡಿ, ಮದುವೆಯಾಗಿ ಪತಿ, ಮಕ್ಕಳೊಂದಿಗೆ ಹಾಯಾಗಿದ್ದಾರೆ. ನೆನಪಿಡು… ಮಾಗಿದ ಹಣ್ಣಿಗೆ ಹಸಿರು ಬಳಿದರೂ ಉದುರಿ ಬೀಳುವುದು. ಅಂತೆಯೇ, ನೀನು ಯಾವ ಕಸರತ್ತು ನಡೆಸಿದರೂ, ನಿನ್ನ ವಯಸ್ಸಿನ ಮುನ್ನಡೆಯನ್ನು ಬಣ್ಣ ಬಳಿದು ತಡೆದು ನಿಲ್ಲಿಸಲಾಗದು. ಮುಂದುವರಿಯುವುದು……
✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.