(www.vknews.in) : ಶರೀಅತ್ಗೆ ಅನುಗುಣವಾಗಿ ನಿಖಾಹ್ ಆಗಿದ್ದರೂ ಪತಿ, ಪತ್ನಿಯರು ಒಂದುಗೂಡಲು ಮತ್ತು ಅವರ ಮಧುಚಂದ್ರವನ್ನು ಸಮ್ಮತಿಸದ ಹುಚ್ಚು ಕಟ್ಟುಪಾಡುಗಳು ಸರಿಯಲ್ಲ. ನಿಖಾಹ್ ನಡೆದು ಎರಡು ವರ್ಷಗಳಾದರೂ ಇಬ್ಬರೂ ಊರಲ್ಲಿದ್ದರೂ ಅವರನ್ನು ಅವರ ಪಾಡಿಗೆ ಬಿಡಲು ಕುಟುಂಬದವರು ಸಮ್ಮತಿಸಲಿಲ್ಲ. ಪಾಪ, ಆತ ಅಪರೂಪಕ್ಕೊಮ್ಮೆ ಆಕೆಯ ಮನೆಗೆ ಹೋಗಿ ಮಾತಾಡಿ ಬರುತ್ತಿದ್ದ. ಒಂದರ್ಥದಲ್ಲಿ ಆತ ನಿಖಾಹ್ ಆಗಿದ್ದರೂ, ಬಹಳ ತ್ರಾಸದಿಂದ ಲೈನ್ ಹೊಡೆದು ಬರುತ್ತಿದ್ದ. ಆಕೆಯೂ ಆಸೆಕಣ್ಣುಗಳಿಂದ ಏನೂ ಮಾಡುವಂತಿಲ್ಲ.
ಹೆಚ್ಚುಹೊತ್ತು ಒಟ್ಟಿಗಿರಲೂ ಹುಡುಗನ ಮನೆಯವರು ಸಮ್ಮತಿಸುತ್ತಿರಲಿಲ್ಲ. ಅವರಿಬ್ಬರ ಕನಸುಗಳನ್ನು ಕಟ್ಟುಪಾಡಿನ ಹೆಸರಲ್ಲಿ ಕ್ರೂರಿಗಳು ಕಟ್ಟಿ ಹಾಕಿದ್ದಾರೆ. ಯಾರೋ ಅವರ ಸಂಬಂಧಿಯೊಬ್ಬರ ಮದುವೆಯ ಬಳಿಕವೇ ಇವರ ಮಧುಚಂದ್ರಕ್ಕೆ ಅವಕಾಶವಂತೆ. ಅಲ್ಲಿಯ ತನಕ ಇವರಿಬ್ಬರು ಒಟ್ಟುಗೂಡುವಂತಿಲ್ಲ. ಈ ಮಧ್ಯೆ ಕಟ್ಟುಪಾಡಿನ ಬೇಲಿಯನ್ನು ಬೇಧಿಸಿ, ಜೋಡಿಯೊಂದು ಗರ್ಭಿಣಿಯಾದುದು ಕುಟುಂಬದವರಿಗೆ ತಿಳಿಯಲೇ ಇಲ್ಲ. ಶರೀಅತ್ಗೆ ವಿರುದ್ಧವಾದ ದೊಣ್ಣೆ ನಿಯಮವಿದು.
ಇದು ಸುಳ್ಳು ಮತ್ತು ಮೋಸಕ್ಕೆ ಅವಕಾಶ ಒದಗಿಸಿ ಕೊಡುತ್ತದೆ. ಅಲ್ಲಾಹನು ಹಲಾಲ್ ಗೊಳಿಸಿದ್ದನ್ನು ನಾವೇಕೆ ಹರಾಮ್ಗೊಳಿಸಬೇಕು? ಯಾಕೆ ಈ ಕಟ್ಟುಪಾಡುಗಳು? ಕೆಲವೆಡೆ ಎಷ್ಟು ತರಾತುರಿಯಲ್ಲಿ ಮದುವೆ ನಡೆಸಲಾಗುತ್ತದೋ ಅಷ್ಟೇ ವೇಗದಲ್ಲಿ ದಾಂಪತ್ಯ ಸಂಬಂಧಗಳು ಮುರಿದು ಬೀಳುತ್ತವೆ. ಈಗಾಗಲೇ ತಿಳಿಸಿದಂತೆ, ಅಲ್ಲಿ ಧರ್ಮನಿಷ್ಠೆಯ ಕಡೆಗಣನೆಯೊಂದಿಗೆ ಬೇರೆ ಕಾರಣಗಳೂ ಜಿಡ್ಡುಗಟ್ಟಿರುತ್ತದೆ. ವರ ವಧುವನ್ನು ನೋಡಿ ಒಪ್ಪಿಕೊಂಡ ಬಳಿಕ, ಮದುವೆಯ ದಿನಾಂಕಕ್ಕೆ ಬಹುದೊಡ್ಡ ಅಂತರ ಕಾಯ್ದುಕೊಳ್ಳುವ ಫ್ಯಾಷನ್ ಹೆಚ್ಚಾಗುತ್ತಿವೆ. ನಿಖಾಹ್ ನಡೆದರೂ ಮಧುಚಂದ್ರವನ್ನು ವರ್ಷಗಳ ಕಾಲ ತಡೆ ಹಿಡಿಯುವ ಹುಚ್ಚು ಕಟ್ಟುಪಾಡನ್ನು ಹುಟ್ಟುಹಾಕಲಾಗಿದೆ.
ಸಾಮಾನ್ಯವಾಗಿ ಆತನ ಗಲ್ಫ್ ಉದ್ಯೋಗ ಅಥವಾ ಬೇರೆ ಕಾರಣಗಳಿರಬಹುದು. ಆದರೂ ಯಾಕೆ ಅವರನ್ನು ತಡೆಹಿಡಿದು ಸಮಸ್ಯೆಗಳನ್ನು ಎಳೆದು ಹಾಕುವುದು? ಈ ಕಟ್ಟುಪಾಡುಗಳು ಹಲವೊಮ್ಮೆ ಅನಾಹುತಗಳಿಗೆ ಎಡೆಮಾಡಿ ಕೊಡುತ್ತವೆ. ಕೆಲವೊಮ್ಮೆ ನಿಖಾಹ್ ನಡೆದಿರುವುದಿಲ್ಲ. ಎಂಗೇಜ್ಮೆಂಟು ನಡೆದಿದೆಯಷ್ಟೇ. ಹೆಣ್ಣು ನೋಡುವಾಗ ಉಡುಗೊರೆಯಾಗಿ ಆತ ಕೊಟ್ಟ ಮೊಬೈಲ್ ಅವರೊಳಗೆ ಚಾಟಿಂಗ್, ಕಾಲ್… ಮತ್ತಿತರಗಳಿಗೆ ಅವಕಾಶ ಒದಗಿಸುತ್ತದೆ. ಅವರಿಬ್ಬರೂ ಒಂದು ಭ್ರಮಾಲೋಕದಲ್ಲಿ ತೇಲಾಡುತ್ತಾರಷ್ಟೇ. ಅವರ ಬಹುತೇಕ ಪ್ರೀತಿ, ಪ್ರೇಮಗಳು ಚಾಟಿಂಗ್ನಲ್ಲೇ ಸವೆದಿರುತ್ತದೆ. ಮದುವೆಯ ಬಳಿಕ ನೈಜ ಬದುಕಿನ ರಂಗಕ್ಕಿಳಿದಾಗ ಅಲ್ಲಿ ಏನೂ ಉಳಿದಿರುವುದಿಲ್ಲ.
ಪ್ರೀತಿ, ವಿಶ್ವಾಸಗಳು ಬರಿದಾಗಿರುತ್ತವೆ. ಶರೀರದಲ್ಲಿ ಬದಲಾದ ಹಾರ್ಮೋನ್ನ ಏರಿಳಿತದಿಂದ ವಾಟ್ಸಪ್ನ ಸರಸ, ತಮಾಷೆ ಎಲ್ಲವೂ ಮದುವೆಯ ಬಳಿಕ ರೀಲಿನ ಮೇಲಿನ ಸಿನೆಮಾದಂತಿರುತ್ತದೆ. ಅಲ್ಲಿ ಬಹಳ ವೈರುಧ್ಯಗಳು, ತ್ರಾಸಗಳ ಅರಿವಾಗುತ್ತದೆ. ನಾನು ನಿನ್ನೆಮೊನ್ನೆ ತನಕ ಚಾಟಿಂಗ್ ನಡೆಸಿದ್ದು ಈತನಲ್ಲೋ ಎಂದು ಆಕೆ ಅನುಮಾನ ಪಟ್ಟರೆ, ಇವಳಾ ನನಗೆ ಸಿಕ್ಕಿದ್ದು ಎಂದು ಆತನೂ ಹತಾಶನಾಗುತ್ತಾನೆ. ರಿಯಾಲಿಟಿ ಮತ್ತು ಥಿಯರಿಯ ಅಂತರ ಅರಿವಾದಾಗ, ಅಸಮಾಧಾನ, ಮನಸ್ತಾಪಗಳು ಜಿನುಗುತ್ತವೆ.
ಮುಂದುವರಿಯುವುದು……
✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.