(www.vknews.in) : ಒಂದು ದಿನ ಖಲೀಲುಲ್ಲಾಹಿ ಇಬ್ರಾಹೀಮ್ (ಅ) ರವರು ತನ್ನ ಮನೆಯಲ್ಲಿರುವಾಗ ಬಹಳ ಸುಂದರವಾದ ಒಬ್ಬ ಯುವಕ ಮನೆಗೆ ಬಂದು ಸಲಾಮ್ ಹೇಳಿದರು. ಅತಿಥಿಯ ಸಲಾಮಿಗೆ ಜವಾಬು ಕೊಟ್ಟು ಅವರಲ್ಲಿ ಕೇಳಿದರು. “ನೀವು ಯಾರು? ಪರಿಚಯ ಇಲ್ಲವಲ್ಲಾ? ಎಲ್ಲಿಂದ ಬಂದಿದ್ದೀರಿ? ಏನು ವಿಶೇಷ? ” ಆಗ ಅವರು ಹೇಳಿದರು. ” ನಾನು ಮಲಕುಲ್ ಮೌತ್ ಅಝ್ರಾಯೀಲ್. ನಾನು ಅಲ್ಲಾಹನ ನಿರ್ದೇಶದಂತೆ ತಮ್ಮ ರೂಹನ್ನು ಹಿಡಿಯಲು ಬಂದಿದ್ದೇನೆ” ಬಹಳ ಶಾಕ್ ಆದ ಹಝ್ರತ್ ಇಬ್ರಾಹೀಮರು ಮಲಕ್ ಅಝ್ರಾಯೀಲರಲ್ಲಿ ಹೇಳಿದರು. “ನಾನು ಅಲ್ಲಾಹನ ಖಲೀಲ್. (ಮಿತ್ರ) ಖಲೀಲನ ರೂಹನ್ನು ಹಿಡಿಯುವುದಾ ಅದೆಂತಹಾ ನ್ಯಾಯ?” ಎಂದು.
ಸ್ವಲ್ಪ ಕಳೆದು ಹಝ್ರತ್ ಅಝ್ರಾಯೀಲರು ಒಬ್ಬ ಮುದಿ ಮುದುಕನ ವೇಶದಲ್ಲಿ ಬಂದು ಹೇಳಿದರು. “ಹಸಿವಾಗುತ್ತದೆ, ತಿನ್ನಲು ಮನೆಯಲ್ಲಿ ಏನಾದರೂ ಇದೆಯಾ?” ಮೊದಲೇ ಅತಿಥ ಸತ್ಕಾರ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದ ಹಝ್ರತ್ ಇಬ್ರಾಹೀಮರು ಅವರಿಗೆ ಊಟ ಬಡಿಸಿ ಅವರೊಂದಿಗೆ ಊಟಕ್ಕೆ ಕುಳಿತರು. ಗಮನಾರ್ಹ ಸಂಗತಿಯೇನೆಂದರೆ, ಈ ಮುದುಕ ವ್ಯಕ್ತಿ ಬಟ್ಟಲಿನಿಂದ ತೆಗೆಯುವ ಆಹಾರವನ್ನು ಅರ್ಧ ಬಾಯಿಗೆ ಹಾಕಿ ಅರ್ಧ ಮುಖಕ್ಕೆ, ತಲೆಗೆ, ಕೊರಳಿಗೆ ಹಚ್ಚುತ್ತಾರೆ. ಹೊಟ್ಟೆಗೆ ಹೋದದ್ದು ಪುನಃ ವಾಪಸು ಬಾಯಿಯಿಂದ ಹೊರಬರುತ್ತಿದೆ.
ಒಟ್ಟಿನಲ್ಲಿ ಬಟ್ಟಲು, ಧರಿಸಿದ ಉಡುಪು, ಕುಳಿತ ಜಾಗ ಎಲ್ಲವೂ ನಿಮಿಷದಲ್ಲಿ ಕೊಳಕಾಯಿತು. ಇದನ್ನು ಕಂಡಾಗ ಹಝ್ರತ್ ಇಬ್ರಾಹೀಮರು ಅವರಲ್ಲಿ ಕೇಳಿದರು. “ನಿಮ್ಮ ಅವಸ್ಥೆ ಏನು? ತಿಂದದ್ದು ಯಾವುದೂ ಹೊಟ್ಟೆಗೆ ಹೋಗುವುದಿಲ್ಲವೇ? ಇದೇನು ಈತರ ಮಾಡುತ್ತಿದ್ದೀರಿ? ನಿಮಗೇನಾದರೂ ತೊಂದರೆ ಇದೆಯಾ?” ಆಗ ಅವರು ಹೇಳಿದರು. “ನಾನೀಗ ಇನ್ನೂರು ವರ್ಷ ಪ್ರಾಯವಾದ ಮುದುಕ. ಮುದುಕನಾದರೆ ಎಲ್ಲರ ಸ್ಥಿತಿ ಹೀಗೆಯೆ. ಮತ್ತೆ ಅವರಿಗೆ ಸರಿಯಾದ ಗೊಡವೆ ಇರುವುದಿಲ್ಲ. ಆ ಕಾರಣದಿಂದ ಹೀಗೆಲ್ಲ ಮಾಡುತ್ತಾರೆ”
ಒಂದು ನಿಮಿಷ ಆಲೋಚಿಸಿ ಹಝ್ರತ್ ಇಬ್ರಾಹೀಮರು ಅವರಲ್ಲಿ ಕೇಳಿದರು. “ನನಗೀಗ ನೂರ ತೊಂಬತ್ತ ಒಂಬತ್ತು ವರ್ಷ ಪ್ರಾಯ. ನಾನೂ ಇನ್ನು ಇನ್ನೂರಕ್ಕೆ ಮುಟ್ಟಿದರೆ ನಿಮ್ಮಂತೆಯೇ ಆಗುತ್ತೇನಾ?” ಆಗ ಅವರು “ಹೌದು, ಖಂಡಿತಾ ಆಗುತ್ತೀರಿ” ಎಂದು ಹೇಳಿ ಅಲ್ಲಿಂದ ಹೋದರು.
ಬಳಿಕ ಹಝ್ರತ್ ಇಬ್ರಾಹೀಮರು ತನ್ನ ರೂಹನ್ನು ಹಿಡಿಯಲು ಮಲಕ್ ಅಝ್ರಾಯೀಲರನ್ನು ಕಳುಹಿಸಲು ಅಲ್ಲಾಹನಲ್ಲಿ ದುಆ ಮಾಡಿದರು. ನಿಮಿಷದಲ್ಲೆ ಅವರು ಹಾಜರಾದರು. ಹಾಜರಾದಾಗ ಅವರಲ್ಲಿ ಹಝ್ರತ್ ಇಬ್ರಾಹೀಮರು ಹೇಳಿದರು. “ನನ್ನ ಮನೆಗೆ ಅತಿಥಿಯಾಗಿ ಬಂದ ಅಪರಿಚಿತ ಮುದುಕನಾದ ಒಬ್ಬ ವ್ಯಕ್ತಿಯು ಆಹಾರ ತಿನ್ನುವ ಬಹಳ ಶೋಚನೀಯ ಅವಸ್ಥೆ ಕಂಡು ನನಗೆ ಈ ವಯಸ್ಸಾದ ಇಹಲೋಕದ ಬದುಕು ಬೇಡವೆಂದಾಯಿತು. ಆದ್ದರಿಂದ ತಮ್ಮ ಆಗಮನವನ್ನು ಕೋರಿದೆ. ಪರವಾಗಿಲ್ಲ ಈಗ ಹಿಡಿಯಿರಿ.” ನಿಮಿಷದಲ್ಲೇ ರೂಹ್ ಹೋಗಿ ಅವರು ಪರಲೋಕ ತಲುಪಿದರು.
ಹಝ್ರತ್ ಇಬ್ರಾಹೀಮರು ಪ್ತವಾದಿಯಾಗಿರುವಾಗಲೇ ಅವರ ಸಹೋದರ ಪುತ್ರ ಹಝ್ರತ್ ಲೂತ್ರನ್ನು ಅಲ್ಲಾಹನು ಮದಾಯಿನ್ ಎಂಬ ಪ್ರಾಂತದ ಜನಾಂಗಕ್ಕೆ ಪ್ರವಾದಿಯಾಗಿ ನೇಮಕ ಮಾಡಿದ್ದನು. ಇವರು ಪ್ರವಾದಿ ಇಬ್ರಾಹಿಮರೊಂದಿಗೆ ಮೊದಲೇ ಸಿರಿಯಾ, ಜೋರ್ಡಾನ್, ಮಿಸ್ರ್ ಮುಂತಾದೆಡೆ ಪ್ರಯಾಣ ಬೆಳೆಸಿದ್ದರು. ಹಝ್ರತ್ ಲೂತ್ರವರ ಆ ಜನಾಂಗದವರು ಬಹಳ ಕೆಟ್ಟವರಾಗಿದ್ದರು. ಕಾಣಲು ಬಹಳ ಸುಂದರವಾಗಿದ್ದ ಅವರು ಕಳ್ಳತನ, ಜೂಜಾಟ, ಕುಡಿತ, ಕಲ್ಲೆಸೆತ ಮುಂತಾದ ಕೆಟ್ಟ ಕೆಲಸದಲ್ಲಿ ಹೆಸರುವಾಸಿಯಾಗಿದ್ದರು.
ಒಮ್ಮೆ ಇವರಿಗೆ ಅಲ್ಲಾಹನ ಶಿಕ್ಷೆಯಾಗಿ ಬರಗಾಲ ಬಂತು. ಬರಗಾಲದಲ್ಲಿ ದಿನಗಳು ಕಳೆಯುತ್ತಿರುವಾಗ ಒಂದು ದಿನ ಇಬ್ಲೀಸನು ಬಂದು ಇವರಲ್ಲಿ ಹೇಳಿದನು. “ನಿಮಗೆ ನಾನು ಈ ಕಷ್ಟದಿಂದ ಬಚಾವಾಗಬೇಕಾದರೆ ಒಂದು ಉಪಾಯ ಹೇಳಿ ಕೊಡುತ್ತೇನೆ. ಅದೇನೆಂದರೆ, ನೀವು ನಿಮ್ಮ ಪತ್ನಿಯರಾಗಿ ಮಾತ್ರ ದೈಹಿಕ ಸಂಪರ್ಕ ಮಾಡಿದರೆ ಸಾಲದು. ಗಡ್ಡ ಮೀಸೆ ಚಿಗುರದ ಬಿಳಿ ಗಂಡು ಹುಡುಗರನ್ನೂ ಅನೈತಿಕವಾಗಿ ಲೈಂಗಿಕ ಸಂಪರ್ಕಕ್ಕೆ ಬಳಸಬೇಕು. ಊರಿಗೆ ಅಪರಿಚಿತರಾಗಿ ಬರುವ ಬಿಳಿ ಹುಡುಗರನ್ನು ಬಲವಂತವಾಗಿ ಈ ಕರ್ಮಕ್ಕೆ ಬಳಸಬೇಕು. ಹಾಗೆ ಮಾಡುತ್ತಾ ಬಂದರೆ ನಿಮ್ಮ ಸಂಕಷ್ಟ ಕ್ರಮೇಣ ದೂರವಾಗುತ್ತದೆ” ಎಂದು.
ಬಳಿಕ ಈ ಕೃತ್ಯ ಮಾಡಲು ಇವರಲ್ಲಿ ಕೆಲವರು, ಯಾವಾಗಲೂ ಕಾಣ ಸಿಗದ ಅಪರಿಚಿತರು ಯಾರಾದರೂ ಇದ್ದಾರೋ ಎಂದು ಹುಡುಕುತ್ತಾ ಪೇಟೆಯ ಹೊರಭಾಗಕ್ಕೆ ಹೋದರು. ಆ ವೇಳೆಯಲ್ಲಿ ಇಬ್ಲೀಸನು ಗಡ್ಡ ಮೀಸೆ ಚಿಗುರದ ಬಿಳಿಯಾಗಿ ಸುಂದರನಾದ ಒಬ್ಬ ಹುಡುಗನ (أمرد) ರೂಪದಲ್ಲಿ ಪ್ರತ್ಯಕ್ಷನಾದನು. ಕೂಡಲೇ ಅವರು ಅವನನ್ನು ಹಿಡಿದು ಸಾಲು ಸಾಲಾಗಿ ನಿಂತು ಒಬ್ಬೊಬ್ಬರಾಗಿ ಲೈಂಗಿಕ ಸಂಪರ್ಕ ಮಾಡಿದರು.(ಸಲಿಂಗಕಾಮ homosexual) ಇದರಿಂದ ಬಹಳ ಸವಿ ಹಿಡಿದ ಅವರು ಬಳಿಕ ಅದನ್ನು ಒಂದು ಅಭ್ಯಾಸವಾಗಿ ಮಾಡಿದರು. ಕ್ರಮೇಣ ಅದು ಊರಲ್ಲಿ ಮಾಮೂಲಾಯಿತು. ಈ ಸೋಂಕು ಬಳಿಕ ಹತ್ತಿರದ ಊರಿಗೂ ಪಸರಿಸಿತು. ಒಟ್ಟಿನಲ್ಲಿ ಅದು ಒಂದು ಅಂಟುರೋಗದಂತೆ ಪರಿಸರದಲ್ಲೆಲ್ಲಾ ಹರಡಿತು. ಈ ವೇಳೆಯಲ್ಲಿ ಹಝ್ರತ್ ಲೂತ್ರವರಿಗೆ ಅಲ್ಲಾಹನು ನುಬುವ್ವತ್ ಕೊಟ್ಟು ಅವರಿಗೆ ಪ್ರವಾದಿಯಾಗಿ ಕಳುಹಿಸಿದನು.
✍🏻ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ.
ಮುಂದುವರೆಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.