(www.vknews.in) : ಹಝ್ರತ್ ಲೂತ್ರವರು ತಮ್ಮ ಆ ಕೆಟ್ಟ ಜನಾಂಗವನ್ನು ಹಗಲಿರುಳು ಅವರು ಮಾಡುತ್ತಿದ್ದ ಆ ಕೆಟ್ಟ ಕೆಲಸ ಮಾಡಬಾರದೆಂದು ಬೋಧನೆ ಮಾಡಿದರು. “ಜಗತ್ತಿನಲ್ಲಿ ಈ ತನಕ ಯಾರೂ ಮಾಡದ ದುಷ್ಟ ಇಬ್ಲೀಸನು ಕಲಿಸಿ ಕೊಟ್ಟ ಈ ಹೇಯ ಕೃತ್ಯವನ್ನು ನೀವು ಹೀಗೆಯೇ ಮಾಡುತ್ತಾ ಮುಂದುವರಿಯುವುದಾದರೆ ನಿಮಗೆ ಅಲ್ಲಾಹನ ಕಡೆಯಿಂದ ಘೋರವಾದ ಶಿಕ್ಷೆ ಬರಲಿದೆ” ಎಂದು ತಾಕೀತು ಮಾಡಿದರು. ಆದರೆ ಅವರಿಗೆ ಅದು ಒಂದು ಮಜಾವೇ ಆಗಿತ್ತು. ರಹಸ್ಯವಾಗಿ ಮಾಡುತ್ತಿದ್ದ ಕೃತ್ಯವನ್ನು ಬಳಿಕ ಬಹಳ ಬಹಿರಂಗವಾಗಿ ಮಾಡ ತೊಡಗಿದರು. ಎಲ್ಲಿಯ ತನಕವೆಂದರೆ, ಇಬ್ಲೀಸನು ಕಲಿಸಿ ಕೊಟ್ಟ ಈ ಹೇಯ ಕೃತ್ಯದ ರುಚಿ ಹಿಡಿದ ಇವರು ಕೊನೆಗೆ ಮನೆಯಲ್ಲಿರುವ ಪತ್ನಿಯರಾಗಿ ಇರುವ ಸಂಪರ್ಕವನ್ನೇ ಕಡಿದು ಹಾಕಿದರು.
ಒಂದು ದಿನ ಹಝ್ರತ್ ಜಿಬ್ರೀಲರ ಉಸ್ತುವಾರಿಯಲ್ಲಿ ನಾಲ್ಕು ಮಲಕುಗಳು ಬಹಳ ಸುಂದರರಾಗಿ, ಹುಡುಗರ ವೇಶದಲ್ಲಿ ಅತಿಥಿಗಳಂತೆ ಮದಾಯಿನ್ ಪಟ್ಟಣಕ್ಕೆ ಕುದುರೆ ಸವಾರಿ ಮಾಡುತ್ತಾ ಬಂದರು. ಮದಾಯಿನ ತಲುಪಿದ ಇವರನ್ನು ಮೊದಲಾಗಿ ಭೇಟಿಯಾದದ್ದು ಹಝ್ರತ್ ಲೂತ್ರವರ ಮಗಳಾಗಿದ್ದಳು. ಮನೆಯ ಸಮೀಪದ ಜಾಗದಲ್ಲಿದ್ದ ಬಾವಿಯಿಂದ ನೀರು ತೆಗೆಯುತ್ತಿದ್ದಾಗ ಅಪರಿಚಿತರಾದ ಗಡ್ಡ ಮೀಸೆ ಚಿಗುರದ ನಾಲ್ಕು ಸುಂದರರಾದ ಹುಡುಗರನ್ನು ಕಂಡಾಗ ಆಕೆ ಅವರಲ್ಲಿ ಹೇಳಿದಳು. “ನೀವು ಇಲ್ಲಿಯವರು ಅಲ್ಲದ ಕಾರಣ ಹೀಗೆ ಏನೂ ತಿಳಿಯುವರಂತೆ ಸುತ್ತಾಡಿದರೆ ಇಲ್ಲಿನ ದುಷ್ಟ ಜನರು ನಿಮ್ಮನ್ನು ಹೇಯ ಕೃತ್ಯಕ್ಕೆ ಬಳಸಿಯಾರು. ಈಗ ಸಂಜೆಯಾಗುತ್ತಾ ಬಂತು. ಇನ್ನು ನಿಮಗೆ ನಿಮ್ಮ ಊರಿಗೆ ತಲುಪುವುದು ಕಷ್ಟ. ಆದ್ದರಿಂದ ನೀವು ಇವತ್ತು ನಮ್ಮ ಅಪ್ಪಾಜಿಯ ಮನೆಯಲ್ಲಿ ತಂಗಬೇಕಷ್ಟೆ. ಅವರು ಏನಾದರೂ ಸೌಕರ್ಯ ಮಾಡಿಕೊಡುವರು. ಕೇಳಿನೋಡಿ” ಎಂದು.
ಮನೆಗೆ ಬರುತ್ತಿರುವ ಹೊಸ ನೆಂಟರನ್ನು ಕಂಡಾಗ ‘ತನ್ನ ಕೆಟ್ಟ ಜನಾಂಗದವರು ಇವರನ್ನು ಏನಾದರೂ ಮಾಡಿಯಾರೋ’ ಎಂಬ ಭಯದಿಂದ ಹಝ್ರತ್ ಲೂತ್ರವರ ಹೃದಯ ಬಡಿತ ಜೋರಾಯಿತು. ಅತಿಥಿಗಳಲ್ಲಿ ಪ್ರವಾದಿ ಲೂತ್ರವರು ಕೇಳಿದರು. “ನಿಮ್ಮ ಊರು ಯಾವುದು? ನೀವು ಯಾಕೆ ಇಷ್ಟು ತಡವಾಗಿ ಇಲ್ಲಿಗೆ ಬಂದಿದ್ದೀರಿ? ನಮ್ಮೂರಿನ ನೀಚರಾದ ಜನಾಂಗದ ಅವಸ್ಥೆಯನ್ನು ನೆನೆಸುವಾಗ ನನಗೆ ಭಯವಾಗುತ್ತದೆ” ಆಗ ಅವರು “ನಾವು ಬಹಳ ದೂರದ ಊರಿನಿಂದ ಬಂದಿದ್ದೇವೆ. ಆದ್ದರಿಂದ ಇವತ್ತು ನಮಗೆ ನಿಮ್ಮಲ್ಲೇ ತಂಗಬೇಕಷ್ಟೆ. ಪರವಾಗಿಲ್ಲ, ಅವರಿಂದ ನಮಗೆ ಅಂತಹಾ ತೊಂದರೆ ಬರಲಿಕ್ಕಿಲ್ಲ” ಎಂದು ಉತ್ತರ ಕೊಟ್ಟರು.
ಬಳಿಕ ಹಝ್ರತ್ ಲೂತ್ರವರು ಅವರನ್ನು ಮನೆಯ ಒಳಗೆ ಬರಮಾಡಿಕೊಂಡು ಮನೆಯ ಬಾಗಿಲು ಹಾಕಿ ಅವರಲ್ಲಿ ಹೇಳಿದರು. “ಏನೇ ಆಗಲಿ ಇವತ್ತು ಇಲ್ಲಿ ತಂಗಿರಿ. ಬೆಳಗಾಗುವಾಗ ಹೊರಟು ಹೋಗಿರಿ” ಎಂದು. ಬಳಿಕ ತನ್ನ ಪತ್ನಿಯಲ್ಲಿಯೂ ಅತಿಥಿಗಳು ಬಂದ ವಿಷಯ ಬೆಳಗಾಗುವ ತನಕ ಯಾರಲ್ಲೂ ಹೇಳಿ ಬಹಿರಂಗ ಮಾಡಬಾರದೆಂದು ತಾಕೀತು ಮಾಡಿದರು. ಆದರೆ ಕೆಟ್ಟವಳಾಗಿದ್ದ ಅವರ ಪತ್ನಿ ರಾತ್ರಿ ಮೆಲ್ಲನೆ ಹಿಂಬದಿಯ ಬಾಗಿಲು ತೆಗೆದು ಹೊರಹೋಗಿ ವಿಷಯ ಬಹಿರಂಗ ಮಾಡಿದಳು. ಪತ್ನಿ ಹೊರ ಹೊಗಿದ್ದಾಳೆಂದು ತಿಳಿದ ಕೂಡಲೇ ಹಝ್ರತ್ ಲೂತ್ರವರು ತೆರೆದ ಬಾಗಿಲನ್ನು ಮುಚ್ಚಿ ಮನೆಯನ್ನು ಭದ್ರತೆ ಮಾಡಿದರು.
ಸುಬ್ಹಾನಲ್ಲಾಹ್! ಸ್ವಲ್ಪ ತಡವಾದಾಗ ಒಂದು ಗುಂಪು ಬಂದು ಮನೆಯ ಬಾಗಿಲು ಬಡಿದರು. ಹಝ್ರತ್ ಲೂತ್ರವರು “ಈ ಮನೆಯಲ್ಲಿ ಯಾರೂ ಅತಿಥಿಗಳು ಇಲ್ಲ” ಎಂದು ಅವರಲ್ಲಿ ಹೇಳಿದರೂ ಅವರು ಅದಕ್ಕೆ ಕಿವಿಗೊಡದೆ ತುಳಿದು ಬಾಗಲು ಮುರಿದು ಮನೆಯ ಒಳಗೆ ನುಗ್ಗಲು ಯತ್ನಿಸಿದರು. ಕೊನೆಗೆ ಬಾಗಿಲಲ್ಲಿ ಕಾವಲಾಗಿ ನಿಂತಿದ್ದ ಹಝ್ರತ್ ಲೂತ್ರವರ ಕೆನ್ನೆಗೆ ಹೊಡೆದು ಬಲ ಪ್ರಯೋಗಿಸಿ ಒಳ ನುಗ್ಗಿದರು. ಒಳ ನುಗ್ಗಿದಾಗ ಬಹಳ ಸುಂದರರಾದ ನಾಲ್ಕು ಹುಡುಗರನ್ನು ಕಂಡಾಗ ಬಾಯಿ ಚಪ್ಪರಿಸಿಕೊಂಡು ಹಝ್ರತ್ ಲೂತ್ರವರಲ್ಲಿ ಆ ನಾಲ್ವರನ್ನು ಅವರಿಗೆ ಲೈಂಗಿಕವಾಗಿ ಬಳಸಲು ಕೇಳಿದರು.
ಪರ ಊರಿನ ಅತಿಥಿಗಳು ತನ್ನ ಮನೆಗೆ ಬಂದಾಗ ಕೆಟ್ಟ ಹೆಸರು ಬರುವುದು ಇಷ್ಟವಿಲ್ಲದ ಹಝ್ರತ್ ಲೂತ್ರವರಿಗೆ ಬಹಳ ನಾಚಿಕೆಯಾಯಿತು. ಆಗ ಒಳಗೆ ರೂಮಿನಲ್ಲಿ ನಿದ್ರಿಸುವವರಂತೆ ನಟನೆ ಮಾಡುತ್ತಿದ್ದ ಅಲ್ಲಾಹನ ದೂತರಾದ ನಾಲ್ಕು ಮಲಕುಗಳಲ್ಲಿ ಹಝ್ರತ್ ಜಿಬ್ರೀಲರು ಪ್ರವಾದಿ ಲೂತ್ರವರಲ್ಲಿ ಹೇಳಿದರು. ಪ್ರವಾದಿಯವರೇ, ನಾವು ಮನುಷ್ಯರಲ್ಲ. ಅಲ್ಲಾಹನ ನಿರ್ದೇಶ ಪ್ರಕಾರ ಈ ಕೆಟ್ಟ ಜನಾಂಗವನ್ನು ನಾಮಾವಶೇಷ ಮಾಡಲು ಬಂದವರು. ಅದ್ದರಿಂದ ಅವರಿಗೆ ನಿಮ್ಮನ್ನು ಏನು ಮಾಡಲೂ ಸಾಧ್ಯವಿಲ್ಲ.”
ನಿಜವಾಗಿ ಅವರಿಗೆ ಈ ಅತಿಥಿಗಳು ಅಲ್ಲಾಹನ ಮಲಕುಗಳೆಂದು ಗೊತ್ತಿರಲಿಲ್ಲ. ಬಿಳಿ ಹುಡುಗರನ್ನು ಕಂಡಾಗ ಅವರತ್ತ ಧುಮುಕಿ ಬಂದರು. ಆ ವೇಳೆಯಲ್ಲಿ ಆ ಗುಂಪಿನಲ್ಲಿದ್ದ ಎಲ್ಲರ ಕಣ್ಣನ್ನು ಅಲ್ಲಾಹನು ಕುರುಡು ಮಾಡಿದನು. ಆ ವೇಳೆ ಅವರು ಪರಿಸರದಲ್ಲಿ ವಾಸಿಸುವವರನ್ನು ಕೂಗಿ ಕರೆದರು. ಶಬ್ದ ಕೇಳಿ ಓಡಿ ಬಂದ ಇವರ ಸಹಪಾಠಿಗಳು ಇವರನ್ನು ಹೊರಗೆ ಕರಕೊಂಡು ಹೋದರು. ಹೋಗುವಾಗ “ಈಗ ರಾತ್ರಿ. ಏನೂ ಮಾಡುವಂತಿಲ್ಲ. ಬೆಳಗಾದರೆ ನಿನಗೂ ನಿನ್ನ ಹೆಣ್ಣು ಮಕ್ಕಳಿಗೂ ಪಾಠ ಕಲಿಸುತ್ತೇವೆ” ಎಂದು ಘೆರಾವು ಹಾಕುತ್ತಾ ಅಲ್ಲಿಂದ ಹೋದರು.
ಇತ್ತ ಹಝ್ರತ್ ಲೂತ್ರವರು ಮಲಕುಗಳಲ್ಲಿ ಕೇಳಿದರು. “ನೀವು ಯಾಕೆ ಅವರನ್ನು ಸುಮ್ಮನೆ ಬಿಟ್ಟಿರಿ.” ಆದಕ್ಕೆ ಅವರು “ಸಮಯವಾಗಲಿಲ್ಲ. ನಾಳೆ ಬೆಳಗಾಗಲಿ ಎಲ್ಲಾ ಸರಿ ಮಾಡಿ ಕೊಡುತ್ತೇವೆ” ಎಂದು ಹೇಳಿ ಸಮಾಧಾನ ಪಡಿಸಿದರು.
ಬೆಳಗಾದಾಗ ಹಝ್ರತ್ ಜಿಬ್ರೀಲರು ಪ್ರವಾದಿ ಲೂತ್ರವರಲ್ಲಿ ಅಲ್ಲಿಂದ ಊರು ಬಿಟ್ಟು ದೂರದ ಊರಿಗೆ ಹೋಗಲು ನಿರ್ದೇಶ ಮಾಡಿದರು. ಅವರ ನಿರ್ದೇಶದಂತೆ ಅವರು ಮತ್ತು ಅವರ ಸಹಪಾಠಿಗಳು ಅಲ್ಲಿಂದ ವಲಸೆ ಹೋದರು. ಅವರು ಹೋದದ್ದೇ ತಡ, ಜಿಬ್ರೀಲರು ಒಂದು ಘರ್ಜನೆ ಮಾಡಿದರು. ಆ ಘರ್ಜನೆಗೆ ಆ ಪ್ರದೇಶವು ಸಂಪೂರ್ಣವಾಗಿ ಭೂಕುಸಿತವಾಗಿ ಬುಡಮೇಲಾಯಿತು. ನೀರಿನ ಪ್ರಳಯ ಬಂತು.ಆ ಅಹಂಕಾರಿಗಳು ಹರಿಯುತ್ತಿರುವ ನೀರಿನಲ್ಲಿ ತೇಲಾಡತೊಡಗಿದರು. ನೀರಾದರೆ ಬಿಸಿಯಾಗಿ ಕುದಿಯುತ್ತಿತ್ತು. ಮೇಲಿನಿಂದ ಮಲಕುಗಳು ಅವರ ಮೇಲೆ ಬೃಹದಾಕಾರದ ಕಲ್ಲುಗಳನ್ನು ಎಸೆಯುತ್ತಿದ್ದರು. ಊರಿನಲ್ಲಿಲ್ಲದ ಇಂತಹಾ ಕೃತ್ಯ ಮಾಡುವ ಇತರರನ್ನು ಹುಡುಕಿ ಮಲಕುಗಳು ಕಲ್ಲೆಸೆದು ಕೊಂದರು. ಒಟ್ಟಿನಲ್ಲಿ ಒಂದು ರಾತ್ರಿ ಬೆಳಗಾಗುವಾಗ ಒಂದು ಜನಾಂಗ ಸಂಪೂರ್ಣವಾಗಿ ನಾಶವಾಯಿತು.
ಪ್ರವಾದಿ ಲೂತ್ರವರಿಗೆ ಎಂಬತ್ತು ವರ್ಷ ಪ್ರಾಯವಾದಾಗ ಅವರು ವಫಾತಾದರು.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ..
ಇತಿಹಾಸ ಕಂಡ ಬಹಳ ರೋಮಾಂಚಕಾರಿ ಚರಿತ್ರೆಯಾದ ಪ್ರವಾದಿ ಯೂಸುಫ್ (ರ) ರವರ ರೋಮಾಂಚಕಾರಿ ಚರಿತ್ರೆ ಮುಂದಿನ ಸಂಚಿಕೆಗಳಲ್ಲಿ ಮೂಡಿ ಬರಲಿದೆ. ನಿರೀಕ್ಷಿಸಿ….
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.