(www.vknews.in) : ಪ್ರವಾದಿ ಇಬ್ರಾಹೀಮ್ (ಅ) ರವರ ವಫಾತಿನ ಬಳಿಕ ಮಗ ಇಸ್ಮಾಯೀಲರು ಮತ್ತು ಅವರ ಕುಟುಂಬ ಪವಿತ್ರ ಹರಮಿನಲ್ಲಿ ವಾಸ ಮುಂದುವರಿಸಿದರೆ ಹಝ್ರತ್ ಇಸ್ಹಾಖರ ಕುಟುಂಬ ಮತ್ತು ಹಝ್ರತ್ ಇಬ್ರಾಹೀಮರ ಇತರ ಮಕ್ಕಳು ಫಲಸ್ತೀನಿನಲ್ಲಿ ಬೈತುಲ್ ಮುಖದ್ದಸಿನ ಬಳಿ ವಾಸ ಮುಂದುವರಿಸಿದರು.
ಹಝ್ರತ್ ಇಸ್ಹಾಖರಿಗೆ ಒಂದೇ ಹೆರಿಗೆಯಲ್ಲಿ ಅವಳಿ ಜವಳಿಯಾಗಿ ಎರಡು ಮಕ್ಕಳು ಜನಿಸಿದರು. ಒಂದು ಹಝ್ರತ್ ಯಅ್ಖೂಬ್ ಮತ್ತೊಂದು ಈಸ್. ಈಸ್ರವರು ಯಅ್ಖೂಬರಿಗಿಂತ ದೊಡ್ಡವರು. ಹಝ್ರತ್ ಇಸ್ಹಾಖರು ವಫಾತಾಗುವ ವೇಳೆ ತನ್ನ ಬಳಿ ಇರುವ ಹಸು, ದನ, ಕೋಳಿ, ಆಡು ಮತ್ತು ಇತರ ಎಲ್ಲಾ ಸೊತ್ತುಗಳನ್ನು ಇಬ್ಬರು ಮಕ್ಕಳಿಗೂ ಸಮಾನವಾಗಿ ಹಂಚಿಕೆ ಮಾಡಿಕೊಟ್ಟಿದ್ದರು. ವಫಾತಾದ ಬಳಿಕ ಮಗ ಈಸ್, ಸಹೋದರ ಯಅ್ಖೂಬರಿಗೆ ದೊರೆತ ತಂದೆಯ ಸೊತ್ತನ್ನು ಹೇಗಾದರೂ ಮಾಡಿ ದೋಚುವ ಉಪಾಯ ನೋಡುತ್ತಿದ್ದರು. ಅದಕ್ಕೋಸ್ಕರ ಸಹೋದರನನ್ನು ಕೊಲ್ಲಲು ಕೂಡ ಸಂಚು ಹೂಡಿದ್ದರು. ಇದನ್ನು ತಿಳಿದ ಅವರ ತಾಯಿ ಒಂದು ದಿನ ಮಗ ಯಅ್ಖೂಬರನ್ನು ಕರೆದು ಹೇಳಿದರು. “ನಿನ್ನ ಅಣ್ಣ ನಿನ್ನನ್ನು ಕೊಂದು ನಿನ್ನ ಸೊತ್ತನ್ನು ತನ್ನದಾಗಿಸಿಕೊಳ್ಳಲು ಯೋಚನೆ ಮಾಡುತ್ತಿದ್ದಾನೆ. ಆದ್ದರಿಂದ ನೀನು ಹರ್ರಾನ್ ಎಂಬ ಜಾಗದಲ್ಲಿರುವ ನನ್ನ ಸಹೋದರನಾದ ಲಾಮಾನ್ ನ ಬಳಿ (ಮಾವ) ಹೋಗಿ ಅಲ್ಲಿ ತಂಗು. ಅವರು ನಿನಗೆ ಬೇಕಾದ ಸೌಲಭ್ಯವನ್ನು ಕೊಡುವರು” ಎಂದು.
ತಾಯಿಯ ನಿರ್ದೇಶದಂತೆ ಮಗ ಯಅ್ಖೂಬರು ತನಗೆ ತನ್ನ ತಂದೆಯಿಂದ ದೊರೆತ ಸ್ವತ್ತಿನೊಂದಿಗೆ ತನ್ನ ಮಾವನ ಬಳಿ ಹೋದರು. ಮಾವನವರು ಇವರನ್ನು ಬಹಳ ಖುಷಿಯಿಂದ ಬರಮಾಡಿಕೊಂಡರು. ಬಳಿಕ ಅಲ್ಲೇ ಅವರ ಬಳಿಯೇ ವಾಸ ಮಾಡತೊಡಗಿದರು. ಮಾತ್ರವಲ್ಲ ಹಝ್ರತ್ ಯಅ್ಖೂಬರಿಗೆ ವಿವಾಹ ಪ್ರಾಯವಾದಾಗ ಮಾವ ತನ್ನ ಮೊದಲನೆಯ ಮಗಳನ್ನು ಇವರಿಗೆ ನಿಖಾಹ್ ಮಾಡಿಕೊಟ್ಟರು. ಅದರಲ್ಲಿ ಹಝ್ರತ್ ಯಅ್ಖೂಬರಿಗೆ ಆರು ಮಕ್ಕಳು ಹುಟ್ಟಿತು.
ಬಳಿಕ ಪತ್ನಿ ವಫಾತಾದರು. ಆಗ ಮಾವನವರು ತನ್ನ ಎರಡನೆಯ ಮಗಳನ್ನು ಹಝ್ರತ್ ಯಅ್ಖೂಬರಿಗೆ ಮದುವೆ ಮಾಡಿಕೊಟ್ಟರು. ಅದರಲ್ಲಿ ಎರಡು ಮಕ್ಕಳು ಜನಿಸಿದರು. ನಂತರ ಅವರೂ ವಫಾತಾದರು. ಆಗ ಮಾವನವರು ತನ್ನ ಮೂರನೆಯ ಮಗಳನ್ನೂ ವಿವಾಹ ಮಾಡಿಕೊಟ್ಟರು. ಅದರಲ್ಲಿ ಹಝ್ರತ್ ಯಅ್ಖೂಬರಿಗೆ ಎರಡು ಮಕ್ಕಳು ಹುಟ್ಟಿದವು. ಸುಬ್ಹಾನಲ್ಲಾಹ್! ಅವರ ಈ ಮೂರನೆಯ ಪತ್ನಿ ಕೂಡ ವಫಾತಾದರು. ಆಗಲೂ ಈ ಮಹಾ ಮನಸ್ಸಿನ ಮಾವ ಅಳಿಯಾನಾದ ಹಝ್ರತ್ ಯಅ್ಖೂಬರ ಕೈ ಬಿಡಲಿಲ್ಲ. ತನ್ನ ಮಕ್ಕಳಲ್ಲಿ ಬಹಳ ಸುಂದರಿಯಾದ ನಾಲ್ಕನೆಯ ಮಗಳಾದ ರಾಹೀಲ್ ಎಂಬವಳನ್ನು ವಿವಾಹ ಮಾಡಿಕೊಟ್ಟರು. ಅದರಲ್ಲೂ ಎರಡು ಮಕ್ಕಳು ಜನಿಸಿತು. ಅದರಲ್ಲಿ ಒಂದು ಜಗತ್ತು ಕಂಡ ಬಹಳ ರೋಮಾಂಚಕಾರಿ ಘಟನೆಯಾದ ಯೂಸುಫ್ ಖಿಸ್ಸ ಅದರ ಮುಖ್ಯ ಬಿಂದುವಾದ ಹಝ್ರತ್ ಯೂಸುಫ್ (ಅ). ಮತ್ತೊಂದು ಅವರ ತಮ್ಮ ಬಿನ್ಯಾಮೀನ್.
ಒಟ್ಟಿನಲ್ಲಿ ಹಝ್ರತ್ ಯಅ್ಖೂಬರಿಗೆ ಒಂದೇ ತಂದೆಯ ನಾಲ್ಕು ಹೆಣ್ಣು ಮಕ್ಕಳನ್ನು ವಿವಾಹವಾಗಿ ಒಟ್ಟು ಹನ್ನೆರಡು ಮಕ್ಕಳು ಹುಟ್ಟಿದ್ದರು. ಆವೇಳೆ ಅವರಿಗೆ ಸುಮಾರು ನಲವತ್ತು ವರ್ಷ ಪ್ರಾಯವಾಗಿತ್ತು. ಈ ವೇಳೆಯಲ್ಲಿ ಅವರಿಗೆ ಅಲ್ಲಾಹನಿಂದ ನುಬುವ್ವತ್ ಕೂಡ ಲಭಿಸಿತು. ಅಲ್ಲದೆ ತಾಯಿಯು ಕೂಡ ಇಹಲೋಕ ತ್ಯಜಿಸಿದರು.
ನುಬುವ್ವತ್ ಲಭಿಸಿದ ಸಂಗತಿ ತಂದೆಯ ಪದವಿಯಲ್ಲಿರುವ ಮಾವನಲ್ಲಿ ಹೇಳಿದಾಗ ಅವರಿಗೆ ಬಹಳ ಖುಷಿಯಾಯಿತು. ಅದರ ಗೌರವಾರ್ಥ ತನ್ನ ಸೊತ್ತಿನಿಂದ ಒಂದು ಪಾಲನ್ನು ಅಳಿಯನಾದ ಹಝ್ರತ್ ಯಅ್ಖೂಬರಿಗೆ ಕೊಟ್ಟರು. ಬಳಿಕ “ನಿನ್ನನ್ನು ಅಲ್ಲಾಹನು ಯಾವತ್ತೂ ಕೈಬಿಡಲಾರನು. ಅಲ್ಲಾಹನ ನಿರ್ದೇಶದಂತೆ ಮುಂದೆ ಸಾಗು” ಎಂದು ಹೇಳಿ ಆಶಿರ್ವದಿಸಿ ದಅ್ವಾ ಮಾಡಲು ಕಳುಹಿಸಿದರು.
ನಂತರ ಹಝ್ರತ್ ಯಅ್ಖೂಬರು ಅಲ್ಲಾಹನ ನಿರ್ದೇಶದಂತೆ ಪತ್ನಿ ಮತ್ತು ಹನ್ನೆರಡು ಮಕ್ಕಳೊಂದಿಗೆ ತನ್ನ ದಅವಾ ಪ್ರದೇಶವಾದ ಕನ್ಆನ್ ಎಂಬ ಊರಿಗೆ ಹೋದರು. ಮೊದಲೇ ತಮ್ಮನನ್ನು ಅಸೂಯೆಯ ಕಣ್ಣಿನಿಂದ ನೋಡುತ್ತಿದ್ದ ಅಣ್ಣ ಈಸ್ ನಿಗೆ ಹಝ್ರತ್ ಯಅ್ಖೂಬರಿಗೆ ನುಬುವ್ವತ್ ಲಭಿಸಿದ ವಿಷಯ ತಿಳಿದಾಗ ಮತ್ತೂ ಅಸೂಯೆ ಜಾಸ್ತಿಯಾಯಿತು. ತಮ್ಮನ ಕತೆ ಮುಗಿಸಬೇಕೆಂದು ಎಣಿಕೆ ಹಾಕಿ ಒಂದು ದಾರಿಯಲ್ಲಿ ಅವರು ಬರುವುದನ್ನು ನೋಡಿ ಕೆಲವು ಗೂಡಾಗಳೊಂದಿಗೆ ಕಾದು ಕುಳಿತುಕೊಂಡನು.
ಒಂದು ದಿನ ಹಝ್ರತ್ ಯಅ್ಖೂಬರು ಮತ್ತು ಪುತ್ರ ರಾಹೀಲ್ ಎಂಬವರು ಆ ದಾರಿಯಾಗಿ ಹೋಗುತ್ತಿರುವಾಗ ಇವರ ಮೇಲೆ ಆಕ್ರಮಣ ಮಾಡಲು ಬಂದನು. ಹಝ್ರತ್ ಯಅ್ಖೂಬರು ತನ್ನ ನುಬುವ್ವತಿನ ಬಲದಿಂದ ಅವನನ್ನು ಮತ್ತು ಅವನ ಗೂಂಡಾಗಳನ್ನು ನಿಮಿಷದಲ್ಲೇ ನೆಲಕ್ಕೆ ಹಾಕಿ ಬಳಿಕ ಅವನ ಎದೆಯ ಮೇಲೆ ನಿಂತು ಅವನಲ್ಲಿ ಹೇಳಿದರು. “ನೀನು ಈಗ ನೋಡಿದಿಯಾ ನುಬುವ್ವತಿನ ಬಲ ಮತ್ತು ಇತರ ಬಲದ ವ್ಯತ್ಯಾಸ ಏನೆಂದು?” ಬಳಿಕ ಅವನ ಎದೆಯಿಂದ ಎದ್ದು ನಿಂತು ಅಣ್ಣನೆಂಬ ನೆಲೆಯಲ್ಲಿ ಅವನಿಗೆ ಮಾಫು ಮಾಡಿದರು. ತಮ್ಮನ ಗುಣನಡತೆ ನೋಡಿ ಮರುಳಾದ ಆತ ಹಝ್ರತ್ ಯಅ್ಖೂಬರಲ್ಲಿ ಮಾಫು ಕೇಳಿದನು. ಅವರು ಅವನಿಗೆ ಮಾಫು ಮಾಡಿದರಲ್ಲದೆ ಆತನ ಯಶಸ್ವಿಯಾಗಿ ದುಆ ಕೂಡ ಮಾಡಿದರು. ನಂತರ ಹಝ್ರತ್ ಯಅ್ಖೂಬರು ಕನ್ಆನ್ ಎಂಬ ಜಾಗದಲ್ಲಿ ಮನೆ ಮಾಡಿ ತನ್ನ ಮಕ್ಕಳೊಂದಿಗೆ ವಾಸ ಶುರುಮಾಡಿದರು.
ಈ ಸಂಧರ್ಭದಲ್ಲಿ ಕನ್ಆನಿನ ಅರಸನು ಒಬ್ಬ ದುಷ್ಟನಾಗಿದ್ದನು. ಹಝ್ರತ್ ಯಅ್ಖೂಬರು ಅವನನ್ನು ಇಸ್ಲಾಮಿಗೆ ಕರೆದರು. ಆದರೆ ಆತ ಅದನ್ನು ಧಿಕ್ಕರಿಸಿ ಹಝ್ರತ್ ಯಅ್ಖೂಬರಲ್ಲಿ ಮಾತಿಗಿಳಿದ. ಕೂಡಲೇ ಯಅ್ಖೂಬರು ಯಾವುದೇ ಸೈನ್ಯವಿಲ್ಲದೆ ತನ್ನ ಮಕ್ಕಳೊಂದಿಗೆ ಅವನ ಅರಮನೆಗೆ ದಾಳಿ ಮಾಡಿದರು. ಅವರ ಮಗನಾದ ಶಮ್ಊನ್ ಎಂಬವರ ಒಂದೇ ಒಂದು ತುಳಿತಕ್ಕೆ ಅರಮನೆಯ ಗೋಡೆ ಕುಸಿದು ಬಿತ್ತು. ಮಾತ್ರವಲ್ಲ ಈ ದುರಂತದಲ್ಲಿ ಚಕ್ರವರ್ತಿ ಸಮೇತ ಹಲವಾರು ಮಂದಿ ಅಸುನೀಗಿದರು. ಪ್ರವಾದಿ ಯಅ್ಖೂಬರ ಮುಅ್ಜಿಝತಿನ ಕಾರಣದಿಂದ ಇಂತಾಹಾ ಅಸಾಮಾನ್ಯ ಘಟನೆ ನಡೆದದ್ದು ಎಂದು ತಿಳಿದಾಗ ಊರಿನ ಜನರೆಲ್ಲರೂ ಹಝ್ರತ್ ಯಅ್ಖೂಬರ ಬಳಿ ಬಂದು ಇಸ್ಲಾಮ್ ಧರ್ಮ ಸ್ವೀಕಾರ ಮಾಡಿದರು.
✍🏻ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ.
ಮುಂದುವರೆಯುವುದು..
ಇತಿಹಾಸ ಕಂಡ ಬಹಳ ರೋಮಾಂಚಕಾರಿ ಚರಿತ್ರೆಯಾದ ಪ್ರವಾದಿ ಯೂಸುಫ್ (ರ) ರವರ ರೋಮಾಂಚಕಾರಿ ಚರಿತ್ರೆ ಮುಂದಿನ ಸಂಚಿಕೆಗಳಲ್ಲಿ ಮೂಡಿ ಬರಲಿದೆ. ನಿರೀಕ್ಷಿಸಿ….
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.