(www.vknews.in) : ಹಝ್ರತ್ ಯಅ್ಖೂಬರ ಹನ್ನೆರಡು ಮಕ್ಕಳಲ್ಲಿ ಸಯ್ಯಿದ್ ಯೂಸುಫ್ (ರ) ರವರು ಹನ್ನೊಂದನೆಯವರು. ತಮ್ಮ ಬಿನ್ಯಾಮೀನ್ ಕೊನೆಯವರು. ಇವರಿಬ್ಬರ ತಾಯಿ ರಾಹಿಲ್ ರವರು ಈ ಮಕ್ಕಳಿಬ್ಬರೂ ಸರಿಯಾಗಿ ನಡೆದಾಡುವ ಪ್ರಾಯ ತಲುಪುವ ಮೊದಲೇ ವಫಾತ್ ಆಗಿದ್ದರು.
ತಂದೆ ಯಅ್ಖೂಬರಿಗೆ ತನ್ನ ಮಕ್ಕಳಲ್ಲಿ ಹಝ್ರತ್ ಯೂಸುಫರಲ್ಲಿ ಇದ್ದ ಪ್ರೀತಿ ಮತ್ತು ವಾತ್ಸಲ್ಯ ತನ್ನ ಇತರ ಮಕ್ಕಳಲ್ಲಿ ಇರಲಿಲ್ಲ. ಹಝ್ರತ್ ಯೂಸುಫ್ರವರಿಗೆ ಹತ್ತು ವರ್ಷ ಪ್ರಾಯವಾದಾಗ ಒಮ್ಮೆ ತಂದೆಯವರು ಒಂದು ಮೇಕೆಯನ್ನು ದ್ಸಬಹ್ ಮಾಡಿ ಮನೆಯಲ್ಲಿ ಒಂದು ಔತಣ ಮಾಡಿದ್ದರು. ಮಕ್ಕಳೊಂದಿಗೆ ಬಹಳ ಗಡದ್ದಾಗಿ ಬಹಳ ಖುಷಿಯಿಂದ ತಿನ್ನುತ್ತಿರುವ ವೇಳೆ ಹೊರಗಿನಿಂದ ಒಬ್ಬ ಮಿಸ್ಕೀನ್ ಬಂದು “ಬಹಳ ಘಮಘಮ ಪರಿಮಳ ಬರುತ್ತಿದೆ. ನನಗೇನಾದರೂ ಸ್ವಲ್ಪ ತಿನ್ನಲು ಕೊಡಿ” ಎಂದು ಕೇಳತೊಡಗಿದ.
ಮಕ್ಕಳೊಂದಿಗೆ ತಿನ್ನುವ ಗೌಜಿಯಲ್ಲಿ ಹಝ್ರತ್ ಯಅ್ಖೂಬರಿಗೆ ಏನೋ ಆತನನ್ನು ಗಮನಿಸಲು ಮರೆತು ಹೋಯಿತು. ಹೊರಗೆ ಬಂದು ನೋಡುವಾಗ ಆತ ಅಲ್ಲಿಂದ ವಾಪಸು ಹೋಗಿದ್ದನು. ಈ ವೇಳೆ ಹಝ್ರತ್ ಯಅ್ಖೂಬರು ಮಕ್ಕಳಲ್ಲಿ “ನೀವು ಯಾಚಿಸಿ ಬಂದವನಿಗೆ ಏನಾದರೂ ಕೊಟ್ಟಿರಾ?” ಎಂದು ಕೇಳಿದರು. ಆಗ ಅವರು “ನೀವು ಕೊಡಲು ಹೇಳಿದರೆ ಅಲ್ವಾ ನಾವು ಕೊಡುವುದು. ನೀವು ಹೇಳದೆ ನಾವು ಹೇಗೆ ಕೊಡುವುದು?” ಎಂಬ ಉತ್ತರ ಕೊಟ್ಟು ಜಾರಿಕೊಂಡರು.
ಸ್ವಲ್ಪ ಕಳೆದಾಗ ಅಲ್ಲಾಹನ ಕಡೆಯಿಂದ “ಓ ಯಅ್ಖೂಬರೇ, ಬಡವನೊಬ್ಬ ನಿಮ್ಮ ಮನೆ ಬಾಗಿಲಿಗೆ ಬಂದು ಯಾಚಿಸಿದಾಗ ಅವನಿಗೆ ಒಂದು ತುತ್ತು ಆಹಾರ ಕೊಡದೆ ಆತನ ಮನಸ್ಸಿಗೆ ಬೇಜಾರು ಮಾಡಿದಿರಿ. ಅವನ ಮನಸ್ಸನ್ನು ನೀವು ಸುಟ್ಟು ಹಾಕಿದಿರಿ. ಆದ್ದರಿಂದ ನಿಮ್ಮ ಮನಸ್ಸಿಗೂ ಮುಂದಕ್ಕೆ ಅಂತಹಾ ದುಃಖ ಬೇಜಾರು ಮಾಡಲಿದ್ದೇನೆ” ಎಂಬ ವಹ್ಯ್ (ಸಂದೇಶ) ಬಂತು. ಅದರ ನಂತರ ಅವರು ಯಾವಾಗಲೂ ಈ ಬಗ್ಗೆ ಆಲೋಚಿಸುತ್ತಾ ಒಂದು ತರ ಮೂಡೌಟಾಗಿಯೇ ಇದ್ದರು.
ಪುತ್ರ ಸಯ್ಯಿದ್ ಯೂಸುಫರಿಗೆ ಹನ್ನೆರಡು ವರ್ಷ ಪ್ರಾಯವಾದಾಗ ತಂದೆಯವರಲ್ಲಿ ಹೇಳಿದರು: “ಅಪ್ಪಾಜೀ…, ನನಗೆ ಹನ್ನೊಂದು ನಕ್ಷತ್ರಗಳು, ಸೂರ್ಯ ಮತ್ತು ಚಂದ್ರ ಸಾಷ್ಟಾಂಗ ಮಾಡುವ ಒಂದು ಕನಸು ಬಿದ್ದಿದೆ” ಎಂದು. ಆಗ ತಂದೆಯವರು ಮಗನಲ್ಲಿ ಹೇಳಿದರು.”ಈ ಕನಸು ಬಿದ್ದ ಸಂಗತಿಯನ್ನು ನೀನು ನಿನ್ನ ಇತರ ಸಹೋದರರಲ್ಲಿ ಯಾವತ್ತೂ ಹೇಳಬೇಡ. ಕಾರಣ ಶೈತಾನನು ಮನುಷ್ಯನ ದೊಡ್ಡ ಶತ್ರುವಾಗಿದ್ದಾನೆ. ಆ ವೇಳೆ ಸಂದರ್ಭ ನೋಡಿ ಅವನು ಅವರನ್ನು ಏನಾದರೂ ಪಿತೂರಿ ಮಾಡಿಯಾನು” ಎಂದು.
ಆದರೆ ಹೇಗೋ ಈ ಕನಸು ಬಿದ್ದ ಸಂಗತಿ ಅವರ ಇತರ ಸಹೋದರರಿಗೂ ತಿಳಿಯಿತು. ವಿಷಯ ತಿಳಿದಾಗ ಮೊದಲೇ ಕೆಂಗಣ್ಣಿನಿಂದ ನೋಡುತ್ತಿದ್ದ ಅವರಿಗೆ ಹಝ್ರತ್ ಯೂಸುಫರಲ್ಲಿ ಅಸೂಯೆ ಬರಲು ಶುರುವಾಯಿತು. ಅಲ್ಲದೆ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಬಿಟ್ಟರೆ ಜಗತ್ತಿನ ಸೌಂದರ್ಯದ ಅರ್ಧವನ್ನು ಪಡೆದಿದ್ದ ಅವರು ಒಂದು ಮಿನುಗುವ ನಕ್ಷತ್ರವೇ ಆಗಿದ್ದರು. ಸಣ್ಣ ಪ್ರಾಯದಲ್ಲೇ ತಂದೆ ಯಅ್ಖೂಬರು ಇವರನ್ನು ಬಹಳ ಪ್ರೀತಿಯಿಂದ ಲಾಲಿಸುತ್ತಿದ್ದರು.
ಅಲ್ಲದೆ ಕನಸು ಬಿದ್ದ ನಂತರ ಆ ಪ್ರೀತಿ ಮತ್ತೂ ಜಾಸ್ತಿಯಾಗಲು ಕಾರಣವಾಯಿತು. ಒಮ್ಮೊಮ್ಮೆ ಹಝ್ರತ್ ಯಅ್ಖೂಬರು ಕಂದ ಯೂಸುಫರನ್ನು ಬಹಳ ಪ್ರೀತಿಯಿಂದ ಹಿಡಿದು ಅಪ್ಪಿಕೊಳ್ಳುತ್ತಿದ್ದರು. ಇದನ್ನೆಲ್ಲಾ ನೋಡುವಾಗ ಈ ಸಹೋದರರಿಗೆ ಅಂತೆಯೇ ಅದರೊಂದಿಗೆ ಕನಸು ಬಿದ್ದ ವಿಷಯ ಕೂಡ ತಿಳಿದಾಗ ಹೇಗಾದರೂ ಸಯ್ಯಿದ್ ಯೂಸುಫರ ಕತೆ ಮುಗಿಸಬೇಕೆಂದು ತೀರ್ಮಾನಿಸಿದರು.
ಒಂದು ದಿನ ಈ ಸಹೋದರರು ಇದರ ಬಗ್ಗೆ ಒಂದು ತೀರ್ಮಾನ ಮಾಡಲು ಒಂದು ಕಡೆ ಜಮಾಯಿಸಿದರು. ಅದರಲ್ಲಿ ಒಬ್ಬನು ಹಝ್ರತ್ ಯೂಸುಫರನ್ನು ಕೊಲ್ಲುವ ಅಭಿಪ್ರಾಯಪಟ್ಟರೆ, ಮತ್ತೊಬ್ಬ ಕೊಲ್ಲುವುದು ಸರಿಯಲ್ಲವೆಂದೂ ಎಲ್ಲಾದರೂ ಜನವಾಸವಿಲ್ಲದ ದೂರ ಖಾಲಿ ಜಾಗದಲ್ಲಿ ಬಿಟ್ಟು ಬರುವುದು ಉತ್ತಮವೆಂದು ಅಭಿಪ್ರಾಯಪಟ್ಟನು.
ಆ ಸಂದರ್ಭದಲ್ಲಿ ಅವರ ಪೈಕಿ ಯಹೂದ ಎಂಬ ಒಬ್ಬ ಸೋದರನು “ಅದು ಸರಿಯಲ್ಲ. ಹಾಗೆ ಮಾಡಿದರೆ ಕೆಲವೊಮ್ಮೆ ಖಾಬೀಲ್ ಹಾಬೀಲನ್ನು ಕೊಂದಂತೆ ಆಗಬಹುದು. ಆದ್ದರಿಂದ ಒಳ್ಳೆಯದು ಏನೆಂದರೆ, ತಂದೆಯನ್ನು ಪುಸಲಾಯಿಸಿ ಆತನನ್ನು ಕೊಂಡುಹೋಗಿ ಎಲ್ಲಾದರೂ ಒಂದು ಬಾವಿಗೆ ಇಳಿಸುವುದು. ಯಾರಾದರೂ ಯಾತ್ರಿಕರು ಆ ಕಡೆ ಹೋಗುವವರು ಇದ್ದರೆ ಅವರು ಕರಕೊಂಡು ಹೋಗುವರು. ಒಟ್ಟಿನಲ್ಲಿ ತಂದೆಗೆ ಮಗ ಇಲ್ಲವಾಗುತ್ತಾನೆ. ಅಂತೆಯೇ ನಮ್ಮ ಉದ್ದೇಶವೂ ನಡೆಯುತ್ತದೆ” ಎಂದು ಅಭಿಪ್ರಾಯ ಪಟ್ಟನು.
ಆತನ ಅಭಿಪ್ರಾಯ ಎಲ್ಲರಿಗೂ ಒಪ್ಪಿಗೆ ಯಾಯಿತು. ಬಳಿಕ ಒಂದು ದಿನ ತಂದೆಯವರಲ್ಲಿ ಬಂದು “ನಮಗೆ ನಾಳೆ ಒಂದು ಕಡೆ ಆಟಕ್ಕೆ ಹೋಗಲಿಕ್ಕಿದೆ. ಅಲ್ಲಿ ಅಂಗಳದಲ್ಲಿ ಹಲವಾರು ಜನ ಜಮಾಯಿಸುತ್ತಾರೆ. ತಮ್ಮ ಯೂಸುಫ್ ನನ್ನು ನಮ್ಮೊಂದಿಗೆ ಆಟವಾಡಲು ಕಳುಹಿಸಬೇಕು. ಅವನಿಗೂ ಒಂದು ರಿಲ್ಯಾಕ್ಸ್ ಬೇಕಲ್ಲವೇ? ಯಾವಾಗಲೂ ಮನೆಯಲ್ಲೇ ಇದ್ದರೆ ಹೇಗಾಗಬಹುದು?” ಎಂದು ಹೇಳಿ ತಂದೆಯ ಮನಸ್ಸು ಬದಲಾಯಿಸಲು ನೋಡಿದರು.
ಎಷ್ಟು ಹೇಳಿ ನೋಡಿದರೂ ತಂದೆಯ ಮನಸ್ಸು ಬದಲಾಗಲಿಲ್ಲ. ತಂದೆಯವರು ಹೇಳಿದರು: “ನಾನು ಹೇಗೆ ಕಳುಹಿಸುವುದು? ನನಗೆ ನಿಮ್ಮೊಂದಿಗೆ ಕಳುಹಿಸಲು ಧೈರ್ಯ ಬರುವುದಿಲ್ಲ. ಅವನು ಪುಟ್ಟ ಬಾಲಕ. ಕೆಲವೊಮ್ಮೆ ತೋಳಗಳು ಅವನನ್ನು ತಿಂದು ಬಿಡಬಹುದು. ಅದ್ದರಿಂದ ನೀವು ಹೋಗಿರಿ ಆತ ಬೇಡ” ಎಂದು.
ಕೊನೆಗೆ ಹಲವಾರು ಬಾರಿ ಏನೆಲ್ಲಾ ಹೇಳಿ ಹೇಗಾದರೂ ಮಾಡಿ ತಂದೆಯ ಮನಸ್ಸು ಬದಲಾಯಿಸಿದರು. ತಂದೆ ಒಪ್ಪಿದರು. ಪ್ರೀತಿಯ ಮಗನಿಗಾಗಿ ಒಂದು ಚೀಲ ಒಣ ಹಣ್ಣು ಮತ್ತು ಒಂದು ಹೂಜಿ ನೀರು ರೆಡಿ ಮಾಡಿಟ್ಟರು. ಹೋಗುವಾಗ ಅವರಲ್ಲಿ ಹೇಳಿದರು: “ಮಗ ಯೂಸುಫನನ್ನು ಸರಿಯಾಗಿ ನೋಡಿಕೊಳ್ಳಬೇಕು. ಆ ಕಡೆ ತೋಳಗಳ ತೊಂದರೆ ಇದೆ. ಆತನಿಗೆ ಹಸಿವಾದರೆ ಈ ಚೀಲದಿಂದ ತಿನ್ನಲು ಕೊಡಬೇಕು. ಬಾಯಾರಿಕೆಯಾದರೆ ಈ ಹೂಜಿಯಿಂದ ನೀರು ಕೊಡಬೇಕು. ಯಾವತ್ತೂ ಅವನಿಗೆ ತೊಂದರೆ ಆಗದಂತೆ ನೋಡಬೇಕು” ಎಂದು.
ಬಳಿಕ ಅವರನ್ನು ಬೀಳ್ಕೊಟ್ಟು ಮನೆಯ ಒಂದು ಎತ್ತರದ ಜಾಗದಲ್ಲಿ ನಿಂತು ಅವರ ನೆರಳು ಮಾಯವಾಗುವ ತನಕ ಅವರನ್ನು ನೋಡಿ ಕುಳಿತರು. ಕಣ್ಣಿನಿಂದ ಕಣ್ಮರೆಯಾದ ನಂತರ ಮಂದವಾದ ಹೆಜ್ಜೆಯಿಡುತ್ತಾ ಮನೆಗೆ ಬಂದರು.
✍🏻ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಮತ್ತು ಇಮಾಮ್ ಇಸ್ಮಾಯೀಲ್ ಹಿತ್ತಿಯವರ ತಫ್ಸೀರು ರೂಹುಲ್ ಬಯಾನ್ ಎಂಬ ಗ್ರಂಥದಿಂದ..
ಮುಂದುವರಿಯುವುದು….
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.