ಬಂಟ್ವಾಳ (www.vknews.in) : ಕಾಂಗ್ರೆಸ್ ಪಕ್ಷದ ನಾಯಕರುಗಳು ಹೊಂದಾಣಿಕೆಯ ರಾಜಕಾರಣ ಮಾಡದೆ ಕಾಂಗ್ರೆಸ್ ಪಕ್ಷದ ಸಿದ್ದಾಂತದಡಿಯಲ್ಲಿ ನಿಷ್ಠೆಯ ರಾಜಕಾರಣ ಮಾಡಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಬಲಿಷ್ಠವಾಗಲು ಸಾಧ್ಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಪಟ್ಟರು.
ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ನಲ್ಲಿ ಬುಧವಾರ ನಡೆದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಬಾಲಕೃಷ್ಣ ಆರ್.ಅಂಚನ್ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎನ್.ಎಸ್.ಯು.ಐ ನೂತನ ಅಧ್ಯಕ್ಷ ಮಹಮ್ಮದ್ ಸಫ್ವಾನ್ ಸರವು ಅವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷವು ಒಂದು ಕುಟುಂಬವಿದ್ದಂತೆ, ನೂತನ ಪದಾಧಿಕಾರಿಗಳು ಪಕ್ಷದ ವಿವಿಧ ಮುಂಚೂಣಿ ಘಟಕಗಳು, ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಂದಾಣಿಕೆಯಿಂದ ಪಕ್ಷ ಸಂಘಟನೆ ಮಾಡಬೇಕಾಗಿದೆ. ಪಕ್ಷವು ನೀಡಿದ ಜವಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುವಂತೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸಲಹೆ ನೀಡಿದರು. ಚುನಾವಣೆಯಲ್ಲಿ ಸೋಲು ಗೆಲುವು ಅದು ಸ್ವಾಭಾವಿಕ, ಆದರೆ ಪ್ರಾಮಾಣಿಕ ಕೆಲಸ ಮಾಡಬೇಕು. ದ.ಕ.ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರೇ ಕಾಂಗ್ರೆಸ್ ನ ಶಕ್ತಿಯಾಗಿದೆ ಎಂದ ಅವರು ಬಂಟ್ವಾಳ ಪುರಸಭೆಯಲ್ಲಿ ಮುಸ್ಲಿಂ ಲೀಗ್ ನ ಸಹಾಯ ಪಡೆದು ಬಿಜೆಪಿಯ ಬಿ.ದಿನೇಶ್ ಭಂಡಾರಿ ಅಧ್ಯಕ್ಷನಾಗಿರುವುದನ್ನು ನೆನಪಿಸಿದ ರೈ ಅವರು ಆ ಸಂದರ್ಭದಲ್ಲಿ, ಡಿ.ಎನ್.ಎ.ಯಾರದಾಗಿತ್ತು ಎಂದು ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ನಿಷ್ಠಾವಂತ ಕಾರ್ಯಕರ್ತರಿಂದ ಮಾತ್ರವೇ ಪಕ್ಷ ಬಲಿಷ್ಠಗೊಳಿಸಲು ಸಾದ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪ್ರಮುಖ ಹುದ್ದೆಯಾಗಿದ್ದು, ಇವರು ಪಕ್ಷದ ಜೀವಾಳ ಎಂದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ನತ್ತ ಜನ ಆಕರ್ಷಿಸಿತಾರಗಿದ್ದು , ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷ ಜೆಡಿಎಸ್ ಗೆ ಉಳಿಗಾಲವಿಲ್ಲ ಎಂಬ ಹೆದರಿಕೆಯಿಂದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು ಮುಂದಿನ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದ್ದು ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಳಾದ ಪದ್ಮರಾಜ್ ಆರ್.ಪೂಜಾರಿ, ಜಿ.ಎ.ಬಾವ, ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಿಯೂಸ್ ಎಲ್. ರೋಡ್ರಿಗಸ್, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸುಹಾನ್ ಆಳ್ವ, ಪಕ್ಷ ಪ್ರಮುಖರಾದ ಬಿ.ಎಚ್.ಖಾದರ್ ಬಂಟ್ವಾಳ, ಪದ್ಮಶೇಖರ್ ಜೈನ್, ಬಿ.ಎಂ ಅಬ್ಬಾಸ್ ಆಲಿ, ಬಿ. ವಾಸು ಪೂಜಾರಿ, ಇಬ್ರಾಹಿಂ ನವಾಜ್ ಬಡಕಬೈಲು, ಕೆ.ಪದ್ಮನಾಭ ರೈ, ಸುದರ್ಶನ ಜೈನ್, ಸುಭಾಶ್ಚಂದ್ರ ಶೆಟ್ಟಿ, ಜಯಂತಿ ವಿ.ಪೂಜಾರಿ, ಚಿತ್ತರಂಜನ್ ಶೆಟ್ಟಿ , ಲವೀನಾ ವಿಲ್ಮಾ ಮೋರಾಸ್, ಸುರೇಶ್ ಜೋರಾ, ಮೋಹನ್ ಗೌಡ ಕಲ್ಮಂಜ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಮಹಮ್ಮದ್ ಸಪ್ವಾನ್ ಅವರಿಗೆ ಪಕ್ಷದ ದ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು. ಎನ್.ಎಸ್.ಯು.ಐ ಪದಾಧಿಕಾರಿಗಳು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಿಸಾನ್ ಘಟಕದ ಅಧ್ಯಕ್ಷ ಸುಧಾಕರ ಶೆಣೈ, ಕಾರ್ಮಿಕ ಘಟಕಾದ್ಯಕ್ಷ ಚಂದ್ರಶೇಖರ ಆಚಾರ್ಯ ಹಾಗೂ ಪದಾಧಿಕಾರಿಗಳು, ಸದಸ್ಯರನ್ನು ಅಭಿನಂದಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷರುಗಳಾದ ಸುದೀಪ್ ಶೆಟ್ಟಿ ಸ್ವಾಗತಿಸಿ, ಬೇಬಿ ಕುಂದರ್ ವಂದಿಸಿದರು. ಕೆ.ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.