(www.vknews.in) : ತಂದೆ ಹಝ್ರತ್ ಯಅ್ಖೂಬರು ಮನೆಯ ಎತ್ತರ ಜಾಗದಲ್ಲಿ ಕುಳಿತು ಅವರನ್ನು ನೋಡುವುದನ್ನು ಗಮನಿಸಿದ ಹಝ್ರತ್ ಯೂಸುಫ್ ರವರ ಇತರ ಸಹೋದರರು ಅವರ ಕಣ್ಣಿನಿಂದ ಮರೆಯಾಗುವ ತನಕ ತಮ್ಮನ ಕೈಹಿಡಿದು ಬಹಳ ಪ್ರೀತಿ ತೋರಿಸುವ ನಟನೆ ಮಾಡಿ ಕರಕೊಂಡು ಹೋದರು. ಹಝ್ರತ್ ಯಅ್ಖೂಬರ ಕಣ್ಣಿನಿಂದ ಮರೆಯಾದ ನಂತರ ಇವರ ಬಣ್ಣ ಬದಲಾಯಿತು.
ಇತ್ತ ಹಝ್ರತ್ ಯಅ್ಖೂಬರು ಮನೆಗೆ ತಲುಪಿದ ನಂತರ ಮಗ ಯೂಸುಫ್ರನ್ನು ಇವರೊಂದಿಗೆ ಕಳುಹಿಸಿದ್ದನ್ನು ಆಲೋಚಿಸಿ ದುಃಖಿಸಲು ಶುರುಮಾಡಿದರು. “ಕಳಿಸಿದ್ದು ತಪ್ಪಾಯಿತು. ಕಳುಹಿಸುವ ಅಗತ್ಯ ಇರಲಿಲ್ಲ. ಪಾಪ ಪುಟ್ಟ ಹುಡುಗನಿಗೆ ತಿನ್ನಲು ಸರಿಯಾಗಿ ಕೊಡುತ್ತಾರಾ? ಏನು ಮಾಡುತ್ತಾರೋ?” ಎಂಬಿತ್ಯಾದಿ ಪ್ರಶ್ನೆಗಳನ್ನು ತನ್ನ ಮನದಲ್ಲೇ ಕೇಳತೊಡಗಿದರು.
ಈ ಸಹೋದರರು ಸ್ವಲ್ಪ ಮುಂದೆ ಸಾಗಿದಾಗ ಅವರೆಲ್ಲರೂ ಬಹಳ ವೇಗವಾಗಿ ನಡೆಯತೊಡಗಿದರು. ಸಯ್ಯಿದ್ ಯೂಸುಫರು ವೇಗವಾಗಿ ನಡೆಯಲಾಗದೆ ಅವರಿಂದ ಬಹಳ ಹಿಂದಕ್ಕಾದರು. ಈ ಸಂದರ್ಭದಲ್ಲಿ ಅವರು ತನ್ನ ಸಹೋದರರನ್ನು ಜೋರಾಗಿ ಕೂಗಿ ಕರೆಯುತ್ತಿದ್ದರು. ಆದರೆ ಅವರು ಅದನ್ನು ಗಮನಿಸದೆ ಮುಂದಕ್ಕೆ ಬಹಳ ವೇಗವಾಗಿ ಓಡುತ್ತಿದ್ದರು. ಅವರ ಹಿಂದಿನಿಂದ ಓಡಿ ಓಡಿ ಬಾಯಾರಿಕೆ ತಡೆಯಲಾಗದೆ ಹಝ್ರತ್ ಯೂಸುಫ್ ರವರು “ನನಗೆ ಬಾಯಾರಿಕೆಯಾಗುತ್ತಿದೆ. ಸ್ವಲ್ಪ ನೀರಾದರೂ ಕೊಡಿ” ಎಂದು ಬೊಬ್ಬಿಡುತ್ತಿದ್ದರು. ಈ ವೇಳೆ ಶಮ್ಊನ್ ಎಂಬ ಸಹೋದರನು “ನಿನಗೆ ನೀರಲ್ಲ ಮೂರು. ಈ ಚಿಕ್ಕ ಪ್ರಾಯದಲ್ಲೇ ಸುಳ್ಳು ಕನಸು ಹೇಳಿ ತಂದೆಯನ್ನು ಜೇಬಿನೊಳಗೆ ಮಾಡಿದಿ” ಎಂದು ಹೇಳಿ ನೀರಿನ ಹೂಜಿಯನ್ನು ಪುಡಿಮಾಡಿದ. ಲಾವಾ ಎಂಬ ಮತ್ತೊಬ್ಬ ಸಹೋದರ ತಂದೆ ರೆಡಿ ಮಾಡಿಕೊಟ್ಟ ಆಹಾರದ ಪೊಟ್ಟಣವನ್ನು ಚರಂಡಿಗೆ ಎಸೆದನು.
ಇವರ ಈ ಒಂದೊಂದು ಕೃತ್ಯಗಳನ್ನು ಗಮನಿಸಿದಾಗ ಹಝ್ರತ್ ಯೂಸುಫ್ ರವರಿಗೆ ಏನೋ ಒಂದು ಸಂಚು ಹೂಡಿದ್ದಾರೆ, ಮುಂದಕ್ಕೆ ಒಂದು ದುರಂತ ನಡೆಯುವುದು ಖಂಡಿತಾ ಎಂದು ತಿಳಿಯಿತು. ತಂದೆಯವರಲ್ಲಿ ಮಾಡಿದ ಕರಾರು ಮತ್ತು ಅಣ್ಣ ತಮ್ಮಂದಿರ ಸಂಬಂಧದ ಬಗ್ಗೆ ಅವರಲ್ಲಿ ಹೇಳಿ ನೋಡಿದರು. ಆದರೆ ಅವರು ಬಿಡಲಿಲ್ಲ. ಸ್ವಲ್ಪ ಮುಂದೆ ಸಾಗಿದಾಗ ಅವರಲ್ಲಿ ಒಬ್ಬನು ಹಝ್ರತ್ ಯೂಸುಫರನ್ನು ನೆಲಕ್ಕೆ ಹಾಕಿ ತುಳಿದನು. ಮತ್ತೊಬ್ಬ ಚೆನ್ನಾಗಿ ಕೆನ್ನೆ ಮತ್ತು ತಲೆಗೆ ಹೊಡೆದನು. ಒಟ್ಟಿನಲ್ಲಿ ಕೊನೆಗೆ ಹೇಗಾದರೂ ಅವರು ಆಡು ಮೇಯಿಸುವ ಮತ್ತು ಆಟವಾಡುವ ಬಯಲಿಗೆ ತಲುಪಿದರು. ಅದು ಅವರ ಊರಾದ ಕನ್ಆನ್ ಎಂಬ ಪ್ರದೇಶದಿಂದ ಎಷ್ಟೋ ಮೈಲಿ ದೂರದಲ್ಲಿರುವ ಜೋರ್ಡಾನಿನ ಗಡಿ ಭಾಗದಲ್ಲಾಗಿತ್ತು.
ಅಲ್ಲಿ ಕೆಲವರಂತೂ ಹಝ್ರತ್ ಯೂಸುಫರನ್ನು ಕೊಲ್ಲಲು ತಯಾರಾದರು. ಆದರೆ ಯಹೂದ ಬಿಡಲಿಲ್ಲ. ಆತ ಅವರ ಪೈಕಿ ಸ್ಬಲ್ಪ ಕರುಣೆ ಇರುವವನಾಗಿದ್ದನು. ಯಹೂದ ಅವರಲ್ಲಿ ಹೇಳಿದನು: “ಕೊಂದರೆ ಆದಮರ ಮಗ ಖಾಬೀಲನಿಗೆ ಬಂದ ಅನಾಹುತ ನಮಗೆ ಬರುತ್ತದೆ. ಅದ್ದರಿಂದ ಕೊಲ್ಲುವುದು ಬೇಡ. ಒಂದು ಬಾವಿ ನೋಡಿ ಅದಕ್ಕೆ ಇಳಿಸುವ” ಎಂದು. ಬಳಿಕ ಬಾವಿ ಹುಡುಕಿ ಮುಂದಕ್ಕೆ ಸಾಗಿದರು. ಸ್ವಲ್ಪ ದೂರ ಸಾಗಿದಾಗ ಒಂದು ಬಾವಿ ದೊರೆಯಿತು.
ಬಳಿಕ ಅವರ ಕೈಯನ್ನು ಕಟ್ಟಿ ಬಾವಿಗೆ ಇಳಿಸಿದರು. ಇಳಿಸಲು ಹಗ್ಗ ದೊರೆಯದಾಗ ಅವರ ಆಡಿನ ಗುಂಪಿನಿಂದ ಒಂದು ಆಡನ್ನು ಚೂರಿಹಾಕಿ ಅದರ ಚರ್ಮವನ್ನು ಉದ್ದನೆ ತುಂಡುಮಾಡಿ ಹಗ್ಗ ಮಾಡಿದರು. ನಂತರ ಸಯ್ಯಿದ್ ಯೂಸುಫ್ರವರು ಧರಿಸಿದ್ದ ಅವರ ಖಮೀಸನ್ನು ಕಳಚಿದರು. ಅದು ತಂದೆಯ ಹತ್ತಿರ ಹೋದರೆ “ತೋಳ ಹಿಡಿದಾಗ ನಾವು ಅವರನ್ನು ಬಚಾವು ಮಾಡಲು ಹೋಗಿದ್ದೆವು” ಎಂದು ಅವರಿಗೆ ಮನವರಿಕೆ ಮಾಡಲಾಗಿತ್ತು. ಆ ವೇಳೆಯಲ್ಲಿ ಹಝ್ರತ್ ಯೂಸುಫ್ ರವರು ‘ಈಗ ನಾನು ಮರಣಹೊಂದುವ ತನಕ ಅದರಿಂದ ನನ್ನ ಗುಪ್ತ ಭಾಗ (ಅವುರತ್) ಮುಚ್ಚಿ ಬಳಿಕ ಅದು ಮರಣಹೊಂದಿದರೆ ಕಫನ ಮಾಡಲು ಆಗಬಹುದು” ಎಂದು ಜೋರಾಗಿ ಹೇಳಿ ಕೂಗುತ್ತಿದ್ದರು.
ಆದರೆ ಅವರು ಅದಕ್ಕೆ ಕಿವಿಗೊಡದೆ ಹಾಗೆಯೇ ಕೆಳಗಿಸಿದರು. ಅಲ್ಲಿ ಅವರು ನೀರಿನಿಂದ ಈಜಾಡಿ ಬದಿಯಲ್ಲಿದ್ದ ಒಂದು ಬಂಡೆಕಲ್ಲಿನ ಮೇಲೆ ಹತ್ತಿತರು. ಹಝ್ರತ್ ಜಿಬ್ರೀಲರು ತಂದುಕೊಟ್ಟ ಸ್ವರ್ಗದ ಆಹಾರವನ್ನು ಸೇವಿಸಿ, ಅವರು ತಂದ ಉಡುಪು ಧರಿಸಿ ಅಲ್ಲಿ ಕಲ್ಲಿನ ಮೇಲೆ ಆರಾಮವಾಗಿ ಕುಳಿತರು. ಅವರಿಗೆ ಯಾವುದೇ ತೊಂದರೆ ಆಗಬಾರದೆಂಬ ಉದ್ದೇಶದಿಂದ ಬಾವಿಯಲ್ಲಿದ್ದ ಎಲ್ಲಾ ಜೀವರಾಶಿಗಳು ಪರಸ್ಪರ ಮಾತನಾಡಿ ಅವುಗಳ ಹುತ್ತಕ್ಕೆ ಹೋಗಿ ಸೇರಿತು. ಆದರೆ ಬದಿಯಲ್ಲಿ ಒಂದು ಹುತ್ತದಲ್ಲಿದ್ದ ಸರ್ಪವೊಂದು ಅವರನ್ನು ಕಡಿಯಲು ಬಂತು. ಆಗ ಹಝ್ರತ್ ಜಿಬ್ರೀಲರು ಬಂದು ಘರ್ಜನೆ ಮಾಡಿ ಅದನ್ನು ಗದರಿಸಿದರು. ಅವರ ಘರ್ಜನೆಗೆ ಸರ್ಪದ ಕಿವಿ ಕಿವುಡಾಯಿತು. ಮಾತ್ರವಲ್ಲ ಆ ಕಾರಣದಿಂದ ಅಂತ್ಯದಿನದ ತನಕ ಹಾವಿನ ಸಂತಾನ ಕಿವುಡಾಗಿರುವುದು ಎಂದು ಹೇಳಲಾಗುತ್ತದೆ. ಈ ವೇಳೆ ಹಝ್ರತ್ ಯೂಸುಫ್ ರವರಿಗೆ ಹನ್ನೆರಡು ವರ್ಷ ಪ್ರಾಯವಾಗಿತ್ತು.
✍🏻ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಮತ್ತು ಇಮಾಮ್ ಇಸ್ಮಾಯೀಲ್ ಹಿತ್ತಿಯವರ ತಫ್ಸೀರ್ ರೂಹುಲ್ ಬಯಾನ್ ಎಂಬ ಗ್ರಂಥದಿಂದ…
ಮುಂದುವರಿಯುವುದು….
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.