(www.vknews.in) : ಹಿಜ್ರಾ ವರ್ಷ ನೂರ ಹದಿನೆಂಟರಲ್ಲಿ ಹುಟ್ಟಿ, ನೂರ ಎಂಬತ್ತ ಒಂದರಲ್ಲಿ ವಫಾತಾದ ಖ್ಯಾತ ತಾಬಿಈ ವಿದ್ವಾಂಸ ಮತ್ತು ಹನಫೀ ಮದ್ಹಬಿನ ನೇತಾರ ಇಮಾಮ್ ಅಬೂಹನೀಫಾ (ರ) ರವರ ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ಅಲ್ಲಾಮಾಃ ಅಬ್ದುಲ್ಲಾಹಿ ಬಿನ್ ಮುಬಾರಕ್ (ರ) ರವರು ಒಮ್ಮೆ ಹಜ್ಜ್ ಯಾತ್ರೆ ಕೈಗೊಂಡಾಗ ಹಜ್ಜ್ ಮುಗಿದು ಮಸ್ಜಿದುಲ್ ಹರಾಮಿನ ಬಳಿ ಒಂದು ಕಡೆ ನಿದ್ರಿಸುತ್ತಿರುವ ವೇಳೆ ಅವರಿಗೆ ಇಬ್ಬರು ವ್ಯಕ್ಕಿಗಳು ಅವರ ತಲೆಯ ಹತ್ತಿರ ಕುಳಿತು ಪರಸ್ಪರ ಚರ್ಚಿಸುವ ಒಂದು ಕನಸು ಬಿತ್ತು.
ಅದರಲ್ಲಿ ಒಬ್ಬರು ಮತ್ತೊಬ್ಬರಲ್ಲಿ ಕೇಳುತ್ತಾರೆ: “ಈ ವರ್ಷ ಲಕ್ಷೋಪಲಕ್ಷ ಜನ ಹಜ್ಜ್ ಮಾಡಿದ್ದರಲ್ಲಿ ಎಷ್ಟು ಮಂದಿಯ ಹಜ್ಜನ್ನು ಅಲ್ಲಾಹನು ಖಬೂಲ್ ಮಾಡಿದ್ದಾನೆ ಎಂದು ನಿಮಗೆ ಗೊತ್ತಿದೆಯಾ?” ಆಗ ಮತ್ತೊಬ್ಬರು ಹೇಳುತ್ತಾರೆ: “ಇಲ್ಲ… ನನಗೆ ಗೊತ್ತಿಲ್ಲ. ನೀವೇ ಹೇಳಿ” ಎಂದು. ಆ ವೇಳೆ ಮೊದಲು ಪ್ರಶ್ನೆ ಕೇಳಿದ ವ್ಯಕ್ತಿ ಹೇಳುತ್ತಾರೆ: “ಈ ಸಲದ ಹಜ್ಜಾಜಿಗಳ ಹಜ್ಜಿಯಲ್ಲಿ ಹೆಚ್ಚಾಗಿ ಯಾರ ಹಜ್ಜನ್ನೂ ಅಲ್ಲಾಹನು ಖಬೂಲ್ ಮಾಡಲಿಲ್ಲ. ಬರೇ ಬೆರಳೆಣಿಕೆಯ ಕೆಲವು ಪ್ರಾಮಾಣಿಕ ಹಜ್ಜಾಜಿಗಳ ಹಜ್ಜ್ ಮಾತ್ರ ಸ್ವೀಕಾರ ಆಗಿದೆ. ಹೆಚ್ಚಿನವರ ಹಜ್ಜ್ ಖಬೂಲ್ ಆಹಲಿಲ್ಲಿ”
ಮಹಾನುಭಾವರು ಎಚ್ಚರವಾದಾಗ ರಾತ್ರಿ ಬಿದ್ದ ಕನಸಿನಿಂದಾಗಿ ಅದರ ವ್ಯಾಖ್ಯಾನ ತಿಳಿಯದೆ ಬಹಳ ಚಿಂತೆಗೊಳಗಾದರು. ಪರವಾಗಿಲ್ಲ ಏನಾದರೊಂದು ಪರಿಹಾರ ಸಿಗಬಹುದು ಎಂದು ನಿಯ್ಯತ್ ಮಾಡಿ ಮಾರನೇ ದಿನ ನಿದ್ರೆಗೆ ಜಾರಿದರು. ಸುಬ್ಹಾನಲ್ಲಾಹ್! ಎರಡನೇ ದಿನವೂ ಅದೇ ಎರಡು ವ್ಯಕ್ತಿಗಳು ಪರಸ್ಪರ ಮಾತುಕತೆ ನಡೆಸುತ್ತಿರುವ ಕನಸು ಮತ್ತೊಮ್ಮೆ ಬಿತ್ತು. ಮೊದಲನೆಯ ದಿನ ಪ್ರಶ್ನೆ ಕೇಳಿದ ಆ ವ್ಯಕ್ತಿಯೇ ಮತ್ತೊಬ್ಬರಲ್ಲಿ ಹೇಳುತ್ತಾರೆ: ಅಲ್ಲಾಹನು ಶಾಮಿನಲ್ಲಿ ಮುಅಫ್ಫಖ್ ಎಂಬ ಹೆಸರಿನ ಒಬ್ಬ ಚಮ್ಮಾರನ (ಚೆರಿಪುತ್ತಿ) ಹಜ್ಜಿಯ ಕಾರಣದಿಂದ ಈ ಸಲ ಎಲ್ಲರ ಹಜ್ಜನ್ನೂ ಅಲ್ಲಾಹನು ಖಬೂಲ್ ಮಾಡಿದ್ದಾನೆ. ಗಮನಾರ್ಹ ಸಂಗತಿಯೆಂದರೆ, ಆತ ಮಾತ್ರ ಈ ಸಲ ಹಜ್ಜಿಗೆ ಬರಲಿಲ್ಲ” ಎಂದು.
ಕನಸು ಬಿದ್ದ ನಿಮಿಷದಲ್ಲೇ ಹಝ್ರತ್ ಅಬ್ದುಲ್ಲಾಹಿ ಬಿನ್ ಮುಬಾರಕ್ರವರಿಗೆ ಎಚ್ಚರವಾಯಿತು. ತಡಮಾಡದೆ ಮರುದಿನವೇ ಈ ಮಹಾ ವ್ಯಕ್ತಿ ಯಾರಾಗಿರಬಹುದು? ಅವರ ರಹಸ್ಯ ಏನಾಗಿರಬಹುದು? ಎಂದು ತಿಳಿಯಲು ಶಾಮಿನತ್ತ ಯಾತ್ರೆ ಕೈಗೊಂಡರು.
ಅವರನ್ನು ಹುಡುಕಿ ಸಿರಿಯಾಕ್ಕೆ ಹೋದ ಮಹಾನುಭಾವರು ದಾರಿಯಲ್ಲಿ ಕಂಡ ಕಂಡವರಲ್ಲಿ ವಿಚಾರಿಸಿ, ವಿಚಾರಿಸಿ ಕೊನೆಗೆ ಹೇಗಾದರೂ ಆ ವ್ಯಕ್ತಿಯ ಚಪ್ಪಲಿ ಹೊಲಿಯುವ ಅಂಗಡಿ ತಲುಪಿತು. ಬಳಿಕ ಅವರಿಗೆ ಸಲಾಮ್ ಹೇಳಿ ಅವರಲ್ಲಿ ನಡೆಸಿದ ಸಂಭಾಷಣೆ:⬇️
ಅಬ್ದುಲ್ಲಾಹಿ ಬಿನ್ ಮುಬಾರಕ್: ನೀವು ಈ ಸಲ ಹಜ್ಜಿಗೆ ಹೋಗಲಿಲ್ಲವೇ?
ಚಮ್ಮಾರ: ಇಲ್ಲ.. ಇಲ್ಲ.. ನಾನು ಹೋಗಲಿಲ್ಲ. ಅಬ್ದುಲ್ಲಾಹಿ ಬಿನ್ ಮುಬಾರಕ್: ಯಾಕೆ ಹೋಗಲಿಲ್ಲ? ಹೋಗದಿರಲು ಕಾರಣವೇನು? ಚಮ್ಮಾರ: ನೀವು ಯಾಕೆ ಈ ಪ್ರಶ್ನೆ ಕೇಳುತ್ತಿದ್ದೀರಿ? ಏನಾದರೂ ವಿಶೇಷ ಉಂಟಾ? ಅಬ್ದುಲ್ಲಾಹಿ ಬಿನ್ ಮುಬಾರಕ್: ಹೌದು ಉಂಟು. ನೀವು ನಿಮ್ಮ ಕತೆ ಹೇಳಿದರೆ ನಾನು ಆ ವಿಶೇಷ ಹೇಳುತ್ತೇನೆ. ಚಮ್ಮಾರ: ಇಮಾಮರೇ, ನಾನು ಹಲವಾರು ವರ್ಷಗಳಿಂದ ನೀವು ನೋಡುತ್ತಿರುವ ಈ ಅಂಗಡಿಯಲ್ಲಿ ಚಪ್ಪಲಿ ಹೊಲಿಯುವ ಕೆಲಸ ಮಾಡುತ್ತಿದ್ದೇನೆ. ಅದಾಗ್ಯೂ ನನಗೆ ಒಂದು ಮಬ್ರೂರಾದ ಹಜ್ಜ್ ಮಾಡಬೇಕೆಂಬ ಬಯಕೆ ಎಷ್ಟೋ ವರ್ಷಗಳಿಂದ ಇತ್ತು. ಅದಕ್ಕೆ ಬೇಕಾಗಿ ನಾನು ದುಡಿದ ಹಣದಿಂದ ಮನೆಯ ಖರ್ಚು ಮುಗಿದು ಬಾಕಿ ಉಳಿದದ್ದನ್ನು ಒಂದು ಡಬ್ಬಿಯಲ್ಲಿ ಹಾಕಿ ಶೇಖರಣೆ ಮಾಡುತ್ತಿದ್ದೆ. ಅಂತೆಯೇ ಈ ಸಲದ ಹಜ್ಜಿನ ಸಮಯವಾದಾಗ ಶೇಖರಿಸಿದ ಹಣವನ್ನು ಎಣಿಸಿ ನೋಡಿದೆ. ನೋಡಿದಾಗ ಹಜ್ಜ್ ಕರ್ಮ ಮಾಡಿ ಬರಲು ಬೇಕಾದ ಹಣ ಇದೆಯೆಂದು ಖಚಿತವಾಯಿತು. ತರುವಾಯ ಹಜ್ಜಿಗೆ ಹೋಗಲು ಸಿದ್ದತೆ ಮಾಡತೊಡಗಿದೆ.
ಹೀಗಿರುವಾಗ ಒಂದು ದಿನ ಕೆಲಸ ಮುಗಿದು ಮನೆಗೆ ಹೋದಾಗ ನನ್ನ ಗರ್ಭಿಣಿಯಾದ ಪತ್ನಿ ಮನೆಯ ಹೊಸ್ತಿಲಲ್ಲಿ ಒಂದು ಪಾತ್ರೆ ಕೈಯಲ್ಲಿ ಹಿಡಿದು ಹೇಳಿದಳು: “ನೆರೆ ಮನೆಯಿಂದ ಮಾಂಸ ಹುರಿದ ಘಮಘಮ ಪರಿಮಳ ಬರುತ್ತಿದೆ. ಗರ್ಭಿಣಿಯಾದ ನನಗೆ ಮಾಂಸ ತಿನ್ನಬೇಕೆಂಬ ಬಯಕೆಯಾಗುತ್ತಿದೆ. ಅದ್ದರಿಂದ ಅಲ್ಲಿಹೋಗಿ ನನಗೆ ಸ್ವಲ್ಪ ಕೇಳಿ ತನ್ನಿರಿ” ಎಂದು.
ನಾನು ಕೂಡಲೇ ಆ ಮನೆಗೆ ಹೋಗಿ ನನ್ನ ಪತ್ನಿಗೆ ಮಾಂಸ ತಿನ್ನುವ ಬಯಕೆಯಾದ ಸಂಗತಿ ಆ ಮನೆಯೊಡತಿಯಲ್ಲಿ ಹೇಳಿದೆನು. ಆಗ ವಿಧವೆಯಾದ ಅವರು ನನ್ನಲ್ಲಿ ಹೇಳಿದರು: “ಮುಅಪ್ಪಕ್ರವರೇ, ಈ ಮಾಂಸ ನಮಗೆ ಹಲಾಲ್ ಮತ್ತು ನಿಮಗೆ ಹರಾಮಾಗಿದೆ. ಕಾರಣವೇನೆಂದರೆ, ನನ್ನ ಪತಿ ಮರಣ ಹೊಂದಿದ ಬಳಿಕ ಈ ಮನೆಯಲ್ಲಿ ನಮ್ಮ ದಿನಗಳು ಬಹಳ ಕಷ್ಟದಲ್ಲಿ ಉರುಳುತ್ತಿದೆ. ಕೆಲವು ದಿನಗಳಿಂದ ತಿನ್ನಲು ಏನೂ ಇಲ್ಲದ ಕಾರಣ ಒಲೆಗೆ ಬೆಂಕಿ ಕೂಡ ಕೊಡಲಿಲ್ಲ. ಇವತ್ತು ನನ್ನ ಈ ಮಕ್ಕಳು ಹಸಿವು ತಡೆಯಲಾರದೆ ಅಳುತ್ತಿರುವಾಗ ಹೊರಗೇನಾದರೂ ಸಿಗುತ್ತದಾ ಎಂದು ಹುಡುಕಿ ಹೊರಗೆ ಹೋದೆನು. ನೋಡುವಾಗ ಹತ್ತಿರದ ಮನೆಯವರು ಬಿಸಾಕಿದ ಒಂದು ಸತ್ತ ಆಡು ಚರಂಡಿಯಲ್ಲಿ ಕಾಣುತ್ತಿತ್ತು. ತಾತ್ಕಾಲಿಕ ಹಸಿವು ನೀಗಿಸಲು ಅದರಿಂದ ಒಂದು ತುಂಡು ಕಟ್ ಮಾಡಿ ತೆಗೆದುಕೊಂಡು ಬಂದು ಮಕ್ಕಳಿಗೆ ಪಾಕ ಮಾಡಿದ್ದೇನೆ ಅಷ್ಟೆ”
ನೆರೆಮನೆಯ ಆ ವಿಧವೆಯಾದ ಬಡಪಾಯಿ ಮಹಿಳೆಯ ಮಾತುಕೇಳಿ ನನಗೆ ಬಹಳ ಬೇಸರವಾಯಿತು. “ನೆರೆಯವನು ಹಸಿದು ಈ ಗತಿಯಲ್ಲಿರುವಾಗ ಇನ್ನೇನು ಹಜ್ಜ್? ಇನ್ನೇನು ಉಮ್ರ?” ಎಂದು ಮನದಲ್ಲೇ ಹೇಳುತ್ತಾ ನನ್ನ ಮುಖಕ್ಕೆ ನಾನೇ ಎರಡು ಬಾರಿಸುತ್ತಾ ಮನೆಗೆ ಹೋಗಿ ಆ ಹಜ್ಜ್ ಮಾಡಲು ಶೇಖರಣೆ ಮಾಡಿಟ್ಟಿದ್ದ ಹಣವನ್ನು ” ಇದು ನಿಮಗೆ ಅಲ್ಲಾಹನು ಕೊಟ್ಟದ್ದು” ಎಂದು ಹೇಳಿ ಅವರಿಗೆ ಕೊಟ್ಟು ಬಂದೆನು. ಇದಾಗಿರುತ್ತದೆ ನನ್ನ ಕತೆ.
ಚಮ್ಮಾರ ಮುಅಫ್ಫಕರಿಂದ ಈ ಮನ ನೋಯಿಸುವ ಸಂಗತಿ ತಿಳಿದಾಗ ಹಝ್ರತ್ ಅಬ್ದುಲ್ಲಾಹಿ ಬಿನ್ ಮುಬಾರಕ್ ರವರು ಅಳುತ್ತಾ ಅವರಲ್ಲಿ ಹೇಳಿದರು: “ಬೇಸರ ಮಾಡಬೇಡಿ. ನಿಮಗೆ ಅಲ್ಲಾಹನು ಹಜ್ಜ್ ತಖ್ದೀರ್ ಮಾಡಲಿಲ್ಲವಾದರೂ ಹಜ್ಜಿನ ಫ್ರತಿಫಲ ಲಭಿಸಿದೆ. ಮಾತ್ರವಲ್ಲ, ನಿಮ್ಮ ಆ ಮಹಾ ಸ್ವದಖದ ಕಾರಣದಿಂದ ಲಕ್ಷೋಪಲಕ್ಷ ಜನರ ಫರಳ್, ಶರ್ತ್, ನಿಯ್ಯತ್ ಸರಿಯಾಗದ ಹಜ್ಜನ್ನು ಅಲ್ಲಾಹನು ಸ್ವೀಕಾರ ಮಾಡಿದ್ದಾನೆ. ನಿಮಗೆ ಅದು ಸಾಲದೇ?” ಎಂದು
ಸಾಲಮಾಡಿ, EMI ಲೋನ್ ಪಡೆದು, ಮಾಡಿದ ಸಾಲ ಪಾವತಿಸದೆ, ಅಂತೆಯೇ ಟ್ರಾವೆಲ್ ಏಜೆನ್ಸಿಗಳ ಜಾಹಿರಾತಿಗೆ ಬಲಿಯಾಗಿ ಉಲ್ಲಾಸ ಯಾತ್ರೆ ಹೋಗುವ ರೂಪದಲ್ಲಿ ಹೋಗುವ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿರುವ ಹಜ್ಜ್, ಉಮ್ರಾ ಯಾತ್ರಿಕರಿಗೆ ಈ ಚರಿತ್ರೆ ಒಂದು ಪಾಠವಾಗಲಿ. ಅಲ್ಲಾಹನು ನಮೆಗೆಲ್ಲರಿಗೂ ಖಬೂಲಾದ ಹಜ್ಜ್ ಮಾಡಲು ತೌಫೀಖ್ ನೀಡಲಿ ಆಮೀನ್…..
✍🏻ಯೂಸುಫ್ ನಬ್ಹಾನಿ ಕುಕ್ಕಾಜೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.