· ಭಾರತದಲ್ಲಿ ಈವರೆಗಿನ ಅತಿದೊಡ್ಡ ರೈಟ್ಸ್ ಇಶ್ಯೂ
· ಒಂದು ದಶಕದ ಅವಧಿಯಲ್ಲಿ ಹಣಕಾಸೇತರ ಸಂಸ್ಥೆಯೊಂದರಿಂದ ಪ್ರಪಂಚದಲ್ಲೇ ಅತಿದೊಡ್ಡ ರೈಟ್ಸ್ ಇಶ್ಯೂ
· ಶ್ರೀ ಮುಖೇಶ್ ಅಂಬಾನಿಯವರಿಂದ ಶೇರುದಾರರಿಗೆ ಧನ್ಯವಾದ ಸಮರ್ಪಣೆ ಹಾಗೂ “ಹೊಸ ಭಾರತಕ್ಕಾಗಿ ಹೊಸ ರಿಲಯನ್ಸ್” ನಿರ್ಮಾಣ ಬದ್ಧತೆಯ ಪುನರುಚ್ಚಾರ
ಮುಂಬಯಿ (www.vknews.com) : 53,124.20 ಕೋಟಿ ರೂ.ಗಳ, ಭಾರತದಲ್ಲಿ ಈವರೆಗಿನ ಅತಿದೊಡ್ಡ ರೈಟ್ಸ್ ಇಶ್ಯೂವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇಂದು ಘೋಷಿಸಿದೆ. ಇದಕ್ಕೆ ಸುಮಾರು 1.59 ಪಟ್ಟು ಚಂದಾದಾರಿಕೆ ದೊರೆತಿದ್ದು, ಒಟ್ಟಾರೆ 84,000 ಕೋಟಿ ರೂ.ಗಳಿಗೂ ಹೆಚ್ಚಿನ ಬದ್ಧತೆಯನ್ನು ಪಡೆದುಕೊಂಡಿತ್ತು. ಲಕ್ಷಾಂತರ ಸಣ್ಣ ಹೂಡಿಕೆದಾರರಿಂದ ಹಾಗೂ ಸಾವಿರಾರು ದೇಶೀಯ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದಲೂ ಸೇರಿದಂತೆ ಈ ರೈಟ್ಸ್ ಇಶ್ಯೂವಿನತ್ತ ಹೂಡಿಕೆದಾರರ ಭಾರೀ ಆಸಕ್ತಿ ವ್ಯಕ್ತವಾಗಿತ್ತು. ರೈಟ್ಸ್ ಇಶ್ಯೂವಿನ ಸಾರ್ವಜನಿಕ ಭಾಗಕ್ಕೆ 1.22 ಪಟ್ಟು ಚಂದಾದಾರಿಕೆ ಲಭಿಸಿದೆ.
ಈಕ್ವಿಟಿ ಶೇರುಗಳ ಹಂಚಿಕೆ 2020ರ ಜೂನ್ 10ರಂದು ಅಥವಾ ಆ ಸುಮಾರಿಗೆ ನಡೆಯಲಿದೆ. ರೈಟ್ಸ್ ಶೇರುಗಳನ್ನು ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ 2020ರ ಜೂನ್ 12ರಂದು ಅಥವಾ ಆ ಸುಮಾರಿಗೆ ಪ್ರತ್ಯೇಕ ಐಎಸ್ಐಎನ್ ಅಡಿಯಲ್ಲಿ ಲಿಸ್ಟ್ ಮಾಡಲಾಗುವ ನಿರೀಕ್ಷೆಯಿದೆ.
ರೈಟ್ಸ್ ಇಶ್ಯೂ ಬಗ್ಗೆ ಜಾಗೃತಿ ಮೂಡಿಸಲು ವಿಶಾಲ ಹಾಗೂ ವಿವಿಧ ಸಂವಹನ ವಿಧಾನಗಳನ್ನು ಬಳಸಿಕೊಂಡು ಸಂಸ್ಥೆಯು ಅತ್ಯಂತ ನವೀನವಾದ ಅಭಿಯಾನವನ್ನು ಪ್ರಾರಂಭಿಸಿತ್ತು. ಶೇರುದಾರರನ್ನು ತಲುಪಲು ಇದರಲ್ಲಿ ಟೆಲಿವಿಷನ್, ರೇಡಿಯೋ, ಮುದ್ರಣ, ಡಿಜಿಟಲ್ ಮತ್ತು ಸೋಷಿಯಲ್ ಮೀಡಿಯಾ, ತನ್ನ ರೀತಿಯ ಮೊತ್ತಮೊದಲ ಎಐ ಆಧಾರಿತ ಚಾಟ್ಬಾಟ್, ಇಮೇಲ್ ಮತ್ತು ಎಸ್ಎಂಎಸ್ಗಳನ್ನು ಬಳಸಲಾಗಿತ್ತು.
ರೈಟ್ಸ್ ಇಶ್ಯೂವಿನಲ್ಲಿ ವ್ಯಕ್ತವಾದ ವಿಶಾಲ ಆಸಕ್ತಿಯ ಪ್ರತಿಫಲನವಾಗಿ ರೈಟ್ಸ್ ಎಂಟೈಟಲ್ಮೆಂಟ್ನಲ್ಲಿ (ಆರ್ಇ) ಸಕ್ರಿಯ ಟ್ರೇಡಿಂಗ್ ನಡೆಯಿತು. ಸೆಬಿ ಈ ಪ್ಲಾಟ್ಫಾರ್ಮ್ ಅನ್ನು ಪರಿಚಯಿಸಿದ ನಂತರ, ಆರ್ಇಗಳು ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಡಿಮ್ಯಾಟ್ ರೂಪದಲ್ಲಿ ವಹಿವಾಟು ನಡೆಸುತ್ತಿರುವ ಮೊದಲ ಉದಾಹರಣೆ ಇದಾಗಿದ್ದು ಅದ್ಭುತ ಯಶಸ್ಸನ್ನು ಕಂಡಿದೆ.
ಆರ್ಐಎಲ್ ರೈಟ್ಸ್ ಇಶ್ಯೂವಿನ ಒಂದು ವಿಶಿಷ್ಟ ಲಕ್ಷಣವೆಂದರೆ, ತನ್ನ ಅಗಾಧ ಗಾತ್ರದ ಹೊರತಾಗಿಯೂ ಅದು ಸಂಪೂರ್ಣವಾಗಿ ಡಿಜಿಟಲ್ ವೇದಿಕೆಯಲ್ಲಿ ಪೂರ್ಣಗೊಂಡಿತು ಹಾಗೂ ಕೋವಿಡ್-ಪ್ರೇರಿತ ಲಾಕ್ಡೌನ್ ಸಂದರ್ಭದಲ್ಲಿ ವಿಧಿಸಲಾಗಿದ್ದ ಗಣನೀಯ ಪ್ರಮಾಣದ ನಿರ್ಬಂಧಗಳನ್ನು ಮೀರಿನಿಂತಿತು. ಇದು ಭಾರತೀಯ ಮತ್ತು ಜಾಗತಿಕ ಬಂಡವಾಳ ಮಾರುಕಟ್ಟೆಗಳ ಇತಿಹಾಸದಲ್ಲಿ ಹೊಸ ದಾಖಲೆಯೂ ಆಗಿದೆ. ನಿಯಂತ್ರಕರು, ಬ್ಯಾಂಕರ್ಗಳು, ಹಣಕಾಸು ಸಂಸ್ಥೆಗಳು, ಚಿಲ್ಲರೆ ಹೂಡಿಕೆದಾರರು ಮತ್ತಿತರ ಯಾವುದೇ ಪಾಲುದಾರರು ಭಾರತದಾದ್ಯಂತ 800 ನಗರಗಳು ಹಾಗೂ ವಿದೇಶದ ಅನೇಕ ಹಣಕಾಸು ಕೇಂದ್ರಗಳಲ್ಲಿ ತಮ್ಮ ಕಚೇರಿ ಅಥವಾ ಮನೆಗಳಿಂದ ಹೊರಬರುವ ಅಗತ್ಯ ಇಲ್ಲದಂತೆಯೇ ರೈಟ್ಸ್ ಇಶ್ಯೂಗೆ ಸಂಬಂಧಿಸಿದ ಎಲ್ಲವನ್ನೂ ಸುಗಮವಾಗಿ ಮತ್ತು ಅತ್ಯಂತ ಹೆಚ್ಚು ದಕ್ಷತೆಯೊಂದಿಗೆ ನಡೆಸಲಾಯಿತು. ಇದು ಉದಯೋನ್ಮುಖ ಡಿಜಿಟಲ್ ಯುಗದ ಶಕ್ತಿಯನ್ನು ಮಾತ್ರವಲ್ಲದೆ, ಈ ಯುಗದಲ್ಲಿ ಹೊಸತನವನ್ನು ತೋರುವ ಭಾರತದ ಪ್ರವರ್ತಕ ಸಾಮರ್ಥ್ಯವನ್ನೂ ತೋರಿಸುತ್ತದೆ.
ರೈಟ್ಸ್ ಇಶ್ಯೂವಿನ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಮುಖೇಶ್ ಅಂಬಾನಿ, “ಈ ರೈಟ್ಸ್ ಇಶ್ಯೂವಿನಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತು ಅದನ್ನು ಭಾರತದ ಬಂಡವಾಳ ಮಾರುಕಟ್ಟೆಯ ಇತಿಹಾಸದಲ್ಲಿ ಹೊಸ ಮತ್ತು ಹೆಮ್ಮೆಯ ಹೆಗ್ಗುರುತನ್ನಾಗಿ ಮಾಡಿದ್ದಕ್ಕಾಗಿ ನಮ್ಮ ಆತ್ಮೀಯ ಮತ್ತು ಗೌರವಾನ್ವಿತ ಶೇರುದಾರರಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಸ್ಥಾಪಕರಾದ ಧೀರೂಭಾಯ್ ಅಂಬಾನಿಯವರ ಕಾಲದಿಂದಲೂ, ನಮ್ಮ ಶೇರುದಾರರು ಯಾವಾಗಲೂ ನಮ್ಮ ಶಕ್ತಿಯ ಅತಿದೊಡ್ಡ ಮೂಲವಾಗಿದ್ದಾರೆ. ನಂಬಿಕೆಯನ್ನೇ ಆಧಾರವಾಗಿಟ್ಟುಕೊಂಡ ದಶಕಗಳಷ್ಟು ಹಳೆಯ ನಮ್ಮ ಸಂಬಂಧವು ಹೆಚ್ಚಿನದನ್ನು ಸಾಧಿಸಲು ನಿರಂತರವಾಗಿ ನಮ್ಮನ್ನು ಪ್ರೇರೇಪಿಸಿದೆ. ರಿಲಯನ್ಸ್ ಭವಿಷ್ಯದ ಕುರಿತು ಅವರು ಪ್ರದರ್ಶಿಸಿರುವ ಅಸಾಧಾರಣ ವಿಶ್ವಾಸದಿಂದಾಗಿ ನಾವು ಸಂತೋಷಗೊಂಡಿದ್ದೇವೆ ಮತ್ತು ವಿನಮ್ರರಾಗಿದ್ದೇವೆ.
1.3 ಶತಕೋಟಿ ಭಾರತೀಯರ ಜೀವನಗಳನ್ನು ಸುಧಾರಿಸಲು ನೆರವಾಗುವ ಡಿಜಿಟಲ್ ತಂತ್ರಜ್ಞಾನಗಳ ಅಳವಡಿಕೆಯಿಂದ ಚಾಲಿತವಾದ, ಎಲ್ಲರನ್ನೂ ಒಳಗೊಂಡ ಹಾಗೂ ವೇಗವರ್ಧಿತ ಬೆಳವಣಿಗೆಯನ್ನು ಭಾರತಕ್ಕೆ ನೀಡುವುದನ್ನು ಮುಂದುವರೆಸುವುದು ನಮ್ಮ ದೃಷ್ಟಿಕೋನವಾಗಿದೆ. ರೈಟ್ಸ್ ಇಶ್ಯೂವಿನಲ್ಲಿ ತೋರಿಸಲಾದ ಅಪಾರವಾದ ವಿಶ್ವಾಸವು, ಈ ದೃಷ್ಟಿ ಮತ್ತು ಧ್ಯೇಯವನ್ನು ನಮ್ಮ ಶೇರುದಾರರು ಅನುಮೋದಿಸುತ್ತಾರೆಂದು ನಮಗೆ ಮನವರಿಕೆ ಮಾಡಿಕೊಟ್ಟಿದೆ. ಹೊಸ ಭಾರತಕ್ಕಾಗಿ ಹೊಸ ರಿಲಯನ್ಸ್ ನಿರ್ಮಿಸಲು ನಾವು ದೃಢತೆಯಿಂದ ಮುಂದಾಗಿರುವ ಸಂದರ್ಭದಲ್ಲಿ ಅವರ ಬೆಂಬಲವು ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ.” ಎಂದು ಹೇಳಿದ್ದಾರೆ.
“ಕೋವಿಡ್-19 ಜಾಗತಿಕ ಸೋಂಕಿನಿಂದಾಗಿ ಅಗತ್ಯವೆನಿಸಿದ ರಾಷ್ಟ್ರವ್ಯಾಪಿ ಲಾಕ್ಡೌನ್ನ ಹಿನ್ನೆಲೆಯಲ್ಲಿ ನೋಡಿದಾಗ, ಆರ್ಐಎಲ್ ರೈಟ್ಸ್ ಇಶ್ಯೂವಿನ ಯಶಸ್ಸು ದೇಶೀಯ ಹೂಡಿಕೆದಾರರು, ವಿದೇಶಿ ಹೂಡಿಕೆದಾರರು ಮತ್ತು ಸಣ್ಣ ಚಿಲ್ಲರೆ ಶೇರುದಾರರು ಭಾರತೀಯ ಆರ್ಥಿಕತೆಯ ಆಂತರಿಕ ಶಕ್ತಿಯಲ್ಲಿ ತೋರಿಸಿರುವ ವಿಶ್ವಾಸದ ದ್ಯೋತಕವಾಗಿದೆ. ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆಯು ಹೆಚ್ಚಿನ ಬೆಳವಣಿಗೆಯ ಪಥದಲ್ಲಿ ಸಾಗುವತ್ತ ಪುಟಿದೇಳುತ್ತದೆ ಮತ್ತು ಭಾರತವನ್ನು ವಿಶ್ವದ ಪ್ರಮುಖ ಡಿಜಿಟಲ್ ರಾಷ್ಟ್ರವನ್ನಾಗಿ ಮಾಡುತ್ತದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ.” ಎಂದೂ ಶ್ರೀ ಮುಖೇಶ್ ಅಂಬಾನಿ ಅವರು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.