ಮಂಗಳೂರು (www.vknews.com) : ಮಂಗಳೂರು ವಿವಿಯಲ್ಲಿ ಸಿಂಡಿಕೇಟ್ ಸದಸ್ಯರು ವ್ಯವಸ್ಥೆಯ ಸುಧಾರಣೆ ಹಾಗೂ ವಿವಿಯ ಅಭಿವೃದ್ಧಿ ಬಗ್ಗೆ ವಿಶೇಷ ಪ್ರಯತ್ನ ಪಡುತ್ತಿರುವ ಕುರಿತಂತೆ ಇಂದು ಮಂಗಳೂರಿನಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವತ್ಥ್ ನಾರಾಯಣ್ರನ್ನು ಭೇಟಿ ಮಾಡಿ ಚರ್ಚಿಸಿದರು. ಈ ಹಿಂದಿನ ಭ್ರಷ್ಟಾಚಾರದ ಬಗ್ಗೆ ಮಾನ್ಯ ಸಚಿವರ ಗಮನಕ್ಕೆ ತರಲಾಯಿತು. ಇದನ್ನು ಸರಿಪಡಿಸುವ ಕುರಿತಂತೆ ಸಿಂಡಿಕೇಟ್ ಸದಸ್ಯರ ಯೋಜನೆ ಹಾಗೂ ಯೋಚನೆಯನ್ನು ಅವರಿಗೆ ತಿಳಿಸಲಾಯಿತು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕರಾದ ವೇದವ್ಯಾಸ ಕಾಮತ್ ಮಾತನಾಡಿ ವಿವಿಯಲ್ಲಿ ಈಗಾಗಲೇ ಸಿಂಡಿಕೇಟ್ ಸದಸ್ಯರು ಹಲವು ಬದಲಾವಣೆಯನ್ನು ಮಾಡಲು ಮುಂದಾಗಿರುವುದು ಶ್ಲಾಘನೀಯ. ಸರ್ಕಾರವು ಮಂಗಳೂರು ವಿವಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪರೀಕ್ಷಾ ಸುಧಾರಣೆಗೋಸ್ಕರ ಸಿಂಡಿಕೇಟ್ ಸದಸ್ಯರು ಹೊರಗುತ್ತಿಗೆ ಸಂಸ್ಥೆ ಬದಲು ವಿವಿಯಿಂದಲೇ ಪರೀಕ್ಷಾ ಉಚಿತ ಸಾಫ್ಟ್ವೇರ್ ರಚಿಸುವಂತೆ ನೀಡಿರುವ ಪ್ರಸ್ತಾವಣೆಯ ಪರಿಣಾಮ ಹೊಸ ಉಚಿತ ಪರೀಕ್ಷಾ ಸಾಫ್ಟ್ವೇರ್ ಕಾರ್ಯವು ಪ್ರಗತಿಯಲ್ಲಿದೆ. ಇದರಿಂದಾಗಿ ವಿವಿಗೆ ವರ್ಷದಲ್ಲಿ ಕೋಟ್ಯಾಂತರ ಹಣ ಉಳಿತಾಯವಾಗಲಿದೆ. ನಮ್ಮ ವಿದ್ಯಾರ್ಥಿಗಳ ಮಾಹಿತಿಯು ಯಾವುದೇ ಹೊರಗುತ್ತಿಗೆ ಸಂಸ್ಥೆಗಳಿಗೆ ಹೋಗುವುದಿಲ್ಲ. ಇಂತಹ ಪ್ರಯತ್ನ ರಾಜ್ಯದಲ್ಲಿ ಮಂಗಳೂರು ವಿವಿ ಜಾರಿಗೆ ತರುತ್ತಿರುವುದನ್ನು ಉಪ ಮುಖ್ಯಮಂತ್ರಿಗಳಾದ ಅಶ್ವತ್ಥ್ ನಾರಾಯಣರು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಹೊರಗುತ್ತಿಗೆ ಸಂಸ್ಥೆಯ ಪರೀಕ್ಷಾ ಸಾಫ್ಟ್ವೇರನ್ನು ಎಲ್ಲಾ ವಿಶ್ವವಿದ್ಯಾನಿಲಯ ಸ್ವಯಂ ಮಾಡುವುದು ಸಚಿವರ ಆಶಯವಾಗಿದೆ ಎಂಬುವುದನ್ನು ತಿಳಿಸಿದರು. ಮಂಗಳೂರು ವಿಶ್ವವಿದ್ಯಾನಿಲಯ ಮಾದರಿ ವಿಶ್ವವಿದ್ಯಾನಿಲಯವಾಗುವ ನಿಟ್ಟಿನಲ್ಲಿ ಸರ್ಕಾರವು ಎಲ್ಲಾ ರೀತಿಯ ಸಹಕಾರ ನೀಡುತ್ತದೆ.
ಎಲ್ಲಾ ರೀತಿಯ ಸರಳೀಕೃತವಾದ ಬದಲಾವಣೆಗಳು ನಡೆಯಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಭಾಜಪಾ ಜಿಲ್ಲಾಧ್ಯಕ್ಷರಾದ ಸುದರ್ಶನ್, ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್, ಮಂಗಳೂರು ವಿವಿ ಶೈಕ್ಷಣಿಕ ಮಂಡಳಿಯ ಸದಸ್ಯರು ಹಾಗೂ ಮಂಗಳೂರು ಉತ್ತರ ಕ್ಷೇತ್ರ ಶಾಸಕರಾದ ಡಾ. ಭರತ್ ಶೆಟ್ಟಿ, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ರಮೇಶ್.ಕೆ, ಸಿಂಡಿಕೇಟ್ ಸದಸ್ಯರಾದ ರವಿಚಂದ್ರ ಪಿ.ಎಮ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ ಪಾಂಡೇಶ್ವರ, ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ, ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.