(www.vknews.in) : ಭಾರತ ದೇಶಕ್ಕಾಗಿ ಸರ್ವಧರ್ಮೀಯರ ತ್ಯಾಗ,ಬಲಿದಾನವಿದೆ.ಈ ಮಣ್ಣಿಗಾಗಿ ಸರ್ವಧರ್ಮದ ಸೈನಿಕರು ಪ್ರತಿನಿತ್ಯ ವೀರಮರಣವನ್ನಪ್ಪುತ್ತಲೇ ಇದ್ದಾರೆ.ಭಾರತವು ಯಾವುದೇ ಒಂದು ಧರ್ಮದ ಮೇಲೆ ನಿಂತಿಲ್ಲ.ಹಾಗಾಗಿಯೇ ಸಂವಿಧಾನವು ನಮಗೆ ಅವರವರ ಧರ್ಮದ ಆಚಾರ-ವಿಚಾರ,ಆಹಾರ ಪದ್ದತಿ, ವಸ್ತ್ರಧಾರಣೆಯಲ್ಲಿ ಮೂಲಭೂತ ಹಕ್ಕನ್ನೂ ನೀಡಿದೆ.
ಆದರೆ ಇತ್ತೀಚಿನ ಕೆಲವು ವರ್ಷಗಳಿಂದೀಚೆ ಈ ಎಲ್ಲಾ ಹಕ್ಕಿನ ಮೇಲೆ ನಿಯಂತ್ರಣ ಹೇರುವ ಪ್ರಯತ್ನಗಳು ನಡೆಯುತ್ತಲೇ ಇದೆ.ಉಡುಪಿಯ ಹಿಜಾಬ್ ವಿಷಯಕ್ಕೆ ಬಂದಾಗ ಇಲ್ಲಿ ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸಿ ಕೇವಲ ತಲೆಯನ್ನು ಮಾತ್ರ ಶಾಲಿನಿಂದ ಮುಚ್ಚಿದ್ದಾರೆ.ಇದೇ ನೆಪವಾಗಿಟ್ಟು ಅವರನ್ನು ತರಗತಿಯಿಂದ ಹೊರಹಾಕಿ ಶಿಕ್ಷಣ ವಂಚಿತರನ್ನಾಗಿ ಮಾಡುತ್ತಿರುವುದು ನಿಜಕ್ಕೂ ಖೇದಕರ. ಶಾಲಾ ಕಾಲೇಜುಗಳು ಸೌಹಾರ್ದ ಕೇಂದ್ರವಾಗಬೇಕೇ ಹೊರತು ಕೋಮುವಾದಕ್ಕೆ ಆಸ್ಪದ ಕೊಡಬಾರದು.ನಮ್ಮ ಧರ್ಮವನ್ನು ಪ್ರೀತಿಸಿ , ಮತ್ತೊಂದು ಧರ್ಮವನ್ನು ಗೌರವಿಸುವುದನ್ನು ಕಲಿಸಬೇಕು.ಯಾರಿಗೂ ಯಾವುದೇ ರೀತಿಯ ತೊಂದರೆ ನೀಡದ ಹಿಜಾಬ್ ಕೂಡ ಒಂದು ಧರ್ಮದ ನಂಬಿಕೆಯೆಂದು ತಿಳಿದು ಧರಿಸಲು ಅನುಮತಿ ಕೊಡಬೇಕು. ಪ್ರತಿಯೊಂದರಲ್ಲೂ ಜಾತಿಯನ್ನು ಎಳೆದು ತಂದು ,ಪರಸ್ಪರ ಕಚ್ಚಾಡಿ, ಅಶಾಂತಿ ಸೃಷ್ಠಿಸುತ್ತಿರುವುದನ್ನು ನೋಡುವಾಗ ಭವಿಷ್ಯ ಭಾರತದ ಬಗ್ಗೆ ಆತಂಕವಾಗುತ್ತಿದೆ.
ವಿದ್ಯಾರ್ಥಿಗಳಲ್ಲೂ ಧರ್ಮದ ವಿಷಬೀಜ ಬಿತ್ತಿ ,ಗಲಭೆ ಎಬ್ಬಿಸುತ್ತಿರುವಾಗ ಇನ್ನು ಮುಂದೆ ನಮ್ಮ ಮಕ್ಕಳ ವಿಧ್ಯಾಭ್ಯಾಸ ಹೇಗೆ ಎಂದು ಆತಂಕವಾಗುತ್ತಿದ್ದೇವೆ.’ಜೈ ಶ್ರೀಮ್’, ‘ಅಲ್ಲಾಹು ಅಕ್ಬರ್’ ಎಂದು ದೇವರ ಹೆಸರಿನಲ್ಲಿ ರಕ್ತಪಾತ ನಡೆಸುವವನು ‘ನಾಮದಾರಿ ಹಿಂದು’, ‘ನಾಮದಾರಿ ಮುಸ್ಲಿಂ’ ಆಗಿರುತ್ತಾನೆಯೇ ಹೊರತು ಆತ ಧರ್ಮೋಧ್ದಾರಕನಂತೂ ಖಂಡಿತಾ ಅಲ್ಲ. ದ್ವೇಷದಿಂದ ದೇಶ ಅಳಿಯುವುದೇ ಹೊರತು ಎಂದಿಗೂ ಉಳಿಯದು.”ದೇಶದ ಹಿತಕ್ಕಿಂತ ಪಕ್ಷದ ಹಿತವನ್ನೇ ಪ್ರಧಾನವೆಂದು ಪರಿಗಣಿಸುವ ರಾಜಕೀಯ ಪಕ್ಷಗಳ ಹುನ್ನಾರದ ಬಗ್ಗೆ ಇಡೀ ದೇಶ ಎಚ್ಚರದಿಂದಿರಬೇಕಾಗುತ್ತದೆ.ಇಲ್ಲದೇ ಹೋದರೆ ದೇಶದ ಸ್ವಾತಂತ್ರ್ಯ , ಏಕತೆ, ಹಾಗೂ ಸಂವಿಧಾನದ ಮೇಲೆ ಅಪಾಯದ ಕಾರ್ಮೋಡ ಕವಿಯುತ್ತದೆ” ಎಂದು ಸಂವಿಧಾನ ಶಿಲ್ಲಿ ಡಾ ಬಿ.ಆರ್ .ಅಂಬೇಡ್ಕರ್ ಹೇಳಿರುವ ಮಾತು ಈಗ ಅಕ್ಷರಶ: ನಿಜವಾಗುತ್ತಿದೆ.
ಶಿಕ್ಷಣ ಕ್ಷೇತ್ರಗಳಲ್ಲೂ ರಾಜಕೀಯ ನಾಯಕರ ಹಸ್ತಕ್ಷೇಪ ಅಪಾಯಕಾರಿ ಬೆಳವಣಿಗೆಯಾಗಿದೆ.ಸಂವಿಧಾನ ಕಲ್ಪಿಸಿಕೊಟ್ಟ ಮೂಲಭೂತ ಹಕ್ಕುಗಳ ಉಳಿವಿಗೆ ಸಂಘಟಿತ ಹೋರಾಟ ವೊಂದೇ ಉಳಿದಿರುವ ದಾರಿಯಾಗಿದೆ.
✍️ ರಹ್ಮತ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.