ಕೋಲಾರ ( ವಿಶ್ವಕನ್ನಡಿಗ ನ್ಯೂಸ್ ): ಮನುಷ್ಯನಿಗೆ ಆರೋಗ್ಯ ಬಹುಮುಖ್ಯವಾದದ್ದು , ದೇಶದಲ್ಲಿ ಕೋವಿಡ್ನಿಂದ ಪ್ರತಿಯೊಬ್ಬರಿಗೂ ಆರೋಗ್ಯದ ಬಗ್ಗೆ ಅರಿವು ಮೂಡಿದ್ದು , ಎಲ್ಲರೂ ಈ ಆರೋಗ್ಯ ಮೇಳವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು.
ಇಂದು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ , ಕೋಲಾರ ಇವರ ಸಹಯೋಗದಲ್ಲಿ 75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ತಾಲ್ಲೂಕು ಮಟ್ಟದ ಆರೋಗ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು . ಆಡು ಮುಟ್ಟದ ಸೊಪ್ಪಿಲ್ಲ ಎಂಬ ರೀತಿಯಲ್ಲಿ ಎಲ್ಲಾ ರಂಗಗಳಲ್ಲೂ ಹೊಸ ಹೊಸ ಕಾರ್ಯಕ್ರಮಗಳನ್ನು ಭಾರತ ದೇಶದ ಅಭಿವೃದ್ಧಿಗೆ ಮಾನ್ಯ ಪ್ರಧಾನ ಮಂತ್ರಿಗಳು ಜಾರಿಗೆ ತಂದಿದ್ದಾರೆ . ಅದರಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ವಿಮೆ ಯೋಜನೆ ಜಾರಿಗೆ ತಂದು , ದೇಶದ ಪ್ರತಿಯೊಬ್ಬ ಪೌರರಿಗೂ ಉಚಿತ ಆರೋಗ್ಯ ಸೌಲಭ್ಯವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ .
ಕೋವಿಡ್ ಸಮಯದಲ್ಲಿ ಜಿಲ್ಲೆಯ ಎಲ್ಲಾ ಆರೋಗ್ಯ ಅಧಿಕಾರಿಗಳು , ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು , ಮಾಧ್ಯಮದವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಬಂದು ಜನರ ಸೇವೆ ಮಾಡಿದ್ದಾರೆ . ಜಿಲ್ಲೆಯಲ್ಲಿ ಒಟ್ಟು 71 ಸಾವಿರ ಜನರು ಆಯುಷ್ಮಾನ್ ಕಾರ್ಡ್ಗಳನ್ನು ಪಡೆದು ಉಚಿತ ಚಿಕಿತ್ಸೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ . ದೇಶದ ಆರ್ಥಿಕ ಮುಂಗಡ ಪತ್ರದಲ್ಲಿ 76 ಕೋಟಿ 47 ಲಕ್ಷ ರೂ.ಗಳನ್ನು ಆಯುಷ್ಮಾನ್ ಭಾರತ ಯೋಜನೆಗೆ ಮೀಸಲಿರಿಸಿದ್ದಾರೆ ಎಂದು ತಿಳಿಸಿದರು .
ಕೋಲಾರ ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು ಅವರು ಮಾತನಾಡಿ , ಜಿಲ್ಲೆಯಲ್ಲಿ 5 ದಿನ ಆರೋಗ್ಯ ಮೇಳವನ್ನು ನಡೆಸಲಾಗುತ್ತಿದ್ದು , ಜನರಿಗೆ ಆರೋಗ್ಯದ ಬಗ್ಗೆ ಸಿಬ್ಬಂದಿಗಳು ಅರಿವು ಮೂಡಿಸಬೇಕು . ಕಳೆದ 2 ವರ್ಷಗಳಿಂದ ಕೋವಿಡ್ನಿಂದ ಜನರು ತತ್ತರಿಸಿದ್ದು , ಆರೋಗ್ಯ ಇಲ್ಲದಿದ್ದರೆ ಎಲ್ಲವೂ ನಶ್ವರ , ಆರೋಗ್ಯ ಎಂಬುದು ಎಲ್ಲರಿಗೂ ಮುಖ್ಯ ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು . ಜನರು ಆರೋಗ್ಯವನ್ನು ಕೆಡಿಸುವ ಆಹಾರ ಪದಾರ್ಥಗಳನ್ನು ಸೇವಿಸಬಾರದು . ಕೋಲಾರದ ಹೋಟೆಲ್ , ಬೇಕರಿ , ರಸ್ತೆ ಬದಿ ತಳ್ಳುವ ಗಾಡಿಗಳಲ್ಲಿ ಹಾಗೂ ಆಹಾರವನ್ನು ತಯಾರಿಸುವ ಕಡೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ಮಾಡಿ ಜನರಿಗೆ ಉತ್ತಮ ಆಹಾರವನ್ನು ಒದಗಿಸುವ ಬಗ್ಗೆ ಖಚಿತಪಡೆಸಿಕೊಳ್ಳಬೇಕು ಎಂದು ತಿಳಿಸಿದರು .
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಎಂ.ಜಗದೀಶ್ ಅವರು ಮಾತನಾಡಿ , ಭಾರತ ಸರ್ಕಾರದ ಮಹತ್ವಕಾಂಕ್ಷಿ ಆರೋಗ್ಯ ಮೇಳ ಕಾರ್ಯಕ್ರಮವನ್ನು ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಹಮ್ಮಿಕೊಳ್ಳಲಾಗಿದೆ . ಭಾರತ ಸರ್ಕಾರವು ಬಿ.ಪಿ.ಎಲ್ ಕಾರ್ಡ್ ಬಳಕೆದಾರರಿಗೆ ಶೇ . 100 ರಷ್ಟು ಹಾಗೂ ಎ.ಪಿ.ಎಲ್ ಕಾರ್ಡ್ ಬಳಕೆದಾರರಿಗೆ ಶೇ . 30 ರಷ್ಟು ಉಚಿತ ಚಿಕಿತ್ಸೆಯನ್ನು ಆಯುಷ್ಮಾನ್ ಕಾರ್ಡ್ ಮೂಲಕ ನೀಡಲಾಗುತ್ತಿದೆ .
ಜಿಲ್ಲೆಯಲ್ಲಿ 4,13,650 ಕಾರ್ಡ್ಗಳನ್ನು ಫಲಾನುಭವಿಗಳಗೆ ಈಗಾಗಲೇ ವಿತರಿಸಲಾಗಿದೆ ಅದರಲ್ಲಿ 75 ಸಾವಿರ ಜನರು ಉಚಿತ ಚಿಕಿತ್ಸೆ ಪಡೆದಿದ್ದಾರೆ . ಇ – ಸಂಜೀವಿನಿ ಸೌಲಭ್ಯವನ್ನು ತರ್ತು ಸಮಯದಲ್ಲಿ ಫೋನ್ ಮುಖಾಂತರ ಪಡೆಯಬಹುದಾಗಿದೆ . ಕಾಯಿಲೆ ಬರುವ ಮುಂಚೆಯೇ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು . ಇದಕ್ಕೆ ನಿತ್ಯದ ಕೆಲಸಗಳಲ್ಲಿ ಯೋಗ , ಧ್ಯಾನಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಪೌಷ್ಠಿಕ ಆಹಾರಗಳನ್ನು ಸೇವಿಸಬೇಕು ಎಂದು ತಿಳಿಸಿದರು .
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಒದಗಿಸುವಂತಹ ಸೌಲಭ್ಯಗಳ ಆರೋಗ್ಯ ಮಳಿಗೆಗಳಿದ್ದವು ಹಾಗೂ ವಿವಿಧ ಸುಲಭ ಯೋಗಾಸನಗಳನ್ನು ಪ್ರದರ್ಶಿಸಲಾಯಿತು .
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್ , ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಓಂ ಶಕ್ತಿ ಚಲಪತಿ , ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ || ವಿಜಯಕುಮಾರಿ , ಜಿಲ್ಲಾ ಅಂಧತ್ವಾಧಿಕಾರಿಗಳಾದ ಡಾ || ನಾರಾಯಣಸ್ವಾಮಿ , ಜಿಲ್ಲಾ ಶಸ್ತ್ರಚಿಕಿತ್ಸಾಧಿಕಾರಿಗಳಾದ ಡಾ ||ಎಸ್.ಎನ್.ವಿಜಯಕುಮಾರ್ , ಜಿಲ್ಲಾ ಆಯುಷ್ ಅಧಿಕಾರಿಗಳಾದ ರಾಘವೇಂದ್ರ ಶೆಟ್ಟಿ , ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ || ಚಾರಿಣಿ , ಜಿಲ್ಲಾ ಕ್ಷಯಾ ರೋಗ ನಿಯಂತ್ರಣಾಧಿಕಾರಿಗಳಾದ ಡಾ || ಕಮಲ , ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಚಂದನ್ ಕುಮಾರ್ ಸೇರಿದಂತೆ ಮತ್ತಿತರರ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.