ಅಂದು ಪೊಯ್ಯತ್ತಬೈಲ್..!! (www.vknews.in) : ಬಹುಷಃ ಈ ಹೆಸರು ಕೇಳದವರು ವಿರಳ. ಕರ್ನಾಟಕದ ಕರಾವಳಿ ತೀರ ಹಾಗೂ ನೆರೆಯ ಕೇರಳದ ಮಲಬಾರ್ ತೀರದ ಸುನ್ನೀ ಜನಮಾನಸಗಳಿಗಂತೂ ಈ ಹೆಸರು ಚಿರಪರಿಚಿತ. ಅದೇನೋ ಆವೇಶ ಈ ಹೆಸರಿನ ವ್ಯಕ್ತಿಯಲ್ಲಡಗಿ ನಿಂತಿದೆ. ಕಾಸರಗೋಡು ಜಿಲ್ಲೆಯ ಹೊಸಂಗಡಿ ಜಂಕ್ಷನ್ ನಿಂದ ಹದಿನೈದು ಕಿಲೋ ಮೀಟರ್, ಮುಡಿಪು ಜಂಕ್ಷನ್ ನಿಂದ ಆರು ಕಿ.ಮೀ ದೂರ ಕ್ರಮಿಸಿದರೆ ಸಿಗುವ ಊರೇ ಪೊಯ್ಯತ್ತಬೈಲ್.
ಸಾಮಾಜಿಕ ತಾಣಗಳ ಬಳಕೆ ಅಧಿಕವಾಗುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ಫೇಸ್ ಬುಕ್, ವಾಟ್ಸ್ ಅಪ್ ಗಳಲ್ಲಿ ಬಹುತೇಕರು ಅಂದು ಪೊಯ್ಯತ್ತಬೈಲ್ ಅನ್ನುವ ಹೆಸರು ಕೇಳಿದವರೇ ಆಗಿರಬಹುದು. ಸುನ್ನತ್ ಜಮಾಅತಿಗೋಸ್ಕರ ತನ್ನ ಜೀವವನ್ನೇ ಮುಡುಪಾಗಿಟ್ಟ ಅಂದುರವರ ಬಗ್ಗೆ ಸ್ವಲ್ಪ ಬರೆಯಬೇಕೆಂದು ತೋಚಿದಾಗ, ಅವರ ಕುರಿತಾಗಿ ಸ್ವಲ್ಪ ವಿವರಿಸಬೇಕೆನಿಸತೊಡಗಿದವು.
ಹೌದು, ನಮ್ಮಂತೆಯೇ ಸಂತೋಷದಿಂದ ನಲಿದು, ಗೆಳೆಯರೊಡನೆ ನಡೆದುಕೊಂಡು ಜೀವಿಸಬೇಕಾದ ಅಂದು ಇಂದು ತನ್ನ ಶರೀರದ ಅರ್ಧ ಭಾಗ ನಿಶ್ಚಲಗೊಂಡ ಸ್ಥಿತಿಯಲ್ಲಿ ಮಲಗಿ ಕೊಂಡೇ ಜೀವನವನ್ನು ಸಾಗಿಸಲು ಪ್ರಾರಂಭಿಸಿ ಬರೋಬ್ಬರಿ ಎರಡು ದಶಕಗಳೇ ಕಳೆದುಹೋದವು..!! ನವಚೈತನ್ಯದ, ಹೊಸಹುರುಪುಗಳ ಯೌವನದ ಯುವಕನಾಗಿದ್ದ ಅಂದು ತನ್ನ ಹತ್ತೊಂಭತ್ತನೇ ವಯಸ್ಸಿನಲ್ಲಿ ತೆಂಗಿನ ಮರದಿಂದ ಬಿದ್ದು ತನ್ನ ಸೊಂಟದ ಕೆಳಭಾಗವನ್ನು ಕಳೆದುಕೊಳ್ಳುವಂತಾಯಿತು. ಅದೆಷ್ಟೇ ಚಿಕಿತ್ಸೆ ಮಾಡಿದರೂ, ಅದೆಂತಹ ವೈದ್ಯರನ್ನು ಸಂದರ್ಶಿಸಿದರೂ ಅಂದುರವರ ಖಾಯಿಲೆ ಮಾತ್ರ ಗುಣಮುಖ ಆಗಲೇ ಇಲ್ಲ.
ದೇಹದ ಇತರ ಭಾಗಗಳಲ್ಲೂ ಕಂಡು ಬರುವ ನೋವುಗಳೊಂದಿಗೆ ಇಂದಲ್ಲ, ನಾಳೆ ನಾನು ಗುಣಮುಖವಾಗುವೆ ಅನ್ನುವ ದೃಢ ನಿರ್ಧಾರದೊಂದಿಗೆ ಜೀವನವನ್ನು ಸಾಗಿಸುತಿದ್ದ ಅಂದುರವರ ಆರೈಕೆಯನ್ನು ನಡೆಸುತ್ತಿದ್ದುದು ಮಾತ್ರ ಹೆತ್ತ ತಾಯಿಯಾಗಿದ್ದರು. ಎಲ್ಲರಂತೆ ಎದ್ದು ನಡೆದಾಡಲೂ ಅಸಾಧ್ಯವಾಗುವ ಅಂದುರವರ ಎಲ್ಲಾ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದದ್ದು ಮಾತ್ರ ಮಲಗಿದಲ್ಲಿಂದಲೇ…!!
ಸಾಧಿಸುವ ಛಲವೊಂದಿದ್ದರೆ ಅದೇನನ್ನು ಬೇಕಾದರೂ ಸಾಧಿಸಬಹುದು ಅನ್ನುವ ಮಾತಿಗೆ ನಿದರ್ಶನವೆಂಬಂತೆ ಅಂದು ಪೊಯ್ಯತ್ತಬೈಲ್ ತನ್ನ ಜೀವನವನ್ನೇ ಸುನ್ನತ್ ಜಮಾಅತಿಗೋಸ್ಕರ ಮೀಸಲಿಟ್ಟರು. ಇಂದು ಅಂದು ಅನ್ನುವ ಹೆಸರು ಸುನ್ನತ್ ಜಮಾಅತಿನ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು, ಉನ್ನತ ಮಟ್ಟದ ನಾಯಕರಿಗೂ ಚಿರಪರಿಚಿತ. ಅವರನ್ನು ಭೇಟಿಯಾಗದ ನಾಯಕರಿಲ್ಲ.
ಕಳೆದ ಆರು ವರ್ಷ ಮೊದಲು ಆದೂರ್ ತಂಙಳ್ ರವರ ನಿರ್ದೇಶನದ ಮೇರೆಗೆ ಹೊಸಂಗಡಿಯ ಉದ್ಯಮಿಯೊಬ್ಬರು ನಿರ್ಮಿಸಿಕೊಟ್ಟ ಸರಿಸುಮಾರು ನಾಲ್ಕೂವರೆ ಲಕ್ಷ ರೂಪಾಯಿಯ “ಸಾಂತ್ವನ ಮನೆ”ಯ ಉದ್ಘಾಟನೆಯನ್ನು ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದರು ನೆರವೇರಿಸಿಕೊಟ್ಟರು, ಹಲವು ಸಯ್ಯದರು, ಉಲಮಾಗಳು ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನೌಫಲ್ ಸಖಾಫಿ ಕಳಸ, ರಫೀಕ್ ಸ ಅದಿ ದೇಲಂಪಾಡಿ ಹಾಗೂ ಇನ್ನಿತರ ಹಲವು ಪ್ರಭಾಷಣಕಾರರ ಪ್ರಭಾಷಣದ ದಿನಗಳನ್ನು ಮುಂಗಡ ಕಾಯ್ದಿರಿಸಬೇಕಾದರೆ ಸಂಪರ್ಕಿಸುವುದು ಸಹ ಇದೇ ಅಂದುವನ್ನಾಗಿತ್ತು..!!
ಸುನ್ನತ್ ಜಮಾಅತಿನ ಪಂಡಿತರ ನಡುವೆ ಅಂದುರವರ ಒಡನಾಟ ಅದೆಷ್ಟು ಆತ್ಮೀಯತೆಯಿಂದ ಕೂಡಿದೆ ಅನ್ನುವುದನ್ನು ನಮಗಿದರಿಂದಲೇ ಮನಗಾನಬಹುದು. ಅದೆಲ್ಲಿಯೇ ಸುನ್ನತ್ ಜಮಾಅತಿನ ಕಾರ್ಯಕ್ರಮಗಳಿದ್ದರೆ ಅಂದುರವರ ಫೇಸ್ ಬುಕ್ ಖಾತೆಯೊಳಗೆ ಅದಾಗಲೇ ಲಗತ್ತೀಕರಿಸಿ ಆಗಿರುತ್ತದೆ. ಅವರನ್ನು ಇದುವರೆಗೆ ಸಂದರ್ಶಿಸಿದವರಲ್ಲಿ ಹಲವಾರು ಧಾರ್ಮಿಕ ಪಂಡಿತರು, ಸಾದಾತುಗಳು ಸೇರಿದ್ದಾರೆ ಅದನ್ನು ನೋಡಬೇಕಾದರೆ ಅವರ ಫೇಸ್ ಬುಕ್ ಖಾತೆಯನ್ನು ಒಮ್ಮೆ ನೋಡಿದರೆ ಸಾಕು.
ನಿಜಕ್ಕೂ ಅಂದು ಅವರೊಬ್ಬರು ಭಾಗ್ಯವಂತರು. ತನ್ನ ಶರೀರದ ಅರ್ಧ ಭಾಗ ನಿಶ್ಚಲವಾಗಿ ಮಲಗಿದ್ದುಕೊಂಡೇ ಹಲವಾರು ಪಂಡಿತರ ಆತ್ಮೀಯತೆಯನ್ನು ಬೆಳೆಸಿಕೊಳ್ಳಲು ಅವರಿಂದ ಸಾಧ್ಯವಾಗಿದೆ. ಬದುಕಿನ ಹಲವಾರು ಕನಸುಗಳನ್ನು ಮರೀಚಿಕೆಯನ್ನಾಗಿಸಿ ಇಂದಲ್ಲ, ನಾಳೆ ನೆಮ್ಮದಿ ಸಿಗಬಹುದೆನ್ನುವ ಆಶಾಭಾವನೆಯನ್ನು ವ್ಯಕ್ತಪಡಿಸುತ್ತಿದ್ದ ಅಂದುರವರು ನಮ್ಮನ್ನಗಲಿದ್ದಾರೆ. ಅಲ್ಲಾಹು ಅವರ ಪರಲೋಕ ಜೀವನ ಸಂತೋಷಗೊಳಿಸಲಿ, ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿನೀಡಲಿ ಅನ್ನುವ ಪ್ರಾರ್ಥನೆಯಲ್ಲದೆ ನಮ್ಮಿಂದ ಮತ್ತೇನು ಸಾಧ್ಯ ಅಲ್ಲವೇ..?!!
📝ಸ್ನೇಹಜೀವಿ ಅಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.