(www.vknews.in) ಡಿ. ಐ. ಅಬೂಬಕರ್ ಕೈರಂಗಳ ಎಂಬ ಹೆಸರು ಕರ್ನಾಟಕದಾದ್ಯಂತ ಹಲವು ಕ್ಷೇತ್ರಗಳಲ್ಲಿ ಸುಪರಿಚಿತ. ದ.ಕ. ಜಿಲ್ಲೆಯಲ್ಲಿ ಇವರು ಎಷ್ಟು ಪ್ರಸಿದ್ಧರೆಂದರೆ ಕೇವಲ ಡಿ. ಐ. ಎಂದಷ್ಟೇ ಹೇಳಿದರೂ ಎಲ್ಲರಿಗೂ ಗೊತ್ತಾಗುತ್ತದೆ. ಡಿ. ಐ. ಅವರ ವೈಶಿಷ್ಟ್ಯವೆಂದರೆ ಅವರು ಸುಮಾರು 29 ವರ್ಷಗಳನ್ನು ಕನ್ನಡ ಸಾಹಿತ್ಯ ರಂಗದಲ್ಲಿ ಕರ್ಮಯೋಗಿಯಾಗಿ ದುಡಿಯುವ ಮೂಲಕ ಅವರ ಪ್ರಧಾನ ಕ್ಷೇತ್ರ ಸಾಹಿತ್ಯ ಎನಿಸಿದ್ದರೂ ಬೇರೆ ಅನೇಕ ಕ್ಷೇತ್ರಗಳಲ್ಲೂ ಅವರ ಸಕ್ರಿಯತೆ ಮತ್ತು ಅದರಲ್ಲಿ ಪ್ರಸಿದ್ಧಿ ಕೂಡಾ ಇದೆ ಅನ್ನುವುದು.
ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈರಂಗಳ ಎಂಬ ಊರಲ್ಲಿ ವ್ಯಾಪಾರಸ್ಥ ಇಸ್ಮಾಯಿಲ್ ಎಂಬವರ ಪುತ್ರನಾಗಿ 26- 6- 1970 ರಲ್ಲಿ ಇವರು ಜನಿಸಿದರು. ಶಾಲೆಯಲ್ಲಿ ಓದು ಮತ್ತು ಆಟೋಟಗಳಲ್ಲಿ ಗಮನ ಸೆಳೆದು ಅಧ್ಯಾಪಕರ ನೆಚ್ಚಿನ ಶಿಷ್ಯನಾಗಿ ಬೆಳೆದು ಬಂದರು. ಶಾಲಾ ಶಿಕ್ಷಣದಲ್ಲಿರುವಾಗಲೇ ಓದುವ ಹವ್ಯಾಸ ಬೆಳೆಸಿಕೊಂಡಿದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು ಚುಟುಕು ಕವನಗಳ ಮೂಲಕ. ಸುಮಾರು ಹದಿನೆಂಟರ ಪ್ರಾಯದಲ್ಲೇ ಇವರ ಕವನ ಸಂಕಲನ ಪುಸ್ತಕ “ಆಹ್ವಾನ” ಪ್ರಕಟವಾಯಿತು. ಖ್ಯಾತ ಸಾಹಿತಿ, ಶಾಸಕ ಉಳ್ಳಾಲ ಇದ್ದಿನಬ್ಬನವರು ಆ ಸಂಕಲನವನ್ನು ಬಿಡುಗಡೆ ಮಾಡಿದ್ದರು.
ಬೆಳೆಯ ಸಿರಿ ಮೊಳಕೆಯಲ್ಲೇ ಕಾಣಿಸಿಕೊಂಡಾಗ ನಾಡಿನ ವಿದ್ಯಾವಂತರು, ಅಧ್ಯಾಪಕರು, ಸಾಹಿತಿಗಳು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಅದರ ಪ್ರತಿಯೊಂದು ಕವನಗಳು ಇವರ ವಯಸ್ಸಿಗೂ ಮೀರಿದ ಪಕ್ವತೆಯಿಂದ ಹೊರಹೊಮ್ಮಿದೆಯೆಂಬ ಅಭಿಪ್ರಾಯ ಮೂಡಿಬಂದಿತ್ತು.
ಇದರ ಸ್ಪೂರ್ತಿಯಿಂದ ಸಾಹಿತ್ಯ ರಂಗದಲ್ಲಿ ಸಕ್ರಿಯರಾದ ಇವರು ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡರು. ಮೊತ್ತಮೊದಲು ‘ಅಲ್ ಮುನೀರ್ ‘ ಎಂಬ ವಾರಪತ್ರಿಕೆಯಲ್ಲಿ ದುಡಿದರು. ಅದರಲ್ಲಿ ಎರಡು ವರ್ಷ ದುಡಿದ ನಂತರ ‘ಅಲ್ ಅನ್ಸಾರ್’ ಎಂಬ ಪತ್ರಿಕೆಯಲ್ಲಿ ಹದಿನೇಳು ವರ್ಷಗಳ ಕಾಲ ದುಡಿದರು. ಪತ್ರಿಕೆಯ ಆರ್ಥಿಕ ಸಂಪನ್ಮೂಲವಾದ ಜಾಹೀರಾತು, ಚಂದಾದಾರಿಕೆಯಿಂದ ಹಿಡಿದು ಉತ್ತಮ ಬರಹಗಳ ಮೂಲಕವೂ ಪತ್ರಿಕೆಗೆ ಜೀವ ತುಂಬಿದರು. ಅದೇ ಪತ್ರಿಕೆಯ ಉಪಪತ್ರಿಕೆ ಮೊಯಿಲಾಂಜಿ ಮಾಸ ಪತ್ರಿಕೆಯನ್ನು ಹುಟ್ಟುಹಾಕಿ ಜನಪ್ರಿಯ ಗೊಳಿಸಿದರು. ಎರಡೂ ಪತ್ರಿಕೆಗಳ ಪ್ರಕಾಶಕರೂ ಮೇನೇಜರರೂ ಆಗಿ ಅವುಗಳ ಯಶಸ್ವಿಗೆ ಕಾರಣರಾದರು.
ಇದಾದ ಬಳಿಕ “ಮದರಂಗಿ” ಎಂಬ ಹೆಸರಲ್ಲಿ ಸ್ವಂತ ಮಾಸ ಪತ್ರಿಕೆ ಸ್ಥಾಪಿಸಿ ಅದನ್ನು ಹತ್ತು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದರು. ಆ ಪತ್ರಿಕೆಯಲ್ಲಿ ಇವರು ಬರೆಯುತ್ತಿದ್ದ ” ಮನದಾಳ” ಎಂಬ ಅಂಕಣ ಬಹಳ ಪ್ರಸಿದ್ಧವಾಗಿತ್ತು. ಆ ಲೇಖನ ಓದಲಿಕ್ಕೆಂದೇ ಓದುಗರು ಕಾಯುವಂತಾಗಿತ್ತು. ತಾನು ಕಂಡ, ಕೇಳಿದ, ಅನುಭವಿಸಿದ ವಿಷಯಗಳನ್ನು ತನ್ನದೇ ದೃಷ್ಟಿಕೋನ ಮತ್ತು ವಿಚಾರವಂತಿಕೆಯಿಂದ ಮನೋಜ್ಞ ಶೈಲಿಯಲ್ಲಿ ನಿರೂಪಿಸುತ್ತಿದ್ದ ” ಮನದಾಳ” ಬರಹ ಓದುಗರ ಹೃದಯವನ್ನು ಸ್ಪರ್ಶಿಸುವಂತಿತ್ತು. ಎಲ್ಲಾ ವಿಷಯಗಳಲ್ಲಿ ಯಾರಿಗೂ ಹೊಳೆಯದ ಒಂದು ಒಳನೋಟ ಅದರ ಆಕರ್ಷಣೆಗೆ ಕಾರಣವಾಗಿತ್ತು. ಪತ್ರಿಕಾ ರಂಗದಲ್ಲಿ ದುಡಿಯುತ್ತಿರುವಾಗಲೇ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ನಾಡಿನ ಹೆಸರಾಂತ ಸಾಹಿತಿಗಳ ಪುಸ್ತಕಗಳನ್ನು ಹೊರತಂದರು.
ಇವರ ” ಹನಿ ಪ್ರಕಾಶನ” ಮತ್ತು ” ಉದಯ ಪ್ರಕಾಶನ” ಎಂಬೆರಡು ಪ್ರಕಾಶನ ಸಂಸ್ಥೆಗಳಲ್ಲಿ ಅನೇಕ ಉದಯೋನ್ಮುಖ ಬರಹಗಾರರಿಗೆ ಉತ್ತೇಜನ ಕೊಟ್ಟು ಅವರ ಕತೆ, ಕವನ, ಪುಸ್ತಕಗಳನ್ನು ಪ್ರಕಾಶಿಸಿದರು. “ಎಳೆಯರ ಗೆಳೆಯ” ಎಂದು ಪ್ರಸಿದ್ಧರಾದ ಹೆಸರಾಂತ ಸಾಹಿತಿ ಮುಳಿಯ ಶಂಕರಭಟ್ಟರ ಸಂಪಾದಕತ್ವದಲ್ಲಿ ರಾಜ್ಯದ ಹೆಸರಾಂತ ಕವಿಗಳ ಕವನಗಳ ಸಂಗ್ರಹವನ್ನು ಪ್ರಕಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು ಅವರ ಜೀವನಗಾಥೆಯ ಬೃಹತ್ ಪುಸ್ತಕವನ್ನು ಪ್ರಕಟಿಸಿದರು.
ಹೀಗೇ ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ ರಂಗದಲ್ಲಿ ಮೂರು ದಶಕಗಳ ಕಾಲ ತನ್ನನ್ನು ಅರ್ಪಿಸಿಕೊಂಡು ದುಡಿದು ರಾಜ್ಯದ ಹೆಸರಾಂತ ಕವಿ, ಸಾಹಿತಿಗಳ, ಇನ್ನಿತರ ಮುತ್ಸದ್ಧಿ, ಮೇಧಾವಿಗಳ ಗೆಳೆತನ ಬೆಳೆಸಿಕೊಂಡಿದ್ದಾರೆ. ಅದೆಷ್ಟೋ ಬರಹಗಾರರು ಬೆಳಕಿಗೆ ಬರಲು ಕಾರಣರಾಗಿದ್ದಾರೆ.
ಆಕರ್ಷಕ ವ್ಯಕ್ತಿತ್ವದ ಡಿ.ಐ. ಅಬೂಬಕರ್ ಅವರು ತನ್ನ ಸೌಮ್ಯ ಸ್ವಭಾವ, ಅತಿಥಿ ಗೌರವ, ಮಾನವೀಯ ಅಂತಃಕರಣ, ಹಿರಿಯರಿಗೆ ಆದರ, ಪರಹಿತಕಾಂಕ್ಷೆ ಮುಂತಾದ ಸದ್ಗುಣಗಳು ಮೈಳೈಸಿದ ವ್ಯಕ್ತಿ. ತನಗೆ ದ್ರೋಹ ಮಾಡಿದವರನ್ನೂ ಕೂಡಾ ಪ್ರೀತಿಸುವ ವಿಶಾಲ ಹೃದಯಿ. ಇವರ ಪರೋಪಕಾರ ಭಾವಕ್ಕೆ ಜಾತಿಮತ ಬೇಧವಿಲ್ಲ. ಉದ್ಯೋಗ ಹುಡುಕಿಕೊಂಡು ಬಂದಾಗ ತನ್ನ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸಿ, ಸಂಸ್ಥೆಯಲ್ಲಿ ಭರ್ತಿಯಾಗಿದ್ದರೆ ಆಪ್ತರಾದ ಉದ್ಯಮಿಗಳಿಗೆ ಶಿಪಾರಸು ಮಾಡಿ ಉದ್ಯೋಗ ಕೊಡಿಸಿ ಬದುಕಿನ ದಾರಿ ಕಾಣಿಸಿ ಕೊಟ್ಟಿದ್ದಾರೆ. ಇವರ ಸಹಾಯದಿಂದ ಉದ್ಯೋಗ ರಂಗಕ್ಕಿಳಿದ ಅದೆಷ್ಟೋ ಯುವಕರು ಇಂದು ಉನ್ನತ ಶ್ರೇಣಿಗಳಲ್ಲಿದ್ದಾರೆ. ಇವರ ಉತ್ತೇಜನದಿಂದ ಬರೆಯ ತೊಡಗಿದವರು ಇಂದು ಹೆಸರಾಂತ ಕವಿ, ಸಾಹಿತಿಗಳಾಗಿದ್ದಾರೆ.
ಬಡವ, ದೀನ ದಲಿತರಿಗೆ, ರೋಗಿಗಳಿಗೆ ಸಂಘ ಸಂಸ್ಥೆಗಳಿಗೆ ಇವರು ಕೊಡಿಸಿದ ನೆರವಿಗೆ ಲೆಕ್ಕವಿಲ್ಲ. ತನ್ನ ‘ಮದರಂಗಿ’ ಪತ್ರಿಕೆಯಲ್ಲಿ “ದೀನರಿಗೆ ದಾನ” ಎಂಬ ಅಂಕಣ ಪ್ರಾರಂಭಿಸಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ ನೂರಾರು ಬಡಕುಟುಂಬಗಳಿಗೆ ಆಸರೆ ನೀಡಿದ್ದಾರೆ. ಹಿರಿಯ ಸಾಹಿತಿಗಳಿಗೆ ಸನ್ಮಾನ ಮತ್ತು ನಗದು ಕಾಣಿಕೆ ಸಲ್ಲಿಸುವ ಮೂಲಕ ತನ್ನ ಸಾಹಿತ್ಯಕ್ಷೇತ್ರದ ವಿಸ್ತಾರವನ್ನು ಅನಾವರಣಗೊಳಿಸಿದ್ದಾರೆ. ಇವರ ಇನ್ನೊಂದು ಉದಾತ್ತ ಗುಣವೆಂದರೆ ಮಾನವೀಯ ಅನುಕಂಪ. ಕಷ್ಟದಲ್ಲಿರುವವರು ಯಾರೇ ಆಗಿರಲಿ, ಯಾವ ಧರ್ಮದವರೇ ಆಗಿರಲಿ ತನ್ನ ಕೈಲಾದ ಸಹಾಯ ಮಾಡುವುದು, ಇತರರಿಂದ ಮಾಡಿಸುವುದು ಇವರ ಗುಣ. ಕುಟುಂಬಗಳ ಬೇರು ಹುಡುಕಿ ವಂಶ ವೃಕ್ಷದ ತಳಕ್ಕಿಳಿದು ಕುಟುಂಬಕ್ಕೆ ಸೇರಿದ ಎಲ್ಲರನ್ನೂ ಒಟ್ಟು ಸೇರಿಸುವ ‘ ಫ್ಯಾಮಿಲಿ ಮೀಟ್’ ಕಾರ್ಯಕ್ರಮ ಯಶಸ್ಸಾಗಲು ಕಾರಣರಾದವರಲ್ಲಿ ಇವರೂ ಒಬ್ಬರು ಎಂಬುದು ಇವರ ಕೀರ್ತಿಯ ಕಳಸಕ್ಕೆ ಇನ್ನೊಂದು ತುರಾಯಿ. ಐದನೇ ತಲೆಮಾರಿನ ಹಿರಿಯ ಮುತ್ತಾತನಿಂದ ಹಿಡಿದು ಅವರ ಮಕ್ಕಳು, ಮಕ್ಕಳ ಮಕ್ಕಳು ಎಂಬಂತೆ ನಾನಾ ಕಡೆ ವಿಸ್ತಾರವಾಗಿ ಹರಡಿದ್ದ ಕುಟುಂಬದ ಎಲ್ಲಾ ಸದಸ್ಯರನ್ನು ಒಂದೆಡೆ ಕಲೆ ಹಾಕುವ “ಕಾಯಾರ್ ಫ್ಯಾಮಿಲಿ ಮೀಟ್ ” ಎಂಬ ಒಂದು ಅಪರೂಪದ ಸಂಗಮ ಕಳೆದ ವರ್ಷ ಒಂದು ಮದುವೆ ಹಾಲ್ ನಲ್ಲಿ ಜರಗಿತ್ತು. ಇದರಲ್ಲಿ ಒಂದೇ ಮೂಲ ಕುಟುಂಬದ ಸುಮಾರು ಮೂರು ಸಾವಿರ ಮಂದಿ ಭಾಗವಹಿಸಿದ್ದರು. ಡಿ. ಐ. ಅಬೂಬಕರ್ ಅವರು ಕೂಡಾ ಇದೇ ಫ್ಯಾಮಿಲಿಯವರು. ಈ ಯಶಸ್ವೀ ಕಾರ್ಯಕ್ರಮದ ಹಿಂದಿನ ಪ್ರಧಾನ ರೂವಾರಿಗಳಲ್ಲಿ ಇವರೂ ಒಬ್ಬರಾಗಿದ್ದರು.
ಹೀಗೇ ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಹಾಗೆ ಡಿ. ಐ. ರವರು ಕೈಯಾಡಿಸದ ಕ್ಷೇತ್ರವಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಹಿಡಿದ ಕೆಲಸಕ್ಕೆ ನ್ಯಾಯ ಸಲ್ಲಿಸುವುದು ಇವರ ಹುಟ್ಟುಗುಣ. ಅಭೂತ ಪೂರ್ವ ಛಲಗಾರ ಕೂಡಾ. ಹಿಡಿದ ಕಾರ್ಯವನ್ನು ಸಾಧಿಸಲು ಭಗೀರಥ ಪ್ರಯತ್ನ ನಡೆಸಿ ಸಾಧಿಸಿಯೇ ಬಿಡುತ್ತಾರೆ. ಇದೀಗ ಉದ್ಯಮ ರಂಗದಲ್ಲಿದ್ದಾರೆ. ಕೇರಳ- ಕರ್ನಾಟಕದಲ್ಲಿ ಹೆಸರುವಾಸಿಯಾದ ಆ್ಯಕ್ಷಿಬ್ಲೂ ಕುಡಿಯುವ ನೀರಿನ ಬೃಹತ್ ಕಂಪೆನಿಯ ಜನರಲ್ ಮ್ಯಾನೇಜರರಾಗಿ ದುಡಿಯುತ್ತಿದ್ದಾರೆ. ಆದರೂ ರಕ್ತಗತವಾಗಿರುವ ಸಾಹಿತ್ಯದ ನಂಟನ್ನು ಬಿಟ್ಟಿಲ್ಲ. ಈಗಲೂ ದಿನಕ್ಕೊಂದು ಶುಭನುಡಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀಡುತ್ತಿದ್ದಾರೆ. ಜೀವನ ಮೌಲ್ಯವನ್ನು ಸಾರುವ ಅರ್ಥಪೂರ್ಣವಾದ ಚುಟುಕು ವಾಕ್ಯಗಳ ” ಶುಭ ಮುಂಜಾನೆ” ಎಂಬ ಚುಟುಕು ದಿನಾಲೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದೆ. ಇದೀಗ ಇನ್ನೂರರ ಗಡಿ ಮುಟ್ಟಿದೆ. ಇದೇ ಪ್ರಕಾರ ಧಾರ್ಮಿಕ, ಸಾಮಾಜಿಕ, ಮುಂತಾದ ವಿಷಯಗಳಲ್ಲಿ ಇವರ ಬರಹಗಳು ಆಗಾಗ ಬರುತ್ತಾ ಇವೆ. ಇವರ ಇನ್ನೊಂದು ಗುಣವೆಂದರೆ ಪರಗುಣಮೆಚ್ಚುಗೆ. ಯಾರಲ್ಲೇ ಆದರೂ ವಿಶಿಷ್ಠ ಗುಣ ಕಂಡರೆ ಅದನ್ನು ಬರಹ ರೂಪಕ್ಕೆ ತರುತ್ತಾರೆ. ಪರರ ಪರೋಪಕಾರ, ದಾನ, ಸಹೃದಯತೆ, ಸೇವೆ ಮುಂತಾದವುಗಳನ್ನು ಬರೆದು ಇತರರಿಗೆ ಸ್ಪೂರ್ತಿ ನೀಡುತ್ತಿದ್ದಾರೆ.
ರಾಜ್ಯದಲ್ಲಿ ಕಲೆ, ಸಾಹಿತ್ಯ, ನಾಡುನುಡಿ ಸಂಸ್ಕೃತಿಯಲ್ಲಿ ಹಾಗೂ ಉದ್ಯಮ ಕ್ಷೇತ್ರದಲ್ಲಿ ಹಾಗೂ ಧಾರ್ಮಿಕ ರಂಗದಲ್ಲಿ ಉನ್ನತ ಶ್ರೇಣಿಯಲ್ಲಿರುವ ಬಹುತೇಕ ಜನರ ಗೆಳೆತನವನ್ನು ಇವರು ಹೊಂದಿದ್ದಾರೆ. ಯಾರೇ ಆದರೂ ಒಮ್ಮೆ ಪರಿಚಯವಾದರೆ ಸಾಕು, ಇವರು ಮರೆತರೂ ಅವರು ಮರೆಯಲಾಗದಂತಹ ವಿನಯ, ಸಹೃದಯತೆ, ನಿಸ್ವಾರ್ಥತೆ, ಹಿತಾಕಾಂಕ್ಷೆ ಇವರಲ್ಲಿರುವುದರಿಂದ ಆಪ್ತರಾಗುತ್ತಾರೆ.
ಸಂತುಷ್ಟ ಜೀವನ ಇದೀಗ ದೇರಳಕಟ್ಟೆ ಸಮೀಪದ ಕಲ್ಕಟ್ಟ ಎಂಬಲ್ಲಿ ಸುಂದರವಾದ ಸ್ವಂತ ಮನೆಯಲ್ಲಿ ಕುಟುಂಬ ಸಮೇತ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಪತ್ನಿ: ಶಾಹಿದಾ, ಮಕ್ಕಳು: ಮುಬಶ್ಶಿರ್ ( ಕಣಚೂರು ವಿದ್ಯಾ ಸಂಸ್ಥೆಯಲ್ಲಿ ಉದ್ಯೋಗಿ) ತಶ್ರೀಫಾ ಫಾತಿಮಾ ( ಪತಿ; ಶಮೀರ್. ಗಲ್ಪ್ ದೇಶದಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆಯಲ್ಲಿದ್ದಾರೆ) ಕಿರಿಮಗಳು: ಝೈನಬಾ ತಾರೀಫಾ. ( ಸಯನ್ಸ್ ವಿಭಾದಲ್ಲಿ ಪಿ.ಯು.ಸಿ. ವಿದ್ಯಾರ್ಥಿನಿ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.