(www.vknews.in) : ಹಝ್ರತ್ ಇಬ್ರಾಹೀಮರು ಜೋರ್ಡಾನಿನಲ್ಲಿ ಸ್ವಲ್ಪ ಕಾಲ ತಂಗಿದ ಬಳಿಕ ಪತ್ನಿ ಸಾರಾರೊಂದಿಗೆ ಫಲಸ್ತೀನಿಗೆ ವಲಸೆ ಹೋದರು. ಆ ವೇಳೆಯಲ್ಲಿ ಅವರೊಂದಿಗೆ ಬೀವಿ ಸಾರರಿಗೆ ಜೋರ್ಡಾನಿನ ಅರಸನಿಂದ ದಾನವಾಗಿ ಲಭಿಸಿದ ದಾಸಿ ಹಾಜರ ಕೂಡ ಇದ್ದರು. ಬಳಿಕ ಅಲ್ಲಿ ಬೈತುಲ್ ಮುಖದ್ದಿಸಿನ ಪವಿತ್ರ ಭೂಮಿಯಲ್ಲಿ ವಾಸಿಸಲು ಶುರುಮಾಡಿದರು.
ಗಮನಾರ್ಹ ಸಂಗತಿಯೆಂದರೆ, ಪ್ರವಾದಿ ಇಬ್ರಾಹೀಮರಿಗೆ ಬೀವಿ ಸಾರರನ್ನು ಮದುವೆಯಾಗಿ ಎಷ್ಟೋ ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ಇನ್ನು ಹೀಗೆಯೇ ಮುಂದುವರಿದರೆ ಇಬ್ಬರೂ ಮುದುಕರಾಗಿ ಸಂತಾನ ಸೌಭಾಗ್ಯ ಲಭಿಸದೆಂದು ಕಂಡಾಗ ಬೀವಿ ಸಾರಾರವರು ತನಗೆ ದೊರೆತ ತನ್ನ ದಾಸಿಯಾದ ಹಾಜರರನ್ನು ಪತಿ ಇಬ್ರಾಹೀಮರಿಗೆ ದಾಸಿಯಾಗಿ ಹದಿಯ ಮಾಡಿದರು. ಬಳಿಕ ಅಲ್ಲಾಹನ ಅನುಗ್ರಹದಲ್ಲಿ ಹಝ್ರತ್ ಇಬ್ರಾಹೀಮರಿಗೆ ದಾಸಿಯಾದ ಹಾಜರರಲ್ಲಿ ಒಂದು ಗಂಡು ಮಗು ಜನಿಸಿತು. ಜನಿಸಿದ ಮಗುವಿನ ಮುಖವಾದರೆ ಚಂದ್ರನಂತೆ ಪ್ರಕಾಶಿಸುತ್ತಿತ್ತು. ಅದು ಒಂದು ಸಾಮಾನ್ಯ ಮಗು ಆಗಿರಲಿಲ್ಲ. ಮಗುವಿಗೆ ಇಸ್ಮಾಯೀಲ್ ಎಂದು ನಾಮಕರಣ ಮಾಡಿದರು. ಆ ಮಗುವೇ ಬಳಿಕ ಇಡೀ ಜಗತ್ತಿನಲ್ಲಿ ಯಾವಾಗಲೂ ಸ್ಮರಿಸಲ್ಪಡುವ ಒಬ್ಬ ಮಹಾವ್ಯಕ್ತಿಯಾಗಿ ಮಾರ್ಪಟ್ಟಿತು.
ಮಗುವಿನಲ್ಲಿ ತಾಯಿ ಹಾಜರರಿಗೆ ಪ್ರೀತಿ ಇರುವಂತೆಯೇ ದೊಡ್ಡಮ್ಮ ಸಾರಾರಿಗೂ ಬಹಳಷ್ಟು ಪ್ರೀತಿ ಮತ್ತು ಮಮತೆ ಇತ್ತು. ಆದರೆ ಅದು ದೀರ್ಘ ಕಾಲ ಮುಂದುವರಿಯಲಿಲ್ಲ. ಮಗು ಮೊಲೆ ಹಾಲು ಬಿಡುವುದಕ್ಕಿಂತ ಮೊದಲೇ ಒಂದು ದಿನ ಪತ್ನಿ ಸಾರಾರವರು ಹಝ್ರತ್ ಇಬ್ರಾಹೀಮರನ್ನು ತನ್ನ ಖಾಸಗೀ ಕೋಣೆಗೆ ಕರೆದು ಹೇಳಿದರು. “ಓ ನನ್ನ ಪತಿಯವರೇ.., ಮುಂದಕ್ಕೆ ಈ ಒಂದು ಪುಟ್ಟ ಮನೆಯಲ್ಲಿ ನಮಗಿಬ್ಬರಿಗೆ (ಸಾರ ಮತ್ತು ಹಾಜರ) ನಿಮ್ಮೊಂದಿಗೆ ಸಾಮರಸ್ಯದಿಂದ ಮುಂದುವರಿಯಲು ಕಷ್ಟವಿದೆ. ನೀವು ಅವಳೊಂದಿಗೆ ಸಮಯ ಕಳೆಯುವಾಗ ನನಗೆ ಅಸೂಯೆಯಾಗುತ್ತದೆ. ಆದ್ದರಿಂದ ಕೂಡಲೇ ಹಾಜರರಿಗೆ ಬೇರೊಂದು ಮನೆ ಮಾಡಿ ಕೊಡಬೇಕು. ಅದು ಎಲ್ಲಿಯಾದರೂ ಚಿಂತಿಲ್ಲ. ಒಟ್ಟಿನಲ್ಲಿ ಇಲ್ಲಿಂದ ಹೋಗಬೇಕು. ಅದು ನನ್ನ ಆಗ್ರಹವಾಗಿದೆ” ಎಂದು.
ಸ್ವಲ್ಪ ಕಳೆದಾಗ ಹಝ್ರತ್ ಜಿಬ್ರೀಲರು ಸ್ವರ್ಗದಿಂದ ಒಂದು ಕುದುರೆಯಲ್ಲಿ ಸವಾರಿ ಮಾಡುತ್ತಾ ಬಂದು ಹೇಳಿದರು. “ಇಬ್ರಾಹೀಮರೇ.., ಅಲ್ಲಾಹನ ನಿರ್ದೇಶದಂತೆ ನೀವು, ಪತ್ನಿ ಹಾಜರ ಮತ್ತು ಮಗ ಇಸ್ಮಾಯಿಲ್ರವರು ನನ್ನೊಂದಿಗೆ ಈ ಕುದರೆ ಹತ್ತಿ ಬರಬೇಕು. ನಿಮಗೆ ವಾಸಿಸಲು ಒಂದು ಯೋಗ್ಯವಾದ ಜಾಗ ಅಲ್ಲಾಹನು ನಿರ್ದೇಶಿಸಿದ್ದಾನೆ. ಕೂಡಲೇ ಹೊರಡಿರಿ” ಎಂದು.
ಹಝ್ರತ್ ಜಿಬ್ರೀಲರ ನಿರ್ದೇಶದಂತೆ ಮೂವರೂ ಕುದುರೆ ಹತ್ತಿದರು. ಬಳಿಕ ಜಿಬ್ರೀಲರು ಅವರನ್ನು ಪವಿತ್ರ ಹರಮಿನಲ್ಲಿ ಖಅಬಾದ ಹತ್ತಿರ ಒಂದು ಕಡೆ ಇಳಿಸಿ ಅವರು ಅಲ್ಲಿಂದ ಹೋದರು.
ಹಝ್ರತ್ ನೂಹ್ (ಅ) ರವರ ಕಾಲದಲ್ಲಿ ಉಂಟಾದ ತೂಫಾನಿನಲ್ಲಿ ಸಂಪೂರ್ಣವಾಗಿ ಪಾಳುಬಿದ್ದ ಭೂಮಿಯಲ್ಲಿ ಪತ್ನಿ ಮತ್ತು ಪುಟ್ಟ ಕಂದ ಹಝ್ರತ್ ಇಸ್ಮಾಯಿಲ್ ರನ್ನು ಬಿಟ್ಟು “ನಾನು ಹೋಗುತ್ತೇನೆ. ನೀವಿಬ್ಬರೂ ಇಲ್ಲಿ ಇರಿ. ಅಲ್ಲಾಹನ ನಿರ್ದೇಶವಾಗಿದೆ. ಅವನು ಯಾವತ್ತೂ ನಿಮ್ಮ ಕೈ ಬಿಡಲಾರನು” ಎಂದು ಹೇಳಿ ಒಂದು ಬುಟ್ಟಿ ಖರ್ಜೂರ ಮತ್ತು ಕುಡಿಯಲು ಒಂದು ತೊಟ್ಟಿ ನೀರನ್ನು ಇಟ್ಟು ಹಝ್ರತ್ ಇಬ್ರಾಹೀಮರು ಅಲ್ಲಿಂದ ಮೊದಲನೆಯ ಪತ್ನಿ ಇರುವ ಫಲಸ್ತೀನಿಗೆ ಪ್ರಯಾಣ ಬೆಳೆಸಿದರು. ಹೋಗುವ ವೇಳೆ ಪತ್ನಿ ಹಾಜರಾರವರು ಪತಿಯನ್ನು ಹಿಂಬಾಲಿಸಿ ಅವರ ಹಿಂದಿನಿಂದ ಅವರನ್ನು ಕರೆಯುತ್ತಾ ಸ್ವಲ್ಪ ದೂರ ನಡೆದರು. ಎಷ್ಟು ಕರೆದರೂ ಹಝ್ರತ್ ಇಬ್ರಾಹೀಮರು ಮಾತ್ರ ತಿರುಗಿ ನೋಡಲಿಲ್ಲ. ಕೊನೆಗೆ “ನೀವು ಹೀಗೆ ನಮ್ಮನ್ನು ಬಿಟ್ಟು ಹೋಗುವುದು ಅಲ್ಲಾಹನ ನಿರ್ದೇಶ ಪ್ರಕಾರವಾ?” ಎಂದು ಕೇಳಿದಾಗ “ಹೌದು.. ಹೌದು..” ಎಂದು ಉತ್ತರ ಕೊಟ್ಟರು. “ಆಗಾದರೆ ಓಕೆ… ಪರವಾಗಿಲ್ಲ. ಅಲ್ಲಾಹನು ಯಾವತ್ತೂ ನಮ್ಮನ್ನು ಕೈ ಬಿಡಲಾರ” ಎಂದು ಹೇಳಿ ತನ್ನ ಬಿಡಾರದತ್ತ ಹಿಂತಿರುಗಿದರು.
ಬಳಿಕ ತಾಯಿ ಹಾಜರಾ ಮತ್ತು ಮಗ ಇಸ್ಮಾಯಿಲ್ ಜನ ವಾಸವಿಲ್ಲದ ಮರುಭೂಮಿಯಲ್ಲಿ ಒಂಟಿಯಾದರು. ಅಲ್ಲದೆ ಹಝ್ರತ್ ಇಬ್ರಾಹೀಮರು ಹೋಗುವಾಗ ಬಂದೋಬಸ್ತು ಮಾಡಿ ಹೋಗಿದ್ದ ಕುಡಿಯುವ ನೀರು ಕೂಡ ಮುಗಿಯಿತು. ಮಧ್ಯಾಹ್ನದ ಬಿಸಿಲಿಗೆ ನೀರಿಲ್ಲದೆ ಪುಟ್ಟ ಕಂದನಿಗೆ ಮತ್ತು ತಾಯಿ ಹಾಜರರಿಗೆ ಬಾಯಾರಿಕೆಯಾದಾಗ ತಾಯಿ ಹಾಜರಾ ಪರಿಸರದಲ್ಲಿ ಎಲ್ಲಾದರೂ ನೀರು ಉಂಟಾ ಎಂದು ಹುಡುಕುತ್ತಾ ಹೋದರು. ಕೊನೆಗೆ ಸ್ವಲ್ಪ ದೂರದಲ್ಲಿರುವ ಸಫಾ ಬೆಟ್ಟವು ಅವರ ಕಣ್ಣಿಗೆ ಬಿತ್ತು. ಅಲ್ಲಿ ಹತ್ತಿ ನೋಡಿದರೆ ಎಲ್ಲಾದರೂ ನೀರು ಸಿಗಬಹುದು ಎಂದು ಭಾವಿಸಿ ಆ ಕಡೆ ಹೋದರು. ಆ ಬೆಟ್ಟ ಹತ್ತಿ ನಾಲ್ಕು ಕಡೆ ನೋಡಿದರೂ ಎಲ್ಲೂ ನೀರಿರುವ ನಿಶಾನೆ ಕಾಣದಾದಾಗ ಎದುರು ದಿಶೆಯಲ್ಲಿ ಕಾಣುವ ಮರುವಾ ಬೆಟ್ಟದ ಕಡೆಗೆ ಬಂದು ಅದನ್ನೂ ಹತ್ತಿದರು. ಆದರೆ ಅಲ್ಲಿಯೂ ಎಲ್ಲೂ ನೀರು ಎಂಬುದು ಇರಲೇ ಇಲ್ಲ. ಒಟ್ಟಿನಲ್ಲಿ ಈ ಕೆಚ್ಚೆದೆಯ ಮಹಿಳೆ ಏಕಾಂಗಿಯಾಗಿ ಎರಡು ಬೆಟ್ಟಗಳ ಮಧ್ಯೆ ಏಳು ಬಾರಿ ಆಚೀಚೆ ಹೋದರು. (ಆ ಕಾರಣದಿಂದ ಹಜ್ಜಿನಲ್ಲಿ ಅದರ ಸ್ಮರಣಾರ್ಥ ಈ ಕರ್ಮವನ್ನು ಮಾಡಲಾಗುತ್ತದೆ ಎಂದು ಸಾಂದರ್ಭಿಕವಾಗಿ ಓದುಗರ ಗಮನಕ್ಕೆ ತರುತ್ತೇನೆ)
ಸ್ವಫಾ ಮತ್ತು ಮರ್ವಾ ಬೆಟ್ಟ ಹತ್ತಿ ನೀರು ಸಿಗದೆ ಬಹಳ ಬೇಸರದಲ್ಲಿರುವ ವೇಳೆ ತನ್ನ ವಾಸ ಜಾಗದಿಂದ ಒಂದು ಶಬ್ದ ಕೇಳಿಸಿತು. ನೋಡುವಾಗ ಅಲ್ಲಾಹನ ಮಲಕ್ ಜಿಬ್ರೀಲರು ಕಂದ ಇಸ್ಮಾಯೀಲರ ಬಳಿ ತನ್ನ ರೆಕ್ಕೆಯಿಂದ ನೆಲಕ್ಕೆ ಬಡಿಯುತ್ತಿದ್ದರು. ಕೂಡಲೇ ಬೆಟ್ಟದಿಂದ ಕೆಳಗಿಳಿದು ಬರುವಾಗ ಆ ರೆಕ್ಕೆ ಬಡಿದ ಜಾಗದಲ್ಲಿ ಅಂದರೆ ಮಗು ಇಸ್ಮಾಯೀಲರ ಎರಡು ಕಾಲಿನ ಮಧ್ಯದಲ್ಲಿ ನೀರಿನ ಕಾರಂಜಿ ಹೊರಗೆ ಚಿಮ್ಮುತ್ತಿತ್ತು. ಚಿಮ್ಮಿ ಬರುತ್ತಿರುವ ನೀರು ನಾಲ್ಕು ಕಡೆ ಹರಿದು ಹೋಗದಿರಲು ಮತ್ತು ಶೇಖರಣೆಯಾಗಲು ಬೀವಿಯವರು ಅಲ್ಲಲ್ಲಿಂದ ಕೆಲವು ಕಲ್ಲುಗಳನ್ನು ತಂದು ನಾಲ್ಕು ಭಾಗವನ್ನು ಮುಚ್ಚಿದರು. ಕೊನೆಗೆ ಅದು ಒಂದು ಬಾವಿಯಂತೆ ಆಯಿತು. ಅಲ್ಲದೆ ಅವರು ನೀರಿನಲ್ಲಿ “ಝಮ್ಮೀ ಝಮ್ಮೀ” ಎಂದು ಹೇಳುತ್ತಿದ್ದರು. (ಹರಡಬೇಡ ಹರಡಬೇಡ ಎಂದು) ಆ ಕಾರಣದಿಂದ ಆ ನೀರಿಗೆ ಝಮ್ಝಮ್ ಎಂಬ ಹೆಸರು ಕೂಡ ಬಂತು. ಗಮನಾರ್ಹ ಸಂಗತಿಯೆಂದರೆ, ಬೀವಿಯವರು ಅಂದು ಆ ತರ ಬಾವಿ ಮಾಡದೆ ನೀರನ್ನು ಹಾಗೆಯೇ ಹರಿಯಲು ಬಿಡುತ್ತಿದ್ದರೆ ಆ ನೀರು ಹರಿದು ಹರಿದು ಜಗತ್ತಿನಾದ್ಯಂತ ಹರಿಯುವ ಒಂದು ಮಹಾ ನದಿಯಾಗುತ್ತಿತ್ತು ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಬೇರೊಂದು ಉಲ್ಲೇಖನೀಯ ಸಂಗತಿಯೆಂದರೆ, ಈ ನೀರು ಸ್ವರ್ಗದಲ್ಲಿ ಕುಡಿಯಲು ಕೊಡುವ ಕೌಸರ್ ಎಂಬ ಪಾನೀಯಕ್ಕಿಂತಲೂ ಶ್ರೇಷ್ಠವಾದದ್ದಾಗಿದೆ.
ನಂತರ ತಾಯಿ ಮತ್ತು ಮಗು ಬೇಕಾದಷ್ಟು ನೀರನ್ನು ಕುಡಿದರು. ಆ ವೇಳೆ ಹಾಜರಾದ ಅಲ್ಲಾಹನ ಮಲಕ್ ಅವರಲ್ಲಿ ಹೇಳಿದರು. “ಇಂಶಾ ಅಲ್ಲಾಹ್.. ಇಲ್ಲಿ ಹತ್ತಿರದಲ್ಲೇ ಜನವಾಸ ಆಗಲಿದೆ. ಅಲ್ಲದೆ ಹಝ್ರತ್ ನೂಹ್ (ಅ) ರವರ ಕಾಲಘಟ್ಟದಲ್ಲಿ ಧ್ವಂಸವಾದ ಕಅಬಾದ ಪುನರ್ನಿರ್ಮಾಣ ನಿಮ್ಮ ಈ ಮಗ ಮತ್ತು ತಂದೆಯಿಂದ ಆಗಲಿದೆ. ನೀವು ಯಾವತ್ತೂ ಇಲ್ಲಿ ಒಂಟಿ ಆಗಲಾರಿರಿ. ಬಹಳ ಸಂತೋಷದಿಂದಿರಿ” ಎಂದು.
✍🏻 ಯೂಸುಫ್ ನಬ್ಹಾನಿ, ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ..
ಮುಂದುವರೆಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.