(www.vknews.in) : ತಾಯಿ ಬೀವಿ ಹಾಜರಾ ಮತ್ತು ಮಗ ಇಸ್ಮಾಯೀಲ್ ಇಬ್ಬರೂ ಯಾರೂ ಇಲ್ಲದ ಮರುಭೂಮಿಯಲ್ಲಿ ವಾಸಿಸುತ್ತಿರುವ ವೇಳೆ ಒಂದು ದಿನ ಯಮನಿನಿಂದ ವ್ಯಾಪಾರ ನಿಮಿತ್ತ ಶಾಮಿಗೆ ಹೋಗುತ್ತಿರುವ ಒಂದು ವ್ಯಾಪಾರ ಸಂಘವು ಹರಮ್ ಪ್ರದೇಶದ ಮೂಲಕ ಹಾದು ಹೋಗುತ್ತಿರುವಾಗ ಕೆಲವು ಹಕ್ಕಿಗಳು ಹರಮಿನ ಸಮೀಪ ಮೇಲಿನಿಂದ ಕೆಳಕ್ಕೂ ಕೆಳಗಿನಿಂದ ಮೇಲಕ್ಕೂ ಹಾರಾಡುವುದನ್ನು ಕಂಡರು. “ಒಂದು ಕಡೆ ಹಕ್ಕಿಗಳು ಈ ತರ ಹಾರಾಡಬೇಕಾದರೆ ಅಲ್ಲಿ ಜನವಾಸ ಮತ್ತು ನೀರು ಇರಬೇಕು” ಎಂದು ಭಾವಿಸಿದ ಅವರು ತಮ್ಮ ದಾರಿ ತಪ್ಪಿಸಿ ಆ ಹಕ್ಕಿ ಹಾರಾಡುವ ಕಡೆ ಹೋದರು.
ಅಲ್ಲಿ ತಲುಪಿದಾಗ ಬೀವಿ ಹಾಜರಾ ಮತ್ತು ಅವರ ಮಗ ಹಝ್ರತ್ ಇಸ್ಮಾಯೀಲ್ ರವರು ವಾಸವಿರುವುದನ್ನು ಮತ್ತು ಧಾರಾಳ ನೀರಿರುವ ಒಂದು ಸಿಹಿ ನೀರಿನ ಬಾವಿಯನ್ನು ಕೂಡ ಕಂಡರು. ಬೀವಿ ಹಾಜರಾ ಮತ್ತು ಅವರು ಪರಸ್ಪರ ಮಾತನಾಡಿ ಪರಸ್ಪರ ಅರಿತುಕೊಂಡ ಬಳಿಕ, ನೀರಿಗೆ ಬಹಳ ಸೌಕರ್ಯ ಇರುವ ಜಾಗ ಆದ್ದರಿಂದ ಮುಂದಕ್ಕೆ ಯಮನಿನಲ್ಲಿರುವ ತಮ್ಮ ಕುಟುಂಬವನ್ನು ಅಲ್ಲಿಗೆ ತಂದು ವಾಸಮಾಡಿಸಲು ಬೀವಿ ಹಾಜರಾರಿಂದ ಅನುಮತಿಯನ್ನು ಕೂಡ ಪಡಕೊಂಡು ಅಲ್ಲಿಂದ ವಾಪಾಸು ಹೋದರು.
ವ್ಯಾಪಾರ ವಹಿವಾಟು ಮುಗಿದು ಯಮನಿಗೆ ತಲುಪಿದ ಅವರು ತಮ್ಮ ಮನೆ ಸಾಮಾನುಗಳು, ಉಡುಪುಗಳು, ಪಾತ್ರೆಗಳು, ಜಾನುವಾರುಗಳು ಮತ್ತು ಕುಟುಂಬದೊಂದಿಗೆ ಮಕ್ಕಾಕ್ಕೆ ಬಂದು ಬೀವಿ ಹಾಜರಾರ ಮನೆಯ ಸಮೀಪ ಮನೆಮಾಡಿ ವಾಸಿಸಲು ಶುರುಮಾಡಿದರು. ವರ್ಷಗಳು ಕಳೆದಾಗ ಅವರೆಲ್ಲರ ಕುಟುಂಬ ದೊಡ್ಡದಾಗಿ ಅಲ್ಲೊಂದು ಪಟ್ಟಣವೇ ಆಯಿತು.
ಇತ್ತ ತಬ್ಬಲಿಯಂತಿದ್ದ ಹಝ್ರತ್ ಇಸ್ಮಾಯೀಲ್ರವರು ಈ ವೇಳೆ ಪ್ರಾಯ ಪೂರ್ತಿಯಾಗಿ ಪ್ರೌಢದಿಶೆಗೆ ತಲುಪಿ ನೆರೆಯವರೊಂದಿಗೆ ಕೂಡಿ ವ್ಯಾಪಾರ ವಹಿವಾಟು ಮಾಡಲು ಕೂಡ ಕಲಿತಿದ್ದರು. ಅಲ್ಲದೆ ಮಿತ್ರರೊಂದಿಗೆ ಬೇಟೆಯಾಡಲು ಕೂಡ ತೊಡಗಿದ್ದರು.
ವರ್ಷಗಳು ಕಳೆದಾಗ ಬೀವಿ ಹಾಜರಾ ವಫಾತಾದರು. ಏಕಾಂಗಿಯಾದ ಮಗ ಇಸ್ಮಾಯೀಲ್ ರವರು ನೆರೆಯ ಒಂದು ಹೆಣ್ಣನ್ನು ಮದುವೆಯಾದರು.
ಎಷ್ಟೋ ದೂರ ಫಲಸ್ತೀನಿನಲ್ಲಿ ವಾಸಿಸುತ್ತಿದ್ದ ಹಝ್ರತ್ ಇಬ್ರಾಹಿಮ್ ರವರಿಗೆ ಒಂದು ದಿನ ತನ್ನ ಮಕ್ಕಾದಲ್ಲಿರುವ ಪತ್ನಿ ಬೀವಿ ಹಾಜರಾ ವಫಾತಾಗಿರುವ ವಿಷಯ ತಿಳಿಯಿತು. ಕೂಡಲೇ ಪತ್ನಿಯನ್ನು ಝಿಯಾರತ್ ಮಾಡಲು ಮಕ್ಕಾಕ್ಕೆ ಪ್ರಯಾಣ ಬೆಳೆಸಿದರು. ಮಕ್ಕಾ ತಲುಪಿದ ಅವರು ಮಗನ ಮನೆಗೆ ಮುಟ್ಟಿದಾಗ ಮನೆಯಲ್ಲಿ ಮಗ ಇಸ್ಮಾಯೀಲ್ ಇರಲಿಲ್ಲ. ಅವರು ಎಲ್ಲೋ ದೂರದ ಊರಿಗೆ ವ್ಯಾಪಾರ ನಿಮಿತ್ತ ಹೋಗಿದ್ದರು. ತಂದೆ ಹಝ್ರತ್ ಇಬ್ರಾಹೀಮರು ಮನೆಯ ಹೊರಗಡೆ ನಿಂತು “ಅಸ್ಸಲಾಮು ಅಲೈಕುಮ್.. ಮನೆಯಲ್ಲಿ ಯಾರಿದ್ದಾರೆ? ನಿಮಗೆಲ್ಲಾ ಸುಖವಾ?” ಎಂದು ಕೇಳಿದರು. ಆಗ ಒಳಗಿನಿಂದ ಇಣುಕಿ ನೋಡಿದ ಹಝ್ರತ್ ಇಸ್ಮಾಯೀಲರ ಪತ್ನಿ ಹೊರಗೆ ಒಬ್ಬರು ಪ್ರಾಯವಾದ ವ್ಯಕ್ತಿ ಇರುವುದನ್ನು ಕಂಡರು. ಆಗ ಅವಳು ಕೇಳಿದ ಪ್ರಶ್ನೆಗೆ ಯಾವುದಕ್ಕೂ ಸರಿಯಾದ ಉತ್ತರ ಕೊಡದೆ “ಇಲ್ಲಿ ಮನೆಯ ಯಜಮಾನ ಇಲ್ಲ” ಎಂಬ ಉತ್ತರ ಮಾತ್ರ ಕೊಟ್ಟರು. ಈ ಸ್ವಭಾವ ಮತ್ತು ನಡತೆಯಿಂದ ಅತೃಪ್ತಿಯಾದ ಹಝ್ರತ್ ಇಬ್ರಾಹೀಮರು ಅವಳಲ್ಲಿ “ಏ ಹುಡುಗೀ…ಗಂಡ ಬಂದರೆ ಮನೆಯ ಹೊಸ್ತಿಲನ್ನು (ಉಮರಪ್ಪಡಿ) ಬದಲಿಸಲು ಹೇಳು” ಎಂದು ಹೇಳಿ ಅಲ್ಲಿಂದ ಹಿಂತಿರುಗಿದರು. ಇಲ್ಲಿ ಗಮನಾರ್ಹ ಸಂಗತಿಯೆಂದರೆ, ಹಝ್ರತ್ ಇಬ್ರಾಹೀಮರ ಸೊಸೆಯಾದ ಈ ಮಹಿಳೆಗೆ ಇದು ನನ್ನ ಪತಿಯ ತಂದೆ ಎಂದು ತಿಳಿಯದಿದ್ದರೂ ಮನೆಗೆ ಅತಿಥಿಯಾಗಿ ಬಂದ ಒಬ್ಬರನ್ನು ಗೌರವಿಸದೆ ಇದ್ದದ್ದಾಗಿತ್ತು ಹಝ್ರತ್ ಇಬ್ರಾಹೀಮರು ಈ ರೀತಿ ಮನೆಯ ಹೊಸ್ತಿಲನ್ನು ಬದಲು ಮಾಡಲು ಹೇಳಿದ್ದಾಗಿತ್ತು.
ಹಝ್ರತ್ ಇಸ್ಮಾಯೀಲ್ ರವರು ಮನೆ ತಲುಪಿದಾಗ ಪತ್ನಿ ಈ ಸಂಗತಿಯನ್ನು ಅವರಿಗೆ ತಿಳಿಸಿದಳು. ಆಗ ಹಝ್ರತ್ ಇಸ್ಮಾಯೀಲ್ರವರು ಬಂದ ವ್ಯಕ್ತಿಯ ದೇಹ ಪ್ರಕೃತಿ ಬಗ್ಗೆ ಕೇಳಿದಾಗ ಅದು ಅವರಿಗೆ ಅವರ ತಂದೆ ಇಬ್ರಾಹೀಮ್ (ಅ) ಎಂದು ಖಚಿತವಾಯಿತು. ಕೂಡಲೇ ಪತ್ನಿಯಲ್ಲಿ ಹೇಳಿದರು. “ನೀನು ಇನ್ನು ಇಲ್ಲಿ ನನ್ನ ಮನೆಯಲ್ಲಿ ನಿಲ್ಲಬಾರದು. ಇವತ್ತೇ ನಿನ್ನ ಮನೆಗೆ ಹೋಗಬೇಕು. ಅದು ನನ್ನ ತಂದೆ ಖಲೀಲುಲ್ಲಾಹಿ ಇಬ್ರಾಹೀಮ್ (ಅ). ಅವರನ್ನು ನೀನು ಸರಿಯಾಗಿ ಗೌರವಿಸದ ಕಾರಣ ನೀನು ನನಗೆ ಯೋಗ್ಯವಾದ ಸಂಗಾತಿಯಲ್ಲ ಎಂದು ಅವರಿಗೆ ತಿಳಿದಿದೆ. ಒಂದು ಮನೆಯ ಹೊಸ್ತಿಲು ಎಂದರೆ ಆ ಮನೆಯ ಒಡತಿ. ಆದ್ದರಿಂದ ನಾನು ನಿನ್ನನ್ನು ತ್ವಲಾಖ್ ಹೇಳಿರುತ್ತೇನೆ.”
ಬಳಿಕ ಅವರು ಬೇರೊಂದು ಹೆಣ್ಣನ್ನು ಮದುವೆಯಾದರು. ಅವರು ಬಹಳ ಉತ್ತಮ ಗುಣನಡತೆಯ ಹೆಣ್ಣಾಗಿದ್ದರು. ಅದರಲ್ಲಿ ಆರು ಮಕ್ಕಳು ಹುಟ್ಟಿದ್ದರು. ವರ್ಷಗಳ ನಂತರ ಪುನಃ ಒಮ್ಮೆ ಹಝ್ರತ್ ಇಬ್ರಾಹೀಮರಿಗೆ ಮಗನನ್ನು ನೋಡುವ ಬಯಕೆಯಾದಾಗ ಮಕ್ಕಾಕ್ಕೆ ಬಂದರು. ಆಗಲೂ ಮಗ ಮನೆಯಲ್ಲಿ ಇರಲಿಲ್ಲ. ಎಲ್ಲೋ ಬೇಟೆಯಾಡಲು ಹೋಗಿದ್ದರು. ಮನೆ ಬಾಗಿಲು ತಲುಪಿದ ಅವರು ಸಲಾಮ್ ಹೇಳಿ ಹೊರಗೆ ನಿಂತರು. ಕೂಡಲೇ ಮನೆಯೊಳಗಿಂದ ಹೆಂಗಸೊಬ್ಬರು ಬಂದು ಪ್ರಾಯವಾದ ಹಝ್ರತ್ ಇಬ್ರಾಹೀಮರಲ್ಲಿ ಹೇಳಿದರು. “ಮನೆಯ ಯಜಮಾನ ಬೇಟೆಯಾಡಲು ಹೋಗಿದ್ದಾರೆ. ಇವತ್ತು ಬರಬಹುದು. ನೀವು ಒಳಗೆ ಬಂದು ಕುಳಿತುಕೊಳ್ಳಿ. ನಾನು ನಿಮಗೆ ಕುಡಿಯಲು ಮತ್ತು ತಿನ್ನಲು ತರುತ್ತೇನೆ. ನೀವು ಬಹಳ ದೂರದ ಊರಿನಂದ ಬಂದಂತೆ ಕಾಣುತ್ತದೆ. ಆಯಾಸವಾದಂತೆ ಕಾಣುತ್ತೀರಿ” ಆಗ ಹಝ್ರತ್ ಇಬ್ರಾಹೀಮರು ಹೇಳಿದರು. “ನನಗೆ ಈಗ ಕುಡಿಯಲು ತಿನ್ನಲು ಏನೂ ಬೇಡ. ನನಗೆ ಉಪವಾಸ. ನನಗೆ ನೀನೊಂದು ಉಪಕಾರ ಮಾಡು. ಯಾತ್ರೆಯಲ್ಲಿ ಪಾದ ಕಾಲಿಗೆ ಏನೋ ಹಕ್ಕಿಯ ಹಿಕ್ಕೆ ಅಂಟಿ ಹೋಗಿದೆ. ಅದನ್ನೊಂದು ನೀರು ಹಾಕಿ ತೊಳೆದುಕೊಡು” ಎಂದು. ಆಗ ಹಝ್ರತ್ ಇಬ್ರಾಹೀಮರು ಹೇಳಿದಂತೆಯೇ ಅವರು ತೊಳೆದುಕೊಟ್ಟರು.
ತನ್ನ ಸೊಸೆಯ ಗುಣನಡತೆ ಕಂಡು ಬಹಳ ಸಂತುಷ್ಟನಾದ ಹಝ್ರತ್ ಇಬ್ರಾಹೀಮರು ಅವರಲ್ಲಿ “ಮನೆಯ ಹೊಸ್ತಿಲನ್ನು ಬದಲಾಯಿಸಬೇಡ. ಹಾಗೆಯೇ ಇರಲಿ” ಎಂದು ಪತಿ ಬಂದರೆ ಹೇಳುವಂತೆ ಸೂಚಿಸಿ ಅಲ್ಲಿಂದ ಹೋದರು.
ಬಳಿಕ ಹಝ್ರತ್ ಇಸ್ಮಾಯೀಲ್ ರವರು ಮನೆಗೆ ಬಂದಾಗ ಅವರ ಪತ್ನಿ ನಡೆದ ಸಂಗತಿಯನ್ನು ಹೇಳಿದರು. ಆಗ ಹಝ್ರತ್ ಇಸ್ಮಾಯೀಲ್ ರವರು ಪತ್ನಿಯಲ್ಲಿ “ಆ ಬಂದದ್ದು ನನ್ನ ತಂದೆ ಖಲೀಲುಲ್ಲಾಹಿ ಇಬ್ರಾಹೀಮ್ (ಅ). ನಿನ್ನ ನಡತೆಗಳು ಅವರಿಗೆ ಇಷ್ಟವಾದ ಕಾರಣ ಮನೆಯ ಹೊಸ್ತಿಲಾಗಿರುವ ನಿನ್ನನ್ನು ಕೈಬಿಡಬಾರದೆಂದು ಸೂಚನೆ ಕೊಟ್ಟದ್ದು. ಏನಿದ್ದರೂ ನೀನು ನನ್ನ ತಂದೆಯ ಪ್ರೀತಿಗೆ ಪಾತ್ರರಾಗಿರುವೆ. ನೀನು ಭಾಗ್ಯವಂತೆ” ಎಂದು ಹೇಳಿದರು.
✍🏻ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ..
ಮುಂದುವರೆಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.