(www.vknews.in) : ಹೌದು, ವಾಸ್ತವದಲ್ಲಿ ಸತ್ಯವಿಶ್ವಾಸಿಗಳಿಗೆ ಸಮಯದ ಷರತ್ತಿನೊಂದಿಗೆ ನಮಾಝನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಬಹುತೇಕ ಕಡೆ, ಮದುವೆ ದಿನ ವರನೊಂದಿಗೆ ವಧುವಿಗೂ ನಮಾಝ್ನ ಪ್ರಜ್ಞೆಯೇ ಇರುವುದಿಲ್ಲ. ವುಝೂ ಮಾಡುವಾಗ ನೀರು ತಾಗಿ, ಮೇಕಪ್ಗಳೆಲ್ಲ ನೀರಲ್ಲಿ ಅಳಿದು ಹೋಗಬಹುದೋ ಎಂಬ ಭೀತಿಯಿಂದ, ಆಕೆ ಕಲ್ಯಾಣದ ವೇದಿಕೆಯನ್ನು ಬಿಟ್ಟಗಲುವುದಿಲ್ಲ. ಈ ಸಮುದಾಯ ಬ್ಯೂಟಿ ಪಾರ್ಲರ್ನ ಕೃತಕ ಶೃಂಗಾರಕ್ಕಾಗಿ ಬಹಳಷ್ಟು ಹಣ ಪೋಲು ಮಾಡುತ್ತಿದೆ ಎಂಬುದು ದುರಂತ ಸತ್ಯ. ತಲೆ ಕೂದಲಿಗೆ ಬೇಕಾಬಿಟ್ಟಿ ರಂಗು ಬಳಿಯುವುದು, ಕಣ್ಣಿಗೆ ಅನಗತ್ಯ ಬಣ್ಣದ ಲೆನ್ಸ್ ಅಳವಡಿಸುವುದು ಮತ್ತು ಕಣ್ಣಿನ ಹುಬ್ಬಿನ ಕೂದಲು ಕತ್ತರಿಸಿ, ಬಣ್ಣದ ಗೆರೆ ಎಳೆದು, ನೈಜ ಸೌಂದರ್ಯವನ್ನು ವಿರೂಪಗೊಳಿಸುವುದು… ಇತ್ಯಾದಿಗಳೆಲ್ಲವೂ ಇಂದು ಮುಸ್ಲಿಮ್ ಮಹಿಳೆಯರಲ್ಲಿ ಹೆಚ್ಚಾಗಿದೆ.
ದೈನಂದಿನ ಬದುಕಲ್ಲೂ ವಿಭಿನ್ನ ಜಾಹೀರಾತುಗಳ ಮೊರೆ ಹೋಗಿ ಬಣ್ಣದ ಚಿಟ್ಟೆಯಂತಾಗಲು ಗರಿಬಿಚ್ಚುವವರಿದ್ದಾರೆ. ಬಝಾರ್ ಅಥವಾ ಮಾಲ್ಗಳಲ್ಲೂ ಅನ್ಯಪುರುಷರ ಮಡಿಲಿನ ಮೇಲೆ ಕೈಚಾಚಿ ಹಚ್ಚೆ ಹಾಕಿಸುವವರಿದ್ದಾರೆ. ವಾಸ್ತವದಲ್ಲಿ ಮೈಮೇಲೆ ಹಚ್ಚೆ ಹಾಕಿಸುವುದು, ಕಣ್ಣಿನ ಹುಬ್ಬಿನ ಕೂದಲು ಕತ್ತರಿಸುವುದು, ಸೌಂದರ್ಯ ವರ್ಧನೆಗಾಗಿ ಹಲ್ಲುಗಳ ನಡುವೆ ಅಂತರವನ್ನುಂಟು ಮಾಡುವುದು ಮತ್ತು ನಕಲಿ ಕೂದಲು ಅಳವಡಿಸುವುದು ಇವೆಲ್ಲವೂ ಅಪರಾಧಗಳಾಗಿವೆ. ಅಂತಹವರನ್ನು ಅಲ್ಲಾಹನ ರಸೂಲ್(ಸ)ರು ಪ್ರತ್ಯೇಕವಾಗಿ ಶಪಿಸಿರುವುದನ್ನು ಸ್ವಹೀಹುಲ್ ಬುಖಾರಿ ಮತ್ತು ಮುಸ್ಲಿಮ್ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲಾಹನ ಸೃಷ್ಟಿಯ ಸೊಗಸನ್ನು ಬದಲಿಸಿ, ವಿಕೃತಗೊಳಿಸುವುದನ್ನು ತೀವ್ರವಾಗಿ ಆಕ್ಷೇಪಿಸಲಾಗಿದೆ.
ಹಾಗಂತ ಚೆಂದದ ಉಡುಪು, ಮದರಂಗಿ, ಆಭರಣ ಇತ್ಯಾದಿಗಳನ್ನು ಧರಿಸಬಾರದೆಂದಲ್ಲ. ಇಸ್ಲಾಮಿಗೆ ವಿರುದ್ಧವಾದ ಮತ್ತು ನಮಾಝ್ನಿಂದ ದೂರ ಸರಿಸುವ ಅಥವಾ ವುಝೂವಿನೊಂದಿಗೆ ಅಳಿದು ಹೋಗುವ, ದುಬಾರಿ ಬೆಲೆಯ ಕೃತಕ ವೇಷಗಳು, ಮೋಜುಗಳು ಪರಲೋಕ ವಿಶ್ವಾಸಿಗಳಿಗೆ ಖಂಡಿತ ಭೂಷಣವಲ್ಲ. ಅದಕ್ಕೆ ವ್ಯಯಿಸುವ ಹಣ ದುರ್ವ್ಯಯವಲ್ಲವೇ? ಅವುಗಳ ಫೋಟೋ, ವೀಡಿಯೋಗಳು ಸ್ಟೇಟಸ್ ಮತ್ತು ಫ್ಯಾಮಿಲಿ ಗ್ರೂಪ್ಗಳಿಂದ ಹೊರಜಿಗಿದು ಅನಾಹುತಗಳಾಗಿಲ್ಲವೇ? ಮಹಿಳೆಯರು ತಮ್ಮ ಶೃಂಗಾರ, ಅಲಂಕಾರವನ್ನು ಅನ್ಯ ಪುರುಷರ ಮುಂದೆ ಪ್ರದರ್ಶಿಸಬಾರದೆಂದು ಪವಿತ್ರ ಕುರ್ಆನ್ ತಾಕೀತು ನೀಡಿಲ್ಲವೇ?
ಹಾಗೆಯೇ, ದೇಹದ ಅಂಗಾಂಗಗಳು ಎದ್ದು ತೋರುವಂತಹ, ತೆಳ್ಳಗಿನ ಅಥವಾ ಬಿಗಿ ಬಟ್ಟೆ ಧರಿಸಿ, ವಯ್ಯಾರದಂತೆ ಬಳಕುತ್ತಾ ನಡೆಯುವ ಮತ್ತು ಆ ಮೂಲಕ ಪರಪುರುಷರ ಮನೋವಿಕಾರವನ್ನು ಕೆರಳಿಸುವ ಮಹಿಳೆಯರನ್ನೂ ಪ್ರವಾದಿವರ್ಯ(ಸ)ರು ಶಪಿಸಿದ್ದಾರೆ. ಸುಗಂಧ ದ್ರವ್ಯಗಳನ್ನು ಪೂಸಿ ಅಥವಾ ಶಬ್ದ ಮಾಡುವ ಆಭರಣಗಳನ್ನು ಧರಿಸಿ, ಸಮಾಜದ ಸ್ವಾಸ್ಥ್ಯ ಕೆಡುವಂತೆ ಬೇಕಾಬಿಟ್ಟಿ ತಿರುಗಾಡಬಾರದು. ಒಟ್ಟಿನಲ್ಲಿ ಸಮಾಜದ ಚಾರಿತ್ರ್ಯ, ನೈತಿಕತೆ ಹಾಳಾಗದಂತೆ, ಕಾಪಾಡಿಕೊಳ್ಳುವುದು ಎಲ್ಲರ ಬಾಧ್ಯತೆಯಾಗಿದೆ. ಆದ್ದರಿಂದಲೇ, ಧರ್ಮದಲ್ಲಿ ಲಜ್ಜೆ ಮತ್ತು ನಾಚಿಕೆಗೆ ಬಹಳ ಒತ್ತುಕೊಡಲಾಗಿದೆ. ಮಾತ್ರವಲ್ಲ, ಲಜ್ಜೆಯನ್ನು ಈಮಾನಿನ ಭಾಗವೆಂದು ಸಾರಲಾಗಿದೆ. ಸತ್ಯವಿಶ್ವಾಸಿ ಸಮೂಹದಲ್ಲಿ ಅಶ್ಲೀಲತೆ ಹರಡುವವರಿಗೆ, ಇಹಪರಗಳಲ್ಲಿ ವೇದನಾ ಜನಕ ಶಿಕ್ಷೆಯಿದೆಯೆಂದೂ ಪವಿತ್ರ ಕುರ್ಆನ್ ಕಠಿಣ ಎಚ್ಚರಿಕೆ ನೀಡಿದೆ.
ಪುರುಷರಿಗೂ ತಮ್ಮ ದೃಷ್ಟಿಯನ್ನು ಕೆಳಗಿರಿಸುವಂತೆ ಮತ್ತು ಉನ್ನತ ಚಾರಿತ್ರ್ಯವಂತರಾಗಿರಲು ತಾಕೀತು ನೀಡಲಾಗಿದೆ. ಅಲಂಕಾರ ಮಾತ್ರವಲ್ಲ, ದೇಹದ ಲಜ್ಜಾ ಭಾಗಗಳನ್ನು ಮರೆಮಾಚಲೂ ನೀವು ಧರಿಸುವ ಉಡುಪಿಗೆ ಸಾಧ್ಯವಾಗಬೇಕೆಂದು ಸೂಚಿಸಿದ ಕುರ್ಆನ್, ಧರ್ಮನಿಷ್ಠೆಯ ಉಡುಪು ಅತ್ಯುತ್ತಮವೆಂದೂ ಸಾರಿ ಹೇಳಿದೆ. ನಿಜವಾಗಿ, ಸೌಂದರ್ಯದ ಅಗತ್ಯ ಮತ್ತು ಮಹತ್ವಗಳ ಹೊರತಾಗಿಯೂ ದಾಂಪತ್ಯ ಜೀವನದಲ್ಲಿ ನೈಜ ಮಹತ್ವವಿರುವುದು ಸೌಂದರ್ಯಕ್ಕಾಗಿರದೆ ಸಚ್ಚಾರಿತ್ರ್ಯಕ್ಕಾಗಿದೆ. ಶಾಶ್ವತ ಪ್ರಭಾವ ಬೀರುವ ಶಕ್ತಿಯು ಸಚ್ಚಾರಿತ್ರ್ಯಕ್ಕೆ ಮಾತ್ರವಿದೆ.
ಸಚ್ಚಾರಿತ್ರ್ಯವೇ ಮನಸ್ಸನ್ನು ಶಾಶ್ವತವಾಗಿ ಸೂರೆಗೊಳ್ಳಬಲ್ಲುದು. ಸಾಂಸಾರಿಕ ಮತ್ತು ಗೃಹಸ್ಥ ಜೀವನದ ಸಮೀಕ್ಷೆಯಿಂದ ತಿಳಿದು ಬರುವುದೇನೆಂದರೆ, ಮಹಿಳೆಯ ಸ್ಥಾನಮಾನ ಮತ್ತು ಶಾಶ್ವತ ಗೌರವದ ನೈಜ ರಹಸ್ಯ ಆಕೆಯ ಗುಣ ಸ್ವಭಾವ ಮತ್ತು ಚಾರಿತ್ರ್ಯವಾಗಿದೆ. ಉತ್ತಮ ಮತ್ತು ಬಲಿಷ್ಠ ಕೌಟುಂಬಿಕ ಸಂಬಂಧದ ನೈಜ ಸ್ಪೂರ್ತಿಯೂ ಅದುವೇ ಆಗಿದೆ. ಪವಿತ್ರ ಕುರ್ಆನಿನ ಅನ್ನೂರ್ ಮತ್ತು ಅಹ್ಝಾಬ್ ಅಧ್ಯಾಯದಲ್ಲಿ ನೈತಿಕ ಸಮಾಜದ ಉನ್ನತಿಗೆ ಬೇಕಾದ ಧಾರಾಳ ಮುತ್ತು, ರತ್ನಗಳಿವೆ. ಕೌಟುಂಬಿಕ ಭದ್ರತೆಗೆ ಬೇಕಾದ ಹವಳಗಳಿವೆ. ಸುಮಧುರ ಬದುಕು ಕಟ್ಟಲು ಆ ಜ್ಞಾನ ಸಾಗರದ ಆಳಕ್ಕಿಳಿದು ಸಮಾಜ ಈಜಾಡಬೇಕು, ಅದರಲ್ಲಿ ಮಿಂದೇಳಬೇಕು…
ಮುಂದುವರಿಯುವುದು..
✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.