(www.vknews.in) : ಜನವಾಸವಿಲ್ಲದ ಯಾರೂ ಇಲ್ಲದ ಬೆಟ್ಟದ ತುದಿ ತಲುಪಿದಾಗ ಹಝ್ರತ್ ಇಬ್ರಾಹೀಮರು ಮಗ ಇಸ್ಹಾಖರಲ್ಲಿ ಹೇಳಿದರು. “ನನ್ನ ಪ್ರೀತಿಯ ಕಂದಾ.., ಅಲ್ಲಾಹನಿಂದ ನನಗೆ ನಿನ್ನನ್ನು ಬಲಿದಾನ ಮಾಡಲು ಕನಸಿನ ಮೂಲಕ ನಿರ್ದೇಶ ಬಂದಿರುತ್ತದೆ. ನಿನ್ನ ಅಭಿಪ್ರಾಯವೇನು” ಆಗ ಮಗ ಇಸ್ಹಾಖರು “ಪರವಾಗಿಲ್ಲ ಅಪ್ಪಾಜೀ.., ಹಾಗೆ ನಿರ್ದೇಶ ಬಂದಿದ್ದರೆ ಹಾಗೆ ಮಾಡಿ. ನನ್ನಿಂದ ಯಾವುದೇ ವಿರೋಧ ಇಲ್ಲ” ಎಂಬ ಸಕಾರಾತ್ಮಕ ಉತ್ತರ ಕೊಟ್ಟರು.
ಈ ವೇಳೆಯಲ್ಲಿ ನಾಲ್ಕು ಕಡೆಯಿಂದಲೂ ಮಗನ ಮೇಲೆ ಕರುಣೆ ತೋರಲು ಕರೆ ಬರುತ್ತಿತ್ತು. ಆದರೆ ಹಝ್ರತ್ ಇಬ್ರಾಹೀಮರಿಗೆ ಅದು ಶತ್ರು ಇಬ್ಲೀಸನ ಕರೆಯೆಂದು ತಿಳಿದ ಕಾರಣ ಆ ಕಡೆಗೆ ತಿರುಗಿ ನೋಡದೆ ಮಗನ ಖಮೀಸನ್ನು ಕಳಚಿ ಮೊದಲೇ ತಂದಿದ್ದ ಹಗ್ಗದಿಂದ ಅವರ ಕೈಕಾಲುಗಳನ್ನು ಕಟ್ಟಿದರು. ಬಳಿಕ ಮಗನನ್ನು ನೆಲದಲ್ಲಿ ಮುಖ ಕೆಳಗೆ ಮಾಡಿಸಿ ಮಲಗಿಸಿ ಕೊರಳ ಮೇಲೆ ಹರಿತವಾದ ಕತ್ತಿಯನ್ನು ಇಟ್ಟು ಕೊಯ್ಯಲು ತಯಾರಾದರು. ಸುಬ್ಹಾನಲ್ಲಾಹ್! ಆಗ ಅವರ ಕೈ ನಡುಗಿ ಕತ್ತಿ ಕೆಳಗೆ ಬಿತ್ತು. ಆ ವೇಳೆಯಲ್ಲಿ ಮಗನಾದರೆ ಯಾವುದೇ ಭಯವಿಲ್ಲದೆ ತಂದೆಯಲ್ಲಿ ಹೇಳುತ್ತಿದ್ದರು. “ಅಪ್ಪಾ.. ಕತ್ತಿಯನ್ನು ಇನ್ನೊಮ್ಮೆ ಸರಿಯಾಗಿ ಚೂಪು ಮಾಡಿ. ಅಂತೆಯೇ ದ್ಸಬಹ್ ಮಾಡುವ ವೇಳೆ ನನ್ನಲ್ಲಿ ಕರುಣೆ ಬಾರದಿರಲು ನೀವು ಮುಖ ತಿರುಗಿಸಿ ದ್ಸಬಹ್ ಮಾಡಿ ” ಎಂದು. ಆಗ ಹಝ್ರತ್ ಇಬ್ರಾಹೀಮರು ಹೇಳಿದರು. “ಮಗನೇ.., ಕತ್ತಿಯನ್ನು ಚೆನ್ನಾಗಿ ಚೂಪು ಮಾಡಿದ್ದೇನೆ. ಕತ್ತಿಯ ಚೂಪಿನ ಹರಿತಕ್ಕೆ ಮರದ ದಿಣ್ಣೆ ಕೂಡ ತುಂಡಾಗಬಹುದು” ಎಂದು.
ಬಳಿಕ ಅವರು ಎರಡನೇ ಬಾರಿ ಮಗನ ಕೊರಳ ಮೇಲೆ ಹರಿತವಾದ ಕತ್ತಿಯನ್ನು ಇಟ್ಟು ಬಹಳ ಪ್ರೆಶರ್ ಕೊಟ್ಟು ಕೊಯ್ಯಲು ನೋಡಿದರು. ಆಗಲೂ ಕತ್ತು ತುಂಡಾಗದೆ ಕತ್ತಿ ಕೆಳಗೆ ಬಿತ್ತು. ಆಗ ಮಗ ಇಸ್ಹಾಖ್ (ಅ) ರವರು ತಂದೆಯಲ್ಲಿ ಹೇಳಿದರು. “ಅಪ್ಪಾಜೀ.., ತಾವು ಗಲಿಬಿಲಿಗೊಳ್ಳಬೇಡಿ. ಕತ್ತಿಯನ್ನು ಇನ್ನೊಮ್ಮೆ ಚೆನ್ನಾಗಿ ಚೂಪುಮಾಡಿ ದ್ಸಬಹ್ ಮಾಡಿ. ತಾವು ಯಾವತ್ತೂ ಪರಾಭವಗೊಳ್ಳಲಿಕ್ಕಿಲ್ಲ”
ನಂತರ ಹಝ್ರತ್ ಇಬ್ರಾಹೀಮರು ಕತ್ತಿಯನ್ನು ಬೆಂಕಿಯಿಂದ ಕಾಯಿಸಿ ಚೆನ್ನಾಗಿ ಚೂಪುಮಾಡಿ ಮಗನ ಕೊರಳ ಮೇಲೆ ಇಟ್ಟು ಬಲಕೊಡಲು ನೋಡಿದಾಗ ಬೆಟ್ಟದ ತುದಿಯಿಂದ “ಹಝ್ರತ್ ಇಬ್ರಾಹೀಮರೇ, ಮಗನನ್ನು ಬಲಿಕೊಡಬೇಡಿ. ಅದಕ್ಕೆ ಬದಲಾಗಿ ಈ ಆಡನ್ನು ಬಲಿದಾನ ಮಾಡಿರಿ. ಮಾತ್ರವಲ್ಲ ಇಂದಿನಿಂದ ಈ ದಿನವು ತಮಗೂ ತಮ್ಮ ಮಕ್ಕಳಿಗೂ ಒಂದು ಹಬ್ಬದ ದಿನವಾಗಿದೆ” ಎಂಬ ಒಂದು ಅಗೋಚರ ಶಬ್ದ ಕೇಳಿಸಿತು. ಪ್ರವಾದಿ ಇಬ್ರಾಹೀಮರು ಬೆಟ್ಟದ ಕಡೆಗಿ ತಿರುಗಿ ನೋಡಿದಾಗ ಒಂದು ಕಂದು ಬಣ್ಣದ ಆಡು ಬೆಟ್ಟದ ತುಂದಿಯಿಂದ ” ಮಗನ ಬದಲಿಗೆ ನನ್ನನ್ನು ದ್ಸಬಹ್ ಮಾಡಿ. ನಾನು ಹಝ್ರತ್ ಆದಮರ ಮಗ, ಹಾಬೀಲರು ಖುರ್ಬಾನಿ ಕೊಟ್ಟ ಆಡು” ಎಂದು ಹೇಳುತ್ತಾ ಓಡಿ ಬರುತ್ತಿತ್ತು.
ಬಳಿಕ ಹಝ್ರತ್ ಇಬ್ರಾಹೀಮರು ಆ ಮೇಕೆಯನ್ನು ದ್ಸಬಹ್ ಮಾಡಿದರು. ಕೂಡಲೇ ಆಕಾಶದಿಂದ ಒಂದು ಬೆಂಕಿಜ್ವಾಲೆ ಬಂದು ಆ ಆಡಿನ ತಲೆ ಹೊರತು ಸಂಪೂರ್ಣವಾಗಿ ತಿಂದುಬಿಟ್ಟಿತು. ಬಾಕಿಯಾದ ತಲೆಯನ್ನು ತಂದೆ ಮತ್ತು ಮಗ ಮನೆಗೆ ತಂದು ಬೀವಿ ಸಾರರವರಲ್ಲಿ ಪಾಕ ಮಾಡಲು ಹೇಳಿದರು. ಅಲ್ಲದೆ ನಡೆದ ಸಂಗತಿಯನ್ನು ಬೀವಿ ಸಾರರವರಿಗೆ ಸಂಪೂರ್ಣವಾಗಿ ವಿವರಿಸಿ ಕೊಟ್ಟರು.
ಈ ಘಟನೆ ಕಳೆದು ಒಂದೆರಡು ವರ್ಷಗಳ ಬಳಿಕ ಬೀವಿ ಸಾರರವರು ವಫಾತಾದರು. ನಂತರ ಹಝ್ರತ್ ಇಬ್ರಾಹೀಮರು ಬೇರೊಂದು ಹೆಣ್ಷನ್ನು ಮದುವೆಯಾದರು. ಅದರಲ್ಲಿ ಅವರಿಗೆ ಮೂರು ಹೆರಿಗೆಯಲ್ಲಿ ಅವಳಿ ಜವಳಿಯಾಗಿ ಆರು ಮಕ್ಕಳಿದ್ದರು.
ಜಗತ್ತಿನಲ್ಲಿ ಪ್ರಪ್ರಥಮವಾಗಿ ಬಾಚಣಿಕೆಯಿಂದ ತಲೆಬಾಚಲು ಆರಂಭಿಸಿದ್ದು, ಮಿಸ್ವಾಕಿನಿಂದ ಹಲ್ಲುಜ್ಜಲು ಶುರುಮಾಡಿದ್ದು, ಸುರುಮ ಹಾಕಲು ತೊಡಗಿದ್ದು ಹಝ್ರತ್ ಇಬ್ರಾಹೀಮರಾಗಿರುತ್ತಾರೆ. ಅಂತೆಯೇ ಪರಸ್ಪರ ಕಾಣುವಾಗ ಮಾಡುವ ಆಲಿಂಗನ, ಹಸ್ತಲಾಘವ (Handshake)ಮತ್ತು ಮುಂಜಿಕರ್ಮ ಮೊದಲಾಗಿ ಆರಂಬಿಸಿದ್ದೂ ಅವರಾಗಿರುತ್ತಾರೆ.
✍🏻ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ..
ಮುಂದುವರೆಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.