(www.vknews. in) ; ಕೋಲ್ಕತಾದ ಟ್ರೈನಿ ವೈದ್ಯೆಯನ್ನು ಆಸ್ಪತ್ರೆಯಲ್ಲಿಯೇ ಅತ್ಯಾಚಾರ ನಡೆಸಿ ಭೀಕರವಾಗಿ ಕೊಂದು ಹಾಕಿದ ಘಟನೆ ಹೆಚ್ಚು ಕಡಿಮೆ ದೆಹಲಿಯ ‘ನಿರ್ಭಯಾ’ ಪ್ರಕರಣದಷ್ಟು ಕಾವು ಪಡೆಯುತ್ತಿದೆ. ಪಡೆಯಬೇಕಾದದ್ದೇ. ಒಂದೊಂದು ಇಂತಹ ಘಟನೆಗಳಿಗೂ ನಾಗರಿಕ ಸಮಾಜದಿಂದ ತೀವ್ರ ಅಸಹನೆ ವ್ಯಕ್ಯವಾಗಬೇಕು. ಇಂತಹ ಘಟನೆಗಳನ್ನು ಸಹಿಸಿಕೊಳ್ಳಬಾರದು. ಕೋಲ್ಕತಾ ಪ್ರಕರಣ ವೈದ್ಯರು ಮಾತ್ರ ಪ್ರತಿಭಟಿಸಬೇಕಾದ ಘಟನೆಯಲ್ಲ. ‘ಹಾಗೆಲ್ಲಾ’ ಅನುಭವಿಸಿ ಕೊಲೆಗೀಡಾದ ಮಹಿಳೆ ವೈದ್ಯೆ ಮಾತ್ರವಾಗಿರಲಿಲ್ಲ, ಆಕೆ ಮಗಳು, ಸೋದರಿ, ಸ್ನೇಹಿತೆ ಹೀಗೆ ನಮ್ಮ ಮನೆ ಮಗಳಂತೆ ಎಲ್ಲವೂ ಆಗಿದ್ದಳು. ಆದ್ದರಿಂದ ಇದು ಎಲ್ಲರೂ ಪ್ರತಿಭಟಿಸಬೇಕಾದ ಘಟನೆ. ಎಲ್ಲರ ಮನಸ್ಸನ್ನು ತಟ್ಟಬೇಕಾದ ಘಟನೆ. ಏನೇ ಮಾಡಿದರೂ ಅವು ಆಕೆಗಾದ ಅನ್ಯಾಯ, ಆಕೆಯ ಪ್ರಾಣನಷ್ಟಕ್ಕೆ ಪರಿಹಾರವಲ್ಲ. ಆಕೆಯ ಹೆತ್ತವರಿಗೆ, ಆಕೆಯ ಸ್ನೇಹಿತೆಯರಿಗೆ ಆಕೆ ಮತ್ತೆ ದೊರಕುವುದಿಲ್ಲ ಎಂಬುದೂ ಕಹಿಸತ್ಯ.
ಆ ಕೃತ್ಯವೆಸಗಿದವರಿಗೆ ಮರಣದಂಡನೆ ಆಗಬೇಕಾಗಿರುವುದು ಆಕೆಗೆ, ಆಕೆಯ ಕುಟುಂಬಕ್ಕೆ, ನಾಗರಿಕ ಸಮಾಜಕ್ಕೆ ದಕ್ಕಬೇಕಾದ ಕನಿಷ್ಠ ನ್ಯಾಯ. ಹೌದು ಉಗ್ರ ಶಿಕ್ಷೆ ಅನ್ನಿಸಿಕೊಂಡ ಮರಣದಂಡನೆ ಇಂತಹ ಪ್ರಕರಣದಲ್ಲಿ ಕನಿಷ್ಠ ಶಿಕ್ಷೆಯೆಂದೇ ಹೇಳಬೇಕಾಗಿದೆ. ಇಷ್ಟವಿಲ್ಲದೆ ಪುರುಷನೊಬ್ಬನ ಬೆರಳು ತಾಕಿದರೂ ನೊಂದುಕೊಳ್ಳುವ ಮಹಿಳೆ, ಮಗಳು ಸಣ್ಣ ಅನಾರೋಗ್ಯಕ್ಕೀಡಾದರೂ ಅಳುವ ಹೆತ್ತವರಿಗೆ ಪ್ರಸಕ್ತ ಘಟನೆ ಮಾಡಿದ ಅನ್ಯಾಯ ಯಾವ ಮಟ್ಟದ್ದು ಅಲ್ವಾ? ಆ ಜೀವ ಅತ್ಯಾಚಾರ ಮಾಡದಂತೆ, ಕೊನೆಗೆ ಪ್ರಾಣಭಿಕ್ಷೆ ಕೇಳಿ ಎಷ್ಟು ಅಂಗಲಾಚಿರಬಹುದು..! ಅಷ್ಟೂ ರೋದನೆಯ ನಡುವೆಯೇ ಅತ್ಯಾಚಾರ ಮಾಡಿ ‘ಸುಖ’ ಅನುಭವಿಸುವ, ತನಗೆ ಆರಾಮವಾಗಿ ಬದುಕಲು ಬೇಕಾಗಿ ಇತರರನ್ನು ಕೊಂದು ಹಾಕುವ ವಿಕೃತರಲ್ಲಿ ಮಾನವೀಯ ಗುಣ ಲವಲೇಷವಾದರೂ ಇರದು.
ಅತ್ಯಾಚಾರದ ಬಳಿಕ ಅವಮಾನ, ಅಸಹಾಯಕತೆಯಿಂದ ಆಘಾತದಲ್ಲಿರುವಾಗಲೇ ಕೊಲೆಗೀಡಾಗುವ ಸ್ಥಿತಿ ಒಂದು ಮಹಿಳೆಗೆ ಎದುರಾಗುವುದೆಂದರೆ ಅದನ್ನು ಊಹಿಸಲೂ ಆಗದು. ತೊಟ್ಟಿಲಿಂದ ಹಿಡಿದು ವೈದ್ಯೆಯಾಗುವ ತನಕ ಆ ಮಹಿಳೆಯ ಜೀವನ, ಜೀವನ ಪ್ರೀತಿ, ವೈದ್ಯೆಯಾಗಲು ಹಗಲೂ ರಾತ್ರಿ ಅಧ್ಯಯನ, ಖರ್ಚು ಸಣ್ಣದಲ್ಲ. ಈ ಎಲ್ಲ ಹಂತದಲ್ಲಿ ಹೆತ್ತವರ ತ್ಯಾಗ, ಪ್ರೀತಿ, ಕನಸು ಕಿರಿದಲ್ಲ. ವಿಕೃತ ಸುಖಕ್ಕಾಗಿ ಹೀಗೆ ಅತ್ಯಾಚಾರ ನಡೆಸುವುದು, ಕೊಲೆ ಮಾಡುವುದು ಎಂದರೆ ಅದು ಯಾವ ಮಟ್ಟದ ಕ್ರೌರ್ಯ? ಅಂತಹ ಕ್ರೌರ್ಯ ಎಸಗಿದವರು ಒಂದು ಕ್ಷಣವೂ ಈ ಭೂಮಿಯಲ್ಲಿ ಬದುಕಿ ಇರಬಾರದು ಎಂಬ ಧೋರಣೆ ನಾಗರಿಕ ಸಮಾಜದಲ್ಲಿ ಇರಲೇಬೇಕು. ಆದ್ದರಿಂದ ವೈದ್ಯೆಯ ಮೇಲೆ ಆ ಮಟ್ಟದ ವಿಕೃತಿ ಮೆರೆದು ಆಕೆಯನ್ನು ಕೊಂದೇಬಿಟ್ಟವರನ್ನು ಬದುಕಲು ಬಿಡಲೇಬಾರದು ಎಂದು ಆಗ್ರಹಿಸುವವರೇ ನಾಗರಿಕರು, ನಿಜವಾದ ಮನುಷ್ಯರು.
ತಾಯಿ, ತಂಗಿ, ಅಕ್ಕ, ಮಗಳು ಅಂತ ಮಮಕಾರ ಇದ್ದರೆ ಈಗ ಕೇಳುತ್ತಿರುವ ರೇಪ್ ಅಂಡ್ ಮರ್ಡರ್ ಸಹಿಸಲು ಅಸಾಧ್ಯ. ಸ್ವಂತ ಮಡದಿಯ ಮುಖದಲ್ಲಿ ಆ ಸಂದರ್ಭದ ಅಸಹಕಾರ ವ್ಯಕ್ತವಾದರೇನೇ ಮನುಷ್ಯರಾಗಿ ಇರೋರಿಗೆ ಮುಂದುವರಿದು ಸಂತೋಷ ಕಾಣಲು ಸಾಧ್ಯವಾಗುವುದಿಲ್ಲ. ಹಾಗಿರುವಾಗ ಈಗ ಕೇಳುತ್ತಿರುವ ‘ಸಾಮೂಹಿಕ ಅತ್ಯಾಚಾರ’ ಎಂಬುದನ್ನು ಜೀರ್ಣಿಸಿಕೊಳ್ಳಲು ಮನುಷ್ಯರಾಗಿಯೇ ಇರುವವರಿಂದ ಹೇಗೆ ಸಾಧ್ಯ?
ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿಯೂ ಪರೋಕ್ಷವಾಗಿ ಈ ಘಟನೆಗೆ ಅಸಮಾಧಾನ ವ್ಯಕ್ತಪಡಿಸಿ “ಮಹಿಳಾ ದೌರ್ಜನ್ಯಕ್ಕೆ ಉಗ್ರ ಶಿಕ್ಷೆಯ ಬಗ್ಗೆ ಪ್ರಚಾರ ಮಾಡಿ, ಅಪರಾಧ ಮನಸ್ಥಿತಿಯವರಿಗೆ ಭಯ ಮೂಡಿಸಿ” ಎಂದು ಕರೆ ಕೊಟ್ಟಿದ್ದಾರೆ. ಮತ್ತೊಂದೆಡೆ ಮಮತಾ ಬ್ಯಾನರ್ಜಿ ಆಡಳಿತದ ರಾಜ್ಯದಲ್ಲಿ ಈ ಘಟನೆ ನಡೆದಿದೆ ಎಂಬ ಕಾರಣಕ್ಕೆ ‘ಸೆಲೆಕ್ಟಿವ್’ ಆಗಿ ಭಾರೀ ಸಿಟ್ಟು ಹೊರಹಾಕಲಾಗುತ್ತಿದೆ. ತುಂಬು ಗರ್ಭಿಣಿಯ ಕಣ್ಣೆದುರೇ ಆಕೆಯ 6 ವರ್ಷದ ಮಗಳನ್ನು ಕಾಲುಗಳಲ್ಲಿ ಹಿಡಿದು ನೆಲಕ್ಕೆ ಅಪ್ಪಳಿಸಿ ಕೊಂದು, ಆಕೆಯ ಹೆತ್ತವರನ್ನೂ ಕೊಂದು, ಈ ಸ್ಥಿತಿಯನ್ನು ಅರಗಿಸಲಾಗದೇ ಪ್ರಜ್ಞೆ ತಪ್ಪಿದ ಬಿಲ್ಕೀಸ್ ಬಾನು ಎಂಬ ಮಹಿಳೆಯನ್ನು ಸಾಮೂಹಿಕ ಅತ್ಯಾಚಾರವೆಸಗಿ ಸತ್ತು ಹೋದಳೆಂದು ಭಾವಿಸಿ ಜೀವಂತ ಬಿಟ್ಟು ಹೋದ ವಿಕೃತರನ್ನು ಘೋಷಣೆಯಾದ ಶಿಕ್ಷೆಯಿಂದ ವಿನಾಯಿತಿ ನೀಡಿ ಬಿಡುಗಡೆಗೊಳಿಸಿ ಅವರಿಗೆ ಸಿಹಿಕೊಟ್ಟು, ಹಾರಹಾಕಿ ಸ್ವಾಗತಿಸಿದ ‘ಮನಸ್ಥಿತಿ’ಗೆ ನಿಜವಾಗಲೂ ಮಹಿಳಾ ದೌರ್ಜನ್ಯದ ಬಗ್ಗೆ ನಿಜವಾದ ಆಕ್ರೋಶ ಇದೆಯಾ? ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯವೆಸಗಿ, ಆ ಮಹಿಳೆಯರ ಅಷ್ಟೂ ಪ್ರತಿಭಟನೆ, ಕಣ್ಣೀರ ಮಧ್ಯೆಯೂ ತನ್ನ ಪಕ್ಷದ ಎಂಪಿಯ ವಿರುದ್ಧ ಒಂದು ಮಾತೂ ಆಡದ, ಬಂಧಿಸದೇ ರಕ್ಷಣೆ ಕೊಟ್ಟದ್ದನ್ನು ಕಂಡ ಸಮಾಜದಲ್ಲಿ ಮೋದಿ ಕರೆಕೊಟ್ಟ ಉಗ್ರ ಶಿಕ್ಷೆಯ ಭಯವನ್ನು ಮೂಡಿಸೋದಾದರೂ ಹೇಗೆ?
ನಿಜ ಹೇಳಬೇಕೆಂದರೆ, ಮಕ್ಕಳು ಎಂದೂ ನೋಡದೆ ಮಹಿಳಾವರ್ಗದ ಮೇಲೆ ‘ಹಾಗೆಲ್ಲಾ’ ಮಾಡಿದವರನ್ನು ನಮ್ಮಿಂದೇನೂ ಮಾಡಲಾಗ್ತಿಲ್ಲ. ಶತಮಾನಗಳಿಂದ ‘ಮಹಿಳೆ’ಯನ್ನು ಶೋಷಣೆ ಮಾಡಿದ ಪುರುಷ ಪ್ರಾಧಾನ್ಯತೆಯ ವಿಕೃತ ರೂಪ ಇದೀಗ ಮಹಿಳೆಯನ್ನು ಈ ರೀತಿ ಮಾಡಿ ಅತಿ ಘೋರವಾಗಿ ಸಾಯಿಸುತ್ತಾ ಇದೆ. ಸಮಾಜ ಸಹಜ ಎಂಬಂತೆ ಇದನ್ನು ಸ್ವೀಕರಿಸುತ್ತಾ ಇಂತಹದನ್ನು ಸಹಿಸಿಕೊಳ್ಳುತ್ತಾ ಇದೆಯೇನೋ ಎಂಬ ಭಯ ನನಗಾಗುತ್ತಿದೆ. ಇಂತಹ ಅಧಮರ ವಿರುದ್ಧ ನಮ್ಮ ಆಕ್ರೋಶ ‘ಸೆಲೆಕ್ಟಿವ್’ ಮಾತ್ರವಾಗಿ ಹೊರಬರುವುದು ಅದಕ್ಕಾಗಿರಬಹುದೇನೋ? ನಮ್ಮ ಕೆಂಡದಂತಹ ಆಕ್ರೋಶವನ್ನೆಲ್ಲಾ ವ್ಯವಸ್ಥಿತವಾಗಿ ಮತ್ತೊಂದು ಧರ್ಮದವರ ವಿರುದ್ಧವಾಗಿ ಹೊರಹಾಕಿಸಲಾಗುತ್ತಿದೆ. ನಮ್ಮ ಕರುಳು ಕಿತ್ತು ಬರುವುದು, ನಮ್ಮ ಜನಜಾಗೃತಿ ಎಲ್ಲ ಕೋಮು ವಿಷಯಗಳಿಗೆ ಸೀಮಿತವಾಗಿದೆ. ಇಂತಹರನ್ನು ತಿದ್ದಲಿರುವ ಧಾರ್ಮಿಕ ಉಪದೇಶಗಳು ನಮ್ಮಲ್ಲಿಲ್ಲ, ಇಂತಹದನ್ನು ಯೋಚಿಸೋಕೂ ಭಯವಾಗುವವರಾಗಿ, ಆತ್ಮಸಾಕ್ಷಿಯುಳ್ಳವರಾಗಿ ತಯಾರಾಗಿಸುವ ನಿಜವಾದ ಧರ್ಮ ಜಾಗೃತಿಯ ಹೆಸರಲ್ಲಿಯೂ ನಾವು ಹಿಂಸೆಯನ್ನು ಜಾಗೃತಿ ಮಾಡುತ್ತಿದ್ದೇವೆ. ಹಿಂಸಾ ಮನಸ್ಥಿತಿಯನ್ನು ಬೆಳೆಯಿಸುತ್ತಿದ್ದೇವೆ.
ಕೋಲ್ಕತಾದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕವೂ ಎಗ್ಗಿಲ್ಲದೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಇಂತಹದ್ದನ್ನು ಕೊನೆಗೊಳಿಸಬೇಕಾದವರು ಬೇರೇನೋ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳ ಇಂತಹ ಪರಮ ಘೋರ ನೋವಿಗೆ, ಸಾವಿಗೆ ನಾವು ಬೆಲೆ ಕಲ್ಪಿಸಬೇಕಾದರೆ, ನಮ್ಮ ನಾಯಕರು ಮತ್ತು ರಾಜಕಾರಣಿಗಳು ಸ್ಟೇಜು ನಿರ್ಮಿಸಿ ಖಂಡಿಸಬೇಕಾದರೆ ಅಪರಾಧಿಗಳಿಗೆ ‘ನಮ್ಮದಲ್ಲದ ಮತೀಯರಿಗಿರುವ ಹೆಸರುಗಳು’ ಇರಬೇಕು. ಕೆಲವೊಮ್ಮೆ ಅಲ್ಲಿ ನಮ್ಮದಲ್ಲದ ಪಕ್ಷ ಅಧಿಕಾರದಲ್ಲಿರಬೇಕು. ನಮ್ಮದಲ್ಲದ ಮತೀಯರಿಗಿರುವ ಹೆಸರಿನವರಿಗೆ, ನಮ್ಮ ಪಕ್ಷದವರಿಗೆ ಏನು ಬೇಕಾದರೂ ಮಾಡಬಹುದು ಎಂಬಂತೆ ನಾವಿದ್ದೇವೆ. ಪರಧರ್ಮ ಅಸಹನೆಗಳನ್ನಷ್ಟೇ ನಮ್ಮ ಪಾಲಿಗೆ ಜನಜಾಗೃತಿಯ, ಆಕ್ರೋಶದ ವಿಷಯವಾಗಿದೆ. ಮನುಷ್ಯ ಹೃದಯಗಳನ್ನು ಜಾಗೃತಿ ಮಾಡಿ ನಮ್ಮನ್ನು ಧಾರ್ಮಿಕರಾಗಿ ಮಾಡುವವರೇ ಇಲ್ಲ.
ಗಲ್ಫ್ ರಾಷ್ಟ್ರಗಳಲ್ಲಿ ಅರ್ಧರಾತ್ರಿಯೂ ಮಹಿಳೆ ಒಂಟಿಯಾಗಿ ನಡೆಯಬಲ್ಲರು. ಅಲ್ಲಿ ಅವಳನ್ನು ದಿಟ್ಟಿಸಿಯೂ ನೋಡಲ್ಲ. ಅಲ್ಲಿಯ ಮಣ್ಣಿಗೆ ಮಹಿಳೆ ‘ಹಾಗೆಲ್ಲಾ’ ಅನುಭವಿಸುತ್ತಾ ಮಾಡುವ ಆರ್ತನಾದ ಕೇಳುವ ದೌರ್ಭಾಗ್ಯವಿಲ್ಲ. ಅಲ್ಲಿಯ ಮಣ್ಣಿಗೆ ಆಕೆಯ ರಕ್ತಾಭಿಷೇಕವಿಲ್ಲ. ಅಲ್ಲಿ ಸಾರ್ವಜನಿಕವಾಗಿ ನೇಣಿಗೇರುವ ಭಯವು ನರಪಿಶಾಚಿಗಳ ನರವನ್ನು ಹಿಡಿದಿಟ್ಟಿರುತ್ತದೆ. ನಮ್ಮಲ್ಲೂ ಆ ರೀತಿ ಆಗಬೇಕೆಂದು ಕೋಲ್ಕತಾದ ವೈದ್ಯೆಯಂತಹ ಸಂತ್ರಸ್ತರು ನರರಾಕ್ಷಸರ ಬಂಧಿಯಾಗಿ ಅರ್ತನಾದ ಮಾಡ್ತಾ ನರಳುವಾಗ ಚೀರಿ ಚೀರಿ ಹೇಳಿರಬಹುದು. ಆದರೆ ನಮ್ಮ ವ್ಯವಸ್ಥೆಯ ಕಿವಿಗೆ ಅವೆಲ್ಲ ಕೇಳುವುದಿಲ್ಲ. ನಮ್ಮ ವ್ಯವಸ್ಥೆಯ ದಪ್ಪ ಚರ್ಮಕ್ಕೆ ಅವರಿಗಾದ ಇಂತಹ ಹಿಂಸೆ, ಈ ಸಾವುಗಳು ಅಷ್ಟೇನೂ ಗೊತ್ತಾಗುತ್ತಿಲ್ಲ. ವಿದೇಶಗಳಿಗೆ ಗೋಮಾಂಸ ರಫ್ತು ಮಾಡುವಲ್ಲಿ ದಾಖಲೆ ಬರೆಯುವಾಗಲೇ ಇಲ್ಲಿ ಕೆಲವೆಡೆ ಹೊಸ ಸುಗ್ರೀವಾಜ್ಞೆ ಮಾಡಲಾಗುತ್ತದೆ. ಬಲವಂತದ ಮತಾಂತರ ನಿಷೇಧ ಕಾನೂನು ನಮ್ಮಲ್ಲಿದ್ದರೂ ಹೊಸದಾಗಿ ನಿಷೇಧಿಸಿ ಕಾನೂನು, ಸುಗ್ರೀವಾಜ್ಞೆ ತರಲಾಗುತ್ತಿದೆ. ಆದರೆ ಅವರು ಯಾರಿಗೂ ಸಯನೈಡ್ ಮೋಹನ, ಉಮೇಶ್ ರೆಡ್ಡಿಯಂತವರನ್ನು ಇನ್ನೂ ಬದುಕಲು ಬಿಟ್ಟ ವ್ಯವಸ್ಥೆಯ ಬಗ್ಗೆ ನೋವಿಲ್ಲ. ಅತ್ಯಾಚಾರ-ಕೊಲೆಯಂತಹದ್ದು ಅತ್ಯಂತ ಗಂಭೀರ ಎಂದು ಅನಿಸಲೇ ಇಲ್ಲ. ಈ ಬಗ್ಗೆ ಯಾವ ಸುಗ್ರೀವಾಜ್ಞೆಯನ್ನು ತರಬೇಕೆಂದು ಅನಿಸಲೇ ಇಲ್ಲ!
ಇಂತಹವರನ್ನು ಬಹಿರಂಗವಾಗಿ ನೇಣಿಗೇರಿಸುವ ಕಾನೂನು ಜಾರಿಯಾದ ದಿನವೇ ನಾವು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರೆ ಸಾಕು ಎಂದೇ ಅನ್ನಿಸುತ್ತದೆ.
-ಪಿಎಂ ಇಕ್ಬಾಲ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.