ನನ್ನ ಸ್ನೇಹಿತ ಮನೆ ಮುಂದೆ ಒಂದು ಬಳ್ಳಿ ನೆಟ್ಟಿದ್ದರು. ಅದು ಎತ್ತರವಾಗಿ ಬೆಳೆದು ನಿಂತಿತ್ತು. ಎರಡು ಜೋಡಿ ಹಕ್ಕಿಗಳು ಬಂದು ಜಾಗ ಪರಿವೀಕ್ಷಣೆ ನಡೆಸಿ ಅಲ್ಲಿ ತಮ್ಮ ಕನಸಿನ ಅರಮನೆ ಕಟ್ಟಲು ನಿರ್ಧರಿಸಿದವು. ಗೂಡು ಕಟ್ಟಲು ಬೇಕಾದ ಸಾಮಾನು ಸರಂಜಾಮುಗಳನ್ನು ಹೆಕ್ಕಿ ತಂದು ಒಂದು ಮನೆ ಮಾಡಿಯೇ ಬಿಟ್ಟವು. ಹಕ್ಕಿಗಳ ನಡೆನುಡಿಯನ್ನು ಸೂಕ್ಷ್ಮವಾಗಿ ನನ್ನ ಸ್ನೇಹಿತ ವೀಕ್ಷಿಸುತ್ತಾ ಕಾಮೆರಾದಲ್ಲಿ ಸೆರೆ ಹಿಡಿಯಲು ಹೋದಾಗ ಹಾರಿ ಹೋದವು. ಬರಲೇ ಇಲ್ಲ. ನನ್ನ ಸ್ನೇಹಿತನಿಗೆ ಆದ ಆತಂಕ ಅಷ್ಟಿಷ್ಟಲ್ಲ. ನನ್ನಿಂದ ಇಂತಹ ತಪ್ಪಾಗಿ ಹೋಯಿತಲ್ಲ, ಎಷ್ಟು ಕಷ್ಟ ಪಟ್ಟು ಮನೆ ಕಟ್ಟಿ ಅವರು ಸಂಸಾರ ಮಾಡಲಿಲ್ಲವಲ್ಲ ಎಂಬ ದುಃಖ ಕಾಡತೊಡಗಿತು. ತನ್ನ ಅಂಗಡಿಗೆ ಹೋದರೂ ಇದೇ ಚಿಂತೆ. ಪುನಃ ಪುನಃ ಮನೆಗೆ ಕರೆ ಮಾಡಿ, ಹಕ್ಕಿಗಳು ಇನ್ನೂ ಬಂದಿಲ್ಲವೇ ಎಂಬ ದುಃಖಭರಿತ ಪ್ರಶ್ನೆ. ಆದರೆ ಹಕ್ಕಿಗಳು ಮಾತ್ರ ಬರಲೇ ಇಲ್ಲ. ನನ್ನ ಸ್ನೇಹಿತ ಪರಿಸರ ಪ್ರೇಮಿ. ರಾತ್ರಿ ಮಲಗುವ ಮುನ್ನ ದೇವರಲ್ಲಿ ಕ್ಷಮೆಯಾಚಿಸುತ್ತಾ, ಪ್ರಾರ್ಥಿಸುತ್ತಾ ಮಲಗಿಕೊಂಡರಂತೆ. ಕನಸಲ್ಲೂ ಅದೇ ಚಿಂತೆ ಕಾಡಿರಬೇಕು. ಬೆಳಕು ಹರಿಯಿತು. ಮತ್ತೆ ಹಕ್ಕಿಗಳ ಅರಮನೆಗಳ ಕಡೆ ಗಮನ ಹರಿಸಿದರು. ಆ ದಿನ ಒಂದು ವಿಸ್ಮಯ ಕಾದಿತ್ತು. ಹಕ್ಕಿ ಬಂದು ಒಂದು ಮೊಟ್ಟೆ ಇಟ್ಟಿತು. ಜೋಡಿ ಹಕ್ಕಿಗಳ ನವಯುಗ ಪ್ರಾರಂಭವಾಗುತ್ತಿರುವದನ್ನು ನೋಡಿ ಮನದಲ್ಲೇ ಆನಂದಭಾಷ್ಪದ ಸುರಿಮಳಿಯಾಗತೊಡಗಿತು. ಆ ಸಂಭ್ರಮದ ಘಳಿಗೆಯನ್ನು ಪದಪುಂಜಗಲ್ಲಿ ಬಣ್ಣಿಸಲು ಸಾಧ್ಯವಿಲ್ಲ.
ನನ್ನ ಸ್ನೇಹಿತ ನನಗೆ ಪ್ರಶ್ನಿಸಿದರು…ಒಂದು ಸಂಸಾರ ಕಟ್ಟಲು ಹಕ್ಕಿಗಳಲ್ಲಿ ಎಷ್ಟು ಶ್ರದ್ಧೆ ಭಕ್ತಿ ಪ್ರೀತಿ ವಾತ್ಸಲ್ಯ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಂಡ ರೀತಿ, ಸಹಿಷ್ಣುತೆ ನಮ್ಮ ಮಾನವ ಸಮಾಜದಲ್ಲಿ ಏಕಿಲ್ಲ? ಇಂದು ಅಧಿಕವಾಗಿ ಸಂಸಾರಗಲ್ಲಿ ಪ್ರೀತಿ ಪ್ರೇಮ, ಶಾಂತಿ, ಹೊಂದಾಣಿಕೆ ಎಂಬ ಪದಗಳು ಹುಡುಕಿದರೂ ಸಿಗದಂತಾಗಿವೆ. ಆ ಮೂಕ ಪಕ್ಷಿಗಳಲ್ಲಿರುವ ತಿಳುವಳಿಕೆ, ಸಾಮರಸ್ಯ ನಮ್ಮಲ್ಲಿ ಏಕೆ ಇಲ್ಲ ?
ನಾವೆಲ್ಲರೂ ಈ ಸಂಸಾರವೆಂಬ ದೋಣಿಯಲ್ಲಿ ಪಯಣಿಸುತ್ತಿದ್ದೇವೆ. ಆದರೆ ಅನ್ಯೋನ್ನವಾಗಿ ಬದುಕಲು ಪ್ರಯತ್ನಿಸುತ್ತಿಲ್ಲವೇಕೆ ? ದೋಣಿ ದಡ ಸೇರುವ ಮುನ್ನವೇ ಮುಳುಗಿ ಹೋಗುವ ಸಾಧ್ಯತೆಗಳೇ ಹೆಚ್ಚಾಗಿ ಹೋಗಿವೆ. ಏಕೆ ?
ನನ್ನ ಸ್ನೇಹಿತನ ಹಲವಾರು ಪ್ರಶ್ನೆಗಳಿಗೆ ಉತ್ತರ ನನ್ನ ಬಳಿ ಇಲ್ಲ. ಆದರೆ ನಾವು “ನಾನು” ಎಂಬ ಅಹಂ ಬಿಟ್ಟು , ಸಂಸಾರದ ಸೋಲು ಗೆಲುವುಗಳಿಗೆ, ಕಷ್ಟ ಸುಖಗಳಿಗೆ ಹೊಂದುಕೊಂಡು ಹೋಗಲು ಸ್ವಲ್ಪ ಪ್ರಯತ್ನ ಪಟ್ಟರೂ, ಎಷ್ಟೋ ಸಂಸಾರಗಳು ಛಿದ್ರವಾಗುವುದರಿಂದ ತಪ್ಪಿಸಬಹುದು. ಅಲ್ಲವೇ ? ಎಲ್ಲರ ಬದುಕಲ್ಲಿ ಹೊಸಬೆಳಕು ಮೂಡಲಿ ಎಂದು ಪ್ರಾರ್ಥಿಸೋಣ ಮತ್ತು ಪ್ರಯತ್ನಿಸೋಣ.
– Zabiulla Khan
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.