ಧಾರವಾಡ(ವಿಶ್ವಕನ್ನಡಿಗ ನ್ಯೂಸ್): ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಏಕಗವಾಕ್ಷಿ ಯೋಜನೆ ಅಡಿಯಲ್ಲಿ ಲೇಖಕರ ಪುಸ್ತಕಗಳನ್ನು ಖರೀದಿಸಿ ಅವುಗಳನ್ನು ಬೆಂಗಳೂರಿನಲ್ಲಿ ನಿಗದಿತ ಸ್ಥಳಕ್ಕೆ ತಲುಪಿಸಲು ಆದೇಶಿಸುತ್ತ ಬಂದಿದ್ದು, ಪ್ರಸ್ತುತ ಕೋವಿಡ್-19 ಅವಾಂತರದಿಂದಾಗಿ ಪುಸ್ತಕ ಸ್ವೀಕೃತಿ ಅವಧಿಯನ್ನು 3 ತಿಂಗಳಕಾಲ ವಿಸ್ತರಿಸಬೇಕೆಂದು ಹಿರಿಯ ಸಾಹಿತಿ, ಭಾಷಾ ವಿಜ್ಞಾನಿ ಡಾ. ಸಂಗಮೇಶ ಸವದತ್ತಿಮಠ ಒತ್ತಾಯಿಸಿದ್ದಾರೆ.
ಕೊರೋನಾ ಭಯ ಆರಂಭವಾಗಿ ಲಾಕ್ಡೌನ್ ಇತ್ಯಾದಿಗಳಿಂದ ಅನೇಕ ಲೇಖಕರಿಗೆ ಈ ವರ್ಷ ಮಾರ್ಚ ಅಂತ್ಯದ ವೇಳೆಗೆ ಗ್ರಂಥಗಳನ್ನು ಪೂರೈಸಲು ಸಾಧ್ಯವಾಗಿಲ್ಲ. ಸದ್ಯ ಬೆಂಗಳೂರಿನಲ್ಲಿ ಕೊರೋನಾ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು ಉತ್ತರ ಕರ್ನಾಟಕದ ದೂರದೂರದ ಪ್ರದೇಶಗಳ ಲೇಖಕರು ಗ್ರಂಥಗಳ ಬಂಡಲ್ಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಹೋಗಿ ಒಪ್ಪಿಸುವುದು ತುಂಬ ತೊಂದರೆದಾಯಕವಾಗಿದೆ. ಕೆಲ ಲೇಖಕರು ಗ್ರಂಥಗಳನ್ನು ಬೆಂಗಳೂರಿನವರೆಗೆ ತೆಗೆದುಕೊಂಡು ಹೋದರೂ ಅಲ್ಲಿನ ಪರಿಸ್ಥಿತಿಯಿಂದಾಗಿ ಅವುಗಳನ್ನು ಒಪ್ಪಿಸಲಾಗದೆ ಮರಳಿ ತೆಗೆದುಕೊಂಡು ಬಂದ ಉದಾಹರಣೆಗಳಿವೆ ಎಂದವರು ಹೇಳಿದ್ದಾರೆ.
ಗ್ರ್ರಂಥಾಲಯ ಇಲಾಖೆಯನ್ನೂ ನೋಡಿಕೊಳ್ಳುತ್ತಿರುವ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಏಕಗವಾಕ್ಷಿ ಯೋಜನೆಯಡಿಯಲ್ಲಿ ಖರೀದಿಸಿರುವ ಗ್ರಂಥಗಳ ಸ್ವೀಕೃತಿಯನ್ನು ಕನಿಷ್ಠ 2 ರಿಂದ 3 ತಿಂಗಳು ಅವಧಿ ವಿಸ್ತರಿಸಬೇಕು ಅಥವಾ ರಾಜ್ಯದ ಪ್ರತಿಯೊಂದೂ ಜಿಲ್ಲಾ ಗ್ರಂಥಾಲಯಗಳಲ್ಲಿ ಸ್ವೀಕರಿಸುವ ವ್ಯವಸ್ಥೆ ಮಾಡಿ ಲೇಖಕರಿಗೆ ಅನುಕೂಲಮಾಡಿಕೊಡಬೇಕೆಂದು ಡಾ. ಸವದತ್ತಿಮಠ ಆಗ್ರಹಪಡಿಸಿದ್ದಾರೆ.