(www.vknews.in)ಎಸ್ಎಸ್ಎಲ್ಸಿ ಫಲಿತಾಂಶದ ಗುರಿ ಪ್ರೌಢಶಾಲೆಯಿಂದಲೇ ಆರಂಭವಾಗಬೇಕೇ?
ರಶ್ಮಿ ಮಹೇಶ್ ಮೇಡಂ ಅವರ “SSLC 60+ ಹೇಗೆ ಮಾಡುವುದು?” – VTU ಬೆಳಗಾವಿಯಲ್ಲಿ ನಡೆದ ಶಿಕ್ಷಕರ ಕಾರ್ಯಾಗಾರದ ವಿಚಾರ ವಿಮರ್ಶೆ
VTU ಬೆಳಗಾವಿಯಲ್ಲಿ ರಶ್ಮಿ ಮಹೇಶ್ ಮೇಡಂ ಅವರು ಶಿಕ್ಷಕರಿಗೆ ನೀಡಿದ “SSLC 60+ ಹೇಗೆ ಮಾಡುವುದು?” ಎಂಬ ಮಾರ್ಗದರ್ಶನವು ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ಸ್ವಾಗತಾರ್ಹ ಪ್ರಯತ್ನ. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಮಕ್ಕಳ ಸಾಧನೆಗಾಗಿ ಶಿಕ್ಷಕರನ್ನು ಸಜ್ಜುಗೊಳಿಸುವ ಅವರ ಕಾಳಜಿ ಅಭಿನಂದನೀಯ. ಆದರೆ ಫಲಿತಾಂಶದ ಜವಾಬ್ದಾರಿ ಕೇವಲ ಪ್ರೌಢಶಾಲಾ ಶಿಕ್ಷಕರಿಗೆ ಮಾತ್ರ ಸೀಮಿತವಾಗಬೇಕೇ ಎಂಬ ಪ್ರಶ್ನೆಯೂ ಇಲ್ಲಿ ಮುಖ್ಯವಾಗುತ್ತದೆ.
ನಲಿಕಲಿ ವ್ಯವಸ್ಥೆಯಿಂದ ಮಕ್ಕಳು ಬುನಾದಿ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬ ಅಭಿಪ್ರಾಯವನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಇದೇ ವ್ಯವಸ್ಥೆಯಲ್ಲಿ ಕಲಿತು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮಕ್ಕಳ ಉದಾಹರಣೆಗಳೂ ಇವೆ. ಯಾವುದೇ ಶಿಕ್ಷಣ ಪದ್ಧತಿಯ ಯಶಸ್ಸು ಅದರ ಅನುಷ್ಠಾನ, ಶಿಕ್ಷಕರ ಬದ್ಧತೆ, ಬೋಧನಾ ಗುಣಮಟ್ಟ ಮತ್ತು ಮಕ್ಕಳಿಗೆ ದೊರೆಯುವ ವೈಯಕ್ತಿಕ ಗಮನವನ್ನು ಅವಲಂಬಿಸಿರುತ್ತದೆ. ನ್ಯೂನತೆಗಳಿದ್ದರೆ ಸರಿಪಡಿಸಬೇಕೇ ಹೊರತು ಇಡೀ ವ್ಯವಸ್ಥೆಯನ್ನೇ ದೂಷಿಸುವುದು ಸೂಕ್ತವಲ್ಲ.
ಇಂದಿನ ಸರಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಲು ಪ್ರೌಢಶಾಲಾ ಶಿಕ್ಷಕರ ಪರಿಶ್ರಮ ಮತ್ತು ಬದ್ಧತೆಯೂ ಪ್ರಮುಖ ಕಾರಣವಾಗಿದೆ. ಹೀಗಿರುವಾಗ ಅವರ ಮೇಲೆಯೇ ಪುನಃ ಪುನಃ ಒತ್ತಡ ಹೇರುವ ಬದಲು ಒಂದನೇ ತರಗತಿಯಿಂದ ಏಳನೇ ತರಗತಿಯವರೆಗಿನ ಎಲ್ಲಾ ಶಿಕ್ಷಕರಿಗೂ ಮಕ್ಕಳ ಕಲಿಕಾ ಪ್ರಗತಿಯ ಸ್ಪಷ್ಟ ಗುರಿ ಮತ್ತು ಹೊಣೆಗಾರಿಕೆ ನಿಗದಿಪಡಿಸಬೇಕು. ಮಗುವಿನ ಕಲಿಕೆಯ ಅಡಿಪಾಯ ಪ್ರಾಥಮಿಕ ಹಂತದಲ್ಲಿಯೇ ಗಟ್ಟಿಯಾಗದಿದ್ದರೆ ಅದರ ಪರಿಣಾಮವನ್ನು ಪ್ರೌಢಶಾಲಾ ಶಿಕ್ಷಕರು ಎದುರಿಸಬೇಕಾಗುತ್ತದೆ.
ಪ್ರಾಥಮಿಕ ಶಾಲೆಗಳಲ್ಲಿ ಎಷ್ಟು ಮಕ್ಕಳು FLN (ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ) ಸಾಮರ್ಥ್ಯ ಹೊಂದಿದ್ದಾರೆ, ಎಷ್ಟು ಮಕ್ಕಳು ಹಿಂದುಳಿದಿದ್ದಾರೆ, ಅವರ ಚೇತರಿಕೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ನಿಖರ ಅಂಕಿಅಂಶಗಳನ್ನು ಸಂಗ್ರಹಿಸಬೇಕು. ಪ್ರಾಥಮಿಕ ಶಿಕ್ಷಕರಿಗೆ ಮಾತ್ರವಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಮತ್ತು ಉಪನಿರ್ದೇಶಕರಿಗೂ (DDPI) ಶಾಲಾವಾರು FLN ಪ್ರಗತಿಯ ಗುರಿ ಹಾಗೂ ಉತ್ತರದಾಯಿತ್ವ ನೀಡಬೇಕು. ಪ್ರೌಢಶಾಲೆಗೆ ದಾಖಲಾಗುವ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಪರಿಶೀಲಿಸಬೇಕು. ಶೇ.5% ಕ್ಕಿಂತ ಹೆಚ್ಚು ಮಕ್ಕಳು ನಿರೀಕ್ಷಿತ FLN ಮಟ್ಟ ತಲುಪದಿದ್ದರೆ, ಅವರು ಬಂದಿರುವ ಪ್ರಾಥಮಿಕ ಶಾಲೆಯ ಕಲಿಕಾ ಪ್ರಗತಿಯನ್ನು ಪರಿಶೀಲಿಸುವ ವ್ಯವಸ್ಥೆ ಇರಬೇಕು. ಅಗತ್ಯ ಪರಿಶೀಲನೆ ಮತ್ತು ಮಾರ್ಗದರ್ಶನದ ನಂತರ ಸಂಬಂಧಪಟ್ಟ ಶಿಕ್ಷಕರ ಕರ್ತವ್ಯದ ಹೊಣೆಗಾರಿಕೆಯನ್ನು ಸೇವಾ ದಾಖಲೆಯಲ್ಲಿ ದಾಖಲಿಸುವ ಪ್ರಸ್ತಾಪವನ್ನೂ ಪರಿಗಣಿಸಬಹುದು. ಇದು ಶಿಕ್ಷಕರನ್ನು ದಂಡಿಸುವ ಉದ್ದೇಶವಲ್ಲ; ಮಕ್ಕಳ ಕಲಿಕೆಯ ಗುಣಮಟ್ಟವನ್ನು ಖಚಿತಪಡಿಸುವ ಪ್ರಯತ್ನವಾಗಬೇಕು.
ಕೇವಲ ದ್ವಿಭಾಷಾ ಬೋಧನೆಯಿಂದ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸಾಧ್ಯವಿಲ್ಲ. ಮಕ್ಕಳ ಓದು, ಬರಹ, ಅರ್ಥಗ್ರಹಣ ಮತ್ತು ಗಣಿತದ ಮೂಲ ಸಾಮರ್ಥ್ಯ ಗಟ್ಟಿಯಾಗಿರಬೇಕು. ಮಕ್ಕಳ ಕಲಿಕಾ ಮಟ್ಟವನ್ನು ಗುರುತಿಸಿ, ಅದಕ್ಕೆ ತಕ್ಕ ಬೋಧನೆ ನೀಡದಿದ್ದರೆ ದ್ವಿಭಾಷಾ ಬೋಧನೆಯ ಪ್ರಯೋಜನವೂ ಸೀಮಿತವಾಗಬಹುದು
ಸರಕಾರ ನಿರೀಕ್ಷೆಯಿಂದ ಪ್ರಾರಂಭಿಸಿರುವ ಎಲ್ಕೆಜಿ–ಯುಕೆಜಿ ತರಗತಿಗಳು ಉತ್ತಮ ಪ್ರಯತ್ನ. ಆದರೆ ಯುಕೆಜಿ ಮುಗಿಸಿದ ಮಕ್ಕಳು ಅದೇ ಸರಕಾರಿ ಶಾಲೆಯ ಒಂದನೇ ತರಗತಿಗೆ ಮುಂದುವರಿಯುತ್ತಿದ್ದಾರೆಯೇ ಎಂಬುದನ್ನು ಶಿಕ್ಷಣ ಇಲಾಖೆ ಪರಿಶೀಲಿಸಬೇಕು. ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದರೆ, ಅದರ ಕಾರಣಗಳೇನು ಎಂಬುದನ್ನು ಪೋಷಕರ ಅಭಿಪ್ರಾಯ ಮತ್ತು ನಿಖರ ಅಂಕಿಅಂಶಗಳ ಮೂಲಕ ವಿಶ್ಲೇಷಿಸಬೇಕು. ಸರಕಾರಿ ಶಾಲೆಗಳ ಬೋಧನಾ ಗುಣಮಟ್ಟ, ಇಂಗ್ಲಿಷ್ ಶಿಕ್ಷಣ, ಕಲಿಕಾ ವಾತಾವರಣ ಹಾಗೂ ಶಿಕ್ಷಕರ ಬೋಧನಾ ವಿಧಾನದ ಬಗ್ಗೆ ಪೋಷಕರ ನಿರೀಕ್ಷೆಗಳೇನು ಎಂಬುದನ್ನು ಅರಿಯಬೇಕು. ಎಲ್ಕೆಜಿ–ಯುಕೆಜಿ ಪ್ರಾರಂಭಿಸುವುದಷ್ಟೇ ಯಶಸ್ಸಲ್ಲ; ಅಲ್ಲಿಗೆ ಬಂದ ಮಗುವನ್ನು ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಅದೇ ಶಾಲೆಯಲ್ಲಿ ಉಳಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡುವುದೇ ನಿಜವಾದ ಸಾಧನೆ.
ಎಸ್ಎಸ್ಎಲ್ಸಿ ಫಲಿತಾಂಶವನ್ನು ಶೇ.60ರಿಂದ 70ಕ್ಕೆ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಸ್ವಾಗತಾರ್ಹ. ಆದರೆ ಹತ್ತನೇ ತರಗತಿಯ ಫಲಿತಾಂಶವು ಹತ್ತನೇ ತರಗತಿಯಲ್ಲಿ ಮಾತ್ರ ನಿರ್ಮಾಣವಾಗುವುದಿಲ್ಲ. ಅದು ಮಗುವಿನ ಮೊದಲ ಅಕ್ಷರ ಕಲಿಕೆಯಿಂದಲೇ ರೂಪುಗೊಳ್ಳುತ್ತದೆ. 9535623904 ಆದ್ದರಿಂದ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಕಲಿಕಾ ಗುರಿ, FLN ಸಾಧನೆ, ಶಿಕ್ಷಕರ ಹೊಣೆಗಾರಿಕೆ, ಶಿಕ್ಷಣಾಧಿಕಾರಿಗಳ ಮೇಲ್ವಿಚಾರಣೆ ಮತ್ತು ಪೋಷಕರ ವಿಶ್ವಾಸಕ್ಕೆ ಸಮಾನ ಆದ್ಯತೆ ನೀಡಬೇಕು.
ಸರಕಾರಿ ಶಾಲೆಗೆ ಮಗುವನ್ನು ಕರೆತರುವುದು ಸಾಧನೆ; ಆ ಮಗುವನ್ನು ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಅದೇ ಶಾಲೆಯಲ್ಲಿ ಉಳಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡುವುದು ನಿಜವಾದ ಯಶಸ್ಸು.
100% ಫಲಿತಾಂಶದ ಗುರಿ ಪ್ರೌಢಶಾಲೆಯಿಂದ ಆರಂಭವಾಗಬಾರದು; ಮಗುವಿನ ಮೊದಲ ಅಕ್ಷರ ಕಲಿಕೆಯಿಂದಲೇ ಆರಂಭವಾಗಬೇಕು.
ಇದೇ ನಿಜವಾದ ಶಿಕ್ಷಣ ಸುಧಾರಣೆ.
ಮೊಯ್ದಿನ್ ಕುಟ್ಟಿ ರಾಜ್ಯ ಸಂಚಾಲಕರು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ.) 9743734020 7892531098
[email protected]
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.