(www.vknews.com) : ಇಸ್ಲಾಮಿನ ಪಂಚಸ್ತಂಭಗಳ ಪೈಕಿ ನಾಲ್ಕನೆಯದಾಗಿದೆ ವ್ರತಾನುಷ್ಠಾನ. ದಾಸ ಮತ್ತು ಒಡೆಯನಾದ ಅಲ್ಲಾಹನ ಮಧ್ಯ ರಹಸ್ಯವಾಗಿ ನಡೆಯುವ ಈ ಉಪವಾಸದ ಮೂಲ ಉದ್ದೇಶ ದಾಸನನ್ನು ತಕ್ವಾ (ಭಯ-ಭಕ್ತಿ) ತೀರಕ್ಕೆ ಕರೆದೊಯ್ಯುವುದಾಗಿದೆ. ತಕ್ವಾದಲ್ಲಿ ಮಿಂದ ವ್ಯಕ್ತಿ ತಾಪಗಳಿಂದ ಮುಕ್ತನಾಗಿ ಪರಿಶುದ್ಧನಾಗುತ್ತಾನೆ. ಒಳಿತನ್ನೇ ನಡೆ-ನುಡಿಗಳಲ್ಲಿ ಅಳವಡಿಸಿಕೊಂಡು ಉತ್ತಮ ಮಾದರಿ ಬದುಕು ಕಟ್ಟುತ್ತಾನೆ. ಮೈ,ಮನಗಳು ಶುದ್ಧೀಕರಣಗೊಳ್ಳುತ್ತದೆ. ಮನಸ್ಸು ಹೃದಯದ ಶುದ್ಧೀಕರಣವಾದರೆ ಮನುಷ್ಯನ ಅಂಗಾಂಗಗಳು ಶುದ್ದವಾಗುತ್ತದೆ. ಅಂದರೆ ತನ್ನ ಯಾವುದೇ ಅಂಗಗಳಿಂದ ಆತ ಕೆಡುಕು,ದುಷ್ಕೃತ್ಯಗಳನ್ನು ಮಾಡಲಾರ. ಮದ್ಯಪಾನ ಕಳ್ಳತನ ಕೊಲೆ ಸುಲಿಗೆ ವಂಚನೆ ಪರನಿಂದನೆ ಜಗಳ ಹೀಗೆ ಯಾವುದೇ ಪೈಶಾಚಿಕ ಕೃತ್ಯಗಳತ್ತ ಆತ ಸುಳಿಯಲಾರ. ಸರ್ವ ಶಾರೀರಿಕ ಸಾಮಾಜಿಕ ಕೆಡುಕುಗಳಿಂದ ದೂರ ಸರಿದು ಸತ್ಯವಂತನಾಗಿ ನಿಷ್ಕಳಂಕವಾಗಿ ಸ್ವಚ್ಚತೆಯಿಂದ ಬದುಕು ಕಟ್ಟುತ್ತಾನೆ.ಪ್ರೀತಿ ನ್ಯಾಯ, ನೀತಿ, ಭಕ್ತಿ ಭಯ ದಯೆ,ಪರೋಪಕಾರ ಮುಂತಾದ ಎಲ್ಲಾ ಒಳಿತುಗಳು ಅವನ ಮೈಗೂಡುತ್ತದೆ. ಏಕೆಂದರೆ ಆತ ಉಪವಾಸಿಗ ಅದುವೇ ತಕ್ವಾದ ರಹದಾರಿ. ಅದನ್ನೇ ಪವಿತ್ರ ಕುರ್ ಆನ್ ಹೇಳಿದ್ದು ಓ ಸತ್ಯ ವಿಶ್ವಾಸಿಗಳೇ ನಿಮ್ಮ ಪೂರ್ವಿಕರ ಮೇಲೆ ಉಪವಾಸ ಕಡ್ಡಾಯಗೊಳಿಸೆದಂತೆ ನಿಮ್ಮ ಮೇಲೂ ಕಡ್ಡಾಯ ಗೊಳಿಸಲಾಗಿದೆ. ತನ್ಮೂಲಕ ನೀವು (ತಕ್ವಾ) ಭಯ-ಭಕ್ತಿ ಉಳ್ಳವರಾಗಲಿಕ್ಕಾಗಿ.
ಮನುಷ್ಯನ ಉನ್ನತಿಯನ್ನು ತಡೆಯುವ ಅನೇಕ ವಿಷಯಗಳಿವೆ. ನಡೆ, ನುಡಿ, ಚಿಂತನೆಗಳಲ್ಲಿ ಸಂಭವಿಸುವ ಕೆಡುಕುಗಳು ಅವುಗಳಲ್ಲಿ ಬಹಳ ಮುಖ್ಯವಾದವುಗಳು. ಆದರೆ, ವ್ರತ ಅವುಗಳಿಂದ ಮುಕ್ತಿ ನೀಡಿ, ಮನುಷ್ಯನನ್ನು ಔನ್ನತ್ಯಕ್ಕೇರಿಸುತ್ತದೆ. ವ್ರತಕಾಲವು ದುಷ್ಟ ಚಿಂತೆ, ದುಷ್ಟ ಕೆಲಸಕಾರ್ಯಗಳಿಂದ ತಡೆದು ನಿಲ್ಲಿಸಿ, ಮನಸ್ಸು ಹಾಗೂ ಶರೀರವನ್ನು ಸ್ಪಟಿಕ ಶುದ್ಧಗೊಳಿಸಿ, ಸಂಶುದ್ದ ಜೀವನ ನಡೆಸಲು ಮನುಷ್ಯನನ್ನು ಪ್ರಾಪ್ತನನ್ನಾಗಿಸುವ ಸಂದೇಶ ಒಳಗೊಂಡಿದೆ
ಪವಿತ್ರ ಇಸ್ಲಾಮಿನ ಪ್ರತಿಫಲಾರ್ಹ ಉಪವಾಸಿಗನಿಗೆ ಎರಡು ಸಂತೋಷವಿದೆ ಒಂದು ಉಪವಾಸ ತೊರೆಯುವಾಗ ಮತ್ತೊಂದು ಸಂತೋಷ ಅಲ್ಲಾಹನನ್ನು ಕಾಣುವಾಗ ಆಗಿದೆ, ಉಪವಾಸಿಗನ ಬಾಯಿ ವಾಸನೆ ಅಲ್ಲಾಹನ ಬಳಿ ಕಸ್ತೂರಿ ಸುಗಂಧಕ್ಕಿಂತಲೂ ವಿಶಿಷ್ಟವಾಗಿದೆ. (ಮುಸ್ಲಿಮ್)
“ಸ್ವರ್ಗಕ್ಕೆ ರಯ್ಯಾನ್ ಎಂದು ಹೆಸರಿರುವ ಒಂದು ಬಾಗಿಲಿದೆ. ಅಂತ್ಯದಿನದಲ್ಲಿ ಉಪವಾಸಿಗರು ಆ ಬಾಗಿಲ ಮೂಲಕ ಪ್ರವೇಶಿಸುವವರು. ಅವರಲ್ಲದೆ ಬೇರೆ ಯಾರೂ ಆ ಬಾಗಿಲ ಮೂಲಕ ಪ್ರವೇಶಿಸಲಾರರು. ಉಪವಾಸಿಗರು ಪ್ರವೇಶಿಸಿದ ಬಳಿಕ ಅದನ್ನು ಮುಚ್ಚಲಾಗುತ್ತದೆ. ಮತ್ತೆ ಯಾರೂ ಆ ಬಾಗಿಲ ಮೂಲಕ ಪ್ರವೇಶಿಸುವುದಿಲ್ಲ..” (ಬುಖಾರಿ,ಮುಸ್ಲಿಮ್,)
ಅಬೂಉಮಾಮ (ರ) ಹೇಳುತ್ತಾರೆ.. ಒಂದು ದಿನ ನಾನು ಅಲ್ಲಾಹನ ರಸೂಲರೊಂದಿಗೆ ನನಗೊಂದು ಸತ್ಕರ್ಮವನ್ನು ಹೇಳಿಕೊಡುವಂತೆ ಕೇಳಿದೆ. ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು. “ಉಪವಾಸ ಮಾಡು, ಅದರಿಂದ ಲಭ್ಯವಾಗುವ ಪ್ರತಿಫಲಕ್ಕೆ ಲೆಕ್ಕವಿಲ್ಲ. ನಾನು ಮತ್ತೆ ಕೇಳಿದೆ. ಅಲ್ಲಾಹನ ರಸೂಲರೇ, (ಬೇರೊಂದು) ಸತ್ಕರ್ಮವೊಂದನ್ನು ನನಗೆ ತಿಳಿಸಿಕೊಡಿರಿ, ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು.”ನೀನು ಉಪವಾಸ ಆಚರಿಸು. ಅದಕ್ಕೆ ಸಮಾನವಾದುದು ಇಲ್ಲ..” (ನಸಾಈ)
. “ವಿಶ್ವಾಸದಿಂದ ಹಾಗೂ ಪ್ರತಿಫಲದ ಅಪೇಕ್ಷೆಯೊಂದಿಗೆ ರಮಳಾನಿನಲ್ಲಿ ಒಬ್ಬ ವ್ರತಾಚರಿಸಿದರೆ ಅವನ ಈ ಹಿಂದಿನ ಪಾಪಗಳೆಲ್ಲವೂ ಮನ್ನಿಸಲ್ಪಡುವುದು..” (ಬುಖಾರಿ,ಮುಸ್ಲಿಮ್)
ಇನ್ನು ಐಹಿಕವಾಗಿಯೂ ಉಪವಾಸ ವ್ರತದ ಬೆನಿಫಿಟ್ ಅಷ್ಟಿಷ್ಟಲ್ಲ.ವೈದ್ಯಲೋಕವು ಉಪವಾಸದ ಮಹತ್ವದ ಬಗ್ಗೆ ಒತ್ತಿ ಹೇಳಿದೆ. ಆಹಾರ ನಿಯಂತ್ರಣದ ಮೂಲಕ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ. ಪಂಚೇಂದ್ರಿಯಗಳಿಗೆ ವಿಶ್ರಾಂತಿಯ ಮೂಲಕ ಅವುಗಳಿಗೆ ಪುನಶ್ಚೇತನ ಶಕ್ತಿಯನ್ನು ನೀಡುತ್ತದೆ. ವರ್ಷವಿಡೀ ತಿಂದು ತೇಗುವ ಮನುಷ್ಯ ಅದಕ್ಕೆ ವರ್ಷಕ್ಕೂಂದು ಬಾರಿ ಬ್ರೇಕ್ ನೀಡುವುದು ಅನಿವಾರ್ಯ. ಮಿತ ಆಹಾರ ಸೇವನೆ ಒಂದಿಷ್ಟು ದಿನಗಳು ಹಸಿದಿರುವುದು ಆರೋಗ್ಯವನ್ನು ಹೆಚ್ಚಿಸುತ್ತದೆ ಎಂಬುವುದು ಗಮನಾರ್ಹ ವಿಷಯವಾದರೆ ಅಂತದರಲ್ಲಿ ಒಂದು ತಿಂಗಳು ಹಗಲು ಪೂರ್ತಿ ಹಸಿದುಕೊಂಡು ವ್ರತ ಆಚರಿಸುವುದು ಅದೆಷ್ಟು ಶ್ರೇಷ್ಠದಾಯಕ ಹೇಳಿ ?
ಇನ್ನೊಂದು ಕಡೆ ವರ್ಷವಿಡೀ ಹಸಿದಿರುವ ಬಡವರ ವೇದನೆಯನ್ನು ಶ್ರೀಮಂತನೂ ಉಪವಾಸದಿಂದ ಕಲಿಯಳು ಸಹಕಾರಿಯಾಗುತ್ತದೆ, ಒಂದರ್ಥದಲ್ಲಿ ಬಡವರಿಗೆ ನೆರವಾಗುವ ಪ್ರಾಯೋಗಿಕ ತರಬೇತನ್ನು ಉಪವಾಸ ನೀಡುತ್ತದೆ.
ಅಷ್ಟೇ ಯಾಕೆ ಆರ್ಥಿಕ ಸಮತೋಲನವನ್ನೇ ತೆಗೆದುಕೊಳ್ಳಿ ಖಂಡಿತಾ ಉಪವಾಸದ ಬೆನಿಫಿಟ್ ಅಲ್ಲಿಯೂ ಎತ್ತಿ ತೋರಿಸುತ್ತದೆ. ಜಗತ್ತು ಆರ್ಥಿಕ ಹಿಂಜರಿತದಿಂದ ತತ್ತರಿಸುವುದರಿಂದ ಹಿಂದೆ ಹತ್ತು ಹಲವು ಕಾರಣಗಳಿದ್ದರೆ ಮಾನವನ ಅಮಿತ ಆಹಾರ,ಭೂರಿ ಭೋಜನ,ವಿಲಾಸಿ ಬದುಕು,ದುಂದುವೆಚ್ಚಗಳು ಆರ್ಥಿಕ ಕುಸಿತಕ್ಕೆ ಕಾರಣ ಇಲ್ಲದಿಲ್ಲ.ಪ್ರತಿಯೊಬ್ಬ ಪ್ರಜೆಯೂ ಅಂಥದೊಂದು ದುಂದುವೆಚ್ಚಗಳಿಗೆ ಕಡಿವಾಣ ಹಾಕಿದರೆ ಖಂಡಿತಾ ಆರ್ಥಿಕ ಮುಗ್ಗಟ್ಟಿನಿಂದ ಕೊಂಚ ಮಟ್ಟಿಗೆ ಪಾರಾಗಬಹುದು. ಮನುಷ್ಯನಿಗೆ ಅತ್ಯಧಿಕ ಖರ್ಚು ಬರುವುದು ದೈನಂದಿನ ಆಹಾರಕ್ಕಾಗಿ ಅಂಥ ಆಹಾರಕ್ಕೂ ಒಂದು ನಿಯಂತ್ರಣ ಕೊಟ್ಟರೆ ಖಂಡಿತ ಆರ್ಥಿಕ ಉಳಿತಾಯ ಸಾಧ್ಯ.
ಅದರಲ್ಲೂ ದಿನಪೂರ್ತಿ ಒಂದು ತಿಂಗಳು ಹಗಲಿಡೀ ಆಹಾರ ವರ್ಜಿಸಿ ನಿಯಂತ್ರಣ ಕೊಟ್ಟರೆ ಖಂಡಿತಾ ದೇಶದ ಆರ್ಥಿಕ ಸಮತೋಲನಕ್ಕೆ ಅದೊಂದು ರಹದಾರಿಯಾಗುತ್ತದೆ. ಹೀಗೆ ಯಾವ ಯಾವ ಮಜಲನ್ನು ಪರಿಶೀಲಿಸಿದರೂ ಅಲ್ಲೆಲ್ಲ ಉಪವಾಸದ ಉಪಕಾರ ಉಜ್ಜಲವಾಗಿ ದರ್ಶನವಾಗುತ್ತದೆ.
ಅಷ್ಟಕ್ಕೂ ವಿಶ್ವಾಸಿಯ ಮಟ್ಟಿಗೆ ಐಹಿಕ ಲಾಭಕ್ಕಿಂತ ಪಾರತ್ರಿಕ ಲಾಭವೇ ಮುಖ್ಯವಾಗಿರುತ್ತದೆ.ಉಪವಾಸಿಗನಿಗೆ ಸಿಗುವ ಪಾರತ್ರಿಕ ಪ್ರತಿಫಲ ಅಲ್ಲಾಹನ ಲಿಖಾ ದರ್ಶನವೆಂದು ಪ್ರವಾದಿ (ಸ ಅ) ಹೇಳಿದ್ದು, ಪ್ರತಿಯೊಬ್ಬ ವಿಶ್ವಾಸಿ ಅಂಥದೊಂದು ದರ್ಶನವನ್ನು ಬಯಸಿರುತ್ತಾನೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಉಪವಾಸವೆಂದರೆ ಕೇವಲ ಅನ್ನ ಪಾನೀಯಗಳ ವರ್ಜನೆ ಮಾತ್ರವಲ್ಲ ಅನ್ನ ಆಹಾರಗಳಿಂದ ದೂರ ಉಳಿದ ಮಾತ್ರಕ್ಕೆ ಇಸ್ಲಾಮಿನಲ್ಲಿ ಉಪವಾಸ ಆಗುವುದಿಲ್ಲ. ಪ್ರವಾದಿ (ಸ ಅ) ಹೇಳಿದ್ದು ಕೇಳಿ, ಒಬ್ಬ ವ್ಯಕ್ತಿ ಹೀನ ಮಾತುಗಳನ್ನು ದುಷ್ಕೃತ್ಯಗಳನ್ನು ಉಪಕ್ಷಿಸದೇ ಕೇವಲ ಅನ್ನ ಪಾನೀಯಗಳನ್ನು ವರ್ಜಿಸುವುದರಿಂದ ಅಲ್ಲಾಹನಿಗೆ ಯಾವುದೇ ತಾತ್ಪರ್ಯವಿಲ್ಲ. ಅಂದರೆ ನಾವೆಲ್ಲ ತಿಳಿಯಬೇಕಾದದ್ದು ಅನ್ನ ಪಾನೀಯಗಳ ಜೊತೆಗೆ ಸರ್ವ ಕೆಡುಕಿಗೂ ಉಪವಾಸಿಗ ವಿದಾಯ ಹೇಳಬೇಕು.ಆಗ ಉಪವಾಸಕ್ಕೆ ಸರಿಯಾದ ಪ್ರತಿಫಲ ದೊರಕುವುದು.
ಪ್ರಸ್ಥುತ ಸನ್ನಿವೇಶದಲ್ಲಿ ಪ್ರಪಂಚಕ್ಕೆ ಹಸಿವಿನ ನೋವು ಎದುರಾದೀತೋ ಎಂಬ ಹೆದರಿಕೆ ಮುಂದಿದೆ ಆದರೆ ಮುಸಲ್ಮಾನ ಹಸಿವನ್ನು ಅರಿತವನು ಅಲ್ಲಾಹನ ತೃಪ್ತಿ ಪಡೆದವನು ಜಗತ್ತೇ ಹಸಿವಿಗೆ ಹೆದರಿದೆ, ಅ ಹಸಿವನ್ನೇ ಇಸ್ಲಾಂ ಆರಾಧನಾ ಕರ್ಮವನ್ನಾಗಿಸಿದೆ ಎಂಬುದು ಗಮನಾರ್ಹ ವಿಷಯವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Masha Allah, good Article. Best Wished From: ISMAIL KATIPALLA Dammam, Saudi Arabia.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.