ಬೆಂಗಳೂರು (www.vknews.in): ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಜೈಲಿಗೆ ಹೋಗುವುದನ್ನು ಅಂದಿನ ಕಾಂಗ್ರೆಸ್ ನಾಯಕರೇ ತಡೆದಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಕಥನ ‘Belonging: A Journey of Love’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ತಾನು ಕಾನೂನು ಸಚಿವನಾಗಿದ್ದೆ ಎಂದು ನೆನಪಿಸಿಕೊಂಡರು.
ಆ ಸಂದರ್ಭದಲ್ಲಿ ಅಮಿತ್ ಶಾ ಗಡಿಪಾರು ಆಗಿದ್ದರು. ಮತ್ತೊಂದು ರಾಜ್ಯದಲ್ಲಿ ಅವರ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಲು ನ್ಯಾಯಾಲಯ ಆದೇಶಿಸಿತ್ತು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಕೂಡ ಜೈಲಿಗೆ ಹೋಗಿ ಗಡಿಪಾರು ಆಗಬೇಕಾದ ಪರಿಸ್ಥಿತಿ ಇತ್ತು. ಆದರೆ, ಅಂದು ಕಾಂಗ್ರೆಸ್ ನಾಯಕರೇ ಅದನ್ನು ತಡೆದರು ಎಂದು ಮೊಯ್ಲಿ ಆರೋಪಿಸಿದರು.
“ನಾವು ಅಂದು ಮಾಡಿದ ಒಂದು ತಪ್ಪಿನಿಂದಾಗಿ ಈಗ ಅನುಭವಿಸುವ ಪರಿಸ್ಥಿತಿ ಬಂದಿದೆ. ರಾಜಕಾರಣದಲ್ಲಿ ಎಂದೂ ಶತ್ರುಗಳನ್ನು ಬಿಡಬಾರದು ಎನ್ನುವುದಕ್ಕೆ ಇದೊಂದು ಪಾಠವಾಗಿದೆ. ಈ ಘಟನೆ ದುರಂತ ಎಂದು ನಾನು ಪದೇ ಪದೇ ಹೇಳುತ್ತೇನೆ. ಆದರೆ, ನರೇಂದ್ರ ಮೋದಿ ಜೈಲಿಗೆ ಹೋಗುವುದನ್ನು ತಪ್ಪಿಸುವಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರ ಇರಲಿಲ್ಲ. ಇದನ್ನು ಕೆಲವು ಕಾಂಗ್ರೆಸ್ಸಿಗರೇ ಮಾಡಿದರು” ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುವ ನಿರ್ಧಾರಗಳನ್ನು ಅಧಿಕಾರಕ್ಕೆ ಬರುವ ಸರ್ಕಾರ ಯಾವುದೇ ಅಡೆತಡೆಗಳಿಲ್ಲದೆ ಜಾರಿಗೆ ತರಬೇಕು. ಆಗ ಮಾತ್ರ ಪಕ್ಷ ಸದೃಢವಾಗಿ ಉಳಿಯಲು ಹಾಗೂ ಜನರಲ್ಲಿ ವಿಶ್ವಾಸ ಮೂಡಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಸೋನಿಯಾ ಗಾಂಧಿ ಅವರ ಕೊಡುಗೆಯನ್ನು ಶ್ಲಾಘಿಸಿದ ಮೊಯ್ಲಿ, ಅವರನ್ನು ಝಾನ್ಸಿ ರಾಣಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಅವರಂತೆ ಮಾದರಿ ನಾಯಕಿ ಎಂದು ಬಣ್ಣಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.