ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ದ.ಕ. ಜಿಲ್ಲೆಯ ವಿದ್ಯಾವಂತ ಜನತೆ ಅದರಲ್ಲೂ ಉನ್ನತ ತಾಂತ್ರಿಕ ಶಿಕ್ಷಣ ಪಡೆದ ಸ್ನಾತಕೋತ್ತರ ಪದವೀಧರರು ಕೂಡಾ ಸದಾ ಮಹತ್ವಾಕಾಂಕ್ಷೆಯನ್ನಿಟ್ಟು ಉದ್ಯೋಗ ಗಿಟ್ಟಿಸಲು ಜಾತಕ ಪಕ್ಷಿಯಂತೆ ಕಾಯುವ ಜಿಲ್ಲೆಯ ಏಕೈಕ ಪ್ರತಿಷ್ಟಿತ ಸಂಸ್ಥೆ ಎಮ್.ಆರ್.ಪಿ.ಎಲ್. ಮಾತ್ರವೆಂಬುವುದು ನಿರ್ವಿವಾದವಾಗಿದ್ದು, ಇದೀಗ ಇಲ್ಲಿನ ಉದ್ಯೋಗ ನೇಮಕಾತಿಯಲ್ಲಿಯೂ ಸ್ಥಳೀಯರಿಗೆ, ತುಳುನಾಡಿನ ಜನತೆಗೆ ಮತ್ತು ಕನ್ನಡಿಗರಿಗೆ ಅವರ ನ್ಯಾಯಯುತ ಅವಕಾಶ ನೀಡದೆ ಹೆಚ್ಚಿನ ಎಲ್ಲವುಗಳಿಗೂ ಉತ್ತರ ಭಾರತವನ್ನು ತುಂಬಿಸಿರುವ ಪಕ್ಷಪಾತಿ ಧೋರಣೆಯನ್ನು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಖಂಡಿಸಿದೆ.
2019 ಸೆಪ್ಟಂಬರ್ ನಲ್ಲಿ 233 ಹುದ್ದೆಗಳ ಉದ್ಯೋಗ ನೇಮಕಾತಿಗೆ ಸಂಬಂಧಿಸಿ ರಾಷ್ಟ್ರಮಟ್ಟದಲ್ಲಿ ಅರ್ಜಿ ಆಹ್ವಾನಿಸಿರುವುದರಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದಿರುವುದನ್ನು ವಿರೋಧಿಸಿ ಅಂದು ವಿವಿಧ ಸಾಮಾಜಿಕ ಸಂಘಟಕರು ಪ್ರತಿಭಟನೆ ನಡೆಸಿದ್ದರು. ಆಗ ಉಂಟಾದ ಜನಾಭಿಪ್ರಾಯದ ಭಾಗವಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ನಾಗಾಭರಣರು ಎಮ್.ಆರ್.ಪಿ.ಎಲ್. ನಲ್ಲಿನ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ, ಸ್ಥಳೀಯರಿಗೆ ಪ್ರಾಧಾನ್ಯತೆ ನೀಡಿ ಹೊಸದಾಗಿ ಪ್ರಕ್ರಿಯೆ ನಡೆಸುವಂತೆ ನೋಟೀಸ್ ಜಾರಿಗೊಳಿಸಿದ್ದರು.
ಹಾಗೆಯೇ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಿದ್ದ ಕಂಪೆನಿ ಈಗ ಕೊರೋನಾ ಗದ್ದಲದ ನಡುವೆ ತನ್ನ ಕಾರ್ಯ ಸಾಧಿಸಿದೆ. ಆದ್ದರಿಂದ ಪ್ರಸಕ್ತ ನೇಮಕಾತಿ ವಿಷಯದಲ್ಲಿ ವಿದ್ಯಾವಂತ ತುಳುನಾಡ ಜನತೆಗೆ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಯಾವುದೇ ನೇಮಕಾತಿ ಮಾಫಿಯಾದ ಕೈವಾಡವಿದೆಯೇ ಎಂಬುವುದು ಸರಿಯಾದ ದಿಸೆಯಲ್ಲಿ ತನಿಖೆಯಾಗಬೇಕು ಎಂಬುವುದಾಗಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಡ್ವೋಕೇಟ್ ಸರ್ಫ್ ರಾಜ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ರವರು ನೀಡಿದ ಜಂಟಿ ಹೇಳಿಕೆಯನ್ನು ವೆಲ್ಪೇರ್ ಪಕ್ಷದ ದ.ಕ. ಜಿಲ್ಲಾ ಮಾಧ್ಯಮ ವಕ್ತಾರರಾಗಿರುವ ಅಬ್ದುಲ್ ಖಾದರ್ ಕುಕ್ಕಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಹಿತಾಸಕ್ತಿಯ ಬಗ್ಗೆ ಇಷ್ಟೊಂದು ಉಢಾಫೆಯಾಗಿ ನಿರಾಸಕ್ತಿ ವಹಿಸಿದ, ಕೆಲಸಕ್ಕೆ ಬಾರದ ನಾಮ ಮಾತ್ರಕ್ಕಿರುವ ಬೇಜವಾಬ್ದಾರಿ ಸಂಸದ ನಳಿನ್ ಕುಮಾರ್ ರವರ ಕೂಡಲೇ ರಾಜೀನಾಮೆ ನೀಡಲಿಯೆಂಬುವುದಾಗಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಅಗ್ರಹಿಸುವುದಾಗಿ ಅವರು ಇದೇ ಸಂಧರ್ಭದಲ್ಲಿ ಹೇಳಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.