ಕೋಲಾರ(wwwvknews.com):- ಮುಳಬಾಗಿಲು ಸ್ಥಳೀಯ ಶಾಸಕರ ನಿಧಿ ಹಾಗೂ ಸರಕಾರದ ನೆರವಿನಿಂದ ಮುಳಬಾಗಿಲು ಪಟ್ಟಣದ ಹಳೆಯ ನ್ಯಾಯಾಲಯ ಕಟ್ಟಡದಲ್ಲಿ ಹೊಸದಾಗಿ ಅಭಿವೃದ್ಧಿ ಮಾಡಲಾಗಿರುವ ಸುಸಜ್ಜಿತ 80 ಹಾಸಿಗೆಗಳ ಕೋವಿಡ್ ಕೇರ್ ಆಸ್ಪತ್ರೆಯನ್ನು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಲೋಕಾರ್ಪಣೆ ಮಾಡಿದರು.
ಈ ಮೂಲಕ ರಾಜ್ಯದ ಪೂರ್ವ ಗಡಿ ಭಾಗದ ಪಟ್ಟಣ ಮುಳಬಾಗಿಲು ಮತ್ತು ತಾಲ್ಲೂಕಿನ ಗ್ರಾಮಗಳಲ್ಲಿ ಸೊಂಕಿಗೆ ತುತ್ತಾದವರು ಇಲ್ಲಿಯೇ ಅತ್ಯುತ್ತಮ ಚಿಕಿತ್ಸೆ ಪಡೆಯಬಹುದು. ಸೋಂಕು ಕಾಣಿಸಿಕೊಂಡ ಮೇಲೆ ಆತಂಕಗೊಂಡು ಕೋಲಾರ ಅಥವಾ ಬೆಂಗಳೂರಿಗೆ ಹೋಗುವುದು ಬೇಡ. ಇಲ್ಲಿಯೇ ಅತ್ಯುತ್ತಮ ಚಿಕಿತ್ಸೆ ಲಭ್ಯವಾಗುತ್ತದೆ ಎಂದು ಅವರು ಹೇಳಿದರು. ಹಳೆಯ ನ್ಯಾಯಾಲಯದ ಕಟ್ಟಡದಲ್ಲಿ ಅತ್ಯಂತ ಸುಸಜ್ಜಿತವಾಗಿ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲಾಗಿದೆ. ನ್ಯಾಯಾಲಯವು ಹೊಸ ಕಟ್ಟಡಕ್ಕೆ ಸ್ಥಳಾಂತರವಾದ ನಂತರ ಈ ಕಟ್ಟಡ ಖಾಲಿ ಬಿದ್ದಿತ್ತು. ಇದನ್ನು ವ್ಯರ್ಥವಾಗಿ ಬಿಡದೇ ಈಗ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಈ ಆಸ್ಪತ್ರೆಗೆ ಸ್ಥಳೀಯ ಶಾಸಕರ ನಿಧಿಯಿಂದ 80 ಲಕ್ಷ ರೂ . ವೆಚ್ಚ ಮಾಡಲಾಗಿದೆ. ಈ ಕಟ್ಟಡವನ್ನು ಆಸ್ಪತ್ರೆ ಮಾಡಬೇಕು ಎಂದು ಶಾಸಕರಾದ ಹೆಚ್.ನಾಗೇಶ್ ಅವರು ಸಂಕಲ್ಪ ಮಾಡಿದ್ದರು . ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಅರವಿಂದ ಲಿಂಬಾವಳಿ ಮತ್ತು ಸಂಸದರಾದ ಎಸ್.ಮುನಿಸ್ವಾಮಿ ಅವರು ಸಹಕಾರ ನೀಡಿದ್ದಾರೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು. ಈ ಆಸ್ಪತ್ರೆಯ ಎಲ್ಲಾ 80 ಬೆಡ್ಗಳಿಗೂ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ . ಅಲ್ಲದೆ , ಜಂಬೋ ಸಿಲಿಂಡರ್ಗಳ ಸಂಪರ್ಕ ಕಲ್ಪಿಸಲಾಗಿದೆ . ಇಲ್ಲಿ ಆಮ್ಲಜನಕ ಕೊರತೆ ಆಗುವುದಿಲ್ಲ . ಗಿವ್ ಇಂಡಿಯಾ ಹಾಗೂ ಶ್ರೀಮದ್ ರಾಜ್ ಚಂದ್ರ ಪ್ರತಿಷ್ಠಾನ ತಲಾ 10 ಆಮ್ಲಜನಕ ಸಾಂದ್ರಕಗಳನ್ನು ಆಸ್ಪತ್ರೆಗೆ ನೀಡಿದ್ದಾರೆ . ಸರಕಾರದ ಕಡೆಯಿಂದ ವೈದ್ಯರು , ಅರೆ ವೈದ್ಯ ಸಿಬ್ಬಂದಿ , ವೈದ್ಯಕೀಯ ಸಾಮಗ್ರಿ , ಔಷಧಿ , ಮಾತ್ರೆಗಳನ್ನು ಒದಗಿಸಲಾಗಿದೆ , ಮುಂದೆ ಏನೇ ಬೇಡಿಕೆ ಇದ್ದರೂ ವಿಳಂಬ ಮಾಡದೇ ಒದಗಿಸಲಾಗುವುದು ಎಂದು ಅವರು ಹೇಳಿದರು , ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಆರೋಗ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ . ಸಂಭವನೀಯ ಮೂರನೇ ಅಲೆ ಎದುರಿಸುವುದಕ್ಕೂ ಸರಕಾರ ಸಂಪೂರ್ಣವಾಗಿ ಸನ್ನದ್ಧವಾಗಿದೆ . ರಾಜ್ಯದ ಎಲ್ಲ ಪ್ರಾಥಮಿಕ , ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಎಲ್ಲಾ ಆಸ್ಪತ್ರೆಗಳಿಗೆ ಇನ್ನಷ್ಟು ಶಕ್ತಿ ತುಂಬಲಾಗುತ್ತಿದೆ . ಮೂಲಸೌಕರ್ಯಗಳನ್ನು ಉತ್ತಮಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಅರಣ್ಯ , ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರವಿಂದ ಲಿಂಬಾವಳಿ , ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ , ವಿಧಾನ ಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ , ಡಾ || ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ನಾಗೇಶ್ , ಜಿಲ್ಲಾಧಿಕಾರಿಗಳಾದ ಡಾ | ಆರ್ . ಸೆಲ್ವಮಣಿ , ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಬೇಲೂರು , ಸರ್ಕಾರದ ಸಿಎಸ್ಆರ್ ಸಲಹೆಗಾರ ಮಹೇಶ , ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು . ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.