(www.vknews.com) : ಉಡುಪಿ ನಗರದ ಭಾಗವಾಗಿರುವ, 76 ಬಡಗಬೆಟ್ಟು ಪಂಚಾಯತು ವ್ಯಾಪ್ತಿಯ, ಅಲೆಂಬಿ ಎಂಬ ಸ್ಥಳದಲ್ಲಿ ಒಂದು ಪ್ರಾಚೀನ ಪಾಳುಬಿದ್ದ ದೇವಾಲಯದ ಪಕ್ಕದ ಬಾವಿಯಲ್ಲಿ ಕಳೆದ ಜನವರಿ 31 ರಂದು ಪ್ರಾಚೀನ ಜನಾರ್ಧನ ಶಿಲ್ಪವನ್ನು ಪತ್ತೆ ಮಾಡಲಾಗಿತ್ತು. ಆ ಸಂಧರ್ಭದಲ್ಲಿ ಹೊರತೆಗೆದ ಪ್ರಾಚೀನ ವಸ್ತು ಅವಶೇಷಗಳ ಜೊತೆ ಅತ್ಯಂತ ಅಪರೂಪದ ಬುದ್ಧನ ಶಿಲ್ಪವೊಂದು ಪತ್ತೆಯಾಗಿದ್ದು ತೀವ್ರ ಕುತೂಹಲವನ್ನು ಉಂಟುಮಾಡಿದೆ ಎಂದು ಪ್ರೊ. ಟಿ. ಮುರುಗೇಶಿ, ಸಹ ಪ್ರಾಧ್ಯಾಪಕ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗ, ಎಂ.ಎಸ್.ಆರ್.ಎಸ್ ಕಾಲೇಜು, ಶಿರ್ವ ಇವರು ಇಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬುದ್ಧನ ಶಿಲ್ಪ ಕ್ರಿ.ಶ. 5ನೇ ಶತಮಾನದ ಗುಪ್ತ ಶೈಲಿಯಲ್ಲಿದ್ದು, ಸುಮಾರು 9 ಸೆ.ಮೀ. ಎತ್ತರ, 5 ಸೆ.ಮೀ. ಅಗಲ ಮತ್ತು 2 ಸೆ.ಮೀ. ದಪ್ಪವಿದೆ. ಪದ್ಮ ಪೀಠದ ಮೇಲೆ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಬುದ್ಧ, ತನ್ನ ಪ್ರಥಮ ಧರ್ಮೋಪದೇಶ ಮುದ್ರೆ ಅಥವಾ ಧರ್ಮ ಚಕ್ರ ಪ್ರವರ್ತನ ಮುದ್ರೆಯಲ್ಲಿದ್ದು, ಕಾವಿವಸ್ತ್ರ ಮತ್ತು ಕರ್ಣಕುಂಡಲಗಳನ್ನು ಧರಿಸಿದ್ದಾನೆ. ತಲೆಯ ಮೇಲ್ಭಾಗದಲ್ಲಿ ಉಷ್ಣೀಶವಿದೆ. ತಲೆಯ ಹಿಂಭಾಗದಲ್ಲಿ ದುಂಡನೆಯ ಪ್ರಭಾವಳಿಯಿದ್ದು, ಅದರಲ್ಲಿ ಹೂ-ಲತೆಗಳ ಚಿತ್ತಾಕರ್ಷಕ ಕುಸುರಿ ಕೆಲಸವಿದೆ. ಮೇಲ್ಭಾಗದ ಎರಡೂ ತುದಿಗಳಲ್ಲಿ ಕಿರು ಯಕ್ಷ ಶಿಲ್ಪಗಳಿವೆ, ಹಿಂಬದಿಯ ಒರಗಿನ ಎರಡೂ ಬದಿಗಳಲ್ಲಿ ರೆಕ್ಕೆಗಳನ್ನು ಹೊಂದಿರುವ ಕುದುರೆಗಳ ಶಿಲ್ಪಗಳಿವೆ. ಇದು ಸಾರನಾಥ ಬುದ್ಧ ಶಿಲ್ಪದ ಪ್ರತಿಕೃತಿಯಂತಿದೆ.
ಕರ್ನಾಟಕದಲ್ಲಿ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಶೈಲಿಯಲ್ಲಿ ದೊರೆತ ಮೊಟ್ಟ ಮೊದಲ ಪ್ರಾಚೀನ ಬೌದ್ಧ ಶಿಲ್ಪವಾಗಿದೆ. ಪರಂಪಾಗತ ನಂಬಿಕೆಯ ಪ್ರಕಾರ ತುಳುನಾಡು ಪ್ರಾಚೀನ ಕಾಲದಲ್ಲಿ ಕದಂಬರ ಆಳ್ವಿಕೆಗೆ ಒಳಪಟ್ಟ ಪ್ರದೇಶವೆಂಬ ಗಾಢ ನಂಬಿಕೆಯಿದೆ. ಕದಂಬರಿಗೂ ಗುಪ್ತರಿಗೂ ವೈವಾಹಿಕ ಸಂಬಂಧಗಳಿದ್ದುದು ಚಾರಿತ್ರಿಕವಾಗಿ ದಾಖಲಾಗಿದೆ. ಅಲೆಂಬಿಯ ಸಮೀಪದಲ್ಲಿಯೇ ಕ್ರಿ.ಶ. 4-5ನೇ ಶತಮಾನದ ಬ್ರಾಹ್ಮಿ ಲಿಪಿಯ ಶಾಸನ ಈ ಮೊದಲೇ ಪತ್ತೆಯಾಗಿರುವುದರಿಂದ ಕ್ರಿ.ಶ. 5ನೇ ಶತಮಾನದ ಶಿಲ್ಪ ಶೈಲಿಯ ಬುದ್ಧನ ಶಿಲ್ಪ ಉಡುಪಿಯಲ್ಲಿ ದೊರೆತಿರುವುದು ಅಸಂಭವವೇನಲ್ಲ. ಆದರೆ, ಕರ್ನಾಟಕ ಮತ್ತು ಉಡುಪಿ ಜಿಲ್ಲೆಯ ಬೌದ್ಧ ಅಧ್ಯಯನದಲ್ಲಿ ಈ ಶಿಲ್ಪ ಶೋಧ ಹೊಸ ಕುತೂಹಲವನ್ನು ಸೃಷ್ಠಿ ಮಾಡಿದೆ.
ಈ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಗಣೇಶ್ರಾಜ್ ಸರಳೇಬೆಟ್ಟು, ನಮ್ಮ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೇಯಸ್, ನಾಗರಾಜ್, ಗೌತಮ್, ರಾಜೇಶ್, ಹರ್ಷಿತಾ, ಕಾವ್ಯ, ಭವ್ಯ ಮತ್ತು ಗಣೇಶ್ ರವರಿಗೆ ನಾನು ಅಭಾರಿಯಾಗಿದ್ದೇನೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.