ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) :- ಜಿಲ್ಲೆಯ ಯಾವುದಾದರೂ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ದತ್ತು ಪಡೆದುಕೊಂಡು ಮಾದರಿ ಆರೋಗ್ಯ ಕೇಂದ್ರವನ್ನಾಗಿ ರೂಪಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹೇಳಿದರು .
ನಗರದ ಜಿಲ್ಲಾ ಆರೋಗ್ಯ ಇಲಾಖೆ ಸಭಾಂಗಣದಲ್ಲಿ ಸೋಮವಾರ ಕೋಲಾರ ರೋಟರಿ ಸಂಸ್ಥೆಯ ವತಿಯಿಂದ ನೀಡಲ್ಪಟ್ಟ ಸುಮಾರು ೧೫ ಲಕ್ಷ ರೂಪಾಯಿ ಮೌಲ್ಯದ ೧೨ ಆಮ್ಲಜನಕ ಸಾಂದ್ರಕಗಳು ಸೇರಿದಂತೆ ಇನ್ನಿತರ ವೈದ್ಯಕೀಯ ಸಲಕರಣೆಗಳನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು .
ಕೊರೊನಾ ನಿಯಂತ್ರಣದಲ್ಲಿ ರೋಟರಿ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳು , ದಾನಿಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸುತ್ತಿರುವುದು ಉತ್ತಮ ಕಾರ್ಯವಾಗಿದೆಯೆಂದು ಜಿಲ್ಲಾಧಿಕಾರಿಗಳು , ಕೋಲಾರ ಜಿಲ್ಲೆಯಾದ್ಯಂತ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೈಜೋಡಿಸಬೇಕೆಂದು ಕೋರಿದರು .
ಕೋಲಾರ ಜಿಲ್ಲೆಯಲ್ಲಿ ೧೨.೫೦ ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು , ಈಗಾಗಲೇ ಸುಮಾರು ೫.೫೦ ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ . ಜಿಲ್ಲೆಯಾದ್ಯಂತ ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವಂತಾಗಲು ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ಅಂತರಾಷ್ಟ್ರೀಯ ರೋಟರಿ ಯೋಜನಾ ಸಂಯೋಜಕ ಟಿ.ಎಸ್.ರಾಮಚಂದಗೌಡ ಮಾತನಾಡಿ , ಕೋಲಾರ ಜಿಲ್ಲೆಯಲ್ಲಿ ರೋಟರಿ ಸಂಸ್ಥೆಯು ಅನೇಕ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು , ಕೋಲಾರ ಜಿಲ್ಲೆಯಾದ್ಯಂತ ೨೦೦ ಕ್ಕೂ ಹೆಚ್ಚು ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್ಗಳನ್ನು ವಿತರಿಸುವ ಗುರಿ ಹೊಂದಲಾಗಿತ್ತು . ಆದರೆ , ಕೊರೊನಾ ಕಾರಣದಿಂದಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ , ಆದ್ದರಿಂದ ಈ ಯೋಜನೆಯನ್ನು ಮಾರ್ಪಡಿಸಿ ಕೋಲಾರ ಜಿಲ್ಲೆಯಲ್ಲಿ ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಲಾಗುತ್ತಿದೆಯೆಂದು ವಿವರಿಸಿದರು.
ರೋಟರಿ ಅಧ್ಯಕ್ಷ ಸೋಮಶೇಖರ್ ಮಾತನಾಡಿ , ಸುಮಾರು ೧೫ ಲಕ್ಷ ರೂಪಾಯಿ ಮೌಲ್ಯದ ೧೨ ಆಮ್ಲಜನಕ ಸಾಂದ್ರಕಗಳು , ೫೦೦ ಪಿಪಿಇ ಕಿಟ್ಗಳು , ೨ ಸಾವಿರ ಒಮ್ಮೆ ಬಳಕೆಯ ಬೆಡ್ ಶೀಟ್ಗಳು , ೫೦೦ ಲೀಟರ್ ಸ್ಯಾನಿಟೈಜರ್ಗಳನ್ನು ವಿತರಿಸಲಾಗುತ್ತಿದೆಯೆಂದು ವಿವರಿಸಿದರು . ಮುಂದಿನ ದಿನಗಳಲ್ಲಿ ಕೋಲಾರ ರೋಟರಿ ಸಂಸ್ಥೆಯಿಂದ ಕೊರೊನಾ ಂಟ್ ಲೈನ್ಸ್ ವಾರಿಯರ್ಸ್ಗಳಿಗೆ ದಿನಸಿ ಕಿಟ್ಗಳು , ಅಗತ್ಯವಿರುವರಿಗೆ ಆರೋಗ್ಯ ಕಿಟ್ಗಳನ್ನು ವಿತರಿಸಲಾಗುವುದು ಎಂದು ವಿವರಿಸಿದರು .
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್ ಮಾತನಾಡಿ , ರೋಟರಿ ಸಂಸ್ಥೆಯು ಜಿಲ್ಲೆಗೆ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳನ್ನು ವಿತರಿಸುತ್ತಿರುವುದು ಪ್ರಯೋಜನಕಾರಿಯಾಗಿದೆಯೆಂದರು .
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು , ನಿಯೋಜಿತ ಅಧ್ಯಕ್ಷ ರಾಮನಾಥ್ , ರೋಟರಿ ಪದಾಧಿಕಾರಿಗಳಾದ ದೇವರಾಜ್ , ವೆಂಕಟರವಣಪ್ಪ , ರಾಘವೇಂದ್ರ ಬಾಲಾಜಿ , ನಾಗಶೇಖರ್ , ಶಿವಕುಮಾರ್ , ಸಿ.ಆರ್.ಅಶೋಕ್ , ಜನಾರ್ಧನ್ , ಎನ್.ನಾಗರಾಜು , ರೋಟಾಕ್ಸ್ ರಾಹುಲ್ ಹಾಜರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.