ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗಿದೆ ಎಂದು ಕೃಷಿ ಮಾರುಕಟ್ಟೆ ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.
ಅವರು ಜು.14ರ ಬುಧವಾರ ನಗರದ ಬೈಕಂಪಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಆಧುನಿಕ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕೋವಿಡ್-19 ಸೋಂಕಿನ ಹಿನ್ನಲೆಯಲ್ಲಿ ಕಳೆದ ಒಂದು ವರ್ಷದಿಂದ ಎಪಿಎಂಸಿಗಳಿಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಈ ಬಾರಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದಲ್ಲೀ, ಅದರ ಆಧಾರದ ಮೇಲೆ ಜಿಲ್ಲೆಯ ಎ.ಪಿ.ಎಂ.ಸಿ ಗಳಿಗೆ ಹಣ ನೀಡಲಾಗುವುದು ಎಂದರು.
ರಾಜ್ಯದಲ್ಲಿರುವ ಅತಿ ಹೆಚ್ಚು ಜಮೀನು ಹೊಂದಿರುವ ಎಪಿಎಂಸಿಗಳ ಪೈಕಿ ಮಂಗಳೂರು ಒಂದಾಗಿದೆ, ಇಲ್ಲಿನ 81 ಎಕರೆ ಭೂ ಪ್ರದೇಶದಲ್ಲಿರುವ ಎಪಿಎಂಸಿಯನ್ನು ಸರಿಯಾದ ರೀತಿಯಲ್ಲಿ ಉಳಿಸಿಕೊಳ್ಳಬೇಕಿದೆ ಎಂದ ಸಚಿವರು, ಶಾಸಕರಾದ ಭರತ್ ಶೆಟ್ಟಿಯವರು ಎಪಿಎಂಸಿಯ ಅಭಿವೃದ್ದಿಗಾಗಿ ತಮ್ಮ ಕ್ಷೇತ್ರಕ್ಕೆ 70 ಕೋಟಿ, ವೇದವ್ಯಾಸ ಕಾಮತ್ ಹಾಗೂ ಉಮನಾಥ ಕೋಟ್ಯಾನ್ ಅವರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ, ಅದರಂತೆ ಸರ್ಕಾರದಿಂದ ಅನುದಾನ ಬಿಡುಗಡೆಯಾದಲ್ಲೀ ಕೂಡಲೇ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಕೋವಿಡ್-19 ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ಸದಸ್ಯರಿಗೆ ರಾಜ್ಯ ಸರ್ಕಾರ 1 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ. ಅದರಂತೆ ಸಹಕಾರ ಇಲಾಖೆಯ ಅಪೆಕ್ಸ್ ಹಾಗೂ ಡಿಸಿಸಿ ಬ್ಯಾಂಕ್ಗಳ ಸದಸ್ಯರಾಗಿದ್ದವರು ಕೋವಿಡ್ ನಿಂದ ಮೃತಪಟ್ಟವರಿಗೆ 1 ಲಕ್ಷ ರೂ.ಗಳ ಸಾಲ ಮನ್ನಾಗೆ ಚಿಂತಿಸಲಾಗಿದೆ, ರಾಜ್ಯಾದ್ಯಾಂತ 10,140 ಜನರ ಮಾಹಿತಿಯನ್ನು ಈಗಾಗಲೇ ಸಂಗ್ರಹಿಸಲಾಗಿದ್ದು, 81 ಕೋಟಿ ರೂ. ಗಳ ಸಾಲ ಮನ್ನಾ ಮಾಡಬೇಕಾಗುತ್ತದೆ, ಈ ದಿಸೆಯಲ್ಲಿ ಅಪೆಕ್ಸ್ ಹಾಗೂ ಡಿಸಿಸಿ ಬ್ಯಾಂಕ್ಗಳ ಸಭೆ ನಡೆಸಿ ಅವುಗಳು ಪಡೆದ ಲಾಭಂಶವನ್ನು ಈ ಸಾಲ ಮನ್ನಾಗೆ ಬಳಸುವ ಚಿಂತನೆ ಇದೆ ಎಂದವರು ಹೇಳಿದರು.
ರೈತರಿಗೆ ಉಪಯೋಗವಾಲಿರುವ ವಿವಿಧ ಸಾಲಸೌಲಭ್ಯಗಳ ಯೋಜನೆಯಡಿ ರಾಜ್ಯದಲ್ಲಿರುವ 21 ಡಿಸಿಸಿ ಬ್ಯಾಂಕ್ಗಳು 20,810 ಕೋಟಿ ರೂ.ಗಳನ್ನು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡಲು ಸೂಚಿಸಲಾಗಿದೆ, ಬೆಂಗಳೂರು, ಮೈಸೂರು, ಕಲುಬುರಗಿ, ಕೊಡಗು ಜಿಲ್ಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ, ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಸಹಕಾರ ಇಲಾಖೆಯಿಂದ ಸಾಲ ದೊರೆಯುತ್ತಿಲ್ಲ ಎನ್ನುವ ಮಾತುಗಳು ಎಲ್ಲಿಯೋ ಕೇಳಿ ಬಾರದಂತೆ ಡಿಸಿಸಿ ಬ್ಯಾಂಕುಗಳಿಂದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ, 21 ಡಿಸಿಸಿ ಬ್ಯಾಂಕ್ಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ, ರೈತರಿಗೆ ಅನುಕೂಲ ಮಾಡಿಕೊಡಲು ಸಹಕಾರ ಹಾಗೂ ಸರ್ಕಾರ ಬದ್ದವಾಗಿದೆ ಎಂದದವರು ತಿಳಿಸಿದರು.
ಕೃಷಿ ಹಾಗೂ ಸಹಕಾರ ಇಲಾಖೆಗಳನ್ನು ಒಂದೇ ಇಲಾಖೆಯ ವ್ಯಾಪ್ತಿಯಡಿಗೆ ತರುವ ಮೂಲಕ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಹಿಂದೆ ಸರ್ಕಾದ ಕೃಷಿಗೆ ಹೆಚ್ಚಿನ ಒಲವು ನೀಡಿತ್ತು, ಇದೀಗ ಅದೇ ಒಲವನ್ನು ಸಹಕಾರ ಕ್ಷೇತ್ರಕ್ಕೂ ನೀಡಿರುವುದು ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿದೆ, ಗೃಹ ಸಚಿವರಿಗೆ ಈ ಇಲಾಖೆಯ ಉಸ್ತುವಾರಿ ನೀಡಿದ್ದು, 1 ಲಕ್ಷ ಕೋಟಿ ರೂ.ಗಳ ಅನುದಾನವನ್ನು ಮೀಸಲಿರಿಸಿ ಎ.ಪಿ.ಎಂ.ಸಿ ಅಭಿವೃದ್ದಿ ನೀಡಲಾಗಿದೆ ಎಂದರು.
ಎ.ಪಿ.ಎಂ.ಸಿಯಲ್ಲಿ ಸೆಸ್ ಕಡಿಮೆ ಮಾಡಿದ ಪ್ರಯುಕ್ತ ಆದಾಯ ಸಂಗ್ರಹಣೆಯಲ್ಲಿ ಕುಸಿತವಾಗಿದೆ. ಈ ಹಿಂದೆ ಒಂದು ರೂಪಾಯಿಗಳ ಸೆಸ್ ಸಂಗ್ರಹಿಸಲಾಗುತ್ತಿತ್ತು, ಆ ಸಂದರ್ಭದಲ್ಲಿ 662 – 750 ಕೋಟಿ ರೂ. ಗಳ ಸಂಗ್ರವಾಗಿತ್ತು. ಸೆಸ್ ಸಂಗ್ರಹ ಕಡಿಮೆಯಾದ ಪ್ರಯುಕ್ತ ಇದೀಗ 90-110 ಕೋಟಿ ರೂ ಗಳ ಆದಾಯ ಸಂಗ್ರಹವಾಗುತ್ತಿದ್ದು, ವೇತನ ಹಾಗೂ ಇತರೆ ಕಾರ್ಯಕ್ಕೆ ಬಳಸಲಾಗುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ವಹಿಸಿದ್ದ ಹಿಂದುಳಿದ ವರ್ಗಗಳ ಕಲ್ಯಾಣ, ಹಿಂದೂ ದಾರ್ಮಿಕ ಧರ್ಮದಾಯ ದತ್ತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ರಾಜ್ಯದಲ್ಲಿ ಮಾದರಿ ಎ.ಪಿ.ಎಂ.ಸಿ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಹಣ್ಣು ಮತ್ತು ತರಕಾರಿ ಮಾರುವ ನೂತನ ಮಾರುಕಟ್ಟೆಗೆ ಶಿಲಾನ್ಯಾಸ ಮಾಡಲಾಗುತ್ತಿದೆ. ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿಯಿಂದ ಕೆಲವೊಂದು ಸಾಧಕ- ಭಾದಕಗಳು ಎದುರಾದರೂ ಮುಂಬರುವ ದಿನಗಳಲ್ಲಿ ಅದು ಗಟ್ಟಿಯಾಗಲಿದೆ ಎಂದರು.
ರೈತ ತಾನು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಯೋಜನೆ ಇದರಿಂದ ಜಾರಿಯಾಗಲಿದೆ ಎಂದು ತಿಳಿಸಿದರು.
ಸ್ಥಳೀಯ ಶಾಸಕ ಭರತ್ ಶೆಟ್ಟಿ ಅವರು ಮಾತನಾಡಿ, ಕೋವಿಡ್ ಸಮಯದಲ್ಲಿ ಹಣ್ಣು ತರಕಾರಿ ಮಾರಾಟ ಮಾಡಲು ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು, ಅದರ ಯಶಸ್ಸಿನಿಂದ ಇಲ್ಲಿನ ಆವರಣದಲ್ಲಿ ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ಅನುಕೂಲವಾಗುವಂತಹ ಆಧುನಿಕ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಅನುಮತಿ ಹಾಗೂ ಅನುದಾನ ನೀಡಿದೆ ಎಂದು ಹೇಳಿದರು.
ಮಂಗಳೂರು ಎ.ಪಿ.ಎಂ.ಸಿ.ಯ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಪ್ರಸ್ತಾವಿಕವಾಗಿ ಮಾತನಾಡಿ, ಎಪಿಎಂಸಿ ಆವರಣದಲ್ಲಿ 81 ಎಕರೆ ಜಮೀನಿದ್ದು, ಅದರ ಸದುಪಯೋಗವಾಗಬೇಕಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಯಾವುದಾದರೊಂದು ಯೋಜನೆಗಳನ್ನು ಬಳಸಿಕೊಂಡು ಎಪಿಎಂಸಿಯ ಕಟ್ಟಡಗಳನ್ನು ಉಳಿಸಿಕೊಳ್ಳಬೇಕು. ನೂತನ ಮಾರುಕಟ್ಟೆ ಕಟ್ಟಡಕ್ಕೆ ಸೋಲಾರ್, ಮಳೆನೀರು ಕೋಯ್ಲು ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು, ಘನತ್ಯಾಜ್ಯ ವಿಲೇವಾರಿಗೆ ಅಚ್ಚುಕಟ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಾಸಕರಾದ ಉಮನಾಥ್ ಕೋಟ್ಯಾನ್, ಮಂಗಳೂರು ಮಹಾನಗರ ಪಾಲಿಕೆ ಮಹಾಪೌರರಾದ ಪ್ರೇಮಾನಂದ ಶೆಟ್ಟಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಜನಿ ದುಗ್ಗಣ್ಣ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು.
ಶ್ರೀಮತಿ ಭಾರತಿ ಪ್ರಾರ್ಥಿಸಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸಿ.ಎಚ್. ಮೋಹನ್ ಸ್ವಾಗತಿಸಿದರು. ಪ್ರವೀಣ್ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.