ಕೋಲಾರ (ವಿಶ್ವಕನ್ನಡಿಗ ನ್ಯೂಸ್): ರಾಷ್ಟ್ರೀಯ ಶಿಕ್ಷಣ ನೀತಿಯು ಅನುಭವಾತ್ಮಕ ಕಲಿಕೆ , ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆ ಹಾಗೂ ಅವರನ್ನು ಸ್ವಾವಲಂಬಿ ವ್ಯಕ್ತಿಗಳಾಗಿ ರೂಪಿಸುವ ಘನ ಉದ್ದೇಶವನ್ನು ಹೊಂದಿದೆ ಎಂದು ಡಯಟ್ ಪ್ರಭಾರಿ ಪ್ರಾಂಶುಪಾಲ ಟಿ.ಕೆ.ರಾಘವೇಂದ್ರ ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯವಾದ ಅಂಶಗಳ ಕುರಿತು ಶಿಕ್ಷಕರು ಹಾಗೂ ಇಲಾಖೆಯ ಅಧಿಕಾರಿಗಳಿಗಾಗಿ ಕೋಲಾರದ ಡಯಟ್ ಸಹಯೋಗದೊಂದಿಗೆ ಶ್ರೀಅರಬಿಂದೋ ಸೊಸೈಟಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವೆಬಿನಾರ್ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಮೂಲಕ ಸ್ವಾವಲಂಬಿ ಬದುಕು ರೂಪಿಸುವ ಕೌಶಲ್ಯಗಳನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಹೊಸ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯವಾದ ಅಂಶಗಳ ಬಗ್ಗೆ ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳಿಗೆ ಸಮರ್ಪಕ ಮಾಹಿತಿ ಮತ್ತು ಅರಿವು ಅಗತ್ಯ ಎಂದ ಅವರು , ಅನುಷ್ಠಾನಕ್ಕೆ ಇಲಾಖೆ , ಶಿಕ್ಷಕರು ಸಜ್ಜಾಗಬೇಕಾಗಿದೆ ಎಂದು ತಿಳಿಸಿದರು .
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಆಗಬಹುದಾದ ಬದಲಾವಣೆಗಳ ಕುರಿತು ಅರಿವು ಮೂಡಿಸಲಾಯಿತು . ಕಾಲಕಾಲಕ್ಕೆ ಶಿಕ್ಷಣದಲ್ಲಿ ಆಧುನಿಕತೆ , ತಂತ್ರಜ್ಞಾನದ ಅಳವಡಿಕೆ ಅಗತ್ಯವಾಗಿದೆ ಎಂದು ತಿಳಿಸಿದರು .ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರತಿಯೊಂದು ಅಂಶವನ್ನು ಶಿಕ್ಷಕರು , ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಅರವಿಂದೂ ಸೊಸೈಟಿಯ ಪ್ರಯತ್ನಗಳನ್ನು ಅವರು ಪ್ರಶಂಸಿಸಿದರು. ಕಲಿವಿನ ಮೌಲ್ಯಮಾಪನ ಕ್ರಮಗಳು ಬದಲಾಗಿ , ಮಕ್ಕಳ ಸಾಮರ್ಥ್ಯ , ಅನುಭವ ಹಾಗೂ ಗಳಿಸಿದ ಕೌಶಲಗಳನ್ನು ವಿವಿಧ ಕ್ರಮಗಳ ಮೂಲಕ ಈ ನೀತಿಯಲ್ಲಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
ಅರಬಿಂದೊ ಸೊಸೈಟಿಯವರು ರಾಷ್ಟ್ರಾದ್ಯಂತ ಶಿಕ್ಷಕರುಗಳಿಗಾಗಿ ರಾ.ಶಿ. ನೀತಿಯ ಬಗ್ಗೆ ವೆಬಿನಾರ್ಗಳ ಸರಣಿಗಳನ್ನು ನಡೆಸಿ , ಅವರುಗಳು ನೀತಿಯ ಅನುಷ್ಠಾನದಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದೆ . ಅರಬಿಂದೊ ಸೊಸೈಟಿಯು ಇದುವರೆಗೆ ೨೪೬ ಕ್ಕೂ ಹೆಚ್ಚು ಇಂತಹ ವೆಬಿನಾರ್ಗಳನ್ನು ವಿವಿಧ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಿದೆ ಎಂದು ತಿಳಿಸಿದರು .
ಎನ್.ಇ.ಪಿ. ಜಿಲ್ಲಾ ನೋಡಲ್ ಅಧಿಕಾರಿ ಹೆಚ್.ಎಸ್. ಚಂದ್ರಕಲಾ ಡಯಟ್ನ ಉಪನ್ಯಾಸಕ ವರ್ಗ , ಜಿಲ್ಲೆಯ ಕ್ಷೇತ್ರ ಸಿಬ್ಬಂದಿ , ಶಿಕ್ಷಕರು ಈ ವೆಬಿನಾರ್ನಲ್ಲಿ ಭಾಗವಹಿಸಿ ಮಾಹಿತಿಯನ್ನು ಪಡೆದರು .
ಈ ಕಾರ್ಯಕ್ರಮವನ್ನು ಸಾವಿರಾರು ಜನರು ಯೂ ಟ್ಯೂಬ್ನಲ್ಲಿಯೂ ಲೈವ್ ಆಗಿ ವೀಕ್ಷಿಸಿದರು . ಕೋಲಾರ ಜಿಲ್ಲೆಯ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕರಿಗೆ ವಿಶೇಷವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು , ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅರಬಿಂದೂ ಸೊಸೈಟಿಯ ಹೇಮಪ್ರಿಯ ಅವರು ಭಾಗವಹಿಸಿ ಮಾರ್ಗದರ್ಶನ ನೀಡಿದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.