ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಜಿಲ್ಲೆಯಲ್ಲಿ ಸುಮಾರು 20 ವರ್ಷಗಳ ನಂತರ ಹೆಚ್ಚಿನ ಮಳೆಯಾಗಿದ್ದು , ರೈತರು ಬೆಳೆದ ಹೆಚ್ಚಿನ ಬೆಳೆಗಳು ನಷ್ಟವಾಗಿದೆ. ಬೆಳೆಗಳು ಹಾನಿಗೀಡಾದ ತಕ್ಷಣ ಸಮೀಕ್ಷೆ ನಡೆಸಿ ಆ್ಯಪ್ ಮೂಲಕ ನೋಂದಾಯಿಸಿದರೆ ರೈತರಿಗೆ 24 ಗಂಟೆಯೊಳಗಾಗಿ ಪರಿಹಾರ ಧನವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಇಂದು ಜಿಲ್ಲೆಯ ನರಸಾಪುರ , ಚೌಡದೇನಹಳ್ಳಿ ಮತ್ತು ಮುದುವಾಡಿ ಕೆರೆಗೆ ಭೇಟಿ ನೀಡಿ ಜಿಲ್ಲೆಯಾದ್ಯಂತ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿರುವುದನ್ನು ಪರಿಶೀಲನೆ ನಡೆಸಿ ಅವರು ಮಾತನಾಡಿ , ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ರಾಗಿ , ತರಕಾರಿ ಹಾಗೂ ಹೂ ಬೆಳೆಗಳು ಹೆಚ್ಚು ನಷ್ಟವಾಗಿದೆ . ಜಿಲ್ಲೆಯಲ್ಲಿ 55,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ರಾಗಿ ಬೆಳೆಯನ್ನು ಬೆಳೆದಿದ್ದು , ಬಹುತೇಕ ಕಡೆ ರಾಗಿ ಬೆಳೆಯಲ್ಲಿ ಮೊಳಕೆ ಹೊಡೆದಿದೆ . ಕಡಲೆಕಾಯಿ , ತೊಗರಿ ಬೆಳೆಗಳು ಹಾನಿಗೊಳಗಾಗಿದೆ ಎಂದು ಅವರು ತಿಳಿಸಿದರು.
ಮಳೆಯಿಂದ ಕೆಲವು ಕಡೆ ಮನೆಗಳು ಕುಸಿದಿವೆ . ಪೂರ್ಣ ಪ್ರಮಾಣದ ಮನೆಗಳು ಕುಸಿದಿದ್ದರೆ ಜಿ.ಪಿ.ಆರ್.ಎಸ್ ಮಾಡಿದ ತಕ್ಷಣ ಅವರಿಗೆ 1.50 ಲಕ್ಷ ಪರಿಹಾರ ಧನವನ್ನು ನೀಡಲಾಗುವುದು . ಸಂಪರ್ಕ ಕಡಿತವಾಗಿರುವ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆಗಳು ಹಾಗೂ ಬ್ರಿಡ್ಜ್ಗಳನ್ನು ನಿರ್ಮಾಣ ಮಾಡಲು 500 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ .
ಶಾಲೆಗಳು , ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ವಿದ್ಯುತ್ ಕಂಬಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು . ಜಿಲ್ಲೆಯಲ್ಲಿ ಬಹಳಷ್ಟು ದೊಡ್ಡದಾದ ಕೆರೆಗಳಿವೆ .
ದೊಡ್ಡ ಪ್ರಮಾಣದ ಮಳೆಯಿಂದ ಹಾಗೂ ಕೆ.ಸಿ ವ್ಯಾಲಿ ನೀರಿನಿಂದ ಜಿಲ್ಲೆಯ ಸುಮಾರು ಕೆರೆಗಳು ತುಂಬಿ ಕೋಡಿ ಹರಿಯುತ್ತಿದೆ . ಮುದವಾಡಿ ಕೆರೆಯು ಸುಮಾರು 12 ಸಾವಿರ ಹೆಕ್ಟೇರ್ ವಿಸ್ತೀರ್ಣವಿದೆ . ಕೆರೆ ತುಂಬಿ ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಜನಸಾಮಾನ್ಯರಿಗೆ ಓಡಾಟಕ್ಕೆ ತೊಂದರೆಯಾಗಿದೆ ಎಂದು ಅವರು ತಿಳಿಸಿದರು . ಕೆರೆಗಳು ಸಾರ್ವಜನಿಕರ ಸಂಪತ್ತು , ಕೆರೆ ಹಾಗೂ ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ .
ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಹರಿಸಲಾಗುವುದು ಹಾಗೂ ಕೆ.ಸಿ.ವ್ಯಾಲಿ 2 ನೇ ಹಂತದ ಯೋಜನೆಯನ್ನು ಪ್ರಾರಂಭಿಸಲಾಗುವುದು . ಕೆರೆಗಳಲ್ಲಿ ನೀರಿನ ಶೇಖರಣೆಯನ್ನು ಹೆಚ್ಚಿಸಿ ರೈತರನ್ನು ಅಭಿವೃದ್ಧಿ ಮಾಡಲಾಗುವುದು .
ಕೋಲಾರದಿಂದ ಕಡಪಗೆ ಹೋಗುವ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ 30 ಕಿ.ಮೀ ರಸ್ತೆಯನ್ನು ಉನ್ನತ್ತೀಕರಿಸಲಾಗುವುದು ಎಂದು ಅವರು ತಿಳಿಸಿದರು .
ಈ ಸಂದರ್ಭದಲ್ಲಿ ತೋಟಗಾರಿಕೆ , ಯೋಜನೆ ಮತ್ತು ಸಾಂಖ್ಯಿಕ್ಯ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ , ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ , ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀನಿವಾಸಗೌಡ , ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಮೇಶ್ ಕುಮಾರ್ , ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ , ಜಿಲ್ಲಾಧಿಕಾರಿಗಳಾದ ಡಾ | ಆರ್.ಸೆಲ್ವಮಣಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕಾ ಕಿಶೋರ್ ಬಾಬು , ಕೃಷಿ ಇಲಾಖೆಯ ಜಂಟಿ ನಿದೇಶಕರಾದ ರೂಪದೇವಿ , ತೋಟಗಾರಿಕೆ ಇಲಾಖೆಯ ಉಪ ನಿದೇಶಕರಾದ ಗಾಯಿತ್ರಿ ಅವರು ಸೇರಿದಂತೆ ಮತ್ತಿತರರು ಹಾಜರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.