(www.vknews.com) : ದಿನಾಂಕ 13.02.2019 ರಂದು ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ ವಸತಿ ಕೇಂದ್ರಕ್ಕೆ ಕಾಸರಗೋಡು ಪೋಲಿಸ್ ಸಿಬ್ಬಂದಿಗಳು ಮಹಿಳೆಯನ್ನು ದಾಖಲು ಮಾಡಿರುತ್ತಾರೆ. ವನಿತಾ ಸೆಲ್ನವರು ತಮ್ಮ ನ್ಯೆಟ್ ಡ್ಯೂಟಿಯಲ್ಲಿ ಇರುವಾಗ ಕಾಸರಗೋಡು ರೈಲ್ವೆ ಸ್ಟೇಷನ್ನಲ್ಲಿ ಸರಿಸುಮಾರು 40 ವಯಸ್ಸಿನ ಮಹಿಳೆ ಮತ್ತು ಆಕೆಯೊಂದಿಗೆ ಇದ್ದ ಸುಮಾರು ಒಂದೂವರೆ ವಯಸ್ಸಿನ ಗಂಡು ಮಗುವನ್ನು ಕಂಡು ಪೋಲಿಸರು ಆಕೆಯ ಹೆಸರನ್ನು ಕೇಳಿದಾಗ ಬಿಹಾಲತ್ ಎಂದು ತಿಳಿಸಿದ್ದು, ಅಲ್ಲಿಂದ ಆಕೆಯನ್ನು ಮತ್ತು ಮಗುವನ್ನು ಮಹಿಳಾ ಮಂದಿರಕ್ಕೆ ಸೇರಿಸಲಾಯ್ತು. ಮಹಿಳಾ ಮಂದಿರದವರು ಮಹಿಳೆಯು ಮಾನಸಿಕ ಅಸ್ವಸ್ಥತೆಯಿಂದ ಕೂಡಿರುವುದರಿಂದ ಮಗುವನ್ನು ಮತ್ತು ತಾಯಿಯನ್ನು ಬೇರ್ಪಡಿಸಿ ಮಗುವನ್ನು ಕಾಸರಗೋಡು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ನೀಡಿ ತಾಯಿಯನ್ನು ನಮ್ಮ ಸ್ನೇಹಾಲಯ ಸಂಸ್ಥೆಗೆ ಸೇರಿಸಲು ಕಾಸರಗೋಡು ಪೋಲಿಸರಿಗೆ ತಿಳಿಸಿರುವುದಾಗಿ ಮಾಹಿತಿ ನೀಡಿರುತ್ತಾರೆ.
ಈ ವಿವರಗಳನ್ನು ಕಾಸರಗೋಡು ಪೋಲಿಸರು ದಾಖಲಾತಿ ಸಮಯದಲ್ಲಿ ಹಸ್ತಾಂತರಿಸಿದ ಪತ್ರದ ಮೂಲಕವಾಗಿ ನಮಗೆ ತಿಳಿದಿರುತ್ತದೆ. ಸ್ನೇಹಾಲಯದಲ್ಲಿ ದಾಖಲಾಗುವ ಸಂಧರ್ಭದಲ್ಲಿ ಆಕೆಯು ತನ್ನ ಹೆಸರು ಆರತಿ ಎಂಬುದಾಗಿ ತಿಳಿಸಿರುತ್ತಾರೆ. ತದನಂತರ ವೈದ್ಯಕೀಯ ತಪಾಸಣೆ, ಆಪ್ತ ಸಮಾಲೋಚನೆ, ವಿವಿಧ ರೀತಿಯ ಥೆರಪಿಗಳು, ಯೋಗ ವ್ಯಾಯಮ ಇನ್ನಿತರ ಚಿಕಿತ್ಸೆಗೆ ಪೂರಕ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುವುದರೊಂದಿಗೆ ಆಕೆಯು ಮಾನಸಿಕ ಕಾಯಿಲೆಗೆ ನೀಡಲಾದ ಔಷದಿಗಳಿಗೆ ಸ್ಪಂದಿಸತೊಡಗಿದಳು .ಅದರ ಫಲವಾಗಿ ಆಕೆಯು ಗುಣಮುಖಳಾಗತೊಡಗಿದಳು. ಮಾತ್ರವಲ್ಲದೇ ಆಪ್ತಸಮಾಲೋಚನೆಯಲ್ಲಿ ತನ್ನ ಜೊತೆ ಇದ್ದ ಗಂಡು ಮಗುವನ್ನು ಕೇಳಲಾರಂಭಿಸಿದಳು. ಇದನ್ನು ಮನಗಂಡ ಅಪ್ತ ಸಮಾಲೋಚಕರು ಸ್ನೇಹಾಲಯದ ಆಡಳಿತ ವರ್ಗಕ್ಕೆ ವಿಷಯವನ್ನು ತಿಳಿಸುವುದರ ಮೂಲಕ ಮಗು ಎಲ್ಲಿ ಹೇಗೆ ಇದೆಯೋ ಅಥವಾ ಇಲ್ಲವೋ ಎಂಬ ಹಲವಾರು ಉತ್ತರವಿಲ್ಲದ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲಾರಂಭಿಸಿದರು. ಸ್ನೇಹಾಲಯದ ಆಡಳಿತ ವರ್ಗದ ನಿರ್ದೇಶನದ ಮೇರೆಗೆ ಮಗುವಿನ ಇರುವಿಕೆಯ ಹುಡುಕಾಟದ ಹಾಗೂ ಹೋರಾಟದ ಯಾತ್ರೆಯನ್ನು ಆರಂಭಿಸಲಾಯಿತು.
ಮೊದಲ ಬಾರಿಗೆ ಮಹಿಳಾ ಮಂದಿರಕ್ಕೆ ಸ್ನೇಹಾಲಯದಿಂದ ಮಗುವಿನ ವಿಚಾರದಲ್ಲಿ ಕರೆಯನ್ನು ಮಾಡಲಾಯಿತು. ಆದರೆ ಮಗು ಈಗ ಅಲ್ಲಿ ಇಲ್ಲ ಮತ್ತು ಮಗುವನ್ನು “ಪಟ್ಟುವತ್ತ್’ ಶಿಶು ವಿಕಾಸ್ ಭವನ್ ಗೆ ಹಸ್ತಾಂತರಿಸಲಾಗಿದೆ ಎಂಬ ಉತ್ತರ ಮಾತ್ರ ಲಭಿಸಿತ್ತು. ಈ ಮಾಹಿತಿಯೊಂದಿಗೆ ಸ್ನೇಹಾಲಯ ತಂಡವು ಆರತಿಯೊಂದಿಗೆ ಮಾರ್ಚ್-27 -2021 ರಂದು ಕಾಸರಗೋಡು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಾಗಿ ಅಧ್ಯಕ್ಷರಿಗೆ ತಾಯಿಯ ದಾಖಲಾತಿ ಹಾಗೂ ಚಿಕಿತ್ಸೆಯ ನಂತರದ ಬೆಳವಣಿಗೆಯ ಮಾಹಿತಿಯನ್ನು ನೀಡಿ ಮಗುವನ್ನು ಕೋರಲಾಯಿತು. ಸತ್ಯ ಸಂಗತಿಗಳನ್ನು ವಿವರಿಸಿದ ನಂತರ ತಾಯಿಗೆ ಮಗುವನ್ನು ನೋಡುವ ಒಂದು ಅವಕಾಶವನ್ನು ಮಾಡಿಕೊಡಬೇಕಾಗಿ ವಿನಂತಿಸಲಾಯಿತು. ಅದರೆ ಅಸಮರ್ಪಕ ಉತ್ತರ ಹಾಗೂ ನಿರ್ಲಕ್ಷತೆಯನ್ನು ತೋರಿದಾಗ ನನ್ನ ಮಗುವನ್ನು ನೀಡುವಂತೆ ತಾಯಿ ಹಾಗೂ ಸಂಸ್ಥೆಯ ಸಮಾಜ ಸೇವಾ ಕಾರ್ಯಕರ್ತರು ಲಿಖಿತವಾದ ಕೋರಿಕೆಯನ್ನು ನೀಡಿರುತ್ತಾರೆ. ಆದರೆ ಸಮಿತಿಯವರು ಇದು ಇವಳ ಮಗುವಲ್ಲ ಎಂಬ ಸಂಶಯದಿಂದಲೂ, ತಾಯಿಯ ಹಾಗೂ ಕುಟುಂಬದ ದಾಖಲೆ ವಿವರಗಳನ್ನು ನೀಡುವಂತೆ ಹಾಗೂ ಕುಟುಂಬದ ಸದಸ್ಯರೊಂದಿಗೆ ಹಾಜರಾಗುವಂತೆ ತಿಳಿಸಿರುತ್ತಾರೆ.
ತದನಂತರ ಸ್ನೇಹಾಲಯದೊಂದಿಗೆ ಯಾವುದೇ ರೀತಿಯ ವಿಷಯಗಳ ವಿನಿಮಯವನ್ನು ಹಾಗೂ ಸಂಪರ್ಕವನ್ನು ಇವರು ಮಾಡಿರುವುದಿಲ್ಲ. ಸ್ನೇಹಾಲಯ ತಂಡವು ಇದೊಂದು ನ್ಯಾಯಕ್ಕಾಗಿ ಇರುವ ಹೋರಾಟವಾಗಿ ತೆಗೆದುಕೊಂಡು ಹೆತ್ತ ಕರುಳಿಗೆ ಮಗುವನ್ನು ದೊರಕಿಸುವ ನಿಟ್ಟಿನಲ್ಲಿ ಆರತಿಯ ಕುಟುಂಬವನ್ನು ಪತ್ತೆಹಚ್ಚುವ ಕಷ್ಟಕರ ಕೆಲಸದಲ್ಲಿ ತೊಡಗಲಾರಂಭಿಸಿದರು. ಕೊನೆಗೂ ನವೆಂಬರ್ 31.2021 ರಂದು ಸ್ನೇಹಾಲಯ ತಂಡವು ಬಿಹಾರದಲ್ಲಿನ ಆರತಿಯ ಕುಟುಂಬವನ್ನು ಪತ್ತೆ ಹಚ್ಚಿ ಆಕೆಯ ನಿಜವಾದ ಹೆಸರು ಕಾಂಚನದೇವಿ, ಗಂಡ ಸಂಜಯ್ಬಿಂದ್, ಮೂಲತಃ ಇವರು ಬಿಹಾರದ ಒಡವರ್ ಗ್ರಾಮದವರು, ಈಕೆಗೆ ಒಟ್ಟಿಗೆ 5 ಮಕ್ಕಳು, 5ನೇ ಮಗುವಾದ ಕೈಲಾಸ್ಗೆ ಜನ್ಮನೀಡುವ ಸಂದರ್ಭದಲ್ಲಿ ಇವಳು ಮಾನಸಿಕ ರೋಗಕ್ಕೆ ತುತ್ತಾಗಿ ಮೂರು ತಿಂಗಳ ಮಗುವಿನೊಂದಿಗೆ ಮನೆ ಬಿಟ್ಟಿರುತ್ತಾರೆ ಎಂಬ ವಿಚಾರವು ತಿಳಿಯಿತು. ಅವರು ಎಷ್ಟೇ ಹುಡುಕಾಟ ನಡೆಸಿದರೂ ತಾಯಿ- ಮಗು ಸಿಕ್ಕಿರುವುದಿಲ್ಲ ಎಂಬ ವಿಚಾರ ತಿಳಿಯಿತು. .
ವಿಳಾಸ ಪತ್ತೆ ಹಚ್ಚಿದ ಬಳಿಕ 3 ಡಿಸೆಂಬರ್ 2021 ರಂದು ಸ್ನೇಹಾಲಯದ ತಂಡವು ಆರತಿಯೊಂದಿಗೆ ಕಾಸರಗೋಡು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಭೇಟಿ ನೀಡಿ ಈ ಎಲ್ಲಾ ವಿಷಯಗಳನ್ನು ತಿಳಿಸಿರುತ್ತಾರೆ, ಆದರೆ ಅಂದು ಕೂಡಾ ಅವರು ಮಗುವನ್ನು ನೋಡುವ ಅವಕಾಶವನ್ನು ತಾಯಿಗೆ ನಿಷೇಧಿಸಿ ಮಾರ್ಚ್ ತಿಂಗಳಲ್ಲಿ ನೀಡಲಾದ ನಮ್ಮ ಪತ್ರಕ್ಕೆ ಯಾವುದೇ ರೀತಿಯ ಉತ್ತರ ನೀಡದೆ ಏಕಾಎಕಿಯಾಗಿ ಮಗುವನ್ನು ಫೋಸ್ಟರ್ ಕೇರ್ ಗೆ ನೀಡಿರುವುದಾಗಿ ತಿಳಿಸಿರುತ್ತಾರೆ. ಸಮಿತಿಗೆ ಹಾಜರುಪಡಿಸಲಾದ ಕುಟುಂಬದವರ ದಾಖಲೆಗಳನ್ನು ಪರಿಶೋಧಿಸಿದ ನಂತರ ಡಿ.ಎನ್.ಎ ಮಾಡಿ ಕೊನೆಗೆ ಮಗುವನ್ನು ತೋರಿಸುವುದಾಗಿ ಹೇಳಿ ನಮ್ಮನ್ನು ಕಳುಹಿಸಿದರು.
ಗುಣಮುಖ ಹೊಂದಿದ ತಾಯಿಯು ಆಗಾಗ್ಗೆ ಮಗುವನ್ನು ವಿಚಾರಿಸುತ್ತಿರುವುದರಿಂದ ಮತ್ತೆ ಡಿಸೆಂಬರ್ 06.2021 ರಂದು ಹೆತ್ತ ತಾಯಿಗೆ ಮಗುವನ್ನು ಕಾಣುವ ನ್ಯಾಯ ಒದಗಿಸಬೇಕಾಗಿ ಕೇಳುತ್ತಾ ಕಾಸರಗೋಡು ಪೋಲಿಸ್, ಕಾಸರಗೋಡು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹತ್ತು ಹಲವಾರು ಭಾರಿ ಭೇಟಿ ನೀಡಲಾಯ್ತು, ಇದರೊಂದಿಗೆ ಅರ್ಜಿಯನ್ನೂ ನೀಡಲಾಯ್ತು.
ದಿನಾಂಕ 09.12.2021ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೂ ಅರ್ಜಿಯನ್ನು ನೀಡಿ ತಾಯಿ ಮತ್ತು ಮಗುವಿಗೆ ನ್ಯಾಯ ಒದಗಿಸುವಂತೆ ಕೋರಲಾಯಿತು. ಇವರ ವಿಶೇಷ ಆಸಕ್ತಿಯ ಮೇರೆಗೆ 2 ದಿನದ ನಂತರ ಮಗುವನ್ನು ಒಂದು ಕ್ಷಣಕ್ಕೆ ತಂದೆ ತಾಯಿಗೆ ತೋರಿಸಲಾಯಿತು. ಇದರಂತೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಹೆತ್ತ ತಾಯಿಗೆ ತನ್ನ ಮಗುವನ್ನು ನೀಡುವಂತೆ ಕೋರಲಾಯಿತು. ಜಿಲ್ಲಾಧಿಕಾರಿಗಳ ನಿರ್ದೆಶನದಂತೆ 14 ಡಿಸೆಂಬರ್ 2021 ರಂದು ಎಲ್ಲಾ ದಾಖಲೆಗಳನ್ನು ಮಗುವಿನ ತಂದೆ ತಾಯಿಯವರು ಖುದ್ದಾಗಿ ಹಾಜರಾಗಿ ಕಾಸರಗೋಡು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ನೀಡಲಾಯ್ತು.
ಆದರೆ ಈ ಎಲ್ಲಾ ದಾಖಲೆಗಳು ವಿಶ್ವಾಸನೀಯ ಅಲ್ಲವೆಂದು ಹೇಳಿ ಅವರು ನಿರಾಕರಿಸಿದರು. ಕೊನೆಗೆ ಡಿಸೆಂಬರ್ 17 2021 ರಂದು ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಧಿಕಾರಿಗಳು, ಕಾಸರಗೋಡು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು, ಜಿಲ್ಲಾ ಸಾಮಾಜಿಕ ನ್ಯಾಯ ಸಮಿತಿಯ ಅಧಿಕಾರಿ, ಸ್ನೇಹಾಲಯ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಮಾಜಿಕ ಕಾರ್ಯಕರ್ತರು ಹಾಗೂ ಮಗುವಿನ ತಂದೆ ತಾಯಿ ಮತ್ತು ಸಂಬಂಧಿಕರ ಉಪಸ್ಥಿತಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ತಾಯಿಯು ಮಗುವನ್ನು ಕೋರಿ ಮಾರ್ಚ್ ತಿಂಗಳಲ್ಲಿ ನೀಡಿದ ಅರ್ಜಿಯ ನಂತರ ಅಕ್ಟೋಬರ್ ತಿಂಗಳಿನಲ್ಲಿ ಕಾಸರಗೋಡು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು ಈ ಮಗುವನ್ನು ಪೋಸ್ಟರ್ ಕೇರ್ ಗೆ ನೀಡಿರುವುದಾಗಿ ತಿಳಿದು ಬಂತು. ಈ ಬಗ್ಗೆ ಜಿಲ್ಲಾಧಿಕಾರಿಯವರು ವಿಚಾರಣೆ ನಡೆಸಿದರು. ಮಾತ್ರವಲ್ಲದೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನೇತೃತ್ವದಲ್ಲಿ ತಾಯಿ-ಮಗುವಿನ ಡಿ.ಎನ್.ಎ ಪರೀಕ್ಷೆಯನ್ನು ಕೂಡಲೇ ನಡೆಸುವಂತೆ ತಿಳಿಸಿರುತ್ತಾರೆ .
ಇದರಂತೆ 19 ಡಿಸೆಂಬರ್ 2021 ರಂದು ಕಾಸರಗೋಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗುವಿನ ಡಿ.ಎನ್.ಎ ನಡೆಸಲಾಯಿತು. 27 ಡಿಸೆಂಬರ್ 2021 ರಂದು ಡಿ.ಎನ್.ಎ ಫಲಿತಾಂಶದಲ್ಲಿ ಅರತಿಯೇ ಮಗುವಿನ ತಾಯಿ ಎಂಬುವುದಾಗಿ ಧೃಢಪಟ್ಟಿತು. ಇದರ ನಡುವೆ 24 ಡಿಸೆಂಬರ್ 2021 ಕಾಸರಗೋಡು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ಹಕ್ಕು ಅಧಿನಿಯಮದಡಿ ಮಗುವಿನ ಸೋಶಲ್ ಅನಾಲಿಸಿಸ್ ವರದಿಯನ್ನು ಕೋರಿ ಅರ್ಜಿ ನೀಡಲಾಯ್ತು. 27 ಡಿಸೆಂಬರ್ ರಂದು ಡಿ.ಎನ್.ಎ ಫಲಿತಾಂಶದ ಆಧಾರದ ಮೇರೆಗೆ ಮಗುವನ್ನು ತಾಯಿಗೆ ನೀಡಬೇಕಾಗಿ ಪೋಷಕರು ಹಾಜರಾಗಿ ಮಗದೊಮ್ಮೆ ಅರ್ಜಿಯನ್ನು ಕಾಸರಗೋಡು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಸಲ್ಲಿಸಿರುತ್ತಾರೆ.
ಅದರೆ ಮತ್ತೆ 2 ದಿನಗಳ ಕಾಲವಕಾಶ ಪಡೆದು 31.12.2021ರಂದು ಮಧ್ಯಾಹ್ನ 1.30 ಕ್ಕೆ ಮಗುವನ್ನು ತಂದೆ -ತಾಯಿಗೆ ಒಪ್ಪಿಸಿರುತ್ತಾರೆ. ಈ ರೀತಿಯಾಗಿ 2021 ಮಾರ್ಚ್ ತಿಂಗಳಿಂದ ಆರಂಭಗೊಂಡ ನ್ಯಾಯದ ಹೋರಾಟಕ್ಕೆ ಹಾಗೂ ಹೆತ್ತ ಕರುಳಿಗೆ ನ್ಯಾಯ ಲಭಿಸಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.