ಶೇಖ್ ಮಹಮೂದ್ ಅಫಂಧಿ ಅವರ ಬಗ್ಗೆ ಒಂದಿಷ್ಟು.. (ವಿಶ್ವ ಕಾನಂದಿಗ ನ್ಯೂಸ್) : ಆಧ್ಯಾತ್ಮಿಕತೆಯ ಆಧಾರದ ಮೇಲೆ ಸಾಮಾಜಿಕ ಪುಷ್ಟೀಕರಣಕ್ಕೆ ಜೀವಂತ ಸಾಕ್ಷಿಯಾಗಿದ್ದಾರೆ ಟರ್ಕಿಯ ವಿಶ್ವಪ್ರಸಿದ್ಧ ಸುನ್ನಿ (ಹನಫಿ) ವಿದ್ವಾಂಸ ಶೇಖ್ ಮಹಮೂದ್ ಅಫಂಧಿ. ಇವರು ನಕ್ಷಬಂಧಿ ಸೂಫಿಸಂನ ಆಧ್ಯಾತ್ಮಿಕ ಗುರುವಾಗಿದ್ದಾರೆ. ಇವರಿಗೆ ಹತ್ತು ಲಕ್ಷಕ್ಕಿಂತಲೂ ಅಧಿಕ ಶಿಷ್ಯಂದಿರಿದ್ದಾರೆ ಹಾಗೂ ಜಗತ್ತಿನ ಮೂಲೆಗಳಿಂದಲೂ ಹಲವಾರು ಜನರು ಇವರಿಂದ ಆಧ್ಯಾತ್ಮಿಕ ಶಿಷ್ಯತ್ವ ಸ್ವೀಕರಿಸಿದ್ದಾರೆ. ವಿಶ್ವದ ಅತ್ಯಂತ ಶ್ರೇಷ್ಠ 500 ಧಾರ್ಮಿಕ ಪಂಡಿತರಲ್ಲಿ ಇವರು ಒಬ್ಬರು.
ಇವರು ಹಲವು ಅಧ್ಯಾತ್ಮಿಕ ನಾಯಕರು ಜನಿಸಿದಂತಹ ಟರ್ಕಿಯ ಉತ್ತರಭಾಗದ ತ್ವಾರಾಬ್ಸುನಿಯಲ್ಲಿ 1929 ರಲ್ಲಿ ಜನಿಸಿದರು. (ಸದ್ಯ ಇವರ ವಯಸ್ಸು-92). ಆಧ್ಯಾತ್ಮಿಕವಾಗಿಯೂ, ಬೌದ್ಧಿಕವಾಗಿಯೂ ಶ್ರೀಮಂತ ಕುಟುಂಬದಿಂದ ಬಂದವರಾಗಿದ್ದಾರೆ ಶೈಖ್ ಅಫಂಧಿ. ತಂದೆ ಶೈಖ್ ಅಲಿ ಅಫಂಧಿ ಹಾಗೂ ತಾಯಿ ಫಾತಿಮಾ ಹನೀಂ ಅಫಂಧಿ. ತನ್ನ ಆರನೇ ವಯಸ್ಸಿನಲ್ಲಿ ಹೆತ್ತವರ ಆಶೀರ್ವಾದದೊಂದಿಗೆ ಅವರು ಪವಿತ್ರ ಕುರ್ಆನ್ ಅನ್ನು ಕಂಠಪಾಠ ಮಾಡಿದರು, ಬಾಲ್ಯದ ಅವರ ಪಕ್ವತೆ ಹಾಗೂ ಸ್ವಭಾವ ಮತ್ತು ಗಾಂಭೀರ್ಯತೆ ಸುತ್ತಮುತ್ತಲಿನ ಎಲ್ಲರನ್ನೂ ವಿಸ್ಮಯಗೊಳಿಸುವಂತಿತ್ತು.
ತಮ್ಮ ಮಕ್ಕಳೂ ಶೈಖ್ ಅಫಂಧಿಯಂತೆ ಆಗಬೇಕೆಂಬ ಹಂಬಲದಿಂದ ಆ ಊರಿನ ಹಲವರು ತಮ್ಮ ಮಕ್ಕಳಿಗೆ ಮಹ್ಮೂದ್ ಎಂದು ಹೆಸರು ಇಟ್ಟಿದ್ದರಂತೆ. ಬಾಲ್ಯದಲ್ಲೇ ನಮಾಝ್ ಮತ್ತು ಇನ್ನಿತರ ಇಬಾದತುಗಳಲ್ಲಿ ಮಗ್ನರಾಗುತ್ತಿದ್ದ ಅವರು ಸಣ್ಣಂದಿನಿಂದಲೇ ಸುನ್ನತ್ ನಮಾಝ್ಗಳನ್ನು ಅಭ್ಯಾಸ ಮಾಡಿಕೊಂಡಿದ್ದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣಕ್ಕಾಗಿ ಟರ್ಕಿಯ ಪ್ರಮುಖ ನಗರವಾದ ಕೇಯ್ಸೆರಿಗೆ ಹೋದ ಅವರು ಆ ಊರಿನ ಪ್ರಮುಖ ವಿದ್ವಾಂಸರಾದ ಶೈಖ್ ಅಹ್ಮದ್ ಹೊಜಾ (ಉಸ್ತಾದ್) ಅವರಿಂದ ಅರೇಬಿಕ್ ನಹ್ವ್ (ವ್ಯಾಕರಣ), ಸ್ವರ್ಫ್ (ರೂಪವಿಜ್ಞಾನ) ಮತ್ತು ಪರ್ಷಿಯನ್ ಭಾಷೆ ಕಲಿತರು. ಅವರು ಕೆಯ್ಸೆರಿಯಲ್ಲಿ ಒಂದು ವರ್ಷ ಕಲಿತು ನಂತರ ತನ್ನ ತಾಯ್ನಾಡಿಗೆ ಮರಳಿದರು. ಆ ಸಮಯದಲ್ಲಿ ಆ ಊರಿನಲ್ಲಿ ಪಠಣದಲ್ಲಿ (ಖಿರಾಅತ್) ನಲ್ಲಿ ಅತ್ಯಂತ ಪ್ರಸಿದ್ಧರಾಗಿದ್ದ ಖೈರಾ ವಿದ್ವಾಂಸ ಮಹಮ್ಮದ್ ರುಶ್ದು ಅಶಿಕುತಲು ಹೋಜಾ ಅಫಂಧಿ ಅವರಿಂದ ಕುರಾನ್ ಓದುವ ಜ್ಞಾನವನ್ನು ಪಡೆದರು. ನಂತರ ಅವರು ಸುಲೈಮಾನಿಯ ಮದ್ರಸ (ಕಾಲೇಜು)ದಲ್ಲಿ ಹಿರಿಯ ಪ್ರಾಧ್ಯಾಪಕರಾದರು.
16 ನೇ ವಯಸ್ಸಿನಲ್ಲಿ ಚಲಕಲಿ ಹಾಜಿ ದುರ್ಸುನ್ ಅಫಂಧಿ ಫೇಸಿ ಎಂಬವರ ಅಧೀನದಲ್ಲಿ ತಫ್ಸೀರ್, ಹದೀಸ್, ಫಿಕ್ಹ್, ಉಸ್ವುಲ್ ಫಿಖ್ಹ್, ಇಲ್ಮುಲ್ ಕಲಾಂ (ಅಖೀದ) ಮತ್ತು ಬಲಾಗಾ ವಿಭಾಗಗಳನ್ನು ಕರಗತ ಮಾಡಿಕೊಂಡ ಅವರು ಹೆಚ್ಚಿನ ಅಂಕಗಳೊಂದಿಗೆ ಡಿಪ್ಲೊಮಾ ಪಡೆದರು.
ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ಪೂರ್ಣಗೊಳಿಸಿದ ಅವರು ಸಹ್ರ ಹನೀಂ ಅವರನ್ನು ವಿವಾಹವಾದರು (ವಿಯೋಗ:25-05-1993) ಅವರಿಗೆ ಅಹ್ಮದ್, ಅಬ್ದುಲ್ಲಾ ಮತ್ತು ಫಾತಿಮಾ ಎಂಬ ಮೂರು ಸಂತಾನಗಳಿವೆ.
ನಂತರ ಅವರು ಜ್ಞಾನದ ಪ್ರಸಾರ ಮತ್ತು ಪ್ರಚಾರದಲ್ಲಿ ಸಕ್ರಿಯರಾದರು ಮತ್ತು ದೀರ್ಘಕಾಲದವರೆಗೆ ಇಮಾಮ್ ಆಗಿ ಕಾರ್ಯನಿರ್ವಹಿಸಿದರು. ನಂತರ 1952 ರಲ್ಲಿ ಅವರು ಮಿಲಿಟರಿ ಸೇವೆಗಾಗಿ ಬಂದಿರ್ಮಾಗೆ ಹೋದರು. ಸೇನೆಯಲ್ಲಿ ಕಾರ್ಯಾಚರಿಸುತ್ತಿದ್ದಂತಹ ಸಂಧರ್ಭದಲ್ಲಿ ತನ್ನ ಆಧ್ಯಾತ್ಮಿಕ ನಾಯಕರಾದ ಶೈಖ್ ಅಲಿ ಹೈದರ್ ಅಹಿಸ್ಗವಿ ಅನ್ನಕ್ಷಬಂಧಿ ಅಲ್ ಖಾಲಿದಿ ಎಂಬ ಗುರುವನ್ನು ಭೇಟಿಯಾಗಿ ಪರಿಚಯಗೊಂಡರು.
ಇವರು ಕರ್ಮಶಾಸ್ತ್ರದ ಎಲ್ಲಾ ನಾಲ್ಕು ಮದ್ಹಬ್ಗಳಲ್ಲಿ ಜ್ಞಾನ ಹೊಂದಿದ್ದರು ಮತ್ತು ಎಲ್ಲಾ ನಾಲ್ಕು ಮದ್ಹಬ್ಗಳಲ್ಲಿ ಫತ್ವಾಗಳನ್ನು ಹೊರಡಿಸಲು ಸಮರ್ಥರಾಗಿದ್ದ ಮುಫ್ತಿಯಾಗಿದ್ದರು. ಅವರು ಆಧ್ಯಾತ್ಮಿಕ ಗುರುಗಳನ್ನು ಪರಿಚಯಗೊಂಡದರ ಹಿಂದೆ ಅನೇಕ ಕಥೆಗಳಿವೆ. (ಸುಧೀರ್ಘವಾಗುವುದರ ಭಯದಿಂದ ಸದ್ಯಕ್ಕೆ ಅದನ್ನು ಇಲ್ಲಿ ವಿವರಿಸಲಾಗಿಲ್ಲ.) ಚಿಕ್ಕ ವಯಸ್ಸಿನಲ್ಲಿಯೇ ಆಧ್ಯಾತ್ಮಿಕ ಗುರುಗಳನ್ನು ಹುಡುಕುವಲ್ಲಿ ತಾನು ಆಸಕ್ತಿ ಹೊಂದಿದ್ದೆ ಎಂದು ಅವರೇ ಹೇಳಿದ್ದಾರೆ. 1954 ರಲ್ಲಿ ತನ್ನ ಸೇನಾ ಸೇವೆಯನ್ನು ಪೂರ್ಣಗೊಳಿಸಿದ ನಂತರ ಅವರು ಇಸ್ತಾಂಬುಲ್ನ ಫಾತಿಹ್ನಲ್ಲಿರುವ ಇಸ್ಮಾಯಿಲ್ ಗ್ರ್ಯಾಂಡ್ ಮಸೀದಿಯ ಅಧಿಕೃತ ಇಮಾಮ್ ಆದರು. ಅವರ ಗುರುಗಳ ಮರಣದ ನಂತರ, ಅವರು ಗುರುವಿನ ಉತ್ತರಾಧಿಕಾರಿಯಾಗಿ ಆಧ್ಯಾತ್ಮಿಕ ಜವಾಬ್ದಾರಿಯನ್ನು ವಹಿಸಿಕೊಂಡರು.
ಈ ಸಮಯದಲ್ಲಿ ಅವರು ತಮ್ಮ ಗುರುಗಳ ಅಧೀನದಲ್ಲಿ ಶಿಷ್ಯರಾಗಿದ್ದ ಅನೇಕ ಶಿಷ್ಯರಿಗೆ ಆಧ್ಯಾತ್ಮಿಕ ಮತ್ತು ಬೌದ್ಧಿಕ ಮಾರ್ಗದರ್ಶನ ನೀಡಲು ಆರಂಭಿಸಿದರು. ಅವರು ಸಾಮಾಜಿಕ ಮತ್ತು ವೈಯಕ್ತಿಕ, ಸಾಮುದಾಯಿಕವಾಗಿ ಟರ್ಕಿಯಲ್ಲಿ ಸಕ್ರಿಯ ಉಪಸ್ಥಿತಿಯಾದರು. ಟರ್ಕಿ ಮತ್ತು ಇನ್ನಿತರ ರಾಷ್ಟ್ರಗಳಿಂದ ಪ್ರಮುಖ ಪಂಡಿತರು, ಆಡಳಿತಗಾರರು ಆಧ್ಯಾತ್ಮಿಕ ಶಿಷ್ಯತ್ವಕ್ಕಾಗಿ ಇವರನ್ನು ಹುಡುಕಿ ಅನೇಕರು ಇವರ ಬಳಿ ಬಂದರು.
ಇತ್ತೀಚೆಗೆ ಅಗಲಿದ ಶೇಖ್ ಮೊಹಮ್ಮದ್ ಅಲಿ ಅಸ್ಸಾಬೂನಿ ಸೇರಿದಂತೆ ಅನೇಕ ಪ್ರಖ್ಯಾತ ವಿದ್ವಾಂಸರು ಅವರ ಆಧ್ಯಾತ್ಮಿಕ ಶಿಷ್ಯತ್ವವನ್ನು ಸ್ವೀಕರಿಸಿದ್ದಾರೆ. 1962 ರಲ್ಲಾಗಿತ್ತು ಇವರ ಮೊದಲ ಹಜ್ ಯಾತ್ರೆ . ನಂತರ ಹಲವಾರು ಹಜ್ ನಿರ್ವಹಿಸಲು ಅವರು ಮಕ್ಕಾದತ್ತ ಯಾತ್ರೆಗೈದಿದ್ದಾರೆ. ಸೆಪ್ಟೆಂಬರ್ 12, 1980 ಟರ್ಕಿಯಲ್ಲಿ ನಡೆದ ರಾಜಕೀಯ ಮೇಲಾಟಕ್ಕಿಂತ ಮೊದಲು ಬಲಪಂಥೀಯ ಮತ್ತು ಎಡಪಂಥೀಯ ಗುಂಪುಗಳ ನಡುವೆ ನಿರಂತರ ನಡೆಯುತ್ತಿರುವ ಘರ್ಷಣೆಗೆ ಮನನೊಂದು ಅಲ್ಲಿಯ ಜನರು ಶೈಖ್ ಅಫಂಧಿಯವರನ್ನು ಅಭಿಪ್ರಾಯ ಕೇಳಿದಾಗ ಅವರು ತನ್ನ ಅನುಯಾಯಿಗಳಿಗೆ ಹೇಳಿದರು: “ನಾವು ಜಿಹಾದ್ (ಪವಿತ್ರ ಯುದ್ಧ) ಮಾಡೋಣ”, ಒಳ್ಳೆಯದನ್ನು ಮಾಡಿಕೊಂಡು ತಪ್ಪು ಮಾಡುವುದನ್ನು ನಿಷೇಧಿಸುತ್ತ ಜನರನ್ನು ಪುನರುತ್ಥಾನಗೊಳಿಸುವುದು ನಮ್ಮ ಕರ್ತವ್ಯ, ಶೈಖ್ ಅಫಂಧಿ ಅವರು ಶಾಂತಿಯ ಪ್ರತಿಪಾದಕರಾಗಿದ್ದು ಜನರನ್ನು ಜನರನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದರು.
ಅವರ ಪತ್ನಿ ಜಹ್ರಾ ಹನೀಮ್ ಮೇ 25, 1993 ರಂದು ನಿಧನರಾದರು. ನಂತರ ಶೈಖ್ ಮನ್ಸೂರ್ ಬೈದೇಮಿರ್ ಎಫಂಧಿಯವರ ಮಗಳಾದ ಮೆರೆಫ್ ಹನೀಮ್ ಅವರನ್ನು ವಿವಾಹವಾದರು. ಅವರು ತಮ್ಮ 65 ನೇ ವಯಸ್ಸಿನಲ್ಲಿ 1996 ರಲ್ಲಿ ತನ್ನ ಇಮಾಮ್ ವೃತ್ತಿಯಿಂದ ನಿವೃತ್ತರಾದರು. ಇವರು ಅನೇಕ ಇಸ್ಲಾಮಿಕ್ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಆಧ್ಯಾತ್ಮಿಕ ಗುರುಗಳ ಸಮಾಧಿಗಳಿನ್ನು ಸಂದರ್ಶಿಸಿದ್ದಾರೆ. 2005 ರಲ್ಲಿ ಭಾರತಕ್ಕೆ ಬಂದಿದ್ದಾರೆ. ಟರ್ಕಿಯ ಎಲ್ಲಾ ಭಾಗಗಳಿಗೆ ಪ್ರಯಾಣಿಸುವುದರ ಜೊತೆಗೆ ತಮ್ಮ ಶಿಷ್ಯರೊಂದಿಗೆ ಮಧ್ಯಪ್ರಾಚ್ಯ, ಮತ್ತು ಯುರೋಪಿನ ಇತರ ಭಾಗಗಳಿಗೆ ಪ್ರಯಾಣಿಸಿ ಇಸ್ಲಾಮಿನ ಸುಂದರವಾದ ಸಂದೇಶಗಳನ್ನು ನೀಡಲು ಮತ್ತು ಜನರನ್ನು ಸತ್ಯಕ್ಕೆ ಆಹ್ವಾನಿಸಿದರು.
ಸಾಧ್ಯವಾದಾಗಲೆಲ್ಲಾ ಅವರು ಪ್ರತಿವರ್ಷ ಮಕ್ಕಾ ಮತ್ತು ಮದೀನಾಕ್ಕೆ ಭೇಟಿ ನೀಡಿ ಹಜ್ ಮಾಡಲು ಮತ್ತು ವರ್ಷಕ್ಕೊಮ್ಮೆ ಉಮ್ರಾ ಮಾಡಲು ಹೋಗುತ್ತಿದ್ದರು. ಹಿಂದೆ ಪವಿತ್ರ ಹಜ್ ಮತ್ತು ರೌಳಾ ಝಿಯಾರತ್ಗಾಗಿ ಅವರು ತನ್ನೊಂದಿಗೆ ನೂರಾರು ಶಿಷ್ಯಂದಿರನ್ನು ಸೇರಿಸಿಕೊಂಡು ಝಿಯಾರತ್ ನಡೆಸುತ್ತಿದ್ದಂತ ಸುಂದರವಾದ ನೋಟವನ್ನು ಕಂಡು ಜಗತ್ತು ಆಶ್ಚರ್ಯ ಮತ್ತು ವಿಸ್ಮಯದಿಂದ ನೋಡುತ್ತಿತ್ತು. ಅದರ ವೀಡಿಯೊಗಳು ಇಂದಿಗೂ ಯೂಟ್ಯೂಬ್ಗಳಲ್ಲಿ ಲಭ್ಯವಿದೆ.
ಅವರ ಪ್ರವಾದಿ ಚರ್ಯೆಯ ಕುರಿತುಳ್ಳ ಅತ್ಯುತ್ತಮ ತಿಳುವಳಿಕೆ, ಶರಿಅತ್ ಬಗ್ಗೆ ಅವರ ಆಳವಾದ ಜ್ಞಾನ, ಅವರ ವರ್ಚಸ್ಸು ಮತ್ತು ಆಕರ್ಷಕ ನಡವಳಿಕೆ, ಮತ್ತು ಅವರ ಭವ್ಯ ಸ್ವಭಾವವು ಅವರ ಪ್ರಯಾಣದ ಸಮಯದಲ್ಲಿಯೂ ಸಹ ಪರಿಚಯವಿರುವವರಲ್ಲಿ ಬಹಳ ಪ್ರಭಾವ ಬೀರುತ್ತಿತ್ತು. ಅವರು ಇಸ್ಲಾಮಿಕ್ ಜಗತ್ತಿನಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ ಮತ್ತು ಎಲ್ಲಾ ವರ್ಗದ ಜನರ ಗೌರವ ಮತ್ತು ಪ್ರೀತಿಯನ್ನು ಗಳಿಸಿದ್ದಾರೆ. ಅವರು ಅನೇಕ ಇಸ್ಲಾಮಿಕ್ ಶೈಕ್ಷಣಿಕ ಸೆಮಿನಾರ್ಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ಜ್ಞಾನವನ್ನು ಪಡೆದುಕೊಳ್ಳಲು ಮತ್ತು ಅದರಂತೆ ಕಾರ್ಯನಿರ್ವಹಿಸಲು ಜನರನ್ನು ಪ್ರೋತ್ಸಾಹಿಸಿದ್ದಾರೆ.
ವರ್ಷಗಳಿಂದ ನಿಯಮಿತವಾಗಿ ನಡೆಸಿಕೊಂಡು ಬಂದ ಧರ್ಮೋಪದೇಶಗಳನ್ನು ಅವರ ಶಿಷ್ಯಂದಿರು ಸಂಗ್ರಹಿಸಿ ಆರು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಅವರು ಐವತ್ತು ವರ್ಷಗಳಿಂದ ವಾರದ ಪ್ರತಿ ದಿನ ಉಪನ್ಯಾಸ ನೀಡುತ್ತಾ ಬಂದಿದ್ದಾರೆ. ಕಳೆದ ಹತ್ತು ಹದಿನೈದು ವರ್ಷಗಳಿಂದ ನಿಯಮಿತವಾಗಿ ದಾಖಲಾಗಿರುವ ಮಹಿಳೆಯರಿಗಾಗಿ ನಡೆಸಿದ ಅಧ್ಯಾತ್ಮಿಕ ತರಗತಿಗಳ ಸಂಖ್ಯೆಯನ್ನು ಪರಿಗಣಿಸಿದರೆ ಸಂಪೂರ್ಣ ಉಪನ್ಯಾಸಗಳ ಸಂಗ್ರಹವು ನೂರು ಸಂಪುಟಗಳನ್ನು ತಲುಪುತ್ತದೆ ಎಂಬುವುದು ಸ್ಪಷ್ಟವಾಗುತ್ತದೆ. “ಖುರ್ಆನ್ ಮಜೀದ್” ಎಂಬ ಶೀರ್ಷಿಕೆಯಡಿಯಲ್ಲಿ ಖುರಾನ್ ಅನ್ನು ಟರ್ಕಿಗೆ ಭಾಷಾಂತರಿಸಿರುವುದು ಅವರ ಬರಹಗಳಲ್ಲಿ ಒಂದು ಮೈಲಿಗಲ್ಲಾಗಿದೆ. “ರೂಹುಲ್ ಖುರ್ಆನ್” ಎಂಬ ಹೆಸರಿನಲ್ಲಿರುವ ಟರ್ಕಿ ಭಾಷೆಯಲ್ಲಿನ ಖುರ್ಆನ್ ಭಾಷಾಂತರ ಇವರ ಮಗದೊಂದು ಕೃತಿ. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಚಟುವಟಿಕೆಗಳ ಜೊತೆಗೆ ಹಲವು ಫೌಂಡೇಶನ್ ಗಳು ಇವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಾ ಬರುತ್ತಿದೆ.
ಪ್ರತ್ಯೇಕವಾಗಿ “ದಿ ಮುಜಾದಿದ್ ಮಹಮೂದ್ ಎಫಂಧಿ ಫೌಂಡೇಶನ್, ದಿ ಮಾರಿಫೆಟ್ ಅಸೋಸಿಯೇಷನ್, ದಿ ಫೆಡರೇಶನ್ ಆಫ್ ಮಾರಿಫೆಟ್ ಅಸೋಸಿಯೇಷನ್ಸ್, ಅಹ್ಲುಸ್ಸುನ್ನ ವಲ್ ಜಮಾಅ ಕೋನ್ಫೆಡರೇಷನ್, ಇವುಗಳಲ್ಲಿ ಅತ್ಯಧಿಕವು ಶೈಕ್ಷಣಿಕ, ಆರೋಗ್ಯ, ಶಾಸ್ತ್ರೀಯ ಅನ್ವೇಷಣೆ, ದಾನಧರ್ಮ ಸೇವನೆಗಳು, ಉದ್ಯೋಗ ಸೇವೆಗಳನ್ನು ನೀಡುತ್ತಾ ಬರುತ್ತಿದೆ. ಅವರ ನಾಯಕತ್ವದಲ್ಲಿ, ಮಾರಿ-ಫೆಟ್ ಎಂಬ ಹೆಸರಿನಲ್ಲಿ ವಿದ್ವತ್-ಸಾಂಸ್ಕೃತಿಕ ಮಾಸಿಕ ಪ್ರಕಟವಾಗುತ್ತಿದೆ.
ಇವರು ಪ್ರಸ್ತುತ ಟರ್ಕಿಯ ಇಸ್ತಾಂಬುಲ್ನಲ್ಲಕ ವಾಸಿಸುತ್ತಿದ್ದಾರೆ ಮತ್ತು ಕೆಲವು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇವರ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅಧ್ಯಯನಗಳು ತುರ್ಕಿಷ್ ಭಾಷೆಯಲ್ಲಾಗಿದೆ ಇರುವುದು. ಅವರ ಜೀವನದ ಕುರಿತ ಸಾಕ್ಷ್ಯಚಿತ್ರವು ಯೂಟ್ಯೂಬ್ನಲ್ಲಿ ಲಭ್ಯವಿದೆ.
ಅಫಂಧಿ: ಗ್ರೀಕ್ ಭಾಷೆಯಿಂದ ಬಂದ ತುರ್ಕಿಷ್ ಪದ, ಇದರ ಅರ್ಥ ಯಜಮಾನ. ತುರ್ಕಿಯರು ಅರೇಬಿಕ್ನಲ್ಲಿ ಉನ್ನತ ಶ್ರೇಣಿಯ ವ್ಯಕ್ತಿಗಳನ್ನು ‘ಶೇಖ್’ ಎಂದು ಉಲ್ಲೇಖಿಸಲು ಬಳಸಿದ ಪದ.
(ಮಲಯಾಳಂನಿಂದ ಕನ್ನಡಕ್ಕೆ – ಇಮ್ತಿಯಾಝ್ ಬೈರಿಕಟ್ಟೆ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.