ಧಾರವಾಡ(ವಿಶ್ವಕನ್ನಡಿಗ ನ್ಯೂಸ್): ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ದೀಪಾರಾಧನೆಗೆ ವಿಶೇಷ ಮಹತ್ವವಿದೆ. ಇದು ಕೇವಲ ಬಾಹ್ಯದ ಕತ್ತಲೆಯನ್ನು ಹೊಡೆದೋಡಿಸುವ ಸಂಕೇತವಲ್ಲ. ಬದಲಾಗಿ ಭಕ್ತಿಯ ನೆಲೆಯಲ್ಲಿ ಆಚರಿಸುವ ದೀಪೋತ್ಸವ ಅಂತರಂಗದ ಅರಿವಿನ ಪ್ರಕಾಶದ ಪ್ರತೀಕವಾಗಿದೆ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ತಿಮ್ಮಾಪೂರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಭಕ್ತ ಸಮೂಹ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ಭಾರತದೆಲ್ಲೆಡೆ ಕಾರ್ತಿಕ ಶುದ್ಧ ಪ್ರತಿಪದೆಯಿಂದ ಯುಗಾದಿ ಹಬ್ಬದವರೆಗೂ ದೀಪಾರಾಧನೆ ನಡೆಸುವ ಸಂಪ್ರದಾಯವಿದ್ದು, ಈ ಸುದೀರ್ಘ ಬೆಳಕಿನ ಪರಂಪರೆಯ ಹಿಂದಿರುವ ಪ್ರಧಾನ ಆಶಯ ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಬದುಕಿನ ಪಯಣ ಸಾಗಬೇಕೆನ್ನುವುದೇ ಆಗಿದೆ ಎಂದೂ ಶ್ರೀಗಳು ನುಡಿದರು.
ದೀಪೋತ್ಸವ ಉದ್ಘಾಟಿಸಿದ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಮಾತನಾಡಿ, ನಮ್ಮ ದೇಶದ ಧರ್ಮ ಪರಂಪರೆಯ ವಿಶಿಷ್ಟ ಆಚರಣೆಗಳು ಜನಮನಕ್ಕೆ ಅಗತ್ಯವಾಗಿದ್ದು, ಅದರಲ್ಲೂ ವಿಶೇಷವಾಗಿ ಯುವಕ-ಯುವತಿಯರಲ್ಲಿ ಆದರ್ಶದ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾದ ನೈತಿಕ ನೆಲೆಯನ್ನು ಒದಗಿಸುತ್ತವೆ ಎಂದರು.
ಗದಗ ಜಿಲ್ಲೆ ಬನಹಟ್ಟಿಯ ಆಧ್ಯಾತ್ಮಿಕ ಚಿಂತಕ ಶ್ರೀರುದ್ರಸ್ವಾಮೀಜಿ, ತಿಮ್ಮಾಪೂರ ಗ್ರಾಮದ ರುದ್ರಯ್ಯ ಹಿರೇಮಠ, ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ, ಮಲ್ಲನಗೌಡ ಚಿಕ್ಕನಗೌಡರ, ನಿಂಗಪ್ಪ ಜಟ್ಟಿನಗೌಡರ, ಬಸನಗೌಡ ಸೋಮನಗೌಡರ, ಲವ ಹುಲಗೂರ ಇದ್ದರು. ಮರೇವಾಡ ಗ್ರಾ.ಪಂ. ಅಧ್ಯಕ್ಷೆ ನೀಲವ್ವ ವಗ್ಗರ ಅಧ್ಯಕ್ಷತೆವಹಿಸಿದ್ದರು. ಸನ್ಮಾನ : ಅಂತಾರಾಷ್ಟ್ರೀಯ ಹಿರಿಯ ಕ್ರೀಡಾಪಟು ಶಿವಪ್ಪಣ್ಣ ಸಲಕಿ ಹಾಗೂ ಜನಪರ ಚಿಂತನೆಯ ವೈದ್ಯ ಡಾ. ಸುಧೀರ ಜಂಬಗಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕಗಳಿಸಿದ ತಿಮ್ಮಾಪೂರ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ರಂಗೋಲಿ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಲಾಯಿತು. ಬಸವರಾಜ ಗುತ್ತೆಪ್ಪನವರ ಸ್ವಾಗತಿಸಿದರು. ಕುಶ ಹುಲಗೂರ ವಂದಿಸಿದರು. ತಿಮ್ಮಾಪೂರ ಗ್ರಾಮದ ಪ್ರಾಥಮಿಕ ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.