ಶ್ರೀನಿವಾಸಪುರ ( ವಿಶ್ವ ಕನ್ನಡಿಗ ನ್ಯೂಸ್ ): ಪರಿಸರ ಸಂರಕ್ಷಣೆ ಎಲ್ಲರ ಹೊಣೆ , ಹಸಿರು ಪಟ್ಟಣ ನಿರ್ಮಾಣ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.
ಪಟ್ಟಣದಲ್ಲಿ ಮನೆ ಮನೆಗೆ ಸಸಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು , ಈ ಬಾರಿ ಪಟ್ಟಣದ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ನಾಗರಿಕರಿಗೆ ಉಚಿತವಾಗಿ ವಿವಿಧ ಜಾತಿಯ ಗಿಡ ವಿತರಿಸಲಾಗುತ್ತಿದೆ ಎಂದು ಹೇಳಿದರು. ನಾಗರಿಕರು ಮನೆಗೊಂದು ಮರ , ಊರಿಗೊಂದು ವನ ಎಂಬ ಮಾತಿನಂತೆ ನಡೆದುಕೊಳ್ಳಬೇಕು. ಪಟ್ಟಣದ ಪ್ರತಿ ಬಡಾವಣೆಯಲ್ಲೂ ಸ್ಥಳೀಯರು ಸಾಧ್ಯವಿರುವ ಕಡೆ ಪುಟ್ಟ ಉದ್ಯಾನ ಬೆಳೆಸಬೇಕು. ಮನೆಗಳ ಸಮೀಪ ಸ್ಥಳಾವಕಾಶ ನೋಡಿ ಗಿಡ ನೆಟ್ಟು ಪೋಷಿಸಬೇಕು. ಹಾಗೆ ಮಾಡುವುದರಿಂದ ಶುದ್ಧಗಾಳಿ ಲಭ್ಯವಾಗುತ್ತದೆ. ನಾಗರಿಕರ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಪಟ್ಟಣದ ನಿವಾಸಿಗಳಿಗೆ 2,000 ಸಸಿ ವಿತರಿಸಲಾಗುತ್ತಿದೆ. ಪುರಸಭೆ ಸಿಬ್ಬಂದಿ ಹಾಗೂ ಪರಿಸರ ಪ್ರೇಮಿಗಳು ಮನೆ ಮನೆಗೆ ತೆರಳಿ ಗಿಡ ವಿತರಣೆ ಮಾಡಲಿದ್ದಾರೆ. ಪಟ್ಟಣದ ರಸ್ತೆ ಬದಿಗಳಲ್ಲೂ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ . ಆ ಕಾರ್ಯಕ್ಕೆ ಈಗಾಗಲೆ ಗುಳಿ ನಿರ್ಮಿಸಲಾಗಿದೆ ಎಂದು ಹೇಳಿದರು. ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಮಾತನಾಡಿ , ಗಿಡ ನೆಟ್ಟು ಪೋಷಿಸುವುದು ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಹಾಸಹೊಕ್ಕಾಗಿದೆ . ಹಿಂದೆ ಪ್ರತಿ ಗ್ರಾಮದಲ್ಲೂ ಅಶ್ವತ್ಥಕಟ್ಟೆಯ ಮೇಲೆ ಅರಳಿ ಹಾಗೂ ಬೇವಿನ ಮರ ಬೆಳೆಸಿ , ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಿದ್ದರು . ಆ ಮರಗಳ ನೆರಳು ಹಾಗೂ ಗಾಳಿ ಮನಸ್ಸಿಗೆ ನೆಮ್ಮದಿ ನೀಡುತ್ತಿತ್ತು ಎಂದು ಹೇಳಿದರು. ಕಂದಾಯ ಅಧಿಕಾರಿ ವಿ.ನಾಗರಾಜ್ , ಕಂದಾಯ ನಿರೀಕ್ಷಕ ಎಸ್ . ಶಂಕರ್ ಇದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.