(www.vknews.in) : ಹಝ್ರತ್ ಜಿಬ್ರೀಲರು ಕತ್ತಿಯಿಂದ ಪವಾಡದಲ್ಲಿ ಬಂಡೆ ಕಲ್ಲಿನಿಂದ ಹೊರಬಂದ ಒಂಟೆಯ ಹೊಟ್ಟೆಯನ್ನು ಕತ್ತಿಯಿಂದ ಸವರಿದಾಗ ಹೊರಬಂದ ಮರಿಯೂ ಕೂಡಾ ನಾನು ಅಲ್ಲಾಹನ ಒಂಟೆ. ಅವನನ್ನು ನಾನು ಸ್ಮರಿಸುತ್ತೇನೆ ಎಂದು ಮಾತನಾಡಿ ನೆರೆದವರನ್ನು ಅಚ್ಚರಿಗೊಳಿಸಿತು. ಮಾತ್ರವಲ್ಲ ಅರಸ ಜುಂದುಅನು ತನ್ನ ಆಸನದಿಂದ ಇಳಿದು ಹಝ್ರತ್ ಸ್ವಾಲಿಹರ ಹಣೆ ಚುಂಬಿಸಿ “ಇನ್ನು ಕಣ್ಣು ಮುಚ್ಚಿ ಕುಳಿತು ಕೊಳ್ಳಲು ಸಾಧ್ಯವಿಲ್ಲ. ನಾನು ಶಹಾದ ಹೇಳಿ ಇಸ್ಲಾಂ ಸ್ವೀಕಾರ ಮಾಡುತ್ತೇನೆ” ಎಂದು ಹೇಳಿ ಇಸ್ಲಾಂ ಸ್ವೀಕಾರ ಮಾಡಿದನು. ಬಳಿಕ ಆತನ ನೂರಾರು ಹಿಂಬಾಲಕರು ಕೂಡ ಇಸ್ಲಾಂ ಧರ್ಮ ಸ್ವೀಕಾರ ಮಾಡಿದರು.
ಆದರೆ ವಿಗ್ರಹಗಳನ್ನು ಪರಿಪಾಲಿಸುತ್ತಿದ್ದ ದಾವೂದನು ಮಾತ್ರ ಇಸ್ಲಾಂ ಸ್ವೀಕಾರ ಮಾಡಲಿಲ್ಲ. ಅಲ್ಲದೆ ಆತ ಅಲ್ಲಿ ನೆರೆದ ಜನರೆಡೆಯಲ್ಲಿ ವಿಷಬೀಜ ಬಿತ್ತಿ ಈ ರೀತಿ ಹೇಳಿದ. “ನಿಮಗೇನು ಇಷ್ಟೊಂದು ಅವಸರ? ಸ್ವಲ್ಪ ತಾಳ್ಮೆ ಮಾಡಿ. ಒಂದು ಒಂಟೆಯನ್ನು ಕಾಣುವಾಗ ಈ ರೀತಿಯೆಲ್ಲ ಮಾಡಬೇಕಾ? ಹಾಗೇನಾದರೂ ಇದ್ದರೆ ನಮ್ಮ ವಿಗ್ರಹಗಳಲ್ಲಿ ಹೋಗಿ ಹೇಳಿದರೆ ಇದಕ್ಕಿಂತಲೂ ಅದ್ಬುತವಾದ ಒಂದು ಒಂಟೆಯನ್ನು ಹೊರ ತೆಗೆದು ತೋರಿಸಬಹುದು” ಎಂದು.
ಈ ಕಾರಣದಿಂದ ಕೆಲವರು ಹಾಗೆಯೇ ಬಾಕಿಯಾದರು. ಅವರು ಈ ಇಸ್ಲಾಂ ಧರ್ಮ ಸ್ವೀಕಾರ ಮಾಡಿದ ಅರಸನ ಒಬ್ಬ ತಮ್ಮನನ್ನು ಅಧಿಕಾರಕ್ಕೆ ಹತ್ತಿಸಿದರು. ಇತ್ತ ಮೊದಲಿನ ಅರಸ ತಾನು ಆರಾಧಿಸುತ್ತಿದ್ದ ವಿಗ್ರಹಗಳನ್ನು ಪುಡಿ ಮಾಡಿದನು. ತನ್ನ ಆಸ್ತಿಪಾಸ್ತಿ ಮತ್ತು ಹಣವನ್ನು ಬಡವರಿಗೆ ಪಾಲುಮಾಡಿ ಕೊಟ್ಟನು. ಬಳಿಕ ಒಬ್ಬ ಭಯಭಕ್ತಿಯವನಾಗಿ ಜೀವನ ಸಾಗಿಸಿದನು.
ಇತ್ತ ಪವಾಡದಿಂದ ಬಂದ ಒಂಟೆಯು ಯಾವಾಗಲೂ ಹಝ್ರತ್ ಸ್ವಾಲಿಹರನ್ನು ಹಿಂಬಾಲಿಸಿ ನಡೆಯುತ್ತಿತ್ತು. ಒಂಟೆ ಮತ್ತು ಅದರ ಮರಿ ದಿನಾಲೂ ಬೆಟ್ಟಕ್ಕೆ ಹೋಗಿ ಮೇಯ್ದು ಬರುತ್ತಿತ್ತು. ಸಂಜೆಯಾದರೆ ನಗರದ ಜನಪ್ರದೇಶವಿರುವ ಜಾಗಕ್ಕೆ ಬಂದು ಒಬ್ಬೊಬ್ಬರ ಹೆಸರು ಹೇಳಿ ಕರೆದು ಹಾಲು ಕರೆದು ತೆಗೆದುಕೊಂಡು ಹೋಗಲು ಹೇಳುತ್ತಿತ್ತು. ಆಗ ಜನರು ಬಂದು ಬೇಕಾದಷ್ಟು ಹಾಲನ್ನು ಕರೆದು ತೆಗೆದುಕೊಂಡು ಹೋಗುತ್ತಿದ್ದರು. ಬಳಿಕ ಅದು ಮಸೀದಿಗೆ ಹೋಗಿ ಬೆಳಗಾಗುವ ತನಕ ಝಿಕ್ರ್ ಹೇಳುತ್ತಿತ್ತು. ಬೆಳಗಾದರೆ ಮೇಯಲು ಹೋಗುತ್ತಿತ್ತು.
ಊರಲ್ಲಿದ್ದ ಸಾರ್ವಜನಿಕ ಕೆರೆಯಿಂದ ಅದರ ದಿನದಂದು ಮಾತ್ರ ಅತ್ತ ಬಂದು ತನಗೆ ಬೇಕಾದಷ್ಟು ನೀರು ಕುಡಿಯುತ್ತಿತ್ತು. ಮಾತ್ರವಲ್ಲ ತನ್ನ ಮರಿಗೂ ಕುಡಿಸುತ್ತಿತ್ತು. ಇತ್ತ ಈ ಜನಾಂಗವು ಅವರ ದಿನದಂದು ಕೆರೆಯ ನೀರನ್ನು ಸಂಪೂರ್ಣವಾಗಿ ತೆಗೆದು ಬತ್ತಿಸುತ್ತಿದ್ದರು.
ಒಂಟೆಯು, “ನನ್ನ ಹಾಲು ಕುಡಿದು ನಿನ್ನಲ್ಲಿ ಮತ್ತು ನಿನ್ನ ಪ್ರವಾದಿ ಸ್ವಾಲಿಹರಲ್ಲಿ ನಂಬಿಕೆ ಇಟ್ಟವರಿಗೆ ಬರಕತು ನೀಡು. ಮತ್ತು ಹಾಲು ಕುಡಿದು ನಂಬಿಕೆ ಇಡದವರಿಗೆ ಆ ಹಾಲನ್ನು ಅವರ ಉದರದಲ್ಲಿ ವಿಷವನ್ನಾಗಿ ಮಾಡಿ ಅವರನ್ನು ರೋಗಿಗಳನ್ನಾಗಿ ಮಾಡು” ಎಂದು ದುಆ ಮಾಡುತ್ತಿತ್ತು.
ದುಆ ಮಾಡಿದ ನಂತರ ಹಾಲು ಕುಡಿದ ಅವಿಶ್ವಾಸಿಗಳ ದೇಹದಲ್ಲಿ ತುರಿಕೆ ತೊಡಗಿತು. ಇದರಿಂದ ಕುಪಿತರಾದ ಅವರು ಹೇಗಾದರೂ ಮಾಡಿ ಈ ಒಂಟೆಯನ್ನು ಕಶಾಪು ಮಾಡುವ ತೀರ್ಮಾನಕ್ಕೆ ಬಂದರು. ಅದಕ್ಕೋಸ್ಕರ ಅವರು ತಮ್ಮ ಜನಾಂಗದ ಒಂಬತ್ತು ಯುವಕರಿಗೆ ಸುಂದರಿಗಳಾದ ಹೆಣ್ಣು ಮಕ್ಕಳನ್ನು ತೋರಿಸಿ ಅವರಿಗೆ ಈ ಕೃತ್ಯ ಮಾಡಲು ಹುರುಪು ಕೊಟ್ಟರು. “ಒಂಟೆಯನ್ನು ಕೊಂದರೆ ನಿಮಗೆ ಒಳ್ಳೆಯ ಸುಂದರಿಗಳಾದ ಹೆಣ್ಮಕ್ಕಳನ್ನು ಕಾಮತೀಷ್ಟೆಗೆ ಕೊಡುತ್ತೇವೆ” ಎಂದಾಗಿತ್ತು ಓಫರ್. ಇದಕ್ಕೆ ಬಲಿಪಶುಗಳಾದ ಒಂಬತ್ತು ಯುವಕರು “ನಾವು ಅದನ್ನು ಮಾಡುತ್ತೇವೆ” ಎಂದು ಹೇಳಿ ಒಪ್ಪಿಕೊಂಡರು. ಇದರಲ್ಲಿ ವಿಗ್ರಹಗಳ ಪರಿಪಾಲಕನೂ ಒಳಗೊಂಡಿದ್ದನು. ಈ ಸಂಗತಿಯನ್ನು ಅಲ್ಲಾಹನು ಸೂರಃ ನಮ್ಲಿನಲ್ಲಿ ನಲವತ್ತನೆಯ ಸೂಕ್ತದಲ್ಲಿ ಉಲ್ಲೇಖಿಸಿದ್ದಾನೆ.
ಹಾಗೆಯೇ ಒಂದು ದಿನ ಈ ಒಂಬತ್ತು ಮಂದಿ ಹಝ್ರತ್ ಸ್ವಾಲಿಹರ ಗೈರು ಹಾಜರಿಯನ್ನು ಕಂಠಪೂರ್ತಿ ಶರಾಬು ಕುಡಿದು ಈ ಒಂಟೆಯನ್ನು ಕತ್ತಿ ಬಾಣಗಳಿಂದ ಹೊಡೆದು ಕೊಂದು ಬಿಟ್ಟರು. ತಾಯಿಯ ದಾರುಣ ಹತ್ಯೆಯಾಗುವುದನ್ನು ನೋಡುತ್ತಿರುವ ಮರಿ ಒಂಟೆ ಭಯದಿಂದ ಹತ್ತಿರದ ಬೆಟ್ಟಕ್ಕೆ ಓಡಿತು. ಆದರೆ ಅವರು ಅದನ್ನೂ ಹಿಂಬಾಲಿಸಿಕೊಂಡು ಹೋಗಿ ಕೊಂದುಬಿಟ್ಟರು. ಬಳಿಕ ಅದರ ಮಾಂಸವನ್ನು ಪಾಲುಮಾಡಿ ಕೊಂಡರು.
ಎಲ್ಲೋ ಪ್ರಯಾಣ ಹೋಗಿದ್ದ ಹಝ್ರತ್ ಸ್ವಾಲಿಹ್ರವರಿಗೆ ದಾರಿಮಧ್ಯೆ ಸಂಗತಿ ತಿಳಿದಾಗ ಅವರು ಬಹಳ ದುಖಿಃತರಾದರು. ಕೂಡಲೇ ತನ್ನ ಕೆಟ್ಟ ಜನಾಂಗದ ಕಡೆ ಮುಟ್ಟಿದ್ದರೂ ಅವರದನ್ನು ಕೊಂದು ಮಾಂಸಮಾಡಿ ಪಾಕಮಾಡಿ ತಿಂದು ಮುಗಿಸಿಯಾಗಿತ್ತು. ಇದರಿಂದ ಕುಪಿತರಾದ ಅವರು ತನ್ನ ಜನಾಂಗದ ನಾಶಕ್ಕೆ ಬೇಕಾಗಿ ಅಲ್ಲಾಹನಲ್ಲಿ ದುಆ ಮಾಡಿದರು. ಆದರೆ ಅವರಿಗೆ ಅದು ಒಂದು ವಿಷಯವೇ ಆಗಿರಲಿಲ್ಲ. ಅವರು ಹಝ್ರತ್ ಸ್ವಾಲಿಹರನ್ನು ನೋಡಿ “ನೀನು ತುಂಬಾ ಸಮಯವಾಯಿತು “ಶಿಕ್ಷೆ” “ಶಿಕ್ಷೆ” ಅಂತ ಹೇಳಿ ನಮ್ಮನ್ನು ಗದರಿಸುವುದು. ನಿನಗೆ ಸಾಧ್ಯವಾದುದನ್ನು ಮಾಡು. ನಮಗೆ ಯಾವುದೇ ಹೆದರಿಕೆ ಇಲ್ಲ.” ಎಂದು ಹೇಳಿ ಗೇಲಿ ಮಾಡಿದರು.
ಆದರೆ ಒಂದೆರಡು ದಿನಗಳು ಕಳೆಯುವಾಗ ಅವರ ದೇಹದಲ್ಲಿ ಹಳದಿ ಬಣ್ಣದಲ್ಲಿ ಬೊಕ್ಕೆಗಳು ಕಾಣಿಸಿಕೊಂಡವು. ಅಲ್ಲದೆ ಒಂಟೆಯು ತುಳಿದ ಜಾಗದಲ್ಲಿ ರಕ್ತದ ಕಾಲುವೆ ಹರಿಯ ತೊಡಗಿತು. ಆಗ ಅವರು ಹಝ್ರತ್ ಸ್ವಾಲಿಹರಲ್ಲಿ ಕೇಳಿದರು. “ಏನಿದು? ನಮ್ಮ ಶರೀರದ ಬಣ್ಣವೆಲ್ಲಾ ಬದಲಾಗಿದೆ” ಅದಕ್ಕೆ ಪ್ರವಾದಿ ಸ್ವಾಲಿಹರು ಹೇಳಿದರು. “ಇದು ನಿಮ್ಮ ಪ್ರಭು ಅಲ್ಲಾಹನು ನಿಮ್ಮಲ್ಲಿ ಕೋಪಗೊಂಡಿದ್ದಾನೆ. ಆ ಕಾರಣದಿಂದ ನಿಮಗೆ ಬಂದ ಶಿಕ್ಷೆಯಾಗಿದೆ” ಎಂದು.
ಇದನ್ನು ಕೇಳಿದಾಗ ಅವರ ಗರಮ್ ಮತ್ತೂ ಜಾಸ್ತಿಯಾಯಿತು. “ಇವನನ್ನು ಹೀಗೆಯೇ ಬಿಟ್ಟರೆ ಇವನ ಇಂತಹಾ ಕಸರತ್ತುಗಳು ಮತ್ತೂ ಜಾಸ್ತಿಯಾಗುತ್ತದೆ. ಆದ್ದರಿಂದ ಇವನನ್ನೇ ಕೊಲ್ಲುವುದು ಉತ್ತಮ” ಎಂದು ಲೆಕ್ಕಹಾಕಿದ ಅವರು ಕೊನೆಗೆ ಈ ಒಂಟೆಯನ್ನು ಕೊಂದ ಒಂಬತ್ತು ಮಂದಿಯನ್ನು ಹಝ್ರತ್ ಸ್ವಾಲಿಹರನ್ನು ಕೊಲ್ಲಲು ಪಿಕ್ಸ್ ಮಾಡಿದರು. ರಾತ್ರಿಯಾದಾಗ ಅವರ ಮನೆಯನ್ನು ಸುತ್ತುವರಿದರು.
— ಯೂಸುಫ್ ನಬ್ಹಾನಿ ಕುಕ್ಕಾಜೆ ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ. ಮುಂದುವರಿಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.