(www.vknews.in) : ಬಳಿಕ ಮೂರನೆಯ ಬಾರಿಯೂ ಮಗನನ್ನು ನೋಡಲು ತಂದೆ ಹಝ್ರತ್ ಇಬ್ರಾಹಿಮರು ಮಕ್ಕಾಕ್ಕೆ ಹೋದರು. ಆ ಸಂದರ್ಶನ ಪವಿತ್ರ ಕಅಬಾದ ಪುನರ್ನಿರ್ಮಾಣ ಮಾಡಲಿಕ್ಕಾಗಿತ್ತು. ಹಝ್ರತ್ ಆದಮರು ನಿರ್ಮಾಣ ಮಾಡಿ ಬಳಿಕ ಪ್ರವಾದಿ ನೂಹ್ (ಅ) ರವರ ಕಾಲದಲ್ಲಿ ಉಂಟಾದ ಪ್ರಳಯದಲ್ಲಿ ಸಂಪೂರ್ಣವಾಗಿ ಹಾನಿಯಾದ ಕಅಬಾವನ್ನು ಅಲ್ಲಾಹನ ನಿರ್ದೇಶದಂತೆ ಹಝ್ರತ್ ಜಿಬ್ರೀಲರ ಉಸ್ತುವಾರಿಯಲ್ಲಿ ನಿರ್ಮಾಣ ಮಾಡಲಾಯಿತು. ತಂದೆಗೆ ಹೆಗಲುಕೊಟ್ಟು ಮಗ ಹಝ್ರತ್ ಇಸ್ಮಾಯೀಲರು ಕಲ್ಲು ತಂದುಕೊಟ್ಟು ಸಹಕಾರ ಮಾಡಿದರು. ಹಜರುಲ್ ಅಸ್ವದ್ ಇಡುವ ಸಮಯವಾದಾಗ ಹಝ್ರತ್ ಜಿಬ್ರೀಲರು ಸ್ವರ್ಗದಿಂದ ಅದನ್ನು ತಂದುಕೊಟ್ಟರು. ಬಳಿಕ ಅದರ ಜಾಗದಲ್ಲಿ ಅದನ್ನು ಇಡಲಾಯಿತು. ನಿರ್ಮಾಣ ಪೂರ್ತಿಯಾದ ಬಳಿಕ ತಂದೆ ಮತ್ತು ಮಗ ಇಸ್ಮಾಯೀಲರು ಜೀಬ್ರೀಲರ ನಿರ್ದೇಶ ಮತ್ತು ಉಸ್ತುವಾರಿಯಲ್ಲಿ ಹಜ್ ನಿರ್ವಹಿಸಿದರು. ನಂತರ ಇಬ್ರಾಹೀಮರು ಪತ್ನಿ ಇರುವ ಫಲಸ್ತೀನಿಗೆ ಮರಳಿದರು.
ಒಂದು ದಿನ ಹಝ್ರತ್ ಇಬ್ರಾಹಿಮರು ಪತ್ನಿ ಸಾರರೊಂದಿಗೆ ಫಲಸ್ತೀನಿನ ಮನೆಯಲ್ಲಿರುವಾಗ ನಾಲ್ಕು ಮಂದಿ ಅಪರಿಚಿತರು ಕುದುರೆ ಸವಾರಿ ಮಾಡುತ್ತಾ ಮನೆಗೆ ಬಂದು ಮನೆಯವರಿಗೆ ಸಲಾಮ್ ಹೇಳಿದರು. ಅಪರಿಚಿತರಾದ ಕಾರಣ ಹಝ್ರತ್ ಇಬ್ರಾಹೀಮರಿಗೆ ಒಂದು ತರ ಭಯವಾದರೂ ಸಲಾಮ್ಗೆ ಜವಾಬುಕೊಟ್ಟು ಮನೆಗೆ ಬಂದ ಅತಿಥಿಗಳಿಗೆ ಸತ್ಕಾರ ಮಾಡಲು ಒಂದು ಹಸುವನ್ನು ದ್ಸಬಹ್ ಮಾಡಿ ಅದರ ಪದಾರ್ಥ ಮಾಡಿ ಅವರಿಗೆ ಬಡಿಸಿದರು. ಪ್ರಾರಂಭದಲ್ಲಿ ಪರಿಚಯವಿಲ್ಲದವರಿಗೆ ಔತಣ ಮಾಡುವಲ್ಲಿ ಬೀವಿ ಸಾರರವರೂ ಸ್ವಲ್ಪ ಹಿಂಜರಿದರೂ ಬಳಿಕ ಅತಿಥಿಗಳಿಗೆ ಉಪಚಾರ ಮಾಡುವಲ್ಲಿ ಸಹಕಾರ ಮಾಡಿದರು.
ಔತನ ತಿನ್ನುವ ಗೌಜಿಯಲ್ಲಿರುವಾಗ ಹಝ್ರತ್ ಇಬ್ರಾಹೀಮರು ಅವರಲ್ಲಿ ಮಾತನಾಡುವುದಲ್ಲದೆ ಅವರ ಸರಿಯಾದ ಚಲನವಲನಗಳಿಗೆ ಗಮನ ಕೊಟ್ಟಿರಲಿಲ್ಲ. ಆದರೆ ಬೀವಿ ಸಾರರವರು ಅದನ್ನು ಗಮನಿಸಿ ಊಟದ ಮಧ್ಯೆ ಪತಿ ಇಬ್ರಾಹೀಮರನ್ನು ಒಳಗೆ ಕರೆಯಿಸಿ ಕೇಳಿದರು. “ಅರೇ… ನೀವು ಅವರೊಟ್ಟಿಗೆ ತಿನ್ನುವಾಗ ಅವರ ಕಡೆ ಗಮನ ಕೊಡಲಿಲ್ಲವೇ? ಏನಿದು ಅವಸ್ಥೆ? ಅವರು ಬರೀ ನಟನೆ ಮಾಡುವುದಲ್ಲದೆ ಏನನ್ನೂ ತಿನ್ನುವುದಿಲ್ಲ. ನೀವೊಮ್ಮೆ ಸರಿಯಾಗಿ ಗಮನಿಸಿ ನೋಡಿ”
ಬಳಿಕ ಹೊರಹೋಗಿ ಊಟದ ಚಾಪೆಯಲ್ಲಿ ಕುಳಿತ ಅವರು ಅತಿಥಿಗಳನ್ನು ಗಮನಿಸಿದಾಗ ಪತ್ನಿ ಬೀವಿ ಸಾರರವರು ಹೇಳಿದಂತೆಯೇ ಆಗಿತ್ತು. ಕೂಡಲೇ ಹಝ್ರತ್ ಇಬ್ರಾಹೀಮರು ಅವರಲ್ಲಿ ಕೇಳಿದರು. “ನೀವು ಯಾಕೆ ತಿನ್ನುವುದಿಲ್ಲ? ನೀವು ತಿನ್ನುವುದಿಲ್ಲ ಎಂದಿದ್ದರೆ ಇಷ್ಟೊಂದು ಕಷ್ಟಪಟ್ಟು ಈ ಹಸುವನ್ನು ಚೂರಿಹಾಕಿ ಸಾರು ಮಾಡಬೇಕೆಂದಿರಲಿಲ್ಲ. ಒಟ್ಟಿನಲ್ಲಿ ಎಲ್ಲಾ ವೇಸ್ಟ್ ಆಯಿತು ”
ಆಗ ಬಂದ ನಾಲ್ಕು ಮಂದಿಯಲ್ಲಿ ಒಬ್ಬರು ಪಾಕ ಮಾಡಿದ ಮಾಂಸದ ಕಡೆಗೆ ಕೈ ಮಾಡಿ “ಅಲ್ಲಾಹನ ಇರಾದೆಯಂತೆ ಎದ್ದು ನಿಲ್ಲು” ಎಂದು ಹೇಳಿದರು. ಕೂಡಲೇ ಆ ಮಾಂಸ ತುಂಡುಗಳು ಜೋಡನೆಯಾಗಿ ಮೊದಲಿನಂತೆಯೇ ಒಂದು ಹಸುವಾಗಿ ಓಡಾಡ ತೊಡಗಿತು. ಸುಬ್ಹಾನಲ್ಲಾಹ್…! ಇದನ್ನು ನೋಡಿದ ಪ್ರವಾದಿ ಇಬ್ರಾಹಿಮರಿಗೆ ಮತ್ತೂ ಭಯವಾಗಿ ಅವರು ಹೇಳಿದರು. “ನಮಗೆ ನಿಮ್ಮ ಈ ಅಸಾಮಾನ್ಯ ಶಕ್ತಿಯನ್ನು ಕಾಣುವಾಗ ಭಯವಾಗುತ್ತದೆ. ನೀವು ಯಾರೆಂದು ಹೇಳಿದರೆ ಬಹಳ ಒಳ್ಳೆಯೆದಿತ್ತು” ಆಗ ಬಂದ ನಾಲ್ಕು ಅತಿಥಿಗಳಲ್ಲಿ ಹಸುವನ್ನು ಜೀವಂತ ಮಾಡಿದ ವ್ಯಕ್ತಿ ಹೇಳಿದರು. “ನಾನು ಜಿಬ್ರೀಲ್. ಇದು ಮೀಕಾಯೀಲ್, ಇಸ್ರಾಫೀಲ್ ಮತ್ತು ದರ್ಯಾಯೀಲ್ (ಅ) ಆಗಿರುತ್ತಾರೆ. ನಾವಿವತ್ತು ನಿಮಗೆ ಸಾರ ಬೀವಿಯವರಲ್ಲಿ ಸಂತಾನ ಆಗಲಿದೆ ಎಂಬ ಒಂದು ಸಂತೋಷ ವಾರ್ತೆ ತಿಳಿಸಲು ಬಂದಿದ್ದೇವೆ” ಇದನ್ನು ಕೇಳಿ ಗಾಬರಿಗೊಂಡ ಹಝ್ರತ್ ಇಬ್ರಾಹೀಮರು ಕೇಳಿದರು. “ನನಗೇನು ಇನ್ನು ಮಗು ಹುಟ್ಟುವುದು? ನಾನು ಮುದುಕನಾಗಿದ್ದೇನೆ. ಸಾರ ಮುದುಕಿಯಾಗಿದ್ದಾಳೆ. ಇದನ್ನು ಹೇಳಿದರೆ ಯಾರಾದರೂ ನಂಬುತ್ತಾರಾ?” ಅಲ್ಲದೆ ಒಳಗಿನಿಂದ ಇಣುಕಿ ನೋಡುತ್ತಿದ್ದ ಬೀವಿ ಹಾಜರರವರು ನಗುತ್ತಾ ಮುಖಕ್ಕೆ ಕೈಯಿಂದ ಬಡಿಯುತ್ತಾ ಹೇಳಿದರು. “ಇದನ್ನು ಹೇಳಿದರೆ ಯಾರೂ ನಂಬಲಿಕ್ಕೆ ಉಂಟಾ? ಈ ಎರಡು ಮುದುಕರಿಗೆ ಇನ್ನೇನು ಮಕ್ಕಳು?” ಎಂದು.
ಇಬ್ಬರಿಗೂ ವಿಶ್ವಾಸ ಬರದಾಗ ಹಝ್ರತ್ ಜಿಬ್ರೀಲರು “ಗಾಬರಿಪಡಬೇಡಿ. ಇದು ಅಲ್ಲಾಹನ ತೀರ್ಮಾನ. ಅವನಿಗೆ ಅದು ಬಹಳ ಸುಲಭವಾದ ಸಂಗತಿ. ನಿಮಗೆ ಇಸ್ಹಾಕ್ ಎಂಬ ಮಗ ಹುಟ್ಟುತ್ತಾರೆ. ಅವರಿಗೆ ಯಅ್ಖೂಬ್ ಎಂಬ ಮಗು ಹುಟ್ಟಲಿಕ್ಕಿದೆ” ಎಂದು ಹೇಳಿ ತನ್ನ ಸಹಜ ರೂಪಕ್ಕೆ ರೂಪಾಂತರಗೊಂಡು ಅಲ್ಲಿಂದ ಹೋದರು.
ಸಹಜ ರೂಪಕ್ಕೆ ರೂಪಾಂತರ ಗೊಂಡಾಗ ಮನೆಯವರಿಗೆ ಸಂಗತಿ ಸತ್ಯವೆಂದು ತಿಳಿಯಿತು. ಮಾತ್ರವಲ್ಲ ದಿನಗಳಾಗುವಾಗ ಬೀವಿ ಸಾರರವರು ಗರ್ಭಿಣಿಯಾದರು. ತಿಂಗಳು ಭರ್ತಿಯಾದಾಗ ಒಂದು ಗಂಡು ಮಗುವಿಗೆ ಜನ್ಮವಿತ್ತರು. ಮಗು ಹುಟ್ಟುವಾಗಲೇ ಮಗುವಿನ ಮುಖದಲ್ಲಿ ಪ್ರಕಾಶ ಬೀರುತ್ತಿತ್ತು. ಕಂದನಿಗೆ ಇಸ್ಹಾಖ್ ಎಂದು ನಾಮಕರಣ ಮಾಡಿದರು.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ.
ವಿ ಸೂ: ಹಝ್ರತ್ ಇಬ್ರಾಹೀಮರು ಬಲಿದಾನ ಮಾಡಲು ಸನ್ನದ್ಧನಾಗಿದ್ದು ಮಗ ಇಸ್ಮಾಯೀಲರನ್ನೋ ಅಥವಾ ಇಸ್ಹಾಖರನ್ನೋ ಎಂಬುದರ ಬಗ್ಗೆ ಉಲಮಾಗಳ ಬಗ್ಗೆ ಅಭಿಪ್ರಾಯವಿದೆ. ಕೆಲವರು ಇಸ್ಮಾಯೀಲ್ ಎಂದೂ ಇನ್ನು ಕೆಲವರು ಇಸ್ಹಾಖ್ ಎಂದೂ ಅಭಿಪ್ರಾಯ ಪಟ್ಟಿದ್ದಾರೆ. ಹೆಚ್ಚಿನವರು ಇಸ್ಮಾಯಿರನ್ನು ಅಭಿಪ್ರಾಯಪಟ್ಟರೂ ನಾನು ಈಗ ಲೇಖನಕ್ಕೆ ಉಲ್ಲೇಖವಾಗಿ ತೆಗೆದಿರುವ ಗ್ರಂಥದ ಮುಸನ್ನಿಫ್ ಹಝ್ರತ್ ಇಸ್ಹಾಖರನ್ನು ಅಭಿಪ್ರಾಯಪಟ್ಟ ಕಾರಣ ಆ ಬಗ್ಗೆ ಇರುವ ಮುಂದಿನ ಲೇಖನವು ಹಝ್ರತ್ ಇಸ್ಹಾಖರನ್ನು ಉಲ್ಲೇಖಿಸಿಯಾಗಿರುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.