(www.vknews.in) : ಹೌದು, ನಮಗೇನಾಯಿತೋ ಗೊತ್ತಿಲ್ಲ! ಬದುಕಿನ ಬಹಳ ಮಹತ್ವದ ಸಂದರ್ಭದಲ್ಲೂ ಪ್ರಾರ್ಥಿಸಿಕೊಳ್ಳುವ ಬದಲು ನಾವು ಶಪಿಸಲ್ಪಡುತ್ತಿರುವುದು ಬಹುದೊಡ್ಡ ದುರಂತವೇ ಸರಿ. ಇಂದು ನಮ್ಮ ಮದುವೆ ಸಮಾರಂಭಗಳು, “ಜನ ಮರುಳೋ ಜಾತ್ರೆ ಮರುಳೋ” ಎಂಬ ದುರವಸ್ಥೆಗೆ ತಲುಪಿದೆ. ಮದುವೆಗೆ ಆಮಂತ್ರಿಸುವವರು, ‘ಕಝಿನ್’ಗೆ ಎಂಬ ಪದ ಬಳಸಿ ಯಾರದ್ದೋ ಮದುವೆಗೆ ಕಂಡವರನ್ನೂ ಸಿಕ್ಕವರನ್ನೆಲ್ಲ ಆಮಂತ್ರಿಸುವುದು ಒಂದು ಫ್ಯಾಷನ್ ಅಥವಾ ವಾಡಿಕೆ ಆಗಿ ಬಿಟ್ಟಿದೆ. ಹಣದ ಮದವೇರಿದವರಿಗೆ ಇದೊಂದು ಎದೆಯುಬ್ಬರಿಸುವ ಗತ್ತು ಬೇರೆ. ಎಲ್ಲೋ ಒಮ್ಮೆ ಕಂಡು ಪರಿಚಯವಾದವರನ್ನೂ ಮುಖ ಪರಿಚಯವಿಲ್ಲದ ವಾಟ್ಸಪ್, ಫೇಸ್ಬುಕ್ ಗ್ರೂಪ್ನ ಸದಸ್ಯರನ್ನೂ ಕುಟುಂಬ ಸಮೇತರಾಗಿ ಬರಬೇಕೆಂದು ಒತ್ತಾಯಿಸಲಾಗುತ್ತದೆ. ಆವಾಗ ಜಾತ್ರೆಯಂತೆ, ಜನಸಾಗರ ಹೆಚ್ಚಾಗಿ ಬೇಯಿಸಿದ್ದು ಸಾಕಾಗದೆ, ಮರ್ಯಾದೆ ಉಳಿಸಲು ಅನಿವಾರ್ಯವಾಗಿ ಮತ್ತೆಮತ್ತೆ ಬೇಯಿಸಿ ಕೊಡಬೇಕಾಗುತ್ತದೆ.
ಅರ್ಧಂಬರ್ಧ ಬೆಂದುದರಿಂದ ಮತ್ತು ಅಳಿದುಳಿದುದನ್ನು ನೀಡಿದುದರಿಂದ ಉಂಡವರಿಂದಲೂ ಉಗಿಸಿಕೊಳ್ಳಬೇಕಾಗುತ್ತದೆ, ಬೈಸಿಕೊಳ್ಳಬೇಕಾಗುತ್ತದೆ. ವಾಹನಗಳ ಸುಗಮ ಸಂಚಾರಕ್ಕೂ ತಡೆಯಾಗುತ್ತಿರುವ ನಮ್ಮ ಮದುವೆಗಳು, ಪ್ರಯಾಣಿಕರಿಂದಲೂ ಶಪಿಸಲ್ಪಟ್ಟು, ಕ್ರಿಮಿನಲ್ ಕೇಸು ಹಾಕಿಸಿಕೊಳ್ಳುವಷ್ಟು ಮಾರಿಯಾಗಿ ಮಾರ್ಪಟ್ಟಿವೆ ಎಂದಾದರೆ, ಮಾದರಿ ಸಮುದಾಯ ತುರ್ತು ಆತ್ಮಾವಲೋಕನ ನಡೆಸಬೇಕಾಗಿದೆ. ಮದುವೆ ಹೆಸರಲ್ಲಿ ಶಪಿಸಲ್ಪಡುವ ಈ ಢಂಬಾಚಾರಗಳು ‘ಖೈರೆ ಉಮ್ಮತ್’ಗೆ ಬೇಕೆ?
ಹಾಗೆಯೇ, ಯಾರ್ಯಾರದೋ ಕಲ್ಯಾಣ ಮಂಟಪಗಳನ್ನು ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ಅಲಂಕರಿಸುವಾಗಲೂ ಮತ್ತು ಮದುಮಗ ಕೆಲವು ಹೊತ್ತು ನಿಂತುಕೊಳ್ಳುವ ಪ್ರತ್ಯೇಕ ವೇದಿಕೆಯನ್ನು, ಸಹಸ್ರಾರು ರೂಪಾಯಿಗಳನ್ನು ವ್ಯಯಿಸಿ ದುರ್ವ್ಯಯ ಮಾಡುವಾಗಲೂ ಒಂದಷ್ಟೂ ಬೇಜಾರಾಗುತ್ತಿಲ್ಲವೆಂದರೆ, ನಾವೆಷ್ಟು ಕಠಿಣ ಹೃದಯಿಗಳು? ಇಂದು ನಮ್ಮ ಮುಸ್ಲಿಮೇತರ ಸಹೋದರರು ಕೂಡಾ ನಮಗಾಗಿಯೇ ಮದುವೆ ಹಾಲ್ಗಳನ್ನು ನಿರ್ಮಿಸುತ್ತಿದ್ದಂತಿದೆ. ಆದರೆ ಅವರ ಮದುವೆಗಳು ಮಾತ್ರ ಚರ್ಚ್ ಅಥವಾ ದೇವಸ್ಥಾನಗಳಲ್ಲಿ ಅತ್ಯಂತ ಸರಳವಾಗಿ ನಡೆಯುತ್ತವೆ. ನಮ್ಮಲ್ಲಿನ ಮದರಂಗಿ ಎಂಬ ಬೂಟಾಟಿಕೆ ನಿಕಾಹ್ಗಿಂತಲೂ ಕಡ್ಡಾಯವಾದುದು ಮತ್ತು ವರನ ಕಡೆಯಿಂದಲೂ ಮೆಹಂದಿ ಕಾರ್ಯಕ್ರಮವಿರುವುದು ಬಹಳ ಖೇದಕರ. ಅದೇ ಶೈಲಿಯಲ್ಲಿ ಅದರ ಆಮಂತ್ರಣವನ್ನೂ ನೀಡಲಾಗುತ್ತದೆ. ಮದುವೆಗೆ ಬರಬೇಕು ಮತ್ತು ಮೆಹಂದಿಗೆ ಕುಟುಂಬ ಸಮೇತರಾಗಿ ಬರಲೇ ಬೇಕು ಎಂದು ಒತ್ತಡ ಹೇರಲಾಗುತ್ತದೆ.
ಕೆಲವು ಬುದ್ಧಿವಂತರಂತೂ ಮದರಂಗಿ ಎಂಬ ಹೆಸರನ್ನು ಬದಲಾಯಿಸಿ, ಅದಕ್ಕೆ ಅಕೀಕ, ದಾವತ್, ಕೋಳಿಚೋರು, ಗೆಟ್-ಟುಗೆದರ್… ಮುಂತಾದ ಮುದ್ದುಮುದ್ದಾದ ಹೆಸರುಗಳನ್ನಿಟ್ಟು ಕಣ್ಣುಮುಚ್ಚಾಳೆಯಾಡಿ ಆತ್ಮವಂಚನೆ ಮಾಡುತ್ತಿದ್ದಾರೆ. ಆಪ್ತರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಅರೇಬಿಯನ್ ನೈಟ್ಸ್, ಬ್ರೈಡ್ ಟು ಬಿ, ಹಳದಿ… ಎಲ್ಲವೂ ಇದೆ. ಕೆಲವೊಮ್ಮೆ ಹೆಸರು ಬದಲಾಯಿಸಿ, ವ್ಯಾಖ್ಯಾನ ಕಸರತ್ತು ನಡೆಸಿ ಸಮಾಧಾನ ಪಡೆದುಕೊಳ್ಳಲಾಗುತ್ತದೆ. ಇಸ್ಲಾಮನ್ನು ಹೊತ್ತು ನಡೆಯುವವರ ಮದುವೆಗಳೂ ಮಾದರಿಗಳಾಗುವ ಬದಲು ಮಾರಿಗಳಾಗುತ್ತಿವೆ.
ವಧು-ವರರ ಕುಟುಂಬಗಳು ಒಂದೇ ಆಶಯ, ಆದರ್ಶದವರಾದರೂ ಆಡಂಭರ, ಬೂಟಾಟಿಕೆ, ದುರ್ವ್ಯಯಗಳ ಬಚ್ಚಲಲ್ಲಿ ಎಲ್ಲರೂ ಬೆತ್ತಲೆ. ಅಲ್ಲಿ ಶಿರ್ಕೋ, ಬಿದ್ಅತ್ತೋ… ಮತ್ತೊಂದೋ ಯಾವುದೂ ಇಲ್ಲ. ಹುಚ್ಚರ ಸಂತೆಯಲ್ಲಿ “ಎಲ್ಲರಿಗೂ ಹುಚ್ಚು. ನಮಗೆ ಸ್ವಲ್ಪ ಹೆಚ್ಚು” ಎಂಬಂತಿದೆ. ಹಾಗೆಯೇ ಮಗಳ ಮದುವೆ ಸಹಾಯಾರ್ಥ ಆಚೀಚೆ ಕಾಡಿಬೇಡಿ ಸಂಗ್ರಹಿಸಿದ ಹಣವನ್ನು ಮಗಳ ಅದ್ದೂರಿಯ ಮೆಹಂದಿಗೆ ಬಳಸಿ ಮುಗಿಸುವುದೆಂದರೆ ಏನರ್ಥ? “ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ” ಎಂದಲ್ಲವೇ? ಈ ಸಮುದಾಯ ಯಾವಾಗ ಸುಧಾರಣೆ ಗೊಳ್ಳುವುದು? ಯಾಕೆ ಇನ್ನೂ ಅರ್ಥವಾಗುತ್ತಿಲ್ಲ? ಒಟ್ಟಿನಲ್ಲಿ ಮದುವೆಯ ಹಿಂದುಮುಂದು ನಡೆಯುವ ಹತ್ತು ಹಲವು ಅನಾಚಾರಗಳನ್ನು ಎಲ್ಲರೂ ಅವರವರ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿಯೇ ಪರಿಸ್ಥಿತಿ ಇಷ್ಟು ಕೆಟ್ಟು ಹೋಗಿರುವುದು. ಹಣದ ಮದದಿಂದಾಗಿ, ಮದುವೆ ಎಂಬ ಸರಳ ಸುಂದರ ಇಬಾದತನ್ನು ನಮ್ಮವರೇ ಕೆಡಿಸಿ ಬಿಟ್ಟರು. ಮುಂದುವರಿಯುವುದು……
✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.