(www.vknews.in) : ನಮ್ಮಲ್ಲಿ ತಾಳದ ಹೆಸರಲ್ಲಿ ನಡೆಯುವ ಹುಚ್ಚು ಪುಂಡಾಟಿಕೆ ಇನ್ನೂ ಅಳಿದಿಲ್ಲ. ದಿನದಿಂದ ದಿನಕ್ಕೆ ಅದು ವಿಕೃತ ರೂಪವನ್ನು ಪಡೆಯುತ್ತಿದೆ. ಮುಂದೆ ಇದು ಎಲ್ಲಿಗೆ ತಲುಪಬಹುದೋ ಎಂದು ಊಹಿಸುವಾಗಲೇ ಭಯವಾಗುತ್ತಿದೆ. ತಾಳದ ಹೆಸರಲ್ಲಿ ಮದುಮಗನ ಹಿಂದೆ ಬೀಳುವ ಲಜ್ಜೆಗೆಟ್ಟ ಯುವಕರ ತಮಾಷೆಗಳು ಮಿತಿಮೀರುತ್ತಿವೆ. ವಧುವಿನ ಮನೆಗೆ ತಡರಾತ್ರಿ ತಲುಪುವುದು, ಅವರಲ್ಲಿನ ವಸ್ತುಗಳನ್ನು ಹಾನಿ ಮಾಡುವುದು, ಸಿಕ್ಕಾಪಟ್ಟೆ ಕೇಕೆ ಹಾಕುವುದು, ವರನೊಂದಿಗೆ ಆತನ ಗೆಳೆಯರೂ ವಧುವಿನ ಕೋಣೆಗೆ ನುಸುಳುವುದು, ಮದುಮಗನನ್ನು ರಾತ್ರಿ ಹೊತ್ತು ಹೊತ್ತುಕೊಂಡು ಹೋಗಿ ಮುಂಜಾವಿನ ವರೆಗೆ ತಿರುಗಾಡಿಸಿ ಸೂರ್ಯೋದಯದ ಹೊತ್ತಿಗೆ ವಧುವಿನ ಮನೆಗೆ ತಂದು ಬಿಡುವುದು. ಏನೂ ಹೊಟ್ಟೆಗೆ ತಿನ್ನದವರಂತೆ ಹಣಕ್ಕಾಗಿ ವರನನ್ನು ಸತಾಯಿಸುವುದು, ಸಿಕ್ಕಾಪಟ್ಟೆ ಫೋಟೋ ಕ್ಲಿಕ್ಕಿಸಿ ವಧುವಿನ ಮನೆಯವರಿಗೆ ಮಾನಸಿಕ ಕಿರುಕುಳ ನೀಡುವುದು…
ಇತ್ಯಾದಿ ಅಪರಾಧಗಳನ್ನೆಸಗುವಾಗ, ಸತ್ಯವಿಶ್ವಾಸಿಗಳಿಗೆ ಪಾಪ ಪ್ರಜ್ಞೆ ಮೂಡಬೇಕು. ಇತ್ತೀಚೆಗಿನ ವಾರ್ತೆಯನ್ನು ನೀವೂ ಗಮನಿಸಿರಬಹುದು. ನಮ್ಮ ನೆರೆ ರಾಜ್ಯದ ಗಡಿ ಪ್ರದೇಶದಲ್ಲಿ, “ತಾಳ”ದ ಹೆಸರಲ್ಲಿ ವಧುವಿನ ಮನೆಗೆ ಬಂದ ಲಜ್ಜೆಗೆಟ್ಟ ಯುವಕರ ದಂಡನ್ನು, ಮನೆಯ ಹಿರಿಯರೊಬ್ಬರು ತಡೆದು, ವಧುವಿನ ಕೊಠಡಿಗೆ ವರನ ಹೊರತು ಇತರರು ನುಸುಳುವುದು ಸಂಸ್ಕಾರವಲ್ಲವೆಂದು ದೈನ್ಯದಿಂದ ಅಂಗಲಾಚಿದರೂ, ಮನುಷ್ಯತ್ವವಿಲ್ಲದ ಗೂಳಿಗಳು ಬಲವಂತವಾಗಿ ಮುನ್ನಡೆದಾಗ, ಇಳಿವಯಸ್ಸಿನ ಆ ಮುದಿಜೀವ ನಂದಿ ಹೋಯಿತು. ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್.
ಪಾಪ ವಧುವಿನ ಕಡೆಯವರು ಅನಿವಾರ್ಯಕ್ಕೆ ಸಿಲುಕಿ ಏನೂ ಮಾಡುವಂತಿಲ್ಲ. ಮಗಳನ್ನು ಅದಾಗಲೇ ಗಂಡನೆಂಬ ಆ ಷಂಡನಿಗೆ ಕೊಟ್ಟು ಆಗಿದೆ ತಾನೆ? ಪಾಪ ಅಸಹಾಯಕರವರು. ಇಲ್ಲಿ ವರನೂ ಬಹಳಷ್ಟು ಆಲೋಚಿಸಬೇಕು. ಯಾಕೆ ತಾಳದ ಹೆಸರಲ್ಲಿ ಮಿತ್ರರನ್ನೆಲ್ಲ ವಧುವಿನ ಮನೆಗೆ ಅಟ್ಟಿಸಿಕೊಂಡು ಹೋಗುವುದು? ತನ್ನ ಬಾಳಸಂಗಾತಿಯನ್ನೂ, ಆಕೆಯ ಮನೆಯವರನ್ನೂ ಉಪದ್ರವಿಸುವುದು ನೋಯಿಸುವುದು ಸರಿಯೇ? ತಾನೊಬ್ಬನೇ ಹೋದರೆ ಸಾಲದೇ? ಹಿಂದುಗಡೆ ಸೇನೆ ಯಾಕೆ? ಅಥವಾ ಮದುವೆಯ ದಿನ ಬಾಳಸಂಗಾತಿಯನ್ನು ತನ್ನ ಮನೆಗೇ ಬರಮಾಡಿಕೊಂಡು ಉಳಿಸಿಕೊಂಡರೆ, ತಾಳ ಎಂಬ ಗ್ಯಾಂಗ್ವಾರನ್ನು ತಪ್ಪಿಸಬಹುದಲ್ಲವೇ? ನಿಜವಾಗಿ ತಾಳ ಎಂಬುದು ಮೊದಲೇ ಆರ್ಥಿಕವಾಗಿ ಕುಗ್ಗಿ ಬಳಲಿ ಬೆಂಡಾಗಿರುವ ವಧುವಿನ ಕುಟುಂಬಕ್ಕೆ ಮತ್ತೆರಡು ಗುದ್ದು ಕೊಟ್ಟಂತೆ.
ಅನಿವಾರ್ಯತೆಯಿಂದ ಒಪ್ಪಿ ಕೊಳ್ಳುವುದರ ಹೊರತು ಬಹುತೇಕ ವಧು ಕುಟುಂಬ ಅದನ್ನು ತಾಳಿ ಕೊಳ್ಳಲು ಶಕ್ತವಲ್ಲ. ಮತ್ತೇಕೆ ಇದೆಲ್ಲಾ? ಕೆಲವೆಡೆ, ವರ ಏಕಾಂಗಿಯಾಗಿ ಮರ್ಯಾದೆಯಿಂದ ವಧುವಿನ ಮನೆಗೆ ಹೋದರೂ, ವಧುವಿನ ಗೆಳತಿಯರು ಆತನನ್ನು ಹಣಕ್ಕಾಗಿ ಸತಾಯಿಸುತ್ತಾರೆ. ಈ ಸಂಸ್ಕಾರವಂತೂ ಅತ್ಯಂತ ಲಜ್ಜೆಗೆಟ್ಟದ್ದು.
ಮೊದಲ ರಾತ್ರಿ ಕಳೆದು ಮರುದಿನ ಮದುಮಗ ಅಲ್ಲಿಂದ ಹೊರಡುವಾಗ, ಮತ್ತೆ ದೊಡ್ಡ ಮೊತ್ತದ ದುಡ್ಡಿನ ಬೇಡಿಕೆಯನ್ನಿಡಲಾಗುತ್ತದೆ. ಕೊಡದಿದ್ದರೆ ಆತನ ಮೊಬೈಲ್, ಶೂ, ವಾಹನದ ಕೀ ಇತ್ಯಾದಿ ಅಡಗಿಸಿಟ್ಟು ಆತನನ್ನು ಬ್ಲ್ಯಾಕ್ಮೇಲ್ ಮಾಡಿ ದುಡ್ಡು ಕಸಿದುಕೊಳ್ಳುವುದು ಹಝ್ರತ್ ಫಾತಿಮಾ(ರ)ರ ಶಿಕ್ಷಣದ ಹಾದಿಯಲ್ಲಿ ಪಳಗಿದ ಸಜ್ಜನ ಸ್ತ್ರೀಯರಿಗೆ ಖಂಡಿತ ಭೂಷಣವಲ್ಲ. ನಾಚಿಕೆಯಾಗಬೇಕು. ಮಾನ ಮರ್ಯಾದೆ ಬೇಕಲ್ಲವೇ? ಇದು ಬಹುದೊಡ್ಡ ಲೂಟಿಯೂ ಹೌದು. ಈ ರೀತಿಯ ಮಾನಸಿಕ ಕಿರುಕುಳ ಕೆಲವೊಮ್ಮೆ ಬೇರೆಯೇ ಗಂಡಾಂತರಕ್ಕೆ ಎಳೆದೊಯ್ಯುತ್ತದೆ.
ಒಟ್ಟಿನಲ್ಲಿ, ಇಂದು ತಾಳ ಎಂಬುದು ಒಂದು ರೀತಿಯ ಭೀತಿಯಾಗಿ ಬೆಳೆದಿದೆ. ವರನ ಕಡೆಯವರು ಬಂದು ಹೋಗುವ ವರೆಗೆ, ಸಹಜವಾಗಿ ವಧುವಿನ ಮನೆಯವರನ್ನು ಆತಂಕ, ಭಯ ಕಾಡುತ್ತಿರುತ್ತವೆ ಮತ್ತು ಉಳ್ಳವರ ಈ ಆಟವನ್ನು ಪ್ರದರ್ಶಿಸಲು ಇಲ್ಲದವರೂ ನಿರ್ಬಂಧಿಸಲ್ಪಡುತ್ತಾರೆ. ಅದಕ್ಕಾಗಿ ಅವರು ಬಹಳ ಸಿದ್ಧತೆಯನ್ನೂ ನಡೆಸಬೇಕಾಗುತ್ತದೆ. ಬಹಳಷ್ಟು ವ್ಯಯಿಸಬೇಕಾಗುತ್ತದೆ. ಹತ್ತಿಪ್ಪತ್ತು ಮಂದಿಯ ಲೆಕ್ಕ ಕೊಟ್ಟು, ವರನ ಮನೆಯಲ್ಲಿದ್ದ ನಲ್ವತ್ತು ಮಂದಿಯನ್ನೂ ಹೊತ್ತು ತಡರಾತ್ರಿ ವಧುವಿನ ಮನೆಯ ದಾರಿ ಹಿಡಿಯಲಾಗುತ್ತದೆ. ವರನ ಟೀಮ್ ಬಂದು ಹೋಗದೆ ವಧುವಿನ ಮನೆಯವರೂ ಊಟ ಮಾಡುವಂತಿಲ್ಲ. ಬಂದವರಿಗೆ ಮಾಡಿದ ಅಡುಗೆ ಕಮ್ಮಿಯಾದೀತೋ ಎಂಬ ಭಯ, ಆತಂಕ ಸಹಜವಾಗಿ ಕಾಡುತ್ತಿರುತ್ತದೆ. ಆದ್ದರಿಂದ ಅವರು ಗುನುಗುನಿಸುತ್ತಲೇ ಹಸಿವನ್ನು ಸಹಿಸುತ್ತಾರೆ.
ಮತ್ತೊಂದೆಡೆ ವರ ಯಾವ ವೇಷ ಕಟ್ಟಿಕೊಂಡು ಬರುತ್ತಾನೆಂಬ ಆತಂಕವೂ ಇದೆ. ಕೊರಗಜ್ಜನ ವೇಷ ಕಟ್ಟಿಕೊಂಡು, ವಿವಾದ ಹುಟ್ಟು ಹಾಕಿ ಪೋಲೀಸ್ ಸ್ಟೇಷನ್ನ ಮೆಟ್ಟಲೇರಬೇಕಾಗಿ ಬಂದ ದುರಂತವೂ ನಮ್ಮ ಜಿಲ್ಲೆಯಲ್ಲಿ ಘಟಿಸಿ ಹೋಯಿತು. ಹಾಗೆಯೇ, ವರನೊಬ್ಬ ಶಾಲಾ ಹುಡುಗನ ಸಮವಸ್ತ್ರ ಧರಿಸಿ, ವಿದ್ಯಾರ್ಥಿಯ ವೇಷಕಟ್ಟಿ, ಮಾನಸಿಕ ಅಸ್ವಸ್ಥನಂತೆ ಅಭಿನಯಿಸುತ್ತಾನೆ. ಕುಣಿದಾಡುತ್ತಾನೆ. ವಧುವಿನ ಕೈಹಿಡಿದು ಪೆದ್ದು ಪೆದ್ದಾಗಿ ವರ್ತಿಸುತ್ತಾನೆ. ಆಕೆಯೂ ಸಹಕರಿಸುತ್ತಾಳೆ. ಈ ಅಭಿನಯದ ಸಾಕ್ಷಿಗಳು, “ವಧೂ-ವರರಿಗೂ ಹುಚ್ಚು. ನಮಗೆ ಸ್ವಲ್ಪ ಹೆಚ್ಚು” ಎಂಬಂತೆ ಪ್ರತಿಯೊಂದಕ್ಕೂ ಸಾಥ್ ನೀಡುತ್ತಾರೆ. ಚಪ್ಪಾಳೆಯೊಂದಿಗೆ ಕುಣಿದಾಡುತ್ತಾರೆ.
ಈ ಘಟನೆಗೆ ನಿಕಟವಾಗಿ ಬೇರೊಂದು ಮದುವೆಯಲ್ಲಿ ವಧು-ವರರಿಗೆ ಜ್ಯೂಸ್ಯೆಂದು ಮೆಣಸಿನಕಾಯಿ ಪಾನೀಯ ಕುಡಿಸಿ ತಮಾಷೆ ನೋಡಲಾಯಿತು. ಪರಿಣಾಮ ವಧೂ-ವರರಿಬ್ಬರೂ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರು. ಆದ್ದರಿಂದ ಶಪಿಸಲ್ಪಡುವುದರಿಂದ ದೂರ ನಿಲ್ಲೋಣ. ಮುಂದಿನ ದಿನಗಳಲ್ಲಿ ಮತ್ತಿನ್ನೇನು ಕಾದಿದೆಯೋ ಗೊತ್ತಿಲ್ಲ.
ಏನಿದ್ದರೂ ಇಂತಹ ಘಟನೆಗಳು ಸಂಭವಿಸಿದ್ದು ಕೇರಳದಲ್ಲೆಂದು ಸುಲಭದಲ್ಲಿ ಜಾರಿಕೊಳ್ಳುವಂತಿಲ್ಲ. ಮದುವೆ ಹೆಸರಲ್ಲಿ ಅಲ್ಲಿಂದ ಗಡಿದಾಟಿ ಈಗಾಗಲೇ ಅನೇಕ ಹುಚ್ಚು ಪುಂಡಾಟಿಕೆಗಳು ನಮ್ಮಲ್ಲೂ ಲಗ್ಗೆ ಹಾಕಿವೆ. “ಖೈರೆ ಉಮ್ಮತ್” ಎಂಬ ಮಾದರೀ ಸಮುದಾಯಕ್ಕೆ ಏನಾಯಿತೆಂದು ಅರ್ಥವಾಗುತ್ತಿಲ್ಲ. ಮದುವೆ ಎಂಬ ಸರಳ ಸುಂದರ ಇಬಾದತನ್ನು ಅಷ್ಟಕ್ಕೂ ಕೆಡಿಸಿಬಿಟ್ಟರು. ಇತ್ತೀಚೆಗೆ ನಮ್ಮ ಪಕ್ಕದಲ್ಲಿ ತಾಳ ಎಂಬ ಈ ಪುಂಡಾಟಿಕೆಗೆ ವರ ತನ್ನ ಮಿತ್ರರೊಂದಿಗೆ ಹಾಜರಾಗಿದ್ದು ರಾತ್ರಿ ಹನ್ನೆರೆಡೂವರೆ ಗಂಟೆಗೆ. ಬೆಳಿಗ್ಗಿನ ಜಾವ ನಾಲ್ಕು ಗಂಟೆ ತನಕ ತಿರುಗಾಟ, ಪುಂಡಾಟಿಕೆ ತೋರಿಸಿ ಪ್ರಭಾತದ ಅಝಾನ್ಗೆ ಮೊದಲು ವರನ ಮಿತ್ರರು ಬೇಗನೆ ಜಾಗ ಖಾಲಿ ಮಾಡಿದರು. ಅಝಾನ್ ಕರೆಗೆ ಇಬ್ಲೀಸ್ ಮತ್ತು ಆತನ ಸಂತತಿಗಳು ದೂರ ಓಡುತ್ತವೆಯೆಂದು ಹೇಳಲಾಗುತ್ತದೆ. ರಾತ್ರಿಯಿಡೀ ಅಲೆದಾಡಿ ಪ್ರಭಾತದ ಹೊತ್ತಲ್ಲಿ ನಿದ್ದೆಗೆ ಜಾರುವುದು ನಾಯಿಯ ಸ್ವಭಾವವೆಂದು ಬಲ್ಲವರು ಹೇಳುತ್ತಾರೆ.
ಮನೆ ಮಂದಿಗೆ ಇದರಿಂದ ಎಷ್ಟು ಕಿರುಕುಳವಾಗುತ್ತದೆಂಬ ಪರಿವೆಯೇ ಅವರಿಗಿರುವುದಿಲ್ಲ. ನೀವು ಹೊರಗೆ ಹೋಗಿರಿ… ಎಂದು ಹೇಳುವುದು ಅಸಭ್ಯತನವಾದೀತೋ, ಹೊಸ ಸಮಸ್ಯೆಗಳನ್ನು ಹುಟ್ಟು ಹಾಕಿತೋ ಎಂಬ ಭಯದಿಂದಾಗಿ ಮನೆಮಂದಿ ತುಟಿಬಿಚ್ಚದೆ ಅವನ್ನು ಸಹಿಸಿಕೊಳ್ಳುತ್ತಾರೆ. ಹಝ್ರತ್ ಝೈನಬ್(ರ)ರ ವಲೀಮದ ದಿನ ಎಲ್ಲರೂ ಊಟ ಮಾಡಿ ಹೋದರೂ ಕೆಲವರು ಊಟದ ನಂತರ, ಅಲ್ಲೇ ಕುಳಿತು ಹರಟೆ ಹೊಡೆಯ ತೊಡಗಿದರು. ಅದು ಕೊನೆಗೊಳ್ಳುವುದೇ ಇಲ್ಲ. ಇಂತಹ ಅಸಭ್ಯ ವ್ಯಕ್ತಿಗಳಿಂದಾಗಿ ಪ್ರವಾದಿವರ್ಯ(ಸ)ರು ತುಂಬಾ ಬೇಸತ್ತಿದ್ದರು. ಸಂಕೋಚ ಮತ್ತು ತಮ್ಮ ಉನ್ನತ ಚಾರಿತ್ರ್ಯದಿಂದಾಗಿ ಅವರದನ್ನು ಸಹಿಸಿ ಕೊಳ್ಳುತ್ತಿದ್ದರು. ಏನೂ ಹೇಳುವಂತಿಲ್ಲ. ಹೊರಗೆ ಹೋಗಿ ಇತರ ಪತ್ನಿಯರ ಮನೆಗೆ ಭೇಟಿ ನೀಡಿ ಮರಳಿದರೂ ಈ ಮಂದಿ ಅಲ್ಲೇ ಹರಟೆಯಲ್ಲಿ ನಿರತರಾಗಿದ್ದರು. ಕದಲಲಿಲ್ಲ. ತಡ ರಾತ್ರಿಯಾದಾಗ ಆ ಜನರು ಹೋಗಿರುವರೆಂದು ತಿಳಿದಾಗ, ಪ್ರವಾದಿವರ್ಯ(ಸ)ರು ಝೈನಬ್(ರ)ರ ಮನೆಗೆ ಬಂದರು. ಆ ಬಳಿಕ ಇಂತಹ ಕೆಟ್ಟ ಅಭ್ಯಾಸಗಳ ವಿರುದ್ಧ ಅಲ್ಲಾಹನೇ ಆಯತ್ಗಳನ್ನು ಅವತೀರ್ಣಗೊಳಿಸಿ ಜನರನ್ನು ಎಚ್ಚರಿಸಲಾಯಿತು. ದಂಪತಿಗಳಿಗೆ ಮಾನಸಿಕ ಕಿರುಕುಳ ನೀಡುವ ಆ ಕೆಟ್ಟ ಅಭ್ಯಾಸಕ್ಕೆ ಬೇಲಿ ಹಾಕಲಾಯಿತು. ಆದರೆ ಸಮುದಾಯ ಇದರಿಂದ ಇನ್ನೂ ಪಾಠ ಕಲಿತಂತಿಲ್ಲ.
ಪ್ರಭಾತ ನಮಾಝ್ಗೆ ಎದ್ದೇಳುವಲ್ಲಿ ಆಗುವ ವಿಳಂಬದ ಬಗ್ಗೆ ಬಹುತೇಕರಿಗೆ ಯಾವ ಬೋಧವೂ ಇರುವುದಿಲ್ಲ. ನಿತ್ಯ ಜಮಾಅತಿಗರೂ ಈ ಮಾಲಿನ್ಯದಲ್ಲಿ ಕಾಲು ಜಾರಿ ಬೀಳುತ್ತಾರೆ. ಒಟ್ಟಿನಲ್ಲಿ ತಾಳದ ಸ್ವರೂಪವೇ ಕೆಟ್ಟು ಹೋಗಿದೆಯೆಂದು ಪ್ರತಿಯೊಬ್ಬರೂ ಪರಿತಪಿಸುತ್ತಾರೆ, ಮರುಗುತ್ತಾರೆ. “ಕಟ್ಟುಪಾಡು” ಎಂಬ ಪದ ಬಳಕೆ ಬಿಟ್ಟರೆ, ಇಣುಕಿ ನೋಡಿದರೂ ಅದರಲ್ಲಿ ಯಾವುದೇ ಒಳಿತು ಕಾಣುವುದಿಲ್ಲ. ಆದ್ದರಿಂದ ಯುವಕರೇ, ಶಪಿಸಲ್ಪಡುವು ದರಿಂದ ದೂರ ಸರಿಯೋಣ. ಅಹಂಕಾರ, ಡಂಬಾಚಾರಗಳೆಲ್ಲವೂ ಘೋರ ಪಾಪಕೃತ್ಯಗಳಾಗಿವೆ…
ಮುಂದುವರಿಯುವುದು..
✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.