(www.vknews.in) : ಹುಡುಗನಾಗಲಿ ಅಥವಾ ಹುಡುಗಿಯೇ ಆಗಲಿ, ಮದುವೆಯಾಗುವಾಗ ಯಾವ ಕಾರಣಕ್ಕೂ ತಮ್ಮ ವಯಸ್ಸನ್ನು ಅಡಗಿಸಬಾರದು. ಸುಳ್ಳು ಹೇಳಿ ವಯಸ್ಸು ಕಮ್ಮಿ ಕೊಡುವಾಗ, ಅದು ಮುಂದೆ ಸಮಸ್ಯೆ, ಅಸಮಾಧಾನಗಳಿಗೆ ಕಾರಣವಾಗುತ್ತದೆ. ಹಾಗೆಯೇ ಹೆಣ್ಣು ನೋಡಲು ಬರುವಾಗ ವಿಪರೀತ ಮೇಕಪ್ನಲ್ಲಿ ಮಿಂದೇಳುವಾಗಲೂ ಜಾಗೃತಿ ಪಾಲಿಸುವುದು ಒಳಿತು. ಅದರಿಂದ ಮದುವೆಯ ಬಳಿಕ ಸಂಬಂಧಗಳು ಮುರಿದು ಬೀಳುತ್ತದೆ. ಅಸಮಾಧಾನದ ಹೊಗೆ ಎದ್ದೇಳುತ್ತದೆ.
ಏನಾದರೂ ದೀರ್ಘಕಾಲಿಕ ರೋಗವಿದ್ದರೆ ಅದನ್ನೂ ಅಡಗಿಸ ಬಾರದು. ನಮ್ಮಿಂದಲೇ ಸೃಷ್ಟಿಸಿದ ನಮ್ಮ ಜೋಡಿಯನ್ನು ಅಲ್ಲಾಹನು ನಿರ್ದಿಷ್ಟ ಸಮಯದಲ್ಲಿ ನಮಗೆ ನೀಡಿಯೇ ತೀರುತ್ತಾನೆ. ಇದು ನಮ್ಮ ಬಲಿಷ್ಠ ವಿಶ್ವಾಸ. ಸುದೃಢ ಈಮಾನ್. ಯಾರಿಗೂ ಅದನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಆತಂಕ, ನಿರಾಸೆ, ಅಡ್ಡ ಹಾದಿಗಳು ಬೇಡ. ಸದಾ ಅಲ್ಲಾಹನಲ್ಲಿ ಭರವಸೆಯನ್ನಿಡಬೇಕು.
ಕೆಲವು ಹೆಣ್ಣು ಹೆತ್ತವರಿಗೆ ಅಹಂಕಾರ, ಗತ್ತು ಜಾಸ್ತಿ. ನಿಜವಾಗಿ, ಹುಡುಗನ ಕಡೆಯಿಂದ ಯಾವುದೇ ಬೇಡಿಕೆ ಇರುವುದಿಲ್ಲ. ಆದರೂ ಸಾಲಸೋಲ ಮಾಡಿ, ಭಿಕ್ಷೆ ಬೇಡಿ ಇಂತಿಷ್ಟು ಪವನ್ ಚಿನ್ನ ಹಾಕುತ್ತೇವೆಂದು ಹುಂಬತನ ಘೋಷಿಸುತ್ತಾರೆ. ಹೇಳಿದ್ದನ್ನು ಪೂರೈಸಲು ಸಾಧ್ಯವಾಗದಾಗ, ಬಳಿಕ ಕರ್ಮ ಅನುಭವಿಸುತ್ತಾರೆ.
ವರುಷದ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ, ಸಹಾಯಕ್ಕೆಂದು ವಧುವಿನ ಕಡೆಯವರಿಂದ ಮನವಿ ಹರಡಿದಾಗ, ಅದು ಸಹಜವಾಗಿ ವರನಿದ್ದ ವಾಟ್ಸಪ್ ಗ್ರೂಪಿಗೂ ತಲುಪಿತು. ವರನ ಕುಟುಂಬಕ್ಕಂತೂ ಅದು ಬಹಳ ಬೇಸರ ಹುಟ್ಟಿಸಿತು. ಏಕೆಂದರೆ, ವರನ ಕಡೆಯವರಿಂದ ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಮಾತ್ರವಲ್ಲ ಅವರೇ ವಧುವಿಗೆ ಬಟ್ಟೆಬರೆಗಳನ್ನು ಕೂಡಾ ಖರೀದಿಸಿ ಕೊಟ್ಟಿದ್ದರು. ಆದರೆ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬ ಸಿದ್ಧಾಂತದ ಕೆಲವು ಗೆದ್ದಲುಗಳು ಪ್ರತಿಯೊಂದು ಕುಟುಂಬದಲ್ಲಿರುತ್ತವೆ.
ವಧುವಿನ ಹೆತ್ತವರು, ನಮ್ಮ ಮಗಳಿಗೆ ಹತ್ತನ್ನೆರಡು ಪವನ್ ಆದರೂ ಹಾಕಬೇಡವೇ, ಎಂಬ ಹುಚ್ಚು ಪ್ರತಿಷ್ಠೆಯ ಬೆನ್ನೇರಿ ಊರಿಡೀ ಅಲೆದಾಡಿದರು. ಸಹಜವಾಗಿ ಹೋದಲ್ಲೆಲ್ಲ ಜನರು ವರನನ್ನೇ ದೂರಿದರು. ವರನ ಕಡೆಯವರು ಇದರಿಂದ ಬೇಸತ್ತು, ಆ ಸಂಬಂಧವನ್ನು ಕಡಿದು ಹಾಕಿದರು. ಯಾಕೆ ಈ ಒಣ ಗತ್ತು? ಬೆತ್ತ ಕೊಟ್ಟು ಪೆಟ್ಟು ತಿನ್ನುವ ಮೂರ್ಖತನ ಬೇಕೇ?
ಮುಂದುವರಿಯುವುದು……
✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.