ಶ್ರೀನಿವಾಸಪುರ (www.vknews.in): ಗಂಡು ಮಗು ಜನಿಸಿದ ಕೇವಲ ಏಳು ದಿನಗಳಲ್ಲೇ ಬ್ರೋಕರ್ ಮೂಲಕ ಮಾರಾಟ ಮಾಡುತ್ತಿದ್ದ ಅಕ್ರಮ ಜಾಲವನ್ನು ಶ್ರೀನಿವಾಸಪುರ ಪೊಲೀಸರು ಪತ್ತೆಹಚ್ಚಿದ್ದು, ಈ ಸಂಬಂಧ ಪೋಷಕರು ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸಿ ಶನಿವಾರ ದೂರು ದಾಖಲಿಸಿದ್ದಾರೆ. ಶ್ರೀನಿವಾಸಪುರ ಪಟ್ಟಣದ ವೆಂಕಟೇಶ್ವರ ಬಡಾವಣೆಯ ನಿವಾಸಿಗಳಾದ ನೀತು ಮತ್ತು ರಾಘವೇಂದ್ರ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳು ಇದ್ದು, ಇತ್ತೀಚೆಗೆ ಪಟ್ಟಣದ ಖಾಸಗಿ ನರ್ಸಿಂಗ್ ಹೋಂನಲ್ಲಿ ಗಂಡು ಮಗು ಜನಿಸಿತ್ತು. ಆಸ್ಪತ್ರೆಯಿಂದ ಮನೆಗೆ ತೆರಳಿದ ಕೆಲವೇ ದಿನಗಳಲ್ಲಿ ಬಡತನದ ಹಿನ್ನೆಲೆ ಉಲ್ಲೇಖಿಸಿ ಕೊಟ್ರಗುಳಿ ನಾರಾಯಣಸ್ವಾಮಿ ಎಂಬ ಬ್ರೋಕರ್ ಮೂಲಕ ಮಗುವನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಅಕ್ರಮದ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಕಾರ್ಯಾಚರಣೆ ನಡೆಸಲಾಯಿತು. ಕೊಳ್ಳೂರು ರಸ್ತೆಯ ಗಸ್ತು ಮುಗಿಸಿಕೊಂಡು ಮಧ್ಯರಾತ್ರಿ 12.30ರ ಸುಮಾರಿಗೆ ವೆಂಕಟೇಶ್ವರ ಬಡಾವಣೆಯ ಕಡೆಗೆ ಬಂದಾಗ ಅನುಮಾನಾಸ್ಪದ ಚಲನವಲನ ಕಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸ್ಪಷ್ಟ ಉತ್ತರ ಸಿಗದ ಕಾರಣ ತೀವ್ರ ಪರಿಶೀಲನೆ ನಡೆಸಿದಾಗ, 7 ದಿನದ ಗಂಡು ಮಗುವನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ತನಿಖೆಯಲ್ಲಿ, ಬ್ರೋಕರ್ ನಾರಾಯಣಸ್ವಾಮಿ ಪೋಷಕರಿಂದ ಮಗುವನ್ನು ₹2 ಲಕ್ಷಕ್ಕೆ ಖರೀದಿಸಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೃಷ್ಣ ಮತ್ತು ಮಂಜುಳಾ ದಂಪತಿಗೆ ₹5 ಲಕ್ಷಕ್ಕೆ ಮಾರಾಟ ಮಾಡಿರುವುದು ದೃಢಪಟ್ಟಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶಂಕರಚಾರ್ ಹಾಗೂ ಸಬ್ ಇನ್ಸ್ಪೆಕ್ಟರ್ ಜಯರಾಮ್ ನೇತೃತ್ವದ ತಂಡ, ಮಗು ಮಾರಾಟ ಮಾಡಿದ ಪೋಷಕರು, ಮಧ್ಯವರ್ತಿ ಹಾಗೂ ಖರೀದಿದಾರರನ್ನು ಸೇರಿ ಐದು ಮಂದಿಯನ್ನು ಬಂಧಿಸಿದೆ. ಅಕ್ರಮ ಮಗು ಮಾರಾಟ ಜಾಲದ ಕುರಿತು ಪ್ರಕರಣ ದಾಖಲಿಸಿ ಉನ್ನತ ಮಟ್ಟದ ತನಿಖೆ ಕೈಗೊಳ್ಳಲಾಗಿದೆ. ಅಕ್ರಮವಾಗಿ ಮಗು ಮಾರಾಟ ಮಾಡುವ ಜಾಲವನ್ನು ಶ್ರೀನಿವಾಸಪುರ ಪೊಲೀಸರು ಪತ್ತೆಹಚ್ಚಿದ್ದು, ಮಾರಾಟಗಾರರು, ಖರೀದಿದಾರರು ಹಾಗೂ ಬ್ರೋಕರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ, ಎಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.