ವೇಮಗಲ್ ಕೋಲಾರ ಜಿಲ್ಲೆ (www.vknews.in): ಪಾನೀಯ,ದ್ರವ ಆಹಾರ ಸಂಸ್ಕರಣೆ ಹಾಗೂ ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಜರ್ಮನಿ ಮೂಲದ ಕ್ರೋನ್ಸ್ ಕಂಪನಿ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ನೂತನ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಬುಧವಾರ ಚಾಲನೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ರಾಜ್ಯದಲ್ಲಿ ಹೂಡಿಕೆಗೆ ಪೂರಕ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಫಲವಾಗಿ ಕ್ರೋನ್ಸ್ ಸಂಸ್ಥೆ ವೇಮಗಲ್ನಲ್ಲಿ ತನ್ನ ಉತ್ಪಾದನಾ ಘಟಕ ಸ್ಥಾಪಿಸಿದೆ ಎಂದು ಹೇಳಿದರು. 2024ರ ಅಕ್ಟೋಬರ್ನಲ್ಲಿ ಕ್ರೋನ್ಸ್ ಕಂಪನಿ ಸಲ್ಲಿಸಿದ್ದ ಹೂಡಿಕೆ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿ, 30 ಎಕರೆ ಜಮೀನು ಮಂಜೂರು ಮಾಡಿತ್ತು. ಬಳಿಕ 2025ರ ಫೆಬ್ರವರಿ 20ರಂದು ಇದೇ ಸ್ಥಳದಲ್ಲಿ ನಾನು ಭೂಮಿಪೂಜೆ ನೆರವೇರಿಸಿದ್ದೆ. ಕೇವಲ 18 ತಿಂಗಳ ಅವಧಿಯಲ್ಲಿ ಭವ್ಯ ಉತ್ಪಾದನಾ ಘಟಕ ನಿರ್ಮಾಣಗೊಂಡಿರುವುದು ವಿಶೇಷ ದಾಖಲೆಯಾಗಿದೆ. ಇದು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದಾಗುವ ಉದ್ಯಮಿಗಳಿಗೆ ಉತ್ತಮ ಸಂದೇಶ ನೀಡಲಿದೆ ಎಂದು ಅವರು ಹೇಳಿದರು.
ಕ್ರೋನ್ಸ್ ಕಂಪನಿ ಸುಮಾರು 16 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕ ನಿರ್ಮಿಸಿದ್ದು, ಇದಕ್ಕಾಗಿ ₹315 ಕೋಟಿ ಹೂಡಿಕೆ ಮಾಡಿದೆ. ಘಟಕದ ಕಾರ್ಯಾಚರಣೆಯಿಂದ ಸುಮಾರು 400 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಸಚಿವರು ತಿಳಿಸಿದರು. ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವ ವೇಮಗಲ್ ಮತ್ತು ಕೋಲಾರ ಕೈಗಾರಿಕಾ ಪ್ರದೇಶಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ಕೈಗಾರಿಕಾ ಬೆಳವಣಿಗೆಗೆ ಸಾಕಷ್ಟು ಅವಕಾಶಗಳನ್ನು ಹೊಂದಿವೆ. ಇಲ್ಲಿನ ಸ್ಥಳೀಯ ಯುವಜನರಿಗೆ ಅವರ ವಿದ್ಯಾರ್ಹತೆ ಹಾಗೂ ಕೌಶಲ್ಯಕ್ಕೆ ಅನುಗುಣವಾಗಿ ಉದ್ಯೋಗ ನೀಡಲು ಕೈಗಾರಿಕಾ ಸಂಸ್ಥೆಗಳು ಮುಂದಾಗಬೇಕು ಎಂದು ಎಂ.ಬಿ. ಪಾಟೀಲ ಮನವಿ ಮಾಡಿದರು.
ಕ್ರೋನ್ಸ್ ಕಂಪನಿ ವಿಶ್ವದಾದ್ಯಂತ ಸುಮಾರು 21 ಸಾವಿರ ಉದ್ಯೋಗಿಗಳನ್ನು ಹೊಂದಿದ್ದು, ಕಳೆದ ವರ್ಷ 5.65 ಬಿಲಿಯನ್ ಅಮೆರಿಕನ್ ಡಾಲರ್ ವಹಿವಾಟು ನಡೆಸಿದೆ. ವೇಮಗಲ್ ಘಟಕದ ಮೂಲಕ ರಾಜ್ಯದ ಕೈಗಾರಿಕಾ ಹಾಗೂ ಆರ್ಥಿಕ ಬೆಳವಣಿಗೆಗೆ ಸಂಸ್ಥೆ ಮತ್ತಷ್ಟು ಕೊಡುಗೆ ನೀಡಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಈ ಘಟಕದಲ್ಲಿ ಭಾರತದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಉನ್ನತ ಗುಣಮಟ್ಟದ ಎರ್ಗೋಬ್ಲಾಕ್ (ErgoBloc) ಪ್ಯಾಕೇಜಿಂಗ್ ಯಂತ್ರಗಳನ್ನು ಉತ್ಪಾದಿಸಲಾಗುತ್ತದೆ. ವಿವಿಧ ಮಾದರಿಯ ಬಾಟಲಿಗಳ ಉತ್ಪಾದನೆಗೆ ಅಗತ್ಯವಿರುವ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಗಂಟೆಗೆ ಸುಮಾರು ಒಂದು ಲಕ್ಷ ಬಾಟಲಿಗಳ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಯಂತ್ರಗಳನ್ನು ತಯಾರಿಸಲಾಗುತ್ತಿರುವುದು ವಿಶೇಷವಾಗಿದೆ ಎಂದು ಸಚಿವರು ಹೇಳಿದರು.
ಕೈಗಾರಿಕೆಗಳಿಗೆ ಅಗತ್ಯವಿರುವ ಭೂಮಿ ಮತ್ತು ಮೂಲಸೌಕರ್ಯ ಒದಗಿಸುವಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಪ್ರಮುಖ ಪಾತ್ರ ವಹಿಸುತ್ತಿದೆ. ಕೆಐಎಡಿಬಿ ಕೈಗಾರಿಕಾಸ್ನೇಹಿ ವಾತಾವರಣ ನಿರ್ಮಿಸುವಲ್ಲಿ ರಾಜ್ಯದ ಪ್ರಮುಖ ಸಂಸ್ಥೆಯಾಗಿದೆ ಎಂದು ಎಂ.ಬಿ. ಪಾಟೀಲ ಹೇಳಿದರು. ಕಾರ್ಯಕ್ರಮದಲ್ಲಿ ಕೋಲಾರ ಸಂಸದ ಮಲ್ಲೇಶ ಬಾಬು, ಶಾಸಕ ಕೊತ್ತೂರು ಜಿ. ಮಂಜುನಾಥ್, ಮಾಜಿ ವಿಧಾನಸಭಾಧ್ಯಕ್ಷ ವಿ.ಆರ್. ಸುದರ್ಶನ್, ಜರ್ಮನಿಯ ನಿಯೋಜಿತ ಕಾನ್ಸುಲ್ ಜನರಲ್ ಡಾ. ಕ್ರಿಸ್ಟಾಫ್ ಡೋರ್ಸ್ಫೆಲ್ಟ್, ಕ್ರೋನ್ಸ್ ಕಂಪನಿಯ ಸಿಒಒ ರಾಲ್ಫ್ ಗೋಲ್ಡ್ಬ್ರನ್ನರ್, ವ್ಯವಸ್ಥಾಪಕ ನಿರ್ದೇಶಕ ಥಾಮಸ್ ವೂಲ್ಫರ್ ಹಾಗೂ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಸುರಾಜ್ ಸೇರಿದಂತೆ ಅಧಿಕಾರಿಗಳು ಹಾಗೂ ಕಂಪನಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.