ಚಿಕ್ಕಬಳ್ಳಾಪುರ (www.vknews.in): ಭಾರತೀಯ ಹಬ್ಬಗಳ ಆಚರಣೆಗಳು ನಮ್ಮ ಸಂಸ್ಕೃತಿ, ಇತಿಹಾಸ, ಪರಂಪರೆ, ನಂಬಿಕೆ ಹಾಗೂ ಆಚಾರ-ವಿಚಾರಗಳೊಂದಿಗೆ ವೈಜ್ಞಾನಿಕ ಹಿನ್ನೆಲೆಯನ್ನೂ ಒಳಗೊಂಡಿವೆ. ಪ್ರತಿಯೊಂದು ಆಚರಣೆಯ ಹಿಂದಿರುವ ಉದ್ದೇಶ ಮತ್ತು ವೈಚಾರಿಕ ಅಂಶಗಳನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಉಪನ್ಯಾಸಕ ಸದಾಶಿವ ಆರಾಧ್ಯ ತಿಳಿಸಿದರು. ಚಿಕ್ಕಬಳ್ಳಾಪುರ ತಾಲೂಕಿನ ರೇಣುಮಾಕಲಹಳ್ಳಿಯ ಶ್ರೀ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಚಕೋರ ಸಾಹಿತ್ಯ ವಿಚಾರ ವೇದಿಕೆ, ಚಿಕ್ಕಬಳ್ಳಾಪುರ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೀಪಾವಳಿ ಹಬ್ಬದ ಆಚರಣೆಯಲ್ಲಿಯೂ ವೈಜ್ಞಾನಿಕ ಹಿನ್ನೆಲೆಯಿದೆ. ಹಿಂದಿನ ಕಾಲದಲ್ಲಿ ಮನೆಗಳು ಕೃಷಿ ಹೊಲಗಳ ಸಮೀಪದಲ್ಲಿರುತ್ತಿದ್ದವು. ಅವರೆ, ತೊಗರಿ, ಉದ್ದು, ಹೆಸರು ಸೇರಿದಂತೆ ವಿವಿಧ ಬೆಳೆಗಳಿಗೆ ಕೀಟಗಳ ಬಾಧೆ ಉಂಟಾಗುವ ಸಂದರ್ಭದಲ್ಲಿ ರಾತ್ರಿ ದೀಪಗಳನ್ನು ಬೆಳಗಿಸುವುದರಿಂದ ಕೀಟಗಳು ಆಕರ್ಷಿತವಾಗಿ ಬೆಳೆಗಳ ರಕ್ಷಣೆಗೆ ಸಹಕಾರಿಯಾಗುತ್ತಿತ್ತು ಎಂಬ ವಿವರಣೆಯನ್ನು ನೀಡಿದರು. ಅದೇ ರೀತಿ ಪಟಾಕಿಗಳ ಶಬ್ದದಿಂದ ಪಕ್ಷಿಗಳನ್ನು ದೂರವಿರಿಸಿ ಬೆಳೆಗಳನ್ನು ರಕ್ಷಿಸಿಕೊಳ್ಳುವ ಉದ್ದೇಶವೂ ಇತ್ತು ಎಂದು ತಿಳಿಸಿದರು.
ಯುಗಾದಿ, ಸಂಕ್ರಾಂತಿ, ನಾಗರ ಪಂಚಮಿ, ದಸರಾ, ತುಳಸಿ ಹಬ್ಬ, ಗಣೇಶ ಚತುರ್ಥಿ ಸೇರಿದಂತೆ ವಿವಿಧ ಹಬ್ಬಗಳ ಆಚರಣೆಗಳ ಹಿಂದಿರುವ ಸಾಂಸ್ಕೃತಿಕ ಹಾಗೂ ವೈಚಾರಿಕ ಹಿನ್ನೆಲೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಪ್ರತಿಯೊಂದು ವಿಚಾರವನ್ನೂ ವಿವೇಚನೆಯಿಂದ ಸ್ವೀಕರಿಸಬೇಕು. ನಂಬಿಕೆ ಇರಬೇಕೇ ಹೊರತು ಮೂಢನಂಬಿಕೆ ಬೆಳೆಸಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕ ಪಾತಮುತ್ತಕಹಳ್ಳಿ ಚಲಪತಿಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯು 1961ರಲ್ಲಿ ಮೈಸೂರು ಸಾಹಿತ್ಯ ಅಕಾಡೆಮಿಯಾಗಿ ಆರಂಭಗೊಂಡು, 1977ರಲ್ಲಿ ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಆರಂಭಿಸಿತು. ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿದ ಸಾಹಿತಿಗಳನ್ನು ಪ್ರಶಸ್ತಿಗಳ ಮೂಲಕ ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ, ಉತ್ತಮ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವ ಕಾರ್ಯವನ್ನು ಅಕಾಡೆಮಿ ಮಾಡುತ್ತಿದೆ ಎಂದರು.
ರಾಜ್ಯದಾದ್ಯಂತ ‘ಚಕೋರ’ ಜಿಲ್ಲಾ ಮಟ್ಟದ ಸಾಹಿತ್ಯ ವಿಚಾರ ವೇದಿಕೆಗಳನ್ನು ಸ್ಥಾಪಿಸುವ ಮೂಲಕ ಸಾಹಿತ್ಯ, ಭಾಷೆ, ನಾಡು-ನುಡಿಯ ಅಭಿಮಾನ ಬೆಳೆಸುವ ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಚಿಂತನೆಗಳನ್ನು ಮೂಡಿಸುವ ವಿಶೇಷ ಉಪನ್ಯಾಸ ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಪುಲಿಕೇಶಿ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕನ್ನಡ ನಾಡಿನ ಜನರಾದ ನಾವು ನಾಡು, ನುಡಿ, ಭಾಷೆ, ನೆಲ ಮತ್ತು ಜಲದ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು. ಕನ್ನಡ ಭಾಷೆಗೆ ಹಾಗೂ ನಾಡಿನ ಹಿತಾಸಕ್ತಿಗೆ ಧಕ್ಕೆ ಉಂಟಾದಾಗ ಹೋರಾಟದ ಮೂಲಕ ರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ವಿದ್ಯಾರ್ಥಿಗಳು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕನ್ನಡ ಹೋರಾಟಗಾರ ತಿಪ್ಪೇನಹಳ್ಳಿ ನಾರಾಯಣಸ್ವಾಮಿ ಹಾಗೂ ಶಾಲೆಯ ಪ್ರಾಂಶುಪಾಲ ಗಂಗರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸರಿಯಾದ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಿ ಗೌರವಿಸಲಾಯಿತು. ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಪ್ರತಿನಿಧಿ ಈ ಧರೆ ಪ್ರಕಾಶ್, ಸುಬ್ರಮಣಿ, ಶಿಕ್ಷಕರಾದ ರಮೇಶ್, ಶಿವಕುಮಾರ್, ಶಾಲೆಯ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.