ಕೋಲಾರ (www.vknews.in): ಜಿಲ್ಲೆಯಲ್ಲಿ ಅರಣ್ಯ ಭೂಮಿ ಹಾಗೂ ರೈತರಿಗೆ ಸರ್ಕಾರದಿಂದ ಮಂಜೂರಾಗಿರುವ ಜಮೀನುಗಳ ನಡುವಿನ ಗೊಂದಲವನ್ನು ನಿವಾರಿಸಿ, ನೈಜ ಫಲಾನುಭವಿ ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ಕ್ರಮ ಕೈಗೊಂಡಿದೆ. ಈ ಸಂಬಂಧ ಬಾಕಿ ಇರುವ ಎಲ್ಲಾ ಪರಿಶೀಲನಾ ಕಾರ್ಯಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಿ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಹಾಗೂ ಕಂದಾಯ ಮತ್ತು ಅರಣ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ, ಮಾಲೂರು, ಬಂಗಾರಪೇಟೆ ಹಾಗೂ ಕೆಜಿಎಫ್ ಸೇರಿದಂತೆ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಮತ್ತು ರೈತರ ಮಂಜೂರಾತಿ ಜಮೀನುಗಳ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
1886, 1900, 1931 ಮತ್ತು 1941ರ ಅರಣ್ಯ ಅಧಿಸೂಚನೆಗಳು ಹಾಗೂ ಮೈಸೂರು ಅರಣ್ಯ ಕಾಯ್ದೆ, ಕರ್ನಾಟಕ ಅರಣ್ಯ ಕಾಯ್ದೆ, ಭಾರತೀಯ ಅರಣ್ಯ ಕಾಯ್ದೆ ಮತ್ತು ಚೆನ್ನೈ ಅರಣ್ಯ ಕಾಯ್ದೆಗಳ ಅಡಿಯಲ್ಲಿ ಅಧಿಸೂಚಿತವಾಗಿರುವ ಅರಣ್ಯ ಪ್ರದೇಶಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಅದೇ ರೀತಿ ಸಕ್ಷಮ ಪ್ರಾಧಿಕಾರ ಹಾಗೂ ಶಾಸನಬದ್ಧ ಸಮಿತಿಗಳಿಂದ ರೈತರಿಗೆ ಮಂಜೂರಾಗಿರುವ ಜಮೀನುಗಳ ವಿವರಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವರ್ಗೀಕರಿಸಲಾಗುತ್ತಿದೆ ಎಂದರು.
ಮಾನ್ಯ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅರಣ್ಯ ಭೂಮಿ ಮತ್ತು ಮಂಜೂರಾತಿ ಜಮೀನುಗಳ ನಡುವಿನ ಸ್ಪಷ್ಟತೆಯನ್ನು ಗುರುತಿಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಅಧಿಸೂಚಿತ ಅರಣ್ಯ ಪ್ರದೇಶಗಳ ಪರಿಶೀಲನಾ ಕಾರ್ಯ ಶೇ.100ರಷ್ಟು ಪೂರ್ಣಗೊಂಡಿದೆ. ಸಂಭಾವ್ಯ ಅರಣ್ಯ ಪ್ರದೇಶಗಳ ಪರಿಶೀಲನೆ ಶೇ.70ರಷ್ಟು ಮುಗಿದಿದ್ದು, ಉಳಿದ ಶೇ.30ರಷ್ಟು ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರತಿ ವಾರ ಕನಿಷ್ಠ ಒಂದು ಅಥವಾ ಎರಡು ಸಭೆಗಳನ್ನು ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಡೀಮ್ಡ್ ಫಾರೆಸ್ಟ್ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಶೇ.90ರಷ್ಟು ಪ್ರಕರಣಗಳು ಇತ್ಯರ್ಥಗೊಂಡಿದ್ದು, ಕೇವಲ 15 ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ. ಈ ಪ್ರಕರಣಗಳನ್ನೂ ಮುಂದಿನ ಒಂದು ವಾರದೊಳಗೆ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಈ ತಿಂಗಳ 5ರಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಸಭೆಯಲ್ಲಿ ಅರಣ್ಯ ಅಧಿಸೂಚನೆಗಳು ಮತ್ತು ರೈತರ ಮಂಜೂರಾತಿ ಜಮೀನುಗಳ ದಾಖಲೆಗಳನ್ನು ಒಂದು ತಿಂಗಳೊಳಗೆ ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಮೊದಲ ಹಂತದಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ಆರು ಅಧಿಸೂಚನೆಗಳ ವ್ಯಾಪ್ತಿಗೆ ಬರುವ ಗ್ರಾಮಗಳ ದಾಖಲೆಗಳು, ‘ಸಿ’ ಸ್ಟೇಟ್ಮೆಂಟ್ ಹಾಗೂ ಸಕ್ಷಮ ಪ್ರಾಧಿಕಾರದಿಂದ ಮಂಜೂರಾಗಿರುವ ಜಮೀನುಗಳ ವಿವರಗಳನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಮುಂದಿನ ಒಂದು ತಿಂಗಳೊಳಗೆ ಬಾಕಿ ಇರುವ ಎಲ್ಲಾ ಪರಿಶೀಲನಾ ಕಾರ್ಯಗಳನ್ನು ಪೂರ್ಣಗೊಳಿಸಿ, ಕಂದಾಯ ಮತ್ತು ಅರಣ್ಯ ಇಲಾಖೆಗಳ ಸಮನ್ವಯದೊಂದಿಗೆ ಸರ್ಕಾರಕ್ಕೆ ಹಾಗೂ ಅರಣ್ಯ ಸಚಿವರಿಗೆ ಸಮಗ್ರ ವರದಿ ಸಲ್ಲಿಸಲಾಗುವುದು. ಅರಣ್ಯ ಪ್ರದೇಶಗಳ ಸಂರಕ್ಷಣೆಗೆ ಆದ್ಯತೆ ನೀಡುವುದರ ಜೊತೆಗೆ ಕಾನೂನುಬದ್ಧವಾಗಿ ಜಮೀನು ಮಂಜೂರಾಗಿರುವ ರೈತರ ಹಕ್ಕು ಮತ್ತು ಹಿತಾಸಕ್ತಿಗೂ ಧಕ್ಕೆಯಾಗದಂತೆ ನ್ಯಾಯ ಒದಗಿಸುವುದು ಜಿಲ್ಲಾಡಳಿತದ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಸ್ಪಷ್ಟಪಡಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.