(www.vknews.in) : ಮನೆ ಎಂಬುದು ಮನಸ್ಸಿಗೆ ಮುದ ನೀಡುವ, ಆಹ್ಲಾದ ಬೀಸುವ ಸುಂದರ ತಂಗುದಾಣ. ಪತ್ನಿ, ಮಕ್ಕಳು ಅದರ ಸೊಗಸು. ತಂದೆತಾಯಿ ಮತ್ತಿತರರು ಅದರ ತಂಗಾಳಿ. ಪವಿತ್ರ ಕುರ್ಆನ್ ಕಅಬಾಲಯವನ್ನು ದಾರುಸ್ಸಲಾಮ್ (ಶಾಂತಿಸದನ) ಮತ್ತು ಬೈತುಲ್ಲಾಹ್ (ಅಲ್ಲಾಹನ ಭವನ) ಎಂದು ಅಭಿಸಂಭೋದಿಸಿದೆ. ಸಾಮಾನ್ಯವಾಗಿ ಮನೆಗೂ ಬೈತ್ ಅಥವಾ ದಾರ್ ಎಂದೂ ಹೇಳಲಾಗುತ್ತದೆ.
ಆ ಮೂಲಕ ನಮ್ಮ ಮನೆಯೂ ಕಅಬಾಲಯದೊಂದಿಗೆ ನಿಕಟ ಸಂಬಂಧ ಸ್ಥಾಪಿಸಬೇಕಾದ ನಿಕೇತನವೆಂದು ಸಾರಲಾಗಿದೆ. ಬದುಕು ಅಲ್ಲಾಹನ ನಿಯಮ, ನಿಬಂಧನೆಗಳಿಗೆ ಬದ್ಧವಾಗಿ ಮುಂದಕ್ಕೊಯ್ದರೆ ಸ್ವಂತ ಮನೆಯೂ ಶಾಂತಿಸದನವಾಗಿ ಮಾರ್ಪಡುತ್ತದೆ ಎಂಬ ಶುಭ ಸೂಚನೆಯನ್ನೂ ನೀಡಲಾಗಿದೆ. ಮನುಷ್ಯ ಸದಾ ಸಮೂಹ ಜೀವಿ. ಆತನಿಗೆ ಎಲ್ಲರೊಂದಿಗೆ ಹೊಣೆಗಾರಿಕೆಗಳಿವೆ. ಪರಿಸರದ ಸಹಾಯ, ಸಹಕಾರದಿಂದಲೇ ಕೂಡಿಬಾಳಲು ಸಾಧ್ಯ. ಪತಿ-ಪತ್ನಿಯರ ಸಂಬಂಧ ಮಾತ್ರವಲ್ಲ ಅತ್ತೆ-ಸೊಸೆಯರ ಬಾಂಧವ್ಯಕ್ಕೂ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಮುತ್ತು ಕೊಡುವವಳು ಬಂದಾಗ, ತುತ್ತು ಕೊಟ್ಟವಳು ಬೀದಿಪಾಲಾದರೆ ಅದೊಂದು ಶಾಪವಾದೀತು.
ಅತ್ತೆಯೂ ತಿಳಿದಿರಬೇಕು, ತಾನೂ ಸೊಸೆಯಾಗಿಯೇ ಬಂದವಳು. ನನ್ನ ಮಗಳೂ ಒಂದು ಮನೆಯ ಸೊಸೆಯಾಗಿದ್ದಾಳೆ ಅಥವಾ ಸೊಸೆಯಾಗುವವಳು. ಆದ್ದರಿಂದ ಸೊಸೆ ಮತ್ತು ಮಗಳ ವಿಷಯದಲ್ಲಿ ತಾರತಮ್ಯ ಸಲ್ಲದು. ಬಂದವಳು ಅತ್ತೆ-ಮಾವರನ್ನು ಚೆನ್ನಾಗಿ ನೋಡಬೇಕೆಂದು ಆಸೆಪಡುವಾಗ ಸೊಸೆಯನ್ನೂ ಮನೆಮಗಳಂತೆ ಕಾಣಬೇಕು. ಸದಾ ಜತೆಯಾಗಿರಬೇಕು. ಪ್ರೀತಿ, ಸ್ನೇಹ, ಸಹಾನುಭೂತಿ ಎಂಬುದು ಕಿತ್ತಾಡಿ ಪಡೆ ಯುವಂತಹದ್ದಲ್ಲ. ಅತ್ತ ಕೊಟ್ಟು, ಇತ್ತ ಗಳಿಸುವಂತಹದ್ದು. ಅದಕ್ಕೆ ಷರತ್ತುಗಳು ಹೇಳಬೇಕಾಗಿಲ್ಲ. ಕೊಟ್ಟದ್ದು ಮರಳಿ ಸಿಕ್ಕೇ ಸಿಗುತ್ತದೆ. ಅನುಕಂಪ, ಕಾಳಜಿ ಹರಿದು ಬರುತ್ತದೆ.
ಸೊಸೆ ತವರಿಗೆ ಹೋದರೂ ಆಕೆ ಅಲ್ಲಿ ಅತ್ತೆ, ಮಾವ, ನಾದಿನಿ, ಮೈದುನರ ಒಡನಾಟವನ್ನು ಕೊಂಡಾಡುತ್ತಾಳೆ. ಪ್ರೀತಿಯ ವಿಶೇಷತೆಯದು. ಆದ್ದರಿಂದ ನಮ್ಮ ಕರ್ತವ್ಯಗಳು ಹೊರೆಯಿಂದ ಮುಕ್ತನಾಗುವ ನೆಲೆಯಲ್ಲಾಗಬಾರದು. ಅದು ಇಬಾದತ್ನ ಸ್ಥಾನಕ್ಕೇರಬೇಕು. ಇದು ಬರೀ ಅತ್ತೆ-ಸೊಸೆಯರ ಸಂಬಂಧದಲ್ಲಿ ಮಾತ್ರವಲ್ಲ, ಎಲ್ಲರೊಂದಿಗೂ ನಮ್ಮ ನಡೆ, ವರ್ತನೆ ಹಾಗಿರಬೇಕು. ಗುಣನಡತೆಗೆ ಬಹಳ ಪ್ರಾಧಾನ್ಯತೆಯಿದೆ. ಒಳಿತಿನ ಪ್ರತಿಫಲ ಎಂದೂ ನಷ್ಟವಾಗದು. ಅದು ಶಾಶ್ವತ ಸ್ವರ್ಗಕ್ಕೆ ಕೊಂಡೊಯ್ಯುತ್ತದೆ.
ಮುಂದುವರಿಯುವುದು……
✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.