1) ಅಸ್ತಮಾ ರೋಗ ಇರುವವರಿಗೆ ಕೋವಿಡ್-19 ಬರುವ ಸಾಧ್ಯತೆ ಹೆಚ್ಚು ಇದೆಯಾ?
(www.vknews.com) : ಕೋವಿಡ್-19 ವೈರಾಣು ಸೋಂಕು ನೇರವಾಗಿ ಶ್ವಾಸಕೋಶಕ್ಕೆ ದಾಳಿ ಮಾಡುವ ಕಾರಣದಿಂದಾಗಿ ಅಸ್ತಮಾ ಅಥವಾ ಇನ್ನಾವುದೇ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗ ಇರುವವರು ಹೆಚ್ಚಿನ ಜಾಗರೂಕತೆ ಮಾಡಬೇಕಾಗುತ್ತದೆ. ಅಸ್ತಮಾ ಇರುವವರಿಗೆ ಕೋವಿಡ್-19 ರೋಗ ಜಾಸ್ತಿ ಜಾಸ್ತಿ ಕಾಡುತ್ತದೆ ಎಂಬ ವಿಚಾರಕ್ಕೆ ಯಾವುದೇ ಪೂರಕ ದಾಖಲೆ ಇಲ್ಲ. ಆದರೂ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶಕ್ಕಿಂತ ಅಸ್ತಮಾ ಬಾಧಿತ ವ್ಯಕ್ತಿಯ ಶ್ವಾಸಕೋಶ ದುರ್ಬಲವಾಗಿರುತ್ತದೆ. ಈ ಕಾರಣದಿಂದ ಅಸ್ತಮಾ ಬಾಧಿತರು ಹೆಚ್ಚು ಕೋವಿಡ್-19 ರೋಗಕ್ಕೆ ತೆರೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಅಂದಾಜಿಸಲಾಗಿದೆ. COPD ಎಂಬ ಶ್ವಾಸಕೋಶಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಕಾಯಿಲೆ ಇರುವವರು ಮತ್ತು ಅಸ್ತಮಾ ರೋಗಿಗಳಿಗೆ ಕೋವಿಡ್-19 ರೋಗ ತಗಲಿದರೆ ಅವರನ್ನು ಹೆಚ್ಚಿನ ಸಂದರ್ಭಗಳಲ್ಲಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ದಾಖಲು ಮಾಡಿ ಚಿಕಿತ್ಸೆ ನೀಡಬೇಕಾದ ಸನ್ನಿವೇಶ ಉಂಟಾಗಬಹುದು. ಆದರೆ ಸಾವಿನ ಅನುಪಾತ ಇತರರಷ್ಟೆ ಇದೆ ಎಂದೂ ಅಂಕಿ ಅಂಶಗಳು ತಿಳಿಸಿದೆ.
2) ಅಸ್ತಮಾ ಮತ್ತು ಇತರ ಶ್ವಾಸಕೋಶ ಸಂಬಂಧ ರೋಗ ಇರುವವರು ಯಾವ ಮುನ್ನೆಚ್ಚರಿಕೆ ವಹಿಸಬೇಕು?
ಇತರ ಎಲ್ಲಾ ಸಾಮಾನ್ಯ ಜನರು ವಹಿಸುವಂತಹ ಮುನ್ನೆಚ್ಚರಿಕೆಗಳಾದ ಮುಖಕವಚ ಧರಿಸುವಿಕೆ, ಸಾಮಾಜಿಕ ಅಂತರ ಇಟ್ಟುಕೊಳ್ಳುವುದು, ಸೋಪಿನ ದ್ರಾವಣದಿಂದ ಗಂಟೆÀಗೊಮ್ಮೆ ಕೈ ತೊಳೆದುಕೊಳ್ಳುವುದು, ಮುಖ, ಕಣ್ಣು, ಮೂಗು, ಬಾಯಿಯನ್ನು ಮುಟ್ಟದಿರುವುದು ಮುಂತಾದ ಎಲ್ಲಾ ಜಾಗರೂಕತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು. ಅಸ್ತಮಾಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಸೂಕ್ತ ನಿಗಾ ವಹಿಸುವುದು ಅಸ್ತಮಾ ಔಷಧಿಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಲೇಬೇಕು. ಸಾಮಾನ್ಯ ಪ್ಲೂ ರೋಗಕ್ಕೆ ನೀಡಬಹುದಾದ ಲಸಿಕೆಗಳನ್ನು ತೆಗೆದುಕೊಳ್ಳದಿದ್ದಲ್ಲಿ ಅದನ್ನು ತೆಗೆದುಕೊಳ್ಳುವುದು ಸೂಕ್ತ. ಯಾವುದೇ ಕಾರಣಕ್ಕೂ ಅಸ್ತಮಾವನ್ನು ಉಲ್ಭಣಿಸುವ ಆಹಾರ ಅಥವಾ ಇತರ ಕಾರಣಗಳನ್ನು ತಪ್ಪಿಸುವ ಮೂಲಕ ಶ್ವಾಸಕೋಶಗಳು ಆರೋಗ್ಯಪೂರ್ಣವಾಗಿರುವಂತೆ ನೋಡಿಕೊಳ್ಳಬೇಕು.
3) ಮೂಗಿನ ಮುಖಾಂತರ ಬಳಸುವ ಸ್ಟೀರಾಯ್ಡು ಸ್ಪ್ರೇ ಬಳಸಬಹುದು?
ಯಾವುದೇ ಕಾರಣಕ್ಕೂ ಇದನ್ನು ನಿಲ್ಲಿಸಬಾರದು. ಇದರಿಂದ ಯಾವುದೇ ರೀತಿಯ ಕಿರುಹನಿಗಳು ವಾತಾವರಣಕ್ಕೆ ಬಿಡುಗಡೆಯಾಗದು. ಬಳಸಿದ ಬಳಿಕ ಸ್ಪ್ರೇ ಮಾಡುವ ಸಾಧನದ ತುದಿಯನ್ನು ಚೆನ್ನಾಗಿ ಒರೆಸಬೇಕು. ಹೀಗೆ ಒರೆಸಿದ ಬಟ್ಟೆ ಅಥವಾ ಕಾಗದವನ್ನು ಮರು ಬಳಕೆ ಮಾಡಬೇಡಿ. ತಕ್ಷಣವೇ ವಿಸರ್ಜಿಸಿ. ಆ ಬಳಿಕ 20 ಸೆಕೆಂಡುಗಳ ಕಾಲ ಸೋಪಿನಿಂದ ಕೈತೊಳೆಯಿರಿ. ಯಾವುದೇ ಕಾರಣಕ್ಕೂ ಈ ಸಾಧನವನ್ನು ಇತರರ ಜೊತೆ ಹಂಚಿಕೊಳ್ಳಬೇಡಿ.
4) ಆಂಟಿಹಿಸ್ಟಮೈನ್ ಬಳಕೆಯಿಂದ ದೇಹದ ರಕ್ಷಣಾ ವ್ಯವಸ್ಥೆ ಕುಂಠಿತಗೊಳ್ಳಬಹುದೇ?
ಆಂಟಿಹಿಸ್ಟಮೈನ್ ಬಳಕೆಯಿಂದ ರಕ್ಷಣಾ ಶಕ್ತಿ ಕುಂದುವುದಿಲ್ಲ. ಅತೀ ಅಗತ್ಯವಿದ್ದಲ್ಲಿ ಅವುಗಳನ್ನು ಬಳಸಬಹುದಾಗಿದೆ.
5) ಅಸ್ತಮಾ ಔಷಧಿಯನ್ನು ಹೆಚ್ಚು ಸಂಗ್ರಹ ಮಾಡಿ ಇಡಬೇಕಾದ ಅವಶ್ಯತೆ ಇದೆಯಾ?
ಕರೋನಾ ರೋಗದ ಸಂದರ್ಭದಲ್ಲಿ ಕನಿಷ್ಟ ಒಂದು ತಿಂಗಳಿಗೆ ಬೇಕಾದ ಔಷಧಿ ಸಂಗ್ರಹವಿರುವುದು ಸೂಕ್ತ. ಅದಕ್ಕಿಂತ ಜಾಸ್ತಿ ಸಂಗ್ರಹ ಮಾಡಬೇಕಾದ ಅನಿವಾರ್ಯತೆ ಇಲ್ಲ. ಜೀವರಕ್ಷಕ ಔಷಧಿಗಳು ಎಲ್ಲ ಸಂದರ್ಭಗಳಲ್ಲಿ ದೊರಕುತ್ತದೆ.
6) ಅಸ್ತಮಾ ರೋಗಿಗಳು ಬಳಸುವ ಸ್ಟಿರಾಯ್ಡುಯುಕ್ತ ನೇಸಲ್ಸ್ಪ್ರೇ ಬಳಕೆಯಿಂದ ರಕ್ಷಣಾ ಶಕ್ತಿ ಕುಂದಿ, ಕೋವಿಡ್-19 ಬರುವ ಸಾಧ್ಯತೆ ಇದೆಯಾ?
ಅಸ್ತಮಾ ರೋಗಕ್ಕೆ ಬಳಸುವ ನೇಸಲ್ ಸ್ಪ್ರೇಯಲ್ಲಿ ಸ್ಟೀರಾಯ್ಡು ಕನಿಷ್ಟ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ದೇಹದ ರಕ್ಷಣಾ ವ್ಯವಸ್ಥೆ ಕುಂದುವುದಿಲ್ಲ. ಯಾವುದೇ ಕಾರಣಕ್ಕೂ ಈ ಔಷಧಿ ನಿಲ್ಲಿಸಬೇಡಿ. ನಿಮ್ಮ ದೈನಂದಿನ ಅಸ್ತಮಾ ಸಂಬಂಧಿತ ಎಲ್ಲಾ ಔಷಧಿಗಳನ್ನು ವೈದ್ಯರ ಸೂಚನೆ ಇಲ್ಲದೆ ನಿಲ್ಲಿಸಬೇಡಿ. ಅಸ್ತಮಾ ನಿಯಂತ್ರಣದಲ್ಲಿಡಬೇಕಾದ ಎಲ್ಲಾ ಔಷಧಿಗಳನ್ನು ಚಾಚೂ ತಪ್ಪದೆ ಬಳಸತಕ್ಕದ್ದು.
7) ಅಸ್ತಮಾ ರೋಗಿಗಳು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಶೀತ ಜ್ವರ ಕಂಡುಬಂದಲ್ಲಿ ಏನು ಮಾಡಬೇಕು?
ಇಂತಹಾ ಸಂದರ್ಭಗಳಲಿ ತಕ್ಷಣವೇ ವೈದ್ಯರನ್ನು ಕಾಣಬೇಕು. ಸ್ವಂತ ಔಷಧಿಗಾರಿಕೆ ಮಾಡಬೇಡಿ ವೈದ್ಯರ ಸಲಹೆ, ಸೂಚನೆ ಮೇರೆಗೆ ಔಷಧಿ ತೆಗೆದುಕೊಳ್ಳತಕ್ಕದ್ದು.
8) ನ್ಯೂಮೋನಿಯಾ ಲಸಿಕೆ ಹಾಕಿದ ಮೇಲೆಯೂ ಅಸ್ತಮಾ ರೋಗಿಗಳಿಗೆ ಕೋವಿಡ್-19 ಬರಬಹುದೇ?
ಖಂಡಿತವಾಗಿಯೂ ಬರುವ ಸಾಧÀ್ಯತೆ ಇದೆ. ಕೋವಿಡ್-19 ರೋಗಕ್ಕೆ ಲಸಿಕೆ ಇರುವುದಿಲ್ಲ. ಬ್ಯಾಕ್ಟಿರಿಯಾದಿಂದ, ನ್ಯೂಮೋನಿಯಾ ಬರದಂತೆ ನ್ಯೂಮೋರಾಕಲ್ ಲಸಿಕೆ ಹಾಕಲಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾ ಸಂಬಂಧಿತ ನ್ಯೂಮೋನಿಯಾ ರೋಗ ಬರುವುದಿಲ್ಲ. ಈ ಕಾರಣದಿಂದ ಸೂಕ್ತ ಮುನ್ನೆಚ್ಚರಿಕೆ ವಹಿಸಲೇಬೇಕು.
9) ಅಸ್ತಮಾ ರೋಗಿಗಳು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಪಲ್ಸ್ ಆಕ್ಸಿಮೀಟರ್ ಬಳಸಬಹುದೇ?
ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಪತ್ತೆಹಚ್ಚುವ ಸಾಧನಕ್ಕೆ ಪಲ್ಸ್ ಆಕ್ಸಿಮೀಟರ್ ಎನ್ನಲಾಗುತ್ತದೆ. 92 ರಿಂದ 100 ಶೇಕಡಾ ಆಕ್ಸಿಜನ್ ಪ್ರಮಾಣ ಇದ್ದರೆ ನಾರ್ಮಲ್ ಎನ್ನಲಾಗುತ್ತದೆ. 90ಕ್ಕಿಂತ ಕಡಿಮೆ ಇದ್ದಲ್ಲಿ ವೈದ್ಯರ ಸಲಹೆ ಅಗತ್ಯ. ಯಾಂತ್ರಿಕವಾಗಿ ಆಮ್ಲಜನಕ ಪ್ರಮಾಣ ಪತ್ತೆಹಚ್ಚುವ ಯಂತ್ರಗಳು ನಿಖರವಾದ ಮಾಹಿತಿ ನೀಡುವುದಿಲ್ಲ. ಈ ಕಾರಣದಿಂದ ಇದರ ಬಳಕೆ ಸೂಕ್ತವಲ್ಲ. ಇನ್ನೂ ಕೋವಿಡ್-19 ರೋಗದಲ್ಲಿ ಆಮ್ಲಜನಕ ಪ್ರಮಾಣ ಬೇಗನೆ ಕುಸಿಯುತ್ತದೆ. ಈ ಕಾರಣದಿಂದ ಅಸ್ತಮಾ ರೋಗಿಗಳು ಈ ಯಂತ್ರ ಬಳಸಿ ತಪ್ಪು ಮಾಹಿತಿ ಪಡೆದು, ನಿಶ್ಚಿಂತೆಯಾಗಿರುವುದು ಸೂಕ್ತವಲ್ಲದ ಕಾರಣ, ಈ ಯಂತ್ರದ ಬಳಕೆ ಮನೆಯಲ್ಲಿ ಸೂಕ್ತವಲ್ಲ ಎನ್ನಲಾಗಿದೆ.
10) ಅಸ್ತಮಾ ಇರುವವರು ಯಾವ ರೀತಿಯ ಆಹಾರ ಪದಾರ್ಥ ಸೇವನೆ ಮಾಡಬೇಕು?
ಜಾಸ್ತಿ ಸಿದ್ಧ ಆಹಾರ ಮತ್ತು ರಾಸಾಯನಿಕಯುಕ್ತ ರೆಡಿಮೇಡ್ ಆಹಾರ ಬಳಸುವುದರಿಂದ ಅಸ್ತಮಾ ರೋಗಿಗಳಿಗೆ ತೊಂದರೆ ಜಾಸ್ತಿಯಾಗಬಹುದು. ಹೆಚ್ಚು ಹೆಚ್ಚು ಹಸಿ ತರಕಾರಿ ಮತ್ತು ಹಣ್ಣುಹಂಪಲುಯುಕ್ತ ಆಹಾರಸೇವನೆ ಒಳ್ಳೆಯದು. ಜಾಸ್ತಿ ವಿಟಮಿನ್-ಡಿ ಇರುವ, ಹಾಲು, ಮೊಟ್ಟೆ ತೆಗೆದುಕೊಳ್ಳಬೇಕು. ಅದೇ ರೀತಿ ವಿಟಮಿನ್ ಎ ಇರುವ ಕ್ಯಾರೆಟ್, ಗೆಣಸು, ಬ್ರೊಕೋಲಿ, ಹಸಿರು ತರಕಾರಿಗಳಾದ ಬಸಳೆ, ಹರಿವೆ ಹೆಚ್ಚು ತಿನ್ನಬಹುದಾಗಿದೆ. ಏಪಲ್ ಮತ್ತು ಬಾಳೆ ಹಣ್ಣಿನಲ್ಲಿ ಹೆಚ್ಚಿನ ಆಂಟಿಆಕ್ಸಿಡೆಂಟ್ ಮತ್ತು ಮೆಗ್ನಿಸಿಯಂ ಇರುವ ಕಾರಣ ಶ್ವಾಸಕೋಶದ ಕಾರ್ಯಕ್ಷಮತೆ ಹೆಚ್ಚಿಸಿ ಅಸ್ತಮಾ ಬರದಂತೆ ಮಾಡುತ್ತದೆ ಎನ್ನಲಾಗಿದೆ. ಕರಿದ ತಿಂಡಿಗಳು, ಇಂಗಾಲಯುಕ್ತ ಪೇಯ, ಬೀನ್ಸ್, ಕ್ಯಾಬೇಜ್, ನೀರುಳ್ಳಿ ಬಳಕೆ ಕಡಿಮೆ ಮಾಡಬೇಕು. ಆಹಾರವನ್ನು ಶೇಖರಣೆ ಮಾಡಲು ಪೂರಕವಾಗಿ ಬಳಸುವ ಆಹಾರ ಕೆಡದಂತೆ ಬಳಸುವ ರಾಸಾಯನಿಕಗಳು ಇರುವ ಆಹಾರಗಳನ್ನು ಸೇವನೆ ಮಾಡಲೇಬಾರದು.
– ಡಾ|| ಮುರಲೀ ಮೋಹನ್ ಚೂಂತಾರು ಸುರಕ್ಷಾದಂತ ಚಿಕಿತ್ಸಾಲಯ, ಹೊಸಂಗಡಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.