(www.vknews.com) : ಶಾಲೆಗಳು ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ತರಗತಿಗಳನ್ನು ನಡೆಸುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ಹೆಚ್ಚಾಗಿ ಫೀಸ್ ಕಲೆಕ್ಟ್ ಮಾಡಲು ಎಂಬಂತೆ ಭಾಸವಾಗುತ್ತಿದೆ. ತರಗತಿಗಳೇ ನಡೆಯುತ್ತಿಲ್ಲವೆಂದ ಮೇಲೆ ಫೀಸ್ ಕೇಳಲು ಸಾಧ್ಯವೇ. ಇಲ್ಲ. ಆದುದರಿಂದ ಆನ್ ಲೈನ್ ಕ್ಲಾಸುಗಳ ಭರಾಟೆ ಪ್ರಾರಂಭವಾಗಿದೆ. ನಾನು ನೋಡುತ್ತಿರುವ ಹಾಗೆ ವಾರದಲ್ಲಿ ಐದು ದಿನ ಆನ್ ಲೈನ್ ಕ್ಲಾಸುಗಳು ಇರುತ್ತವೆ. ಮಧ್ಯಾಹ್ನ ೧೨ ಗಂಟೆಗೆ ಪ್ರಾರಂಭವಾಗುತ್ತದೆ. ೪ ಗಂಟೆಗೆ ಮುಕ್ತಾಯ. ಮಧ್ಯದಲ್ಲಿ ಅರ್ಧ ಗಂಟೆ ಬ್ರೇಕ್ ಕೊಡಲಾಗುತ್ತದೆ. ಕೆಲವೊಮ್ಮೆ ಟೀಚರುಗಳಿಗೆ ನೆಟ್ ಪ್ರಾಬ್ಲಮ್ ಆದರೆ ಕೆಲವು ಸಮಯ ವಿದ್ಯಾರ್ಥಿಗಳ ಇಂಟರ್ನೆಟ್ ಸರಿಯಾಗಿರುವುದಿಲ್ಲ. ಅದರಲ್ಲೇ ಸಮಯ ವ್ಯರ್ಥವಾಗಿ ಹೋಗುತ್ತದೆ. ಹಾಜರಾತಿ ಹಾಕುವುದರಲ್ಲಿ ಕೆಲ ಸಮಯ ಕಳೆದು ಹೋಗುತ್ತದೆ. ಒಂದು ಆನ್ ಲೈನ್ ತರಗತಿಯಲ್ಲಿ ಸುಮಾರು ಎಂಬತ್ತರಿಂದ ತೊಂಬತ್ತು ಮಕ್ಕಳಿರುತ್ತಾರೆ. ಕೆಲ ಮಕ್ಕಳಿಗೆ ಪಾಠ ಅರ್ಥ ಆಗುತ್ತದೆ ಕೆಲವರಿಗೆ ಇಲ್ಲ. ಒಂದು ವಿಷಯಕ್ಕೆ ೪೫ ನಿಮಿಷ ಮಾತ್ರ ಸೀಮಿತ. ಅಂದರೆ ಅರ್ಥ ಮಾಡಿಕೊಳ್ಳಿ ಯಾವ ರೀತಿಯ ಪಾಠ ನಡೆಯುತ್ತದೆ. ಟೀಚರಿಗೂ ಗಲಿಬಿಲಿ ಮತ್ತು ಮಕ್ಕಳಿಗೂ ಟೆನ್ಷನ್. ಒಂದು ದಿನದಲ್ಲಿ ಸರಿಯಾಗಿ ೨ ಗಂಟೆ ಮಾತ್ರ ತರಗತಿಗಳು ನಡೆಯುತ್ತವೆ. ಆದರೆ ಫೀಸ್ ಮಾತ್ರ ….!!!
ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿದ್ದರೆ, ಅವರ ತರಗತಿ ಟೈಮಿಂಗ್ ಒಂದೇ ಆಗಿದ್ದರೆ, ಬೇರೆ ಬೇರೆ ಫೋನ್ ಅಥವಾ ಲ್ಯಾಪ್ ಟಾಪ್ ಕೊಡಿಸಬೇಕಾಗುತ್ತದೆ. ಎಂತಹ ಪರದಾಟ.
ಆನ್ ಲೈನ್ ತರಗತಿಗಳ ಬದಲಾಗಿ ರೆಕಾರ್ಡೆಡ್ ತರಗತಿಗಳು ಮತ್ತು ಅದರ ಜೊತೆ ಅಸೈನ್ಮೆಂಟು ಗಳು ಇದ್ದಿದ್ದರೆ ಎಷ್ಟೋ ಟೆನ್ ಷನ್ ಕಡಿಮೆ ಮಾಡಿಕೊಳ್ಳಬಹುದಾಗಿತ್ತು. ಶಾಲೆಗಳು ಈ ಬಗ್ಗೆ ಗಮನ ಹರಿಸಬೇಕು.
ಸರ್ಕಾರ ಫೀಸ್ ಬಗ್ಗೆ ನಿಖರವಾಗಿ ಏನು ಹೇಳುತ್ತಿಲ್ಲ. ಪೋಷಕರಿಗೆ ತೊಂದರೆ ಕೊಡಬೇಡಿ ಎನ್ನುತ್ತಿದೆ ಅಷ್ಟೆ. ಒಂದರಿಂದ ಐದನೇ ತರಗತಿಯವರೆಗೆ ಫೀಸ್ ತೆಗೆದುಕೊಳ್ಳಬಾರದು ಎಂದು ಕಠಿಣವಾಗಿ ಹೇಳುತ್ತಿಲ್ಲ. ಈಗಾಗಲೇ ಕೆಲ ಶಾಲೆಗಳು ಫೀಸ್ ತೆಗೆದುಕೊಂಡಿವೆ. ಪೋಷಕರು ಗೊಂದಲದಲ್ಲಿದ್ದಾರೆ. ಡಿಸೆಂಬರ್ ವರೆಗೂ ಏನು ಹೇಳಲಾಗದು ಎಂಬ ಕೂಗು ಎಲ್ಲ ಕಡೆಯಲ್ಲೂ ಕೇಳಿ ಬರುತ್ತಿದೆ. ಅಂದರೆ ಅರ್ಧ ವರ್ಷ ಹಾಗೆ ಕಳೆದು ಹೋಗುತ್ತದೆ. ಹಾಗಾದರೆ ಒಂದು ವರ್ಷದ ಫೀಸ್ ಕೊಡಲೇ ಬೇಕೇ ? ಸರ್ಕಾರ ಶಾಲೆಗಳ ಜೊತೆ ಸಮಾಲೋಚನೆ ನಡೆಸಬೇಕಾಗಿದೆ.
ಇದೆಲ್ಲ ಪಟ್ಟಣದ ವಿದ್ಯಾರ್ಥಿಗಳ ಬಗ್ಗೆ. ಸರಿ. ಗ್ರಾಮಾಂತರ ವಿದ್ಯಾರ್ಥಿಗಳ ಬಗ್ಗೆಯೂ ಯೋಚಿಸಬೇಕು. ಟೀಚರ್ಗಳ ಜೀವನಾಧಾರದ ಬಗ್ಗೆಯೂ ಯೋಚಿಸಬೇಕಾಗಿದೆ. ಗೊಂದಲವೋ ಗೊಂದಲ.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.