ನವದೆಹಲಿ (www.vknews.com) : ವೀಡಿಯೊ ಕಾನ್ಫರೆನ್ಸಿಂಗ್ ಆಪ್ ಜ಼ೂಮ್ನ ಬೇಸಿಕ್ ಅಥವಾ ಉಚಿತ ಪ್ಲಾನ್ನಲ್ಲಿ ಗ್ರೂಪ್ ಮೀಟಿಂಗ್ಗಳಿಗೆ 40 ನಿಮಿಷದ ಮಿತಿಯಿದ್ದರೆ, ಗೂಗಲ್ ಪ್ಲೇಸ್ಟೋರ್ ಹಾಗೂ ಐಓಎಸ್ನಲ್ಲಿ ಕಳೆದ ಗುರುವಾರ ಬಿಡುಗಡೆಯಾದ ಜಿಯೋಮೀಟ್ನಲ್ಲಿ 24-ಗಂಟೆಗಳವರೆಗಿನ ಗ್ರೂಪ್ ಮೀಟಿಂಗ್ಸ್ ನಡೆಸಬಹುದಿದ್ದು ಅದು ಸಂಪೂರ್ಣ ಉಚಿತವೂ ಆಗಿದೆ.
ಜ಼ೂಮ್ನ ಸದ್ಯದ ದರಗಳ ಆಧಾರದ ಮೇಲೆ, 40 ನಿಮಿಷಗಳಿಗಿಂತ ಹೆಚ್ಚು ಅವಧಿಯ ಮೀಟಿಂಗ್ಗಳಿಗೆ ಆಯೋಜಕರು ತಿಂಗಳಿಗೆ 15 ಡಾಲರುಗಳ ಶುಲ್ಕ (ವಾರ್ಷಿಕ 180 ಡಾಲರು) ತೆರಬೇಕಾಗುತ್ತದೆ. ತುಲನಾತ್ಮಕವಾಗಿ, ಜಿಯೋಮೀಟ್ ಇದು ಮತ್ತು ಇನ್ನೂ ಹಲವಾರು ಸೌಲಭ್ಯಗಳನ್ನು ಯಾವುದೇ ಶುಲ್ಕವಿಲ್ಲದೆ ನೀಡುತ್ತಿದೆ. ಪ್ರತಿ ಆಯೋಜಕರಿಗೂ ಇದು ವಾರ್ಷಿಕ 13,500 ರೂ.ಗಳ ಉಳಿತಾಯಕ್ಕೆ ಸಮಾನವಾಗಿರಲಿದೆ.
ಸಮಯ ಮಿತಿಯ ನಿರ್ಬಂಧ ಇಲ್ಲದಿರುವುದು ಜ಼ೂಮ್ ಡಿಜಿಟಲ್ ಅನುಭವಕ್ಕೆ ಅಡ್ಡಿಯುಂಟುಮಾಡಲಿದೆ. ಉದಾಹರಣೆಗೆ, ಶಿಕ್ಷಣ ಕ್ಷೇತ್ರದಲ್ಲಿ 24-ಗಂಟೆಗಳ ಉಚಿತ ಜಿಯೋಮೀಟ್ ಸೆಷನ್ಗಳೊಂದಿಗೆ, ಶಿಕ್ಷಕರು ಜ಼ೂಮ್ನಲ್ಲಿ ಮಾಡಿದಂತೆ ತಮ್ಮ ತರಗತಿಗಳ ಅವಧಿಯನ್ನು ಕಡಿತಗೊಳಿಸುವ ಅಗತ್ಯವಿರುವುದಿಲ್ಲ. ಅದೇ ರೀತಿ ವಿದ್ಯಾರ್ಥಿಗಳಿಗೂ ತಮ್ಮ ಪ್ರಶ್ನೆಗಳನ್ನು ಮಿತಿಗೊಳಿಸುವ ನಿರ್ಬಂಧ ಇಲ್ಲದಿರುವುದರಿಂದ ಇದು ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣಗಳೆರಡರಲ್ಲೂ ಕಲಿಕೆಯ ಅನುಭವವನ್ನು ಉತ್ತಮಗೊಳಿಸುತ್ತದೆ.
ಜ಼ೂಮ್ ಅನುಮತಿಸುವ ಉಚಿತ ಸಮಯವು ಮುಗಿಯುವ ಯೋಚನೆ ಇಲ್ಲದ್ದರಿಂದ ಸ್ನೇಹಿತರು, ಹಳೆಯ ವಿದ್ಯಾರ್ಥಿಗಳ ಗುಂಪುಗಳು ಮತ್ತು ಸಂಬಂಧಿಕರು ಈಗ “40 ನಿಮಿಷಗಳ ದಬ್ಬಾಳಿಕೆಯಲ್ಲಿ” ಸಿಕ್ಕಿಹಾಕಿಕೊಳ್ಳುವ ಅಗತ್ಯವಿಲ್ಲ.
ಇದೇ ರೀತಿಯ ಮಿತಿಯನ್ನು ಅನುಭವಿಸುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸೆಮಿನಾರ್ಗಳು ಯಾವುದೇ ಪ್ರವೇಶ ಶುಲ್ಕವಿಲ್ಲದೆ ತಮ್ಮ ಸಂಶೋಧನೆಯನ್ನು ಆಯೋಜಿಸಬಹುದಾದ್ದರಿಂದ, ಮತ್ತು 40 ನಿಮಿಷಗಳ ಮಿತಿಯ ನಂತರವೂ ಸಂಭಾಷಣೆ ನಡೆಸಬಹುದಾದ್ದರಿಂದ, ಈ ಹೊಸ ಸೌಲಭ್ಯದತ್ತ ಸಂಪೂರ್ಣ ವಲಸೆಯನ್ನು ನಿರೀಕ್ಷಿಸಬಹುದಾಗಿದೆ.
ಮಾರಾಟ ಪ್ರದರ್ಶನಗಳು, ಅದರಲ್ಲೂ ವಿಶೇಷವಾಗಿ, ಎಸ್ಎಂಇ ಹಾಗೂ ಕಿರಾಣಿ ಅಂಗಡಿಗಳ ಪ್ರದರ್ಶನಗಳಲ್ಲಿ ಪರಿವರ್ತನೆ ಕಂಡುಬರಲಿದ್ದು, ಇದು ಇ-ಕಾಮರ್ಸ್ ಅನ್ನು ಸಕ್ರಿಯಗೊಳಿಸುತ್ತದೆ. ನಿರಂತರ ಮತ್ತು ದೀರ್ಘಕಾಲದ ಗುಂಪು ವೀಡಿಯೊ ಸಂಪರ್ಕದ ಅಗತ್ಯವಿರುವ ಬ್ರೋಕರ್ಗಳು ಮತ್ತು ಇತರರಿಗೂ ಇದು ನೆರವಾಗಲಿದೆ.
ಪ್ರದರ್ಶಕರ ಜೀವನೋಪಾಯದ ಮೂಲವಾಗಿರುವ ಸಹಕಾರಿ ಸಾಂಸ್ಕೃತಿಕ, ಸಾಮಾಜಿಕ, ಸಂಗೀತ, ಆಧ್ಯಾತ್ಮಿಕ ಮತ್ತಿತರ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಬಹುದಾಗಿದ್ದು ಸಾಮಾಜಿಕ ರಚನೆ ಹಾಗೂ ಚೌಕಟ್ಟನ್ನು ಜೀವಂತವಾಗಿರಿಸಿಕೊಳ್ಳಬಹುದು. ಪ್ರಜಾಪ್ರಭುತ್ವದ ಕಾರ್ಯಕ್ರಮಗಳನ್ನೂ ಕೂಡ.
ಶೂನ್ಯ ಬೆಲೆಯ ಜೊತೆಗೆ, ವೈಶಿಷ್ಟ್ಯಗಳು ಮತ್ತು ಕ್ರಿಯಾತ್ಮಕತೆಯ ದೃಷ್ಟಿಯಿಂದಲೂ ಜಿಯೋಮೀಟ್ನಲ್ಲಿ ಹಲವು ಅನುಕೂಲಗಳಿವೆ. ಜ಼ೂಮ್ ಸಭೆಯಲ್ಲಿ, ಭಾಗವಹಿಸುವವರ ವೀಡಿಯೊವನ್ನು ಬಳಕೆದಾರರು ವಿಸ್ತರಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಜಿಯೋಮೀಟ್ ಸಭೆಗಳಲ್ಲಿ ಬಳಕೆದಾರರು ಭಾಗವಹಿಸುವವರ ಅಥವಾ ಅವರು ಹಂಚಿಕೊಂಡಿರುವ ವೀಡಿಯೊವನ್ನು ಡಬಲ್ ಟ್ಯಾಪ್ ಮೂಲಕ ವಿಸ್ತರಿಸಿಕೊಳ್ಳಬಹುದು.
ಜ಼ೂಮ್ನಲ್ಲಿರುವ ಆಯ್ಕೆಗಳಿಗಿಂತ ಜಿಯೋಮೀಟ್ನಲ್ಲಿ 2 ಸುಧಾರಿತ ಮೀಟಿಂಗ್ ಸೆಟ್ಟಿಂಗ್ಗಳೂ ಇವೆ. ಇಲ್ಲಿ ನಿರ್ದಿಷ್ಟ ಸಂಸ್ಥೆಯ ಬಳಕೆದಾರರು ಮಾತ್ರ ಸಭೆಗೆ ಸೇರಲು ಅನುಮತಿಸಬಹುದಾಗಿದ್ದು (ಉದಾ. Tcs.com ಅಥವಾ hll.com), ಆ ಮೂಲಕ ನಮ್ಮ ಸಭೆಗಳಲ್ಲಿ ಇತರರು ಮೂಗು ತೂರಿಸುವ ಸಂಭವನೀಯತೆಯನ್ನು ಇಲ್ಲವಾಗಿಸಬಹುದು.
ಅಲ್ಲದೆ, ಇದು ಅತಿಥಿ ಬಳಕೆದಾರರನ್ನು ಅನುಮತಿಸುವುದಿಲ್ಲ. ಈ ಆಯ್ಕೆಯನ್ನು ಸಕ್ರಿಯಗೊಳಿಸಿದಲ್ಲಿ ಪ್ರತಿಯೊಬ್ಬ ಬಳಕೆದಾರರು ಸಭೆಗೆ ಸೇರುವ ಮೊದಲು ಸೈನ್ ಅಪ್ ಮಾಡಬೇಕಾಗುತ್ತದೆ ಹಾಗೂ ಆ ಮೂಲಕ ಅನಾಮಧೇಯ ಬಳಕೆದಾರರು ಕರೆಗೆ ಸೇರುವುದನ್ನು ನಿರ್ಬಂಧಿಸುವುದು ಸಾಧ್ಯವಾಗುತ್ತದೆ.
ಜ಼ೂಮ್ನಂತಲ್ಲದೆ, ಜಿಯೋಮೀಟ್ ಬಳಕೆದಾರರು ಕರೆಯಿಂದ ಹೊರಹೋಗುವ ಅಗತ್ಯವಿಲ್ಲದೆ ಒಂದು ಸಾಧನದಿಂದ ಇನ್ನೊಂದಕ್ಕೆ ಬದಲಾಯಿಸಿಕೊಳ್ಳಬಹುದು. ಇಮೇಲ್ ವಿಳಾಸದೊಂದಿಗೆ ಮಾತ್ರ ಸೈನ್ ಅಪ್ ಮಾಡಲು ಜೂಮ್ ಅನುಮತಿಸುತ್ತದೆ. ಆದರೆ ಜಿಯೋಮೀಟ್ನಲ್ಲಿ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಗಳೆರಡನ್ನೂ ಬಳಸಿ ಸೈನ್ ಅಪ್ ಮಾಡಬಹುದಾಗಿದೆ.
ಕರೆಯ ಒಳಗೆ, ಜ಼ೂಮ್ ಏಕಕಾಲಕ್ಕೆ 4 ಜನರನ್ನು ಮಾತ್ರ ಮೊಬೈಲ್ ಪರದೆಯಲ್ಲಿ ತೋರಿಸುತ್ತದೆ (ಇತರರನ್ನು ನೋಡಲು, ಬಳಕೆದಾರರು ಹಲವು ಪುಟಗಳ ಮೂಲಕ ಸ್ಕ್ರಾಲ್ ಮಾಡಬೇಕಾಗುತ್ತದೆ). ಆದರೆ ಜಿಯೋಮೀಟ್ನಲ್ಲಿ ಕರೆಯಲ್ಲಿ ಸಕ್ರಿಯರಾಗಿರುವ 9 ಜನರನ್ನು ಒಂದೇ ಪರದೆಯಲ್ಲಿ ನೋಡಬಹುದು.
ಚೀನಾದ ಸಂಸ್ಥೆಗಳನ್ನು ವಿಶ್ವಾದ್ಯಂತ ಪರಿಶೀಲನೆಗೆ ಒಳಪಡಿಸಲಾಗಿರುವ ಈ ಸಮಯದಲ್ಲಿ, ಜ಼ೂಮ್ ಚೈನೀಸ್ ಅಲ್ಲ ಎಂದು ಅದರ ಚೈನೀಸ್-ಅಮೆರಿಕನ್ ಸಂಸ್ಥಾಪಕ ಎರಿಕ್ ಯುವಾನ್ ಹೇಳಿದ್ದಾರೆ.
ಸಭೆಗಳಿಗೆ ಜ಼ೂಮ್ ವಿಡಿಯೋ ಕಾನ್ಫರೆನ್ಸಿಂಗ್ ಆಪ್ ಸುರಕ್ಷಿತ ವೇದಿಕೆಯಲ್ಲ ಎಂದು ಏಪ್ರಿಲ್ 12ರಂದು ಗೃಹ ಸಚಿವಾಲಯದ ಸೈಬರ್ ಸಮನ್ವಯ ಕೇಂದ್ರ (ಸಿಸಿಸಿ) ತನ್ನ ಸಲಹೆಯಲ್ಲಿ ಎಚ್ಚರಿಸಿದೆ.
ಏಪ್ರಿಲ್ 12ರಂದು ಹೊರಡಿಸಲಾದ ಈ ಸಲಹೆಯಲ್ಲಿ, “ಜ಼ೂಮ್ ಮೀಟಿಂಗ್ ವೇದಿಕೆಯ ಸುರಕ್ಷಿತ ಬಳಕೆ ಖಾಸಗಿ ವ್ಯಕ್ತಿಗಳಿಗೆ ಮಾತ್ರ, ಹಾಗೂ ಸರ್ಕಾರಿ ಕಚೇರಿಗಳ ಬಳಕೆ ಅಥವಾ ಅಧಿಕೃತ ಉದ್ದೇಶಕ್ಕಾಗಿ ಅಲ್ಲ” ಎಂದು ಉಲ್ಲೇಖಿಸಲಾಗಿದೆ.
ಇದೇ ರೀತಿ “ಜ಼ೂಮ್ ಸುರಕ್ಷಿತ ವೇದಿಕೆಯಲ್ಲ” ಎಂದು ಸ್ಪಷ್ಟಪಡಿಸುವ ಮಾಹಿತಿಯನ್ನು ಈ ವರ್ಷದ ಫೆಬ್ರವರಿ 6 ಮತ್ತು ಮಾರ್ಚ್ 30ರಂದು ಸರ್ಟ್-ಇನ್ಗೆ ತಿಳಿಸಲಾಗಿತ್ತು ಎಂದು ಸರ್ಕಾರ ಹೇಳಿದೆ.
ಖಾಸಗಿ ಬಳಕೆದಾರರ ಸುರಕ್ಷತೆಗಾಗಿನ ಮಾರ್ಗಸೂಚಿಗಳಲ್ಲಿ, ಗೃಹ ಸಚಿವಾಲಯದ ಸಿಸಿಸಿ ವಿಭಾಗವು “ಖಾಸಗಿ ಉದ್ದೇಶಕ್ಕಾಗಿ ಜ಼ೂಮ್ ಅನ್ನು ಬಳಸಲು ಬಯಸುವ ಖಾಸಗಿ ವ್ಯಕ್ತಿಗಳು” ಕಾನ್ಫರೆನ್ಸ್ ಕೊಠಡಿಯಲ್ಲಿ ಅನಧಿಕೃತ ಪ್ರವೇಶವನ್ನು ಮತ್ತು ಸಭೆಯಲ್ಲಿ ಇತರರ ಟರ್ಮಿನಲ್ಗಳಲ್ಲಿ ದುರುದ್ದೇಶಪೂರಿತ ಕೃತ್ಯಗಳನ್ನು ನಡೆಸುವ ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟುವುದಕ್ಕಾಗಿ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಉಲ್ಲೇಖಿಸಿದೆ.
ಈ ಸಲಹೆಯು ಪಾಸ್ವರ್ಡ್ಗಳು ಮತ್ತು ಪ್ರವೇಶ ಅನುಮತಿಗಳೊಡನೆ ಬಳಕೆದಾರರನ್ನು ನಿರ್ಬಂಧಿಸುವ ಮೂಲಕ “ಡಿಓಎಸ್” ದಾಳಿಯನ್ನು ತಪ್ಪಿಸುವಂತೆಯೂ ಸೂಚಿಸಿದೆ.
ಇಲೆಕ್ಟ್ರಾನಿಕ್ಸ್ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ ಸರ್ಟ್, ಜ಼ೂಮ್ ಅಪ್ಲಿಕೇಶನ್ನಲ್ಲಿ ಎರಡು ಹೆಚ್ಚಿನ ತೀವ್ರತೆಯ ರೇಟಿಂಗ್ ಸಲಹೆಗಳನ್ನು ನೀಡಿದೆ.
ಏಪ್ರಿಲ್ 2ರಂದು ನೀಡಲಾದ ಸಲಹೆಯಲ್ಲಿ, ಜ಼ೂಮ್ ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ನಲ್ಲಿರುವ ಅನೇಕ ದೌರ್ಬಲ್ಯಗಳನ್ನು ಅದು ಗುರುತಿಸಿದೆ. ಆಕ್ರಮಣಕಾರರು ಉನ್ನತ ಸವಲತ್ತುಗಳನ್ನು ಪಡೆಯಲು ಅಥವಾ ಗುರಿಮಾಡಲಾದ ವ್ಯವಸ್ಥೆಯಲ್ಲಿರುವ ಸೂಕ್ಷ್ಮ ಮಾಹಿತಿಯನ್ನು ಪಡೆದುಕೊಳ್ಳಲು ಈ ದೌರ್ಬಲ್ಯಗಳು ಅನುಮತಿಸುತ್ತವೆ ಎಂದು ಸರ್ಟ್ ಹೇಳಿದೆ.
ಈ ವೇದಿಕೆಯ ಅಸುರಕ್ಷಿತ ಬಳಕೆಯು ಸಭೆಯ ವಿವರಗಳು ಮತ್ತು ಸಂಭಾಷಣೆಗಳಂತಹ ಸೂಕ್ಷ್ಮ ಮಾಹಿತಿಯನ್ನು ಪಡೆದುಕೊಳ್ಳಲು ಸೈಬರ್ ಅಪರಾಧಿಗಳಿಗೆ ಅವಕಾಶ ನೀಡಬಹುದು ಎಂದು ಮಾರ್ಚ್ 30ರ ಸಲಹೆಯಲ್ಲಿ ಸರ್ಟ್ ಹೇಳಿದೆ.
ಅಮೆರಿಕಾದ ರಕ್ಷಣಾ ಇಲಾಖೆ ಪೆಂಟಗನ್ ಸಹ “ಜ಼ೂಮ್ಬಾಂಬಿಂಗ್ಸ್” ಕುರಿತು ಎಚ್ಚರಿಸಿದೆ. ಭದ್ರತೆಯ ಕುರಿತು ಹೆಚ್ಚಿದ ಕಾಳಜಿಯಿಂದಾಗಿ ರಕ್ಷಣಾ ಇಲಾಖೆಯ ಸಿಬ್ಬಂದಿ ಜ಼ೂಮ್ ಬಳಸುವಂತಿಲ್ಲ ಎಂದು ಏಪ್ರಿಲ್ 13ರಂದು ಅಧಿಕೃತವಾಗಿ ನಿರ್ಧರಿಸಲಾಯಿತು.
ಸೇವಾ ಸದಸ್ಯರು, ಗುತ್ತಿಗೆದಾರರು ಮತ್ತು ನಾಗರಿಕರು ಇನ್ನು ಮುಂದೆ ಜೂಮ್ ಅನ್ನು ಅಧಿಕೃತ ಸಾಮರ್ಥ್ಯದಲ್ಲಿ ಬಳಸುವಂತಿಲ್ಲ ಎಂದೂ ಪೆಂಟಗನ್ ಘೋಷಿಸಿತು.
ಈ ವೀಡಿಯೋ ಮೀಟಿಂಗ್ ಆಪ್ನಲ್ಲಿ ಆಹ್ವಾನವಿಲ್ಲದವರು ಸಭೆಗಳೊಳಗೆ ನುಸುಳುವ – “ಜ಼ೂಮ್ಬಾಂಬಿಂಗ್” ಎಂಬ ಹೆಸರಿನ – ಪ್ರಕ್ರಿಯೆ ಹೆಚ್ಚುತ್ತಿದೆ ಎನ್ನುವ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ನ ಎಚ್ಚರಿಕೆಯ ಬೆನ್ನಲ್ಲೇ ಈ ವಿದ್ಯಮಾನಗಳು ನಡೆದಿವೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.